ಬೆಂಗಳೂರು(ಮೇ.13): ಬಸವನಗುಡಿಯ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಯುವಕನೋರ್ವನಿಗೆ ಕೋವಿಡ್‌ 19 ಪಾಸಿಟಿವ್‌ ಬಂದಿರುವ ಹಿನ್ನೆಲೆಯಲ್ಲಿ ಆತ ವಾಸಿಸುತ್ತಿದ್ದ, ಮಾಗಡಿ ರಸ್ತೆಯ ಬ್ಯಾಡರಹಳ್ಳಿಯ ವ್ಯಾಪ್ತಿಯ ಮುನೇಶ್ವರ ನಗರದ ನಿವಾಸದ ಬಳಿಯ ಎರಡು ರಸ್ತೆಯನ್ನು ಬಿಬಿಎಂಪಿ ಸೀಲ್‌ಡೌನ್‌ ಮಾಡಿದೆ.

ಬಸವನಗುಡಿಯ ಶೇಖರ್‌ ಆಸ್ಪತ್ರೆಯಲ್ಲಿ ಉಸಿರಾಟದ ತೊಂದರೆಯಿಂದ ದಾಖಲಾಗಿದ್ದ 55 ವರ್ಷದ ಆಂಧ್ರದ ಮಹಿಳೆಯೊಬ್ಬರಿಗೆ ಸೋಮವಾರ ಕೊರೋನಾ ಸೋಂಕು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಸದರಿ ಆಸ್ಪತ್ರೆಯನ್ನು ತಾತ್ಕಾಲಿಕವಾಗಿ ಬಂದ್‌ ಮಾಡಿ ಸಿಬ್ಬಂದಿಯನ್ನು ಕ್ವಾರಂಟೈನ್‌ಗೆ ಕಳುಹಿಸಲಾಗಿದೆ. 850 ಸೋಂಕಿತೆಯನ್ನು ನಿಗದಿತ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇದೇ ಆಸ್ಪತ್ರೆಯಲ್ಲಿ ವಾರ್ಡ್‌ ಬಾಯ್‌ ಆಗಿ ಕೆಲಸ ಮಾಡುತ್ತಿದ್ದ 24 ವರ್ಷದ ಯುವಕನಿಗೂ ಸೋಂಕು ತಗುಲಿತ್ತು. ಈ ಯುವಕ ಹೇರೋಹಳ್ಳಿ ವಾರ್ಡ್‌ ವ್ಯಾಪ್ತಿಯ ಮುನೇಶ್ವರ ನಗರದಲ್ಲಿ ವಾಸವಿದ್ದು, ನಿತ್ಯ ಅಲ್ಲಿಂದಲೇ ಆಸ್ಪತ್ರೆಗೆ ಬರುತ್ತಿದ್ದ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಹಾಗೂ ಪೊಲೀಸ್‌ ಅಧಿಕಾರಿಗಳು ಆ ಯುವಕನ ನಿವಾಸದ ಬಳಿಯ ಎರಡು ರಸ್ತೆಗಳನ್ನು ಸೀಲ್‌ಡೌನ್‌ ಮಾಡಿ ಯುವಕನ ಅಲ್ಲಿನ ಕುಟುಂಬ ಸದಸ್ಯರು ಹಾಗೂ ಅಲ್ಲಿನ ಇತರೆ ಜನರು ಮನೆಯಿಂದ ಹೊರಬರದಂತೆ ಕ್ರಮ ಕೈಗೊಂಡಿದ್ದಾರೆ.

ಈ ಮೂಲಕ ಬಿಬಿಎಂಪಿ ವ್ಯಾಪ್ತಿಯಲ್ಲಿ ಕಂಟೈನ್ಮೆಂಟ್‌ ಪ್ರದೇಶಗಳ ಸಂಖ್ಯೆ 19ಕ್ಕೆ, ಸೋಂಕು ಕಂಡು ಬಂದ ವಾರ್ಡುಗಳ ಸಂಖ್ಯೆ 50ಕ್ಕೆ ಏರಿಕೆಯಾದಂತಾಗಿದೆ.

ಬೆಂ.ವಿವಿ ಕ್ವಾಟ್ರ್ರಸ್‌ ಜನರಲ್ಲಿ ಆತಂಕ

ಹೊರ ರಾಜ್ಯಗಳಿಂದ ಬರುವ ಜನರನ್ನು ಸಾಂಸ್ಥಿಕ ಕ್ವಾರಂಟೈನ್‌ ಮಾಡಲು ಬೆಂಗಳೂರು ವಿಶ್ವವಿದ್ಯಾಲಯ ಜ್ಞಾನಭಾರತಿ ಕ್ಯಾಂಪಸ್‌ನ ಬಿಸಿಎಂ ಹಾಸ್ಟೆಲ್‌ ಅನ್ನು ಸರ್ಕಾರ ಗುರುತಿಸಿದೆ. ಇದರಿಂದ ವಿವಿಯ ಕ್ವಾಟ್ರ್ರಸ್‌ ನಿವಾಸಿಗಳಲ್ಲಿ ಆತಂಕ ಶುರುವಾಗಿದೆ.

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಬೆಂವಿವಿಯ ಬಹುತೇಕ ಹಾಸ್ಟೆಲ್‌ ವಿದ್ಯಾರ್ಥಿಗಳನ್ನು ತಮ್ಮ ಊರುಗಳಿಗೆ ಕಳುಹಿಸಲಾಗಿದೆ. ಹೊರ ರಾಜ್ಯಗಳಿಂದ ಬರುವ ಜನರನ್ನು ಕ್ವಾರಂಟೈನ್‌ ಮಾಡಲು ಸಮಾಜ ಕಲ್ಯಾಣ ಇಲಾಖೆಯಡಿ ಬರುವ ಹಾಸ್ಟೆಲ್‌ಗಳನ್ನು ಸರ್ಕಾರ ಗುರುತಿಸಿದೆ. ಇದರಲ್ಲಿ ಬೆಂ.ವಿವಿಯ ಹಾಸ್ಟೆಲ್‌ ಕೂಡ ಒಂದು. ಹಾಗಾಗಿ ಇಲ್ಲಿನ ಕ್ವಾಟ್ರ್ರಸ್‌ನಲ್ಲಿ ನೆಲೆಸಿರುವ ಪ್ರಾಧ್ಯಾಪಕರು, ಇತರೆ ಸಿಬ್ಬಂದಿ ಹಾಗೂ ಜನರು ಆತಂಕಗೊಂಡಿದ್ದಾರೆ.