Asianet Suvarna News Asianet Suvarna News

ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಪೊಲೀಸ್ ಪುತ್ರನ 'ಉಗ್ರ' ರಗಳೆ!

: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ‘ತಾನು ಉಗ್ರ’ ಎಂದು ಹೇಳಿ ಹುಚ್ಚಾಟ ಮಾಡಿದ ಆರೋಪದ ಮೇರೆಗೆ ಖಾಸಗಿ ಕಾಲೇಜಿನ ಪದವಿ ವಿದ್ಯಾರ್ಥಿಯೊಬ್ಬನನ್ನು ಬಂಧಿಸಿ ಪೊಲೀಸರು ಬಿಡುಗಡೆಗೊಳಿಸಿದ್ದಾರೆ.

Uttar Pradesh police officers son terrorist statemtn  at Kempegowda Airport rav
Author
First Published Feb 22, 2024, 6:51 AM IST

ಬೆಂಗಳೂರು (ಫೆ.22): ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ‘ತಾನು ಉಗ್ರ’ ಎಂದು ಹೇಳಿ ಹುಚ್ಚಾಟ ಮಾಡಿದ ಆರೋಪದ ಮೇರೆಗೆ ಖಾಸಗಿ ಕಾಲೇಜಿನ ಪದವಿ ವಿದ್ಯಾರ್ಥಿಯೊಬ್ಬನನ್ನು ಬಂಧಿಸಿ ಪೊಲೀಸರು ಬಿಡುಗಡೆಗೊಳಿಸಿದ್ದಾರೆ.

ಉತ್ತರಪ್ರದೇಶ ರಾಜ್ಯದ ಲಖನೌ ಮೂಲದ ಆದರ್ಶ ಕುಮಾರ್ ಸಿಂಗ್ ಬಂಧಿತನಾಗಿದ್ದು, ಇತ್ತೀಚೆಗೆ ಬೆಂಗಳೂರಿನಿಂದ ಲಖನೌಗೆ ತೆರಳುವಾಗ ವಿಮಾನದಲ್ಲಿ ಆತ ಅನುಚಿತವಾಗಿ ವರ್ತಿಸಿದ್ದಾನೆ. ಆಗ ಆತನನ್ನು ಬಂಧಿಸಿ ಬಳಿಕ ಠಾಣಾ ಜಾಮೀನು ಮಂಜೂರು ಮಾಡಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆ ಪೊಲೀಸರು ಬಿಡುಗಡೆಗೊಳಿಸಿದ್ದಾರೆ.

ಬೆಂಗಳೂರು: ಮದ್ಯ ಸೇವಿಸಿ ವಾಹನ ಚಾಲನೆ, 43 ಚಾಲಕರ ವಿರುದ್ಧ ಕೇಸ್‌

ಪೊಲೀಸ್ ಪುತ್ರನ ಉಗ್ರ ರಗಳೆ:

ಉತ್ತರಪ್ರದೇಶ ರಾಜ್ಯದ ಸಹಾಯಕ ಸಬ್ ಇನ್‌ಸ್ಪೆಕ್ಟರ್‌ (ಎಎಸ್‌ಐ) ಪುತ್ರನಾದ ಆದರ್ಶ, ನಗರದ ಖಾಸಗಿ ಕಾಲೇಜಿನಲ್ಲಿ ಪದವಿ ಓದುತ್ತಿದ್ದ. ವೈಯಕ್ತಿಕ ಕೆಲಸದ ಮೇರೆಗೆ ತನ್ನೂರಿಗೆ ವಿಮಾನದಲ್ಲಿ ತೆರಳಲು ಫೆ.17ರಂದು ಕೆಐಎಗೆ ಆತ ಬಂದಿದ್ದ. ಆ ವೇಳೆ ವಿಮಾನ ನಿಲ್ದಾಣದಲ್ಲಿ ತಪಾಸಣೆ ಮುಗಿಸಿ ನಿಗದಿತ ಸಮಯಕ್ಕೆ ಏರ್‌ ಇಂಡಿಯಾ ವಿಮಾನದೊಳಗೆ ಪ್ರವೇಶಿಸಿ ಕುಳಿತಿದ್ದ. ಇನ್ನೇನು ವಿಮಾನ ಹೊರಡಬೇಕು ಎನ್ನುವಾಗ ಏಕಾಏಕಿ ತಾನು ಹೊರ ಹೋಗಬೇಕೆಂದು ಕೋರಿದ್ದಾನೆ. ಆಗ ಆತನನ್ನು ವಿಮಾನದಿಂದ ಸಿಬ್ಬಂದಿ ಹೊರ ಕಳುಹಿಸಿದ್ದಾರೆ. ಟೇಕ್ ಆಫ್‌ ಆಗುವ ಹಂತದಲ್ಲಿ ವಿಮಾನದಿಂದ ಹೊರಬಂದ ಆದರ್ಶನನ್ನು ಸಿಐಎಸ್‌ಎಫ್‌ ಸಿಬ್ಬಂದಿ ವಿಚಾರಣೆಗೆ ಮುಂದಾಗಿದ್ದಾರೆ.

ಆಗ ಕೋಪಗೊಂಡ ಆತ, ‘ತಾನು ಭಯೋತ್ಪಾದಕ ಸಂಘಟನೆ ಸೇರಿದ ಉಗ್ರಗಾಮಿ. ನಾನು ಲಖನೌಗೆ ಹೋಗುವುದಿಲ್ಲ’ ವೆಂದು ಕೂಗಾಡಿ ರಗಳೆ ಮಾಡಿದ್ದಾನೆ. ಕೂಡಲೇ ಆತನನ್ನು ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆ ಪೊಲೀಸರಿಗೊಪ್ಪಿಸಿದ್ದಾರೆ. ಆಗ ಈ ರೀತಿ ದುಂಡಾವರ್ತನೆ ಮಾಡದಂತೆ ಎಚ್ಚರಿಕೆ ನೀಡಿ ಆತನನ್ನು ಪೊಲೀಸರು ಕಳುಹಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.ಪ್ರೀತಿಗೆ ಸಿಲುಕಿ ರಂಪಾಟ!

ಪದೇಪದೆ ರೂಲ್ಸ್ ಬ್ರೇಕ್ ಮಾಡ್ತಿದ್ದ ವಾಹನ ಸವಾರರಿಗೆ ಬಿಗ್ ಶಾಕ್; ₹50,000+ ದಂಡ ಬಾಕಿ ಇದ್ದ 85 ವಾಹನ ಜಪ್ತಿ!

ಖಾಸಗಿ ಕಾಲೇಜಿನ ಪದವಿ ಓದುತ್ತಿದ್ದ ಆದರ್ಶ್‌, ಪರೀಕ್ಷೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಅಂಕ ಗಳಿಸಿರಲಿಲ್ಲ. ಅಲ್ಲದೆ ತಾನು ಪ್ರೀತಿಸುತ್ತಿದ್ದ ಯುವತಿ ಸಹ ಆತನಿಂದ ದೂರವಾಗಲು ಮುಂದಾಗಿದ್ದಳು. ಈ ವೈಯಕ್ತಿಕ ಸಮಸ್ಯೆಗಳಿಂದ ಬೇಸರಗೊಂಡು ಈ ರೀತಿ ವರ್ತನೆ ತೋರಿರುವುದಾಗಿ ವಿಚಾರಣೆ ವೇಳೆ ಆತ ಹೇಳಿಕೆ ನೀಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

Follow Us:
Download App:
  • android
  • ios