Karnataka Rains: ಕರ್ನಾಟಕದ ಹಲವು ಜಿಲ್ಲೆಯಲ್ಲಿ ಭಾರೀ ಮಳೆ: 2 ಬಲಿ
ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಆರ್ಭಟಿಸಿದ್ದು, ಮಳೆ ಸಂಬಂಧಿ ಕಾರಣಗಳಿಗೆ ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಹಲವೆಡೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಚಿತ್ರದುರ್ಗ, ಕೊಪ್ಪಳ ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಸುರಿದಿದೆ.
ಬೆಂಗಳೂರು (ಮೇ.08): ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ (Rain) ಆರ್ಭಟಿಸಿದ್ದು, ಮಳೆ ಸಂಬಂಧಿ ಕಾರಣಗಳಿಗೆ ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಮೃತಪಟ್ಟಿದ್ದಾರೆ (Death). ಹಲವೆಡೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಚಿತ್ರದುರ್ಗ, ಕೊಪ್ಪಳ ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಸುರಿದಿದೆ. ಚಿತ್ರದುರ್ಗ ಹಾಗೂ ಕೊಪ್ಪಳದಲ್ಲಿ ಸಿಡಿಲು ಬಡಿದು ಇಬ್ಬರು ವ್ಯಕ್ತಿಗಳು ಮೃತಪಟ್ಟಿದ್ದಾರೆ. ಕುರಿ ಮೇಯಿಸಲು ತೆರಳಿದ್ದ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ದೇವರೆಡ್ಡಿಹಳ್ಳಿ ಗ್ರಾಮದ ಯಶವಂತ್ (19) ಸಿಡಿಲಿಗೆ ಬಲಿಯಾಗಿದ್ದಾನೆ. ಚಳ್ಳಕೆರೆ ತಹಸೀಲ್ದಾರ್ ಎನ್.ರಘುಮೂರ್ತಿ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.
ಇನ್ನು ಚಿತ್ರದುರ್ಗ ಜಿಲ್ಲೆಯ ಹಲವೆಡೆ ಮಿಂಚು-ಗುಡುಗು ಸಹಿತ ಮಳೆಯಾಗಿದೆ. ಹಿರಿಯೂರಿನಲ್ಲಿ ಕಳೆದ ಒಂದು ಗಂಟೆಯಿಂದ ಆಲಿಕಲ್ಲು ಮಳೆಯಾಗಿದ್ದು, ವಾಹನ ಸಂಚಾರ ಅಸ್ತವ್ಯಸ್ತವಾಗಿದೆ. ಮಳೆ ನೀರಿನಿಂದ ರಸ್ತೆ ಚರಂಡಿ ತುಂಬಿ ಹರಿದಿದೆ. ಅಲ್ಲದೇ ತೋಟಗಳಲ್ಲಿ ಮಳೆ ನೀರು ತುಂಬಿ ನಿಂತಿದ್ದು, ಅಡಿಕೆ ಮರಗಳು ಧರೆಗೆ ಉರುಳಿದೆ. ಕೊಪ್ಪಳದಲ್ಲೂ ಸಿಡಿಲಿಗೆ ವ್ಯಕ್ತಿ ಬಲಿಯಾಗಿದ್ದು, ತಾಲೂಕಿನ ಇಂದರಗಿ ಗ್ರಾಮದ ಹೊರವಲಯದಲ್ಲಿ ಘಟನೆ ನಡೆದಿದೆ. ಇಂದರಗಿ ಗ್ರಾಮದ ನಿವಾಸಿ ಶಿವಪ್ಪ ಕಾಸನಕಂಡಿ (60) ಮಳೆ ಗಾಳಿ ಹಿನ್ನೆಲೆಯಲ್ಲಿ ಮರದ ಕೆಳಗೆ ನಿಂತಿದ್ದಾಗ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಮುನಿರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.