ಬಜೆಟ್ ಯುವ ಭಾರತಕ್ಕೆ ಒಳ್ಳೆಯ ಸಂದೇಶ: ಕೇಂದ್ರ ಸಚಿವ ಪಿಯೂಷ್ ಗೋಯಲ್
ದೇಶದ ಅಭಿವೃದ್ಧಿಗೆ ಪೂರಕವಾಗಿರುವ ಕೇಂದ್ರ ಸರ್ಕಾರದ ಬಜೆಟ್ ಯುವ ಭಾರತಕ್ಕೆ ಒಳ್ಳೆಯ ಸಂದೇಶ ನೀಡಿದೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ತಿಳಿಸಿದರು.

ಬೆಂಗಳೂರು (ಫೆ.05): ದೇಶದ ಅಭಿವೃದ್ಧಿಗೆ ಪೂರಕವಾಗಿರುವ ಕೇಂದ್ರ ಸರ್ಕಾರದ ಬಜೆಟ್ ಯುವ ಭಾರತಕ್ಕೆ ಒಳ್ಳೆಯ ಸಂದೇಶ ನೀಡಿದೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ತಿಳಿಸಿದರು. ಬಿಜೆಪಿ ರಾಜ್ಯ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಈಗ ದೇಶದ ಸ್ವಾತಂತ್ರ್ಯೋತ್ಸವದ ಅಮೃತ ಕಾಲದಲ್ಲಿ ಇದ್ದೇವೆ. ಇಡೀ ವಿಶ್ವ ಈಗ ಭಾರತದತ್ತ ನೋಡುತ್ತಿದೆ. ವಿಶ್ವದ ದೊಡ್ಡ ಆರ್ಥಿಕ ಶಕ್ತಿ ಹೊಂದಿರುವ 10 ದೇಶಗಳ ಪೈಕಿ ಪ್ರಸ್ತುತ 5ನೇ ಸ್ಥಾನದಲ್ಲಿರುವ ಭಾರತ ಇನ್ನು ಕೆಲವೇ ವರ್ಷಗಳಲ್ಲಿ ಮೂರನೇ ಸ್ಥಾನಕ್ಕೆ ಬರಲಿದೆ. ಈ ಬಾರಿಯ ಬಜೆಟ್ ದೇಶದ ಅಭಿವೃದ್ಧಿಗೆ ಪೂರಕವಾಗಿದೆ ಎಂದರು.
ಈ ಬಜೆಟ್‌ನಲ್ಲಿ ಸಮಾಜದ ಎಲ್ಲಾ ಕ್ಷೇತ್ರಗಳಿಗೂ ಒತ್ತು ನೀಡಲಾಗಿದೆ. ಹೆಚ್ಚು ಉದ್ಯೋಗ, ಗರಿಷ್ಠ ಆರ್ಥಿಕ ಚಟುವಟಿಕೆ, ಉತ್ತಮ ಭವಿಷ್ಯ, ಸುಸ್ಥಿರ ಅಭಿವೃದ್ಧಿಗೆ ಪೂರಕ ಬಜೆಟ್ ಇದಾಗಿದೆ. ವೈಯಕ್ತಿಕ ತೆರಿಗೆ ಮಿತಿಯನ್ನು 7 ಲಕ್ಷ ರು. ಹೆಚ್ಚಿಸಿದ್ದು ಮಧ್ಯಮ ವರ್ಗಕ್ಕೆ ಮಹತ್ವದ ಕೊಡುಗೆಯಾಗಿದೆ. ಬಜೆಟ್‌ನಲ್ಲಿ ಕರ್ನಾಟಕಕ್ಕೂ ಹಲವು ನೆರವು ನೀಡಲಾಗಿದೆ. ರೈಲ್ವೆಗೆ 7,561 ಕೋಟಿ ರು. ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರು. ಅನುದಾನ ನೀಡಲಾಗಿದೆ. ಇನ್ನು ಬೆಂಗಳೂರು ಉಪನಗರ ರೈಲು ಯೋಜನೆಗೆ ಹೆಚ್ಚಿನ ಹಣ ಬರಲಿದೆ. ಮೈಸೂರು- ಬೆಂಗಳೂರು ಹೈಸ್ಪೀಡ್ ಹೈವೇ ರಸ್ತೆಯಿಂದ ಪ್ರಯಾಣ ಅವಧಿ ಒಂದೂವರೆ ಗಂಟೆಗೆ ಇಳಿಕೆಯಾಗಿದೆ. ಇದು ಮುಂದಿನ ದಿನಗಳಲ್ಲಿ ಮೈಸೂರಿನಲ್ಲಿ ಅಭಿವೃದ್ಧಿ, ಕೈಗಾರಿಕೆ, ಐಟಿ ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪುಕ್ಕಟ್ಟೆ ಕೊಟ್ಟರೆ ಜನರು ಮಾರುತ್ತಾರೆ: ಕೇಂದ್ರ ಸಚಿವ ಪಿಯೂಷ್ ಗೋಯಲ್
ಕಾಂಗ್ರೆಸ್ ಸುಳ್ಳು ಜನರಿಗೆ ಗೊತ್ತು: ದೇಶದ ಜನರು ಪ್ರಧಾನಿ ಮೋದಿ ಹಾಗೂ ಬಿಜೆಪಿ ಜತೆಗೆ ಇದ್ದಾರೆ. ಮುಂದಿನ ಕರ್ನಾಟಕ ಚುನಾವಣೆಯಲ್ಲಿ ರಾಜ್ಯದ ಜನರು ಸ್ಪಷ್ಟಬಹುಮತದೊಂದಿಗೆ ಬಿಜೆಪಿ ಸರ್ಕಾರವನ್ನು ಮತ್ತೆ ಅಧಿಕಾರಕ್ಕೆ ತರಲಿದ್ದಾರೆ. ಕಾಂಗ್ರೆಸ್ ಪಕ್ಷ ಸುಳ್ಳು ಆಶ್ವಾಸನೆ ನೀಡುತ್ತಿದ್ದು, ಇದು ಜನರಿಗೆ ಅರ್ಥವಾಗಿದೆ. ಕಾಂಗ್ರೆಸ್‌ನ ಸುಳ್ಳು ಆರೋಪಗಳಿಂದ ಪಕ್ಷಕ್ಕೆ ಹಿನ್ನಡೆಯಾಗುವುದಿಲ್ಲ. ಗುಜರಾತ್ ಚುನಾವಣೆ ವೇಳೆ ಇದು ಸಬೀತಾಗಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಶೇ.40ರಷ್ಟು ಕಮಿಷನ್ ಆರೋಪ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ಪ್ರಧಾನಿ ನರೇಂದ್ರ ಮೋದಿ ಅವರು ಭ್ರಷ್ಟಾಚಾರ ಮುಕ್ತ ಆಡಳಿತಕ್ಕೆ ಒತ್ತು ನೀಡುತ್ತಿದ್ದಾರೆ. ಒಂದು ನಿರ್ದಿಷ್ಟಆರೋಪಕ್ಕೆ ನಿರ್ದಿಷ್ಟತನಿಖೆ ಆಗುತ್ತದೆ. ಸರ್ಕಾರದ ಮೇಲೆ ಆರೋಪ ಮಾಡುವುದು ಸಹಜ. ಭ್ರಷ್ಟಾಚಾರ ನಡೆಯಲು ಅವಕಾಶ ನೀಡುವುದಿಲ್ಲ. ಕಾಂಗ್ರೆಸ್‌ನ ಸುಳ್ಳು ಆರೋಪಗಳಿಗೆ ಜನರು ತಲೆಕೆಡಿಸಿಕೊಳ್ಳಲ್ಲ ಎಂದರು.
ಅದಾನಿ ಕಂಪನಿಯ ಷೇರು ಕುಸಿತ ಬಗ್ಗೆ ಪ್ರತಿಕ್ರಿಯಿಸಿ, ಷೇರುಪೇಟೆಯ ಸ್ಥಿತ್ಯಂತರಗಳ ಬಗ್ಗೆ ಷೇರು ಮಾರುಕಟ್ಟೆಯ ರೆಗ್ಯುಲೇಟರಿ ನೋಡಿಕೊಳ್ಳಲಿದೆ. ಸೂಕ್ಷ್ಮವಾಗಿ ಪರಿಸ್ಥಿತಿ ಅವಲೋಕಿಸಲಾಗುತ್ತದೆ. ಈಗಾಗಲೇ ಎಸ್‌ಬಿಐ ಹಾಗೂ ಎಲ್‌ಐಸಿ ತಮ್ಮ ಅಭಿಪ್ರಾಯ ನೀಡಿದ್ದು, ತಮ್ಮ ಹಣಕ್ಕೆ ತೊಂದರೆಯಿಲ್ಲ ಎಂದಿವೆ ಎಂದರು. ವಿರೋಧ ಪಕ್ಷಗಳಿಗೆ ಪ್ರಧಾನಿ ಮೋದಿ ಅವರನ್ನು ಟೀಕಿಸಲು ಅದಾನಿ ಕಂಪನಿ ಷೇರು ಕುಸಿತ ಪ್ರಕರಣ ಬಳಕೆಯಾಗಲಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.
ಪತ್ನಿಗೆ ಜೀವನಾಂಶ ನೀಡೋದು ಪತಿಗೆ ಶಿಕ್ಷೆಯಲ್ಲ: ಹೈಕೋರ್ಟ್ ಅಭಿಪ್ರಾಯ
ಬಿಎಸ್‌ವೈ ಪರಮೋಚ್ಚ ನಾಯಕ: ಇನ್ನು ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಮುಖ್ಯಮಂತ್ರಿಗೆ ಬಿಟ್ಟವಿಚಾರ. ಸಂಪುಟಕ್ಕೆ ಯಾರನ್ನು ಸೇರಿಸಬೇಕು ಅಥವಾ ಕೈಬಿಡಬೇಕು ಎಂಬುದರ ಬಗ್ಗೆ ಅವರೇ ನಿರ್ಧರಿಸಲಿದ್ದಾರೆ. ಇನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಮ್ಮ ಪರಮೋಚ್ಚ ನಾಯಕ. ಈಗಾಗಲೇ ಅವರು ಬಿಜೆಪಿಯ ಪ್ರಮುಖ ನಿರ್ಧಾರ ಕೈಗೊಳ್ಳುವ ಸಮಿತಿಯ ಸದಸ್ಯರಾಗಿದ್ದಾರೆ. ಅವರನ್ನು ಗೌರವಯುತವಾಗಿ ನಡೆಸಿಕೊಳ್ಳುತ್ತಿರುವ ಪಕ್ಷ ಮುಂದೆಯೂ ಹಾಗೆಯೇ ನಡೆಸಿಕೊಳ್ಳಲಿದೆ. ಅವರ ಮಾರ್ಗದರ್ಶನದಲ್ಲಿಯೇ ರಾಜ್ಯದ ಮುಂದಿನ ವಿಧಾನಸಭಾ ಚುನಾವಣೆ ಎದುರಿಸಲಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ, ಸಂಸದ ಪಿ.ಸಿ. ಮೋಹನ್ ಉಪಸ್ಥಿತರಿದ್ದರು.