ಬೆಂಗಳೂರು (ಆ.26):  ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮೇಲೆ ಕನ್ನಡ ಬಳಸುವ ಮೂಲಕ ಕನ್ನಡದ ರಾಯಭಾರಿಯಾಗಿ ಕರ್ನಾಟಕ ಸಹಕಾರಿ ಹಾಲು ಮಹಾ ಮಂಡಳಿ(ಕೆಎಂಎಫ್‌) ಕೆಲಸ ಮಾಡುವ ಜವಾಬ್ದಾರಿ ಇದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್‌.ನಾಗಾಭರಣ ಹೇಳಿದ್ದಾರೆ.

ಮಂಗಳವಾರ ವಿಡಿಯೋ ಸಂವಾದದ ಮೂಲಕ ಕೆಎಂಎಫ್‌ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೆಎಂಎಫ್‌ ದಕ್ಷಿಣ ಭಾರತದಲ್ಲೇ ಅತೀ ದೊಡ್ಡ ಸಹಕಾರ ಸಂಸ್ಥೆಯಾಗಿದೆ. ಸುಮಾರು 130ಕ್ಕೂ ಹೆಚ್ಚು ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಆಂಧ್ರಪ್ರದೇಶ, ತೆಲಂಗಾಣ, ಸಿಂಗಾಪುರ, ಮಲೇಷ್ಯಾ ಸೇರಿದಂತೆ ದೇಶ-ವಿದೇಶಗಳಿಗೆ ನಂದಿನಿ ಉತ್ಪನ್ನಗಳು ರಫ್ತಾಗುತ್ತಿವೆ. ಹಾಗಾಗಿ ಪ್ರತಿ ಉತ್ಪನ್ನದ ಮೇಲೂ ಕನ್ನಡ ಬಳಸುವ ಮತ್ತು ಪ್ರತಿ ಉತ್ಪನ್ನಕ್ಕೂ ಕನ್ನಡದ ವಿಶಿಷ್ಟಹೆಸರುಗಳನ್ನು ನಾಮಕರಣ ಮಾಡುವ ಮೂಲಕ ಕಸ್ತೂರಿ ಕನ್ನಡದ ಕಂಪನ್ನು ವಿಶ್ವದೆಲ್ಲೆಡೆ ಪಸರಿಸುವ ರಾಯಭಾರಿಯಾಗಿ ಕೆಎಂಎಫ್‌ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.

ಕೆಲ ನಂದಿನಿ ಅಂಗಡಿಗಳ ಹೆಸರು ಆಂಗ್ಲ ಭಾಷೆಯಲ್ಲಿರುವ ಕುರಿತು ಹಾಗೂ ನಂದಿನಿ ಉತ್ಪನ್ನವೊಂದಕ್ಕೆ ಕನ್ನಡೇತರ ಹೆಸರಾದ ಚಕ್ಕಿ ಲಾಡು ಎಂದು ಹೆಸರಿಟ್ಟಿರುವ ಬಗ್ಗೆ ಪ್ರಾಧಿಕಾರಕ್ಕೆ ದೂರುಗಳು ಬಂದಿವೆ. ನಮ್ಮ ನೆಲದ ಸಂಸ್ಥೆ, ರೈತರ ಒಡನಾಡಿಯಾದ ಸಂಸ್ಥೆ ಆಂಗ್ಲ ಭಾಷೆಗೆ ಬ್ರಾಂಡ್‌ ಆಗಿ ಕೆಲಸ ಮಾಡುವುದು ಎಷ್ಟುಸರಿ ಎಂದು ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಕೆಎಂಎಫ್‌ ರೈತರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಿದೆ. ಆದರೆ ತಮ್ಮ ಅಧೀನದ ಜಿಲ್ಲಾ ಒಕ್ಕೂಟಗಳ ಜಾಲತಾಣಗಳು ಆಂಗ್ಲ ಭಾಷೆಯಲ್ಲಿದ್ದು, ಕೂಡಲೇ ರಾಜ್ಯ ಸರ್ಕಾರದ ಆದೇಶದನ್ವಯ ರಾಜ್ಯಭಾಷೆಯ ಮಾದರಿ ಜಾಲತಾಣವಾಗಿ ರೂಪಿಸುವಂತೆ ಸೂಚನೆ ನೀಡಿದರು.