Umesh Katti Death: ಮೋದಿ, ಆರ್ಸಿ, ಸಿದ್ದರಾಮಯ್ಯ ಸೇರಿ ಗಣ್ಯರ ಸಂತಾಪ
ರಾಜ್ಯ ಸರ್ಕಾರದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಉಮೇಶ್ ಕತ್ತಿ ಹೃದಯಾಘಾತದಿಂದ ನಿಧನರಾಗಿದ್ದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದಾರೆ.
ಬೆಂಗಳೂರು ಸೆ.7: ರಾಜ್ಯ ಸರ್ಕಾರದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಉಮೇಶ್ ಕತ್ತಿ ಹೃದಯಾಘಾತದಿಂದ ನಿಧನರಾಗಿದ್ದು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿ ನಾಡು, ದೇಶದ ಗಣ್ಯರು ಸಂತಾಪ ಸೂಚಿಸಿದ್ದಾರೆ. ಸಚಿವ ಉಮೇಶ್ ಕತ್ತಿ ಒಳ್ಳೆಯ ಸ್ನೇಹಿತ. ತಮಾಷೆಯಾಗಿ ಮಾತನಾಡೋರು. ಮೊದಲಿನಿಂದಲೂ ಕತ್ತಿಯವರಿಗೆ ಹೃದಯ ಸಂಬಂಧಿ ಸಮಸ್ಯೆ ಇತ್ತು. ಅವರ ತಂದೆಗೂ ಹೃದಯಾಘಾತವಾಗಿತ್ತು. ಆದರೆ ಉಮೇಶ್ ಕತ್ತಿಗೆ ಸಾಯುವಂಥ ವಯಸ್ಸಾಗಿರಲಿಲ್ಲ. ಕತ್ತಿಯವರ ಆತ್ಮಕ್ಕೆ ಶಾಂತಿ ಕೋರುತ್ತೇನೆ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಉಮೇಶ್ ಕತ್ತಿಯಂಥ ಅನುಭವಿ ರಾಜಕಾರಣಿಯಿಂದ ಕರ್ನಾಟಕ ಅಭಿವೃದ್ಧಿ ಕಂಡಿದೆ. ಇವರ ಅಕಾಲಿಕ ನೋವು ತೀವ್ರ ಆಘಾತ ತಂದಿದ್ದು, ಈ ದುಃಖ ಭರಿಸುವ ಶಕ್ತಿ ಕುಟುಂಬಕ್ಕೆ ನೀಡಲಿ, ಓಂ ಶಾಂತಿ ಎಂದು ಮೋದಿ ಟ್ವೀಟ್ ಮಾಡಿದ್ರೆ, ಕೇಂದ್ರ ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ ಮತ್ತು ಕೌಶಲ್ಯ ಅಭಿವೃದ್ಧ ಸಚಿವ ರಾಜೀವ್ ಚಂದ್ರಶೇಖರ್ 'ಕರ್ನಾಟಕ ಸರ್ಕಾರದ ಹಿರಿಯ ಸಚಿವರು ಹಾಗು ಪಕ್ಷದ ನಾಯಕರಾದ ಶ್ರೀ ಉಮೇಶ್ ಕತ್ತಿಯವರ ಅಕಾಲಿಕ ಸಾವು ಅತ್ಯಂತ ದುಃಖದ ವಿಷಯ. ಅವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗಕ್ಕೆ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಓಂ ಶಾಂತಿ.' ಎಂದು ಟ್ವೀಟ್ ಮಾಡಿದ್ದಾರೆ.
ಸಚಿವ ಉಮೇಶ್ ಕತ್ತಿ ಮಂಗಳವಾರ ರಾತ್ರಿ ಡಾಲರ್ಸ್ ಕಾಲೋನಿ ನಿವಾಸದಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದರು, ತಕ್ಷಣ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸಿದೆ ಕೊನೆಯುಸಿರೆಳೆದಿದ್ದಾರೆ.
ಶೋಕಾಚರಣೆ ಘೋಷಣೆ ವಿಚಾರ:
ಮೂರು ದಿನದ ಶೋಕಾಚರಣೆ ಒಂದೇ ದಿನಕ್ಕ. ಸರ್ಕಾರ ಮೂರು ದಿನ ಶೋಕಾಚರಣೆ ಮಾಡಬೇಕು. ಆದ್ರೆ ಒಂದೇ ದಿನಕ್ಕೆ ಘೋಷಣೆ ಮಾಡಿದ್ದಾರೆಂಬ ಬಗ್ಗೆ ಮಾಹಿತಿ ಇಲ್ಲ ಒಂದೇ ದಿನಕ್ಕೆ ಯಾಕೆ ಸೀಮಿತಗೊಳಿಸಿದ್ದಾರೆ ಅಂತಾ ಮಾಹಿತಿ ಇಲ್ಲ. ಬಿಜೆಪಿ ಜನೋತ್ಸವದ ಬಗ್ಗೆ ನಾನು ಮಾತನಾಡಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ.
ಉಮೇಶ್ ಕತ್ತಿ ನಿಧನಕ್ಕೆ ಸಚಿವ ಮುರುಗೇಶ್ ಆರ್ ನಿರಾಣಿ ಸಂತಾಪ:
ಹಿರಿಯ ಮುಖಂಡ ಹಾಗೂ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ್ ಕತ್ತಿ ಅವರ ನಿಧನಕ್ಕೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರು ಕಂಬನಿ ಮಿಡಿದಿದ್ದಾರೆ. ನಮ್ಮ ಸಂಪುಟದ ಕ್ರಿಯಾಶೀಲ ಸಚಿವರಾಗಿದ್ದ ಅವರು ಇತ್ತೀಚಿಗೆ ಇಲಾಖೆಯಲ್ಲಿ ಸಾಕಷ್ಟು ಸುಧಾರಣೆ ತರುವ ಮೂಲಕ ಜನಸ್ನೇಹಿಯಾಗಿದ್ದರು. ಆದರೆ, ಇಷ್ಟು ಬೇಗ ಇಂತಹ ದುರ್ಘಟನೆ ನಡೆಯುತ್ತದೆ ಎಂದು ಕನಸಿನಲ್ಲೂ ಉಹಿಸಿರಲಿಲ್ಲ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಜನತಾದಳದಿಂದ ತಮ್ಮ ರಾಜಕೀಯ ಜೀವನ ಆರಂಭಿಸಿದ್ದ ಅವರು, ಬಳಿಕ , ಜೆಡಿಎಸ್, ನಂತರ ಬಿಜೆಪಿಗೆ ಸೇರಿ ಒಟ್ಟು 8 ಬಾರಿ ಶಾಸಕರಾಗಿ ಸಚಿವರಾಗಿದ್ದುದು ಅವರ ಜನಪ್ರಿಯತೆಗೆ ಹಿಡಿದ ಕೈ ಗನ್ನಡಿ ಎಂದು ಬಣ್ಣಿಸಿದ್ದಾರೆ. 8 ಬಾರಿ ಗೆದ್ದು 5 ಬಾರಿ ಮಂತ್ರಿಯಾಗಿದ್ದ ಅವರು, ಸಕ್ಕರೆ, ಲೋಕೋಪಯೋಗಿ ,ಬಂಧೀಖಾನೆ, ತೋಟಗಾರಿಕೆ, ಕೃಷಿ, ಅರಣ್ಯ ಆಹಾರ ಮತ್ತು ನಾಗರಿಕ ಪೂರೈಕೆ ಹೀಗೆ ಹಲವಾರು ಇಲಾಖೆಯ ಸಚಿವರಾಗಿದ್ದ ಕತ್ತಿ ಅವರು, ಜನೋಪಯೋಗಿ ಹಾಗೂ ಜನಪರ ಕೆಲಸ ಮಾಡಿ, ಸರ್ಕಾರ ಮತ್ತು ಪಕ್ಷಕ್ಕೂ ಉತ್ತಮ ಹೆಸರು ತಂದುಕೊಡುತ್ತಿದ್ದರೆಂದು ಸ್ಮರಿಸಿದ್ದಾರೆ.
ರಾಜಕೀಯ ವಲಯಕ್ಕೆ ಸೀಮಿತವಾಗದೆ ಕತ್ತಿ ಅವರು, ಸಕ್ಕರೆ, ಡಿಸ್ಟಿಲಾರಿ, ಹೋಟೆಲ್ ಉದ್ಯಮಿ ಯಾಗಿ ಹತ್ತಾರು ಸಾವಿರ ಜನರಿಗೆ ಉದ್ಯೋಗ ನೀಡುವಮೂಲಕ ಸಮಾಜಮುಖಿಯಾಗಿ ಕೆಲಸ ಮಾಡಿದ್ದರು ಎಂದು ಅವರ ಸೇವೆಯನ್ನು ಕೊಂಡಾಡಿದ್ದಾರೆ. ಬೆಳಗಾವಿ ಜಿಲ್ಲೆಯ ಪ್ರಭಾವಿ ಮುಖಂಡರಾಗಿದ್ದ ಅವರು, ಬಿಜೆಪಿಗೆ ಸೇರ್ಪಡೆಯಾದ ನಂತರ ಕಿತ್ತೂರು ಕರ್ನಾಟಕದಲ್ಲಿ ಸಂಘಟನೆಗೆ ಹೆಚ್ಚು ಒತ್ತು ಕೊಟ್ಡಿದ್ದರು. ಇದರ ಪರಿಣಾಮವಾಗಿ ಈ ಭಾಗದಲ್ಲಿ ಪಕ್ಷ ಬೇರು ಮಟ್ಟದಲ್ಲಿ ಪ್ರಬಲವಾಗಿ ಬೆಳೆಯಲು ಸಾಧ್ಯವಾಗಿದೆ ಎಂದು ಹೇಳಿದ್ದಾರೆ.
ಉಮೇಶ್ ಕತ್ತಿ ಅವರ ಅಕಾಲಿಕ ನಿಧನದಿಂದ ರಾಜ್ಯವು ಓರ್ವ ನುರಿತ ಮುತ್ಸದ್ಧಿ,ಕ್ರಿಯಾಶೀಲ ಮುಖಂಡ ಹಾಗೂ ನಿಷ್ಠಾವಂತ ಜನಸೇವಕನನ್ನು ಕಳೆದುಕೊಂಡಿದೆ. ಅವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಆ ಭಗವಂತ ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ನೀಡಲಿ ಎಂದು ಸಚಿವ ನಿರಾಣಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ಪ್ರಾರ್ಥಿಸಿದ್ದಾರೆ.