ಲಿಂಗರಾಜು ಕೋರಾ

ಬೆಂಗಳೂರು [ನ.05]:  ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಿಗೆ ಸಿಬ್ಬಂದಿ ನೇಮಕಾತಿಯಲ್ಲಿ ಹಿಂದಿ ಭಾಷಿಕರಿಗೆ ಹೆಚ್ಚು ಅನುಕೂಲವಾಗುವಂತಹ ನಿಯಮಾವಳಿ, ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಗಳಲ್ಲಿ ಎಲ್ಲಾ ಹಂತದ ಪರೀಕ್ಷೆಗಳನ್ನು ಬರೆಯಲು ದೊರೆಯದ ಅವಕಾಶ, ಅಸಲಿಗೆ ಉದ್ಯೋಗಾವಕಾಶವಿದೆ ಎಂಬ ಮಾಹಿತಿಯನ್ನೇ ಮುಚ್ಚಿಡುವ ಹಿಂದಿ ಕೇಂದ್ರೀತ ಜಾಹೀರಾತು ಷಡ್ಯಂತ್ರ...

ಕನ್ನಡದಂತಹ ಪ್ರಾದೇಶಿಕ ಭಾಷೆಗಳನ್ನಾಡುವ ಜನರನ್ನು ಕೇಂದ್ರೀಯ ಇಲಾಖೆಗಳ ಉದ್ಯೋಗಾವಕಾಶದಿಂದ ವಂಚಿಸಲು ಕೇಂದ್ರ ಸರ್ಕಾರವೇ ಮುಂಚೂಣಿಯಲ್ಲಿ ನಿಂತು ನೀತಿ ನಿರೂಪಣೆ ಮಾಡುತ್ತಿದ್ದರೂ ಪ್ರಶ್ನೆ ಮಾಡುವ ಧೈರ್ಯ ತೋರದ ರಾಜ್ಯ ಸರ್ಕಾರದ ನಿಷ್ಕಿ್ರಯತೆ...

ಇದೆಲ್ಲದರ ಪರಿಣಾಮವಾಗಿ ರೈಲ್ವೆ, ಬ್ಯಾಂಕಿಂಗ್‌, ನೆಟ್‌ವರ್ಕಿಂಗ್‌ ಸೇರಿದಂತೆ ಕೇಂದ್ರ ಸರ್ಕಾರದ ಎಲ್ಲಾ ಇಲಾಖೆಗಳಲ್ಲಿನ ಲಕ್ಷಾಂತರ ಉದ್ಯೋಗಾವಕಾಶಗಳನ್ನು ಕನ್ನಡಿಗರು ಸತತವಾಗಿ ಕಳೆದುಕೊಳ್ಳುತ್ತಿದ್ದಾರೆ.

ಇದಕ್ಕೆ ಸಾಕ್ಷಿ, ರಾಷ್ಟ್ರೀಕೃತ ಬ್ಯಾಂಕ್‌ ಹಾಗೂ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳ (ಆರ್‌ಆರ್‌ಬಿ) ಉದ್ಯೋಗ ನೇಮಕಾತಿಗೆ ನಡೆಯುವ ‘ಐಬಿಪಿಎಸ್‌’ ಪರೀಕ್ಷೆ ವಿಚಾರದಲ್ಲಿ ಕನ್ನಡಿಗರಿಗೆ ಅನ್ಯಾಯ ಮುಂದುವರೆದಿದೆ. ಪ್ರಾಥಮಿಕ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಅವಕಾಶ ಸಿಕ್ಕಿಲ್ಲ. ಕರ್ನಾಟಕದಲ್ಲೇ ಶೇ.90ಕ್ಕೂ ಹೆಚ್ಚು ಸೇವಾ ಜಾಲ ಹೊಂದಿರುವ ನೈಋುತ್ಯ ರೈಲ್ವೆಯ 2017-18ನೇ ಸಾಲಿನ 2,200 ಹುದೆÜ್ದಗಳ ನೇಮಕಾತಿಯಲ್ಲಿ ಕನ್ನಡಿಗರಿಗೆ ಸಿಕ್ಕಿದ್ದು ಕೇವಲ 22 (ಶೇ.1) ಉದ್ಯೋಗಗಳು. ರಾಜಭಾಷ ಆಯೋಗದ ಶಿಫಾರಸಿನಂತೆ ಶೇ.50ರಷ್ಟುಜಾಹೀರಾತುಗಳು ಹಿಂದಿಯಲ್ಲೇ ಇರಬೇಕೆಂಬ ಕೇಂದ್ರದ ಆದೇಶದಿಂದ ಕರ್ನಾಟಕ ಸೇರಿದಂತೆ ಹಿಂದಿಯೇತರ ಭಾಷಾ ಬಳಕೆಯ ದಕ್ಷಿಣ ಭಾರತದ ರಾಜ್ಯಗಳಿಗೆ ಕೇಂದ್ರ ಸರ್ಕಾರದ ಮಾಹಿತಿಗಳೇ ಸರಿಯಾಗಿ ದೊರೆಯುತ್ತಿಲ್ಲ.

ಕನ್ನಡಿಗರಿಗೆ ಕೇಂದ್ರ ಸರ್ಕಾರದಿಂದ ಅನ್ಯಾಯಗಳೂ ಒಂದೆಡೆಯಾದರೆ, ಸ್ಥಳೀಯ ಉದ್ಯೋಗಾವಕಾಶಗಳಲ್ಲಿ ಮೀಸಲಾತಿ ಕಲ್ಪಿಸದೆ ರಾಜ್ಯ ಸರ್ಕಾರದಿಂದಲೇ ಕನ್ನಡಿಗರಿಗೆ ದ್ರೋಹ ಮಾಡಲಾಗುತ್ತಿದೆ. ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ, ನಾಡು, ನುಡಿ, ನೆಲ, ಜಲ ಸಂರಕ್ಷಣೆಯ ಭರವಸೆ ನೀಡಿ ಕೈತೊಳೆದುಕೊಳ್ಳುತ್ತಿದೆ ಎಂಬುದು ಕನ್ನಡಪರ ಕಾರ್ಯಕರ್ತ ಆಕ್ರೋಶದ ನುಡಿಯಾಗಿದೆ.

ರೈಲ್ವೆ ನೇಮಕಾತಿಯಲ್ಲಿ ಅನ್ಯಾಯ:

ಕರ್ನಾಟಕದಲ್ಲೇ ಶೇ.90ಕ್ಕೂ ಹೆಚ್ಚು ಸೇವಾ ಜಾಲ ಹೊಂದಿರುವ ನೈಋುತ್ಯ ರೈಲ್ವೆಯ 2017-18ನೇ ಸಾಲಿನ 2,200 ಹುದೆÜ್ದಗಳ ನೇಮಕಾತಿಯಲ್ಲಿ ಕನ್ನಡಿಗರಿಗೆ ದೊರೆತಿದ್ದು 22 (ಶೇ.1) ಉದ್ಯೋಗ ಮಾತ್ರ. ಕನ್ನಡಿಗರಿಗೆ ಆದ ಈ ಭಾರೀ ಅನ್ಯಾಯಕ್ಕೆ ಕೇಂದ್ರೀಕೃತ ಪರೀಕ್ಷಾ ವ್ಯವಸ್ಥೆ ಮಾತ್ರವಲ್ಲ. ಕನ್ನಡಿಗರಿಗೆ ಕೇಂದ್ರ ಸರ್ಕಾರದ ಉದ್ಯೋಗ, ಸೌಲಭ್ಯಗಳ ಮಾಹಿತಿ ದೊರೆಯದಂತೆ ಮರೆಮಾಚುತ್ತಿರುವ ಕುತಂತ್ರವೂ ಕಾರಣ ಎಂಬ ಆರೋಪವಿದೆ. ನೈಋುತ್ಯ ರೈಲ್ವೆಗೆ 2011ರಲ್ಲಿ ನಡೆದಿದ್ದ ನೇಮಕಾತಿಯಲ್ಲಿ 4,590 ಉದ್ಯೋಗಗಳಲ್ಲಿ ಪೈಕಿ 2,200 (ಶೇ.48) ಉದ್ಯೋಗ ಕನ್ನಡಿಗರಿಗೆ ದೊರೆತಿತ್ತು. ಆದರೆ, 2017-18ರಲ್ಲಿ ಕೇವಲ 22 ಉದ್ಯೋಗ ಸಿಕ್ಕಿವೆಯಷ್ಟೆಎಂದು ನೇಮಕಾತಿಯಲ್ಲಿ ವಂಚಿತ ಅಭ್ಯರ್ಥಿ ನರಸಿಂಹಮೂರ್ತಿ ಅಸಮಾಧಾನ ವ್ಯಕ್ತಪಡಿಸುತ್ತಾರೆ.

ರಾಜ್ಯದ ಉದ್ಯೋಗಗಳಲ್ಲೂ ಮೀಸಲಾತಿ ಭದ್ರತೆ ಇಲ್ಲ

ಕೇಂದ್ರ ಸರ್ಕಾರ ಹಿಂದಿ ಭಾಷಿಕ ರಾಜ್ಯಗಳ ತುಷ್ಟೀಕರಣದಿಂದ ಕರ್ನಾಟಕ, ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯ ಒಂದೆಡೆಯಾದರೆ, ರಾಜ್ಯ ಸರ್ಕಾರ, ರಾಜ್ಯವನ್ನು ಪ್ರತಿನಿಧಿಸುವ ಸಂಸತ್‌ ಸದಸ್ಯರೂ ಕೂಡ ಈ ಅನ್ಯಾಯಗಳನ್ನು ತಪ್ಪಿಸಲು ಕನ್ನಡಿಗರ ಪರವಾಗಿ ಗಟ್ಟಿಯಾಗಿ ನಿಲ್ಲುತ್ತಿಲ್ಲ. ಉದ್ಯೋಗ, ನೇಮಕಾತಿ, ಮೀಸಲಾತಿ, ಭಾಷಾ ವಿಚಾರಗಳಲ್ಲಿ ಒಕ್ಕೂಟ ವ್ಯವಸ್ಥೆಯಲ್ಲಿ ಕನ್ನಡಿಗರಿಗಾಗುತ್ತಿರುವ ವಂಚನೆಗಳನ್ನು ಪ್ರಶ್ನಿಸಿದೆ ಕನ್ನಡಿಗರಿಗೆ ದ್ರೋಹ ಬಗೆಯುತ್ತಲೇ ಬರುತ್ತಿದ್ದಾರೆ.

ಇನ್ನು, ಕರ್ನಾಟಕಕ್ಕೆ ಇತ್ತೀಚಿನ ವರ್ಷಗಳಲ್ಲಿ ಮಿತಿ ಮೀರುತ್ತಿರುವ ಹಿಂದಿ ಹಾಗೂ ನೆರೆ ರಾಜ್ಯಗಳ ವಲಸೆ ಪ್ರಮಾಣದಿಂದ ರಾಜ್ಯದ ಎಲ್ಲ ಕ್ಷೇತ್ರಗಳಲ್ಲೂ ಕನ್ನಡಿಗರಿಗೆ ಸಿಬೇಕಿದ್ದ ಖಾಸಗಿ ಕ್ಷೇತ್ರಗಳ ಉದ್ಯೋಗಗಳನ್ನು ಹೊರ ರಾಜ್ಯದವರು ಕಬಳಿಸುತ್ತಿದ್ದಾರೆ. ಇದನ್ನು ತಪ್ಪಿಸಲು ಸ್ಥಳೀಯರಿಗೆ ಉದ್ಯೋಗ ಮೀಸಲಾತಿ ಮೂಲಕ ಉದ್ಯೋಗ ಭದ್ರತೆ ಕಲ್ಪಿಸಬೇಕೆಂಬ ಕನ್ನಡಿಗರ ಮೂರು ದಶಕದ ಕೂಗನ್ನು ರಾಜ್ಯ ಸರ್ಕಾರ ಕೂಡ ನಿರ್ಲಕ್ಷಿಸುತ್ತಲೇ ಬರುತ್ತಿದೆ. ಈಗಿನ ಬಿಜೆಪಿ ಸರ್ಕಾರವೂ ಸೇರಿದಂತೆ ಉದ್ಯೋಗ ಮೀಸಲಾತಿಗೆ ಸಂಬಂಧಿಸಿದ ಸರೋಜಿನಿ ಮಹಿಷಿ ವರದಿಯನ್ನು ಮೂಲೆಯಲ್ಲಿಟ್ಟುಕೊಂಡೇ ಬಂದಿವೆ. ಕಳೆದ ಕಾಂಗ್ರೆಸ್‌ ಸರ್ಕಾರದಲ್ಲಿ ಇದರ ಪರಿಷ್ಕೃತ ವರದಿ ಸಿದ್ಧಪಡಿಸಲಾಯಿತಾದರೂ ಅದನ್ನೂ ಅನುಷ್ಠಾನಗೊಳಿಸಿಲ್ಲ.

ಕೇಂದ್ರ ಸರ್ಕಾರದ ಉದ್ಯೋಗಾವಕಾಶಗಳಲ್ಲಿ ಆಗುತ್ತಿರುವ ಅನ್ಯಾಯ ತಡೆಯಲು ರಾಜ್ಯದ ಸರ್ವ ಪಕ್ಷಗಳ ಜಪ್ರತಿನಿಧಿಗಳು ರಾಜ್ಯದ ಜನರ ಪರವಾಗಿ ಒಗ್ಗಟ್ಟಾಗಿ ನಿಲ್ಲುತ್ತಿಲ್ಲ. ನಮ್ಮ ಜನ್ಪಪ್ರತಿನಿಧಿಗಳಿಗೆ ಕನ್ನಡಿಗರ ಹಿತಾಸಕ್ತಿ ಬೇಕಾಗಿಲ್ಲ. ಕೆಲವು ಸಲ ರಾಜಕೀಯ ಲಾಭಕ್ಕಾಗಿ, ಇನ್ನೊಮ್ಮೆ ನಾಮಕಾವಸ್ತೆಗೆ ವಿಷಯ ಪ್ರಸ್ತಾಪಿಸುತ್ತಾರೆ, ಅಲ್ಲಿಗೆ ಕೈಬಿಡುತ್ತಾರೆ.

- ವಾಟಾಳ್‌ ನಾಗರಾಜ್‌, ಕನ್ನಡ ಒಕ್ಕೂಟದ ಅಧ್ಯಕ್ಷ

ನೇಮಕಾತಿಯಿಂದ ಕನ್ನಡಿಗರನ್ನು ವಂಚಿಸಿ ಹಿಂದಿ ರಾಜ್ಯಗಳಿಗೆ ಅನುಕೂಲ ಮಾಡಿಕೊಡುವ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ. ಒಕ್ಕೂಟ ವ್ಯವಸ್ಥೆಯ ವಿರೋಧಿ ನಿಲುವು. ಕೇಂದ್ರ ಸರ್ಕಾರ ಇನ್ಮುಂದೆಯಾದರೂ ಹಿಂದಿಯಷ್ಟೇ ಪ್ರಾತಿನಿಧ್ಯವನ್ನು ಕನ್ನಡಕ್ಕೂ ನೀಡಬೇಕು

- ಕನ್ನಡ ಕುಮಾರ್‌, ಕನ್ನಡಪರ ಹೋರಾಟಗಾರ

ಐಬಿಪಿಎಸ್‌ ಪರೀಕ್ಷೆ:  ತುಪ್ಪ ಸವರಿದ ಕೇಂದ್ರ:

ರಾಷ್ಟ್ರೀಕೃತ ಬ್ಯಾಂಕ್‌ ಹಾಗೂ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳ (ಆರ್‌ಆರ್‌ಬಿ) ಉದ್ಯೋಗ ನೇಮಕಾತಿಗೆ ನಡೆಯುವ ‘ಐಬಿಪಿಎಸ್‌’ ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯಲು ಅವಕಾಶ ನೀಡಬೇಕೆಂಬ ಕನ್ನಡಿಗರ ಐದು ವರ್ಷಗಳ ಆಗ್ರಹಕ್ಕೆ ಕೇಂದ್ರ ಸರ್ಕಾರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದೆ. ಕನ್ನಡದಲ್ಲಿ ಬ್ಯಾಂಕಿಂಗ್‌ ಪರೀಕ್ಷೆಗೆ ಆಗ್ರಹಿಸಿ ಹೋರಾಟ ಜೋರಾಗಿದ್ದಕ್ಕೆ ಕೆಲ ತಿಂಗಳ ಹಿಂದಷ್ಟೇ ಈ ಸಂಬಂಧ ಆದೇಶ ಮಾಡಿದ ಕೇಂದ್ರ ಹಣಕಾಸು ಇಲಾಖೆ, ಆರ್‌ಆರ್‌ಬಿ ಪರೀಕ್ಷೆಗಳನ್ನು ಪ್ರಾದೇಶಿಕ ಭಾಷೆಗಳಲ್ಲಿ ಬರೆಯಲು ಅವಕಾಶ ನೀಡುವುದಾಗಿ ಹೇಳಿತು. ಆದರೆ, ರಾಷ್ಟ್ರೀಕೃತ ಬ್ಯಾಂಕ್‌ಗಳ ನೇಮಕಾತಿಗೆ ನಡೆಯುವ ಐಬಿಪಿಎಸ್‌ ಪರೀಕ್ಷೆಗಳ ಬಗ್ಗೆ ಆದೇಶದಲ್ಲಿ ಪ್ರಸ್ತಾಪಿಸಿರಲಿಲ್ಲ. ಅಲ್ಲದೆ, ಆರ್‌ಆರ್‌ಬಿ ಪರೀಕ್ಷೆಯಲ್ಲೂ ಸಹ ಪ್ರಾಥಮಿಕ ಪರೀಕ್ಷೆಗೆ ಕನ್ನಡದಲ್ಲಿ ಬರೆಯಲು ಅವಕಾಶ ನೀಡಿಲ್ಲ. ಅಂತಿಮ (ಮೇನ್ಸ್‌) ಪರೀಕ್ಷೆಗೆ ಮಾತ್ರ ಕನ್ನಡದಲ್ಲಿ ಬರೆಯಲು ಅವಕಾಶ ಕಲ್ಪಿಸುವುದಾಗಿ ಹೇಳಿದೆ. ಇದು ಮತ್ತೊಂದು ರೀತಿಯ ಮೋಸ ಎಂದೇ ಕನ್ನಡ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.