ನವದೆಹಲಿ[ಡಿ.13]: ಮಂಡ್ಯ ಮತ್ತು ಬಳ್ಳಾರಿ ಲೋಕಸಭೆ ಉಪ ಚುನಾವಣೆಯಲ್ಲಿ ಚುನಾಯಿತರಾದ ಎಲ್‌.ಆರ್‌. ಶಿವರಾಮೇಗೌಡ ಹಾಗೂ ವಿ.ಎಸ್‌. ಉಗ್ರಪ್ಪ ಅವರು ಬುಧವಾರ ಲೋಕಸಭೆಯಲ್ಲಿ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಉಗ್ರಪ್ಪ ಅವರು ಕಾಂಗ್ರೆಸ್‌ನಿಂದ ಬಳ್ಳಾರಿ ಹಾಗೂ ಶಿವರಾಮೇಗೌಡ ಅವರು ಜೆಡಿಎಸ್‌ನಿಂದ ಮಂಡ್ಯ ಕ್ಷೇತ್ರದಿಂದ ಲೋಕಸಭೆ ಪ್ರವೇಶಿಸಿದ್ದರು. ಬುಧವಾರದ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಈ ಇಬ್ಬರು ಸಂಸದರು ಕನ್ನಡದಲ್ಲಿಯೇ ಪ್ರಮಾಣ ವಚನ ಸ್ವೀಕಾರ ಮಾಡಿದರು.

ನೂತನ ಸಂಸದರ ಪದಗ್ರಹಣ ಮುಕ್ತಾಯದ ಬೆನ್ನಲ್ಲೇ, ಅನಾರೋಗ್ಯ ಮತ್ತು ವಯೋಸಹಜ ಕಾರಣದಿಂದ ನಿಧನರಾದ ಕರ್ನಾಟಕದ ಸಿ.ಕೆ. ಜಾಫರ್‌ ಷರೀಫ್‌ ಸೇರಿದಂತೆ 11 ಮಾಜಿ ಸಂಸದರಿಗೆ ಸದಸ್ಯರು ಶ್ರದ್ಧಾಂಜಲಿ ಸಲ್ಲಿಸಿದರು.