ಆರಂಭವಾದ ಮೂರೇ ದಿನಕ್ಕೆ ಮಲ್ಪೆ ಬೀಚ್‌ನ ತೇಲುವ ಸೇತುವೆ ಸ್ಥಗಿತ, ಬ್ಲಾಕ್‌ಗಳು ಚೆಲ್ಲಾಪಿಲ್ಲಿ!
* ಮಲ್ಪೆ ಬೀಚ್‌ನ ತೇಲುವ ಸೇತುವೆ ಸ್ಥಗಿತ
* ಅಲೆಗಳ ಅಬ್ಬರ ಹೆಚ್ಚಿರುವುದರಿಂದ ಸ್ಥಗಿತ
* ಅಲೆಗಳ ಅಬ್ಬರಕ್ಕೆ ಸೇತುವೆಯಲ್ಲಿ ತಾಂತ್ರಿಕ ದೋಷ
* ಪ್ರತ್ಯೇಕಗೊಂಡ ಬ್ಲಾಕ್ ಗಳು ಚೆಲ್ಲಾಪಿಲ್ಲಿ
ಮಲ್ಪೆ(ಮೇ.09): ರಜಾದಿನಗಳನ್ನು ಎಂಜಾಯ್ ಮಾಡುವುದಕ್ಕೆ ಜನ ಲಕ್ಷಾಂತರ ಸಂಖ್ಯೆಯಲ್ಲಿ ಕರಾವಳಿಯ ಬೀಚ್ (coastal beaches) ಕಡೆಗೆ ಬರುತ್ತಾರೆ. ವೀಕೆಂಡ್ ಬಂದ್ರೆ ಸಾಕು ಬೀಚ್ ಗಳು ತುಂಬಿತುಳುಕುತ್ತವೆ. ಹೀಗಿರುವಾಗ ಉಡುಪಿಗೆ (Udupi) ಬರುವ ಪ್ರವಾಸಿಗರಿಗೆ ಇಲ್ಲಿನ ಮಲ್ಪೆ ಬೀಚ್‌ನಲ್ಲಿ (ಮಾಲಪೆ ಭೆಅಚಹ) ತೇಲುವ ಸೇತುವೆಯನ್ನು ವ್ಯವಸ್ಥೆಗೊಳಿಸಲಾಗಿತ್ತು. ಅಲ್ಲದೇ ಇದು ಕರ್ನಾಟಕ ರಾಜ್ಯದಲ್ಲೇ ಪ್ರಥಮ ತೇಲುವ ಸೇತುವೆ(Karnataka’s first floating bridge) ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು. ಆದರೀಗ ಅಲೆಗಳ ಅಬ್ಬರದಿಂದ ತಾಂತ್ರಕ ದೋಷವುಂಟಾಗಿ ತೇಲುವ ಸೇತುವೆ ಸ್ಥಗಿತಗೊಂಡಿದೆ.
ಹೌದು ಸಮುದ್ರದಲ್ಲಿ ಅಲೆಗಳ ಅಬ್ಬರ ಇತ್ತೀಚೆಗೆ ಹೆಚ್ಚಾಗಿದೆ. ಅಲೆಗಳ ಅಬ್ಬರಕ್ಕೆ ಸೇತುವೆಯಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಸೇತುವೆಗೆ ಅಳವಡಿಸಿರುವ ಬ್ಲಾಕ್‌ಗಳು ಚೆಲ್ಲಾಪಿಲ್ಲಿಯಾಗಿವೆ. ಇದರ ವಿಡಿಯೋಗಳೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಹೀಗಿರುವಾಗ ನಿರ್ವಹಣೆಯ ದೃಷ್ಟಿಯಿಂದ ತೇಲುವ ಸೇತುವೆ ಕಾರ್ಯ ಸ್ಥಗಿತಗೊಳಿಸಲಾಗಿದೆ ಎಂದು ನಿರ್ವಾಹಕರೇ ಮಾಹಿತಿ ನೀಡಿದ್ದಾರೆ. ಏಕಾಏಕಿ ಕಂಡು ಬಂದ ಈ ತಾಂತ್ರಕ ದೋಷದಿಂದ ತೇಲುವ ಸೇತುವೆಯಲ್ಲಿ ಎಂಜಾಯ್ ಮಾಡಲು ಬಂದ ಪ್ರವಾಸಿಗರಿಗೆ ನಿರಾಸೆಯಾಗಿದೆ. ಭಾನುವಾರ ಸಂಜೆಯಿಂದಲೇ ತೇಲುಸೇತುವೆ ಬಂದ್ ಆಗಿದೆ.
"
ಪ್ರವಾಸಿಗರ ಆಕರ್ಷಿಸಿದ್ದ ತೇಲು ಸೇತುವೆ
ಕರಾವಳಿಯ ಪ್ರಮುಖ ಆಕರ್ಷಣೆಗಳು ಸಮುದ್ರತೀರಗಳು. ಮರುಸೃಷ್ಟಿ ಮಾಡಲು ಸಾಧ್ಯವಿಲ್ಲದ ಸಮುದ್ರದ ಅಲೆಗಳ ರೌದ್ರಾವತಾರ ಕಾಣುವುದಕ್ಕಂತಲೇ ಲಕ್ಷಾಂತರ ಜನ ಬರುತ್ತಾರೆ. ಕಡಲತೀರಗಳಲ್ಲಿ ಮಿಂದು ಖುಷಿಪಡುತ್ತಾರೆ. ಕೆಲವೊಮ್ಮೆ ತೀರವನ್ನು ಮೀರಿ ಸಮುದ್ರದ ಅಲೆಗಳಿಗೆ ಕಡೆಗೆ ಮುಂದೆ ಮುಂದೆ ಸಾಗುತ್ತಾರೆ. ಅಪಾಯ ದ ಅರಿವಿಲ್ಲದೆ ಜೀವ ಕಳೆದುಕೊಳ್ಳುತ್ತಾರೆ. ಹೀಗಿರುವಾಗ ಜೀವ ಭಯವಿಲ್ಲದೇ ಸಮುದ್ರದಲ್ಲಿ ನಡೆದಾಡಬಹುದಾದ ತೇಲುವ ಸೇತುವೆ ವ್ಯವಸ್ಥೆ ಮಾಡಲಾಗಿತ್ತು. ಈ ತೇಲುವ ಸೇತುವೆ ಚಾಲನೆಗೊಂಡ ಬೆನ್ನಲ್ಲೇ ಭಾರೀ ಸದ್ದು ಮಾಡಿದ್ದು, ಪ್ರವಾಸಿಗರನ್ನು ತನ್ನತ್ತ ಆಕರ್ಷಿಸಿತ್ತು.
ಕೇರಳದ ಬೇಪೋರ್ ಬೀಚ್ (kerala beypore beach) ಬಿಟ್ಟರೆ ದೇಶದ ಬೇರೆಲ್ಲೂ ಈ ರೀತಿಯ ತೇಲುವ ಸೇತುವೆ ಇರಲಿಲ್ಲ. ಕೆಲವೊಂದು ಹಿನ್ನೀರಿನ ಪ್ರದೇಶಗಳಲ್ಲಿ ಈ ಥರದ ಸೇತುವೆ ಅಳವಡಿಸಿದ್ದರೂ ಸಮುದ್ರದ ಅಲೆಗಳ ಮೇಲೆ ನಡೆದ ರೋಚಕ ಅನುಭವ ಅಲ್ಲಿ ಸಿಗುವುದಿಲ್ಲ. ಇನ್ನು ಮಲ್ಪೆಯಲ್ಲಿ ನಿರ್ಮಾಣವಾದ ಸೇತುವೆಯು 100 ಮೀಟರ್ ಉದ್ದ ಮತ್ತು 3.5 ಮೀಟರ್ ಅಗಲ ಹೊಂದಿದೆ. ಹೆಚ್ಚಿನ ಸಾಂದ್ರತೆಯ ಫೋಂಟೋನ್ಸ್ ಬ್ಲಾಕ್ ಗಳಿಂದ ಇದನ್ನು ಮಾಡಲಾಗಿತ್ತು. ಇದರಲ್ಲಿ ಒಂದು ಬಾರಿಗೆ ನೂರು ಜನರು ಸಾಗಬಹುದಿತ್ತು. ಸೇತುವೆಯ ಕೊನೆಯಲ್ಲಿ ಸಮುದ್ರಕ್ಕೆ ಚಾಚಿರುವ 12 ಮೀಟರ್ ಉದ್ದ 7.5 ಮೀಟರ್ ಅಗಲದ ವೇದಿಕೆ ಇದ್ದು, ಒಬ್ಬರು ನೂರು ರೂಪಾಯಿ ಪಾವತಿಸಿ, 15 ನಿಮಿಷ ಕಾಲ ಸೇತುವೆ ಮೇಲೆ ಕಳೆಯಲು ಅವಕಾಶ ಕಲ್ಪಿಸಲಾಗಿತ್ತು.
ಸೇತುವೆ ಅಕ್ಕಪಕ್ಕದಲ್ಲಿ ಹತ್ತುಮಂದಿ ಲೈಫ್ ಕಾರ್ಡುಗಳು ಇರುತ್ತಾರೆ ಸ್ಥಳೀಯರ ನೆರವಿನೊಂದಿಗೆ ಈ ತೇಲುವೆ ಸೇತುವೆಯನ್ನು ನಿರ್ಮಾಣ ಮಾಡಿದ್ದು ಸಮುದ್ರದ ಅಲೆಗಳ ಉಬ್ಬರ ಇಳಿತಕ್ಕೆ ಹೊಂದಿಕೊಂಡು ಮೋಜುಮಸ್ತಿ ಮಾಡುವುದು ಪ್ರವಾಸಿಗರಿಗೆ ಅಪೂರ್ವ ಅನುಭವ ನೀಡಿತ್ತು. ಆದರೀಗ ಈ ಸೇತುವೆ ಸ್ಥಗಿತಗೊಂಡಿದ್ದು, ಯಾವಾಗ ಪುನಾರಂಭಗೊಳ್ಳಲಿದೆ ಎಂದು ಕಾದು ನೊಡಬೇಕಷ್ಟೇ.