Asianet Suvarna News Asianet Suvarna News

ಅರ್ಧ ಕರ್ನಾಟಕದಲ್ಲಿ ಭರ್ಜರಿ ಮಳೆ: ಇಬ್ಬರ ಸಾವು

ಚಾಮರಾಜನಗರ, ರಾಮನಗರ ಸೇರಿ ರಾಜ್ಯದ 15 ಜಿಲ್ಲೆಗಳಲ್ಲಿ ಭಾನುವಾರ ರಾತ್ರಿಯಿಂದೀಚೆಗೆ ಮತ್ತೆ ಉತ್ತಮ ಮಳೆಯಾಗಿದೆ. ಮಳೆ ಸಂಬಂಧಿ ಅನಾಹುತಕ್ಕೆ ಇಬ್ಬರು ಬಲಿಯಾಗಿದ್ದು, ಭಟ್ಕಳದ ಸಮುದ್ರದಲ್ಲಿ ಭಾರೀ ಗಾಳಿಗೆ ದೋಣಿ ಮಗುಚಿ ವ್ಯಕ್ತಿಯೊಬ್ಬರು ನಾಪತ್ತೆಯಾಗಿದ್ದಾರೆ.

two dies due to heavy rain in karnataka gvd
Author
First Published Aug 30, 2022, 4:45 AM IST

ಬೆಂಗಳೂರು (ಆ.30): ಚಾಮರಾಜನಗರ, ರಾಮನಗರ ಸೇರಿ ರಾಜ್ಯದ 15 ಜಿಲ್ಲೆಗಳಲ್ಲಿ ಭಾನುವಾರ ರಾತ್ರಿಯಿಂದೀಚೆಗೆ ಮತ್ತೆ ಉತ್ತಮ ಮಳೆಯಾಗಿದೆ. ಮಳೆ ಸಂಬಂಧಿ ಅನಾಹುತಕ್ಕೆ ಇಬ್ಬರು ಬಲಿಯಾಗಿದ್ದು, ಭಟ್ಕಳದ ಸಮುದ್ರದಲ್ಲಿ ಭಾರೀ ಗಾಳಿಗೆ ದೋಣಿ ಮಗುಚಿ ವ್ಯಕ್ತಿಯೊಬ್ಬರು ನಾಪತ್ತೆಯಾಗಿದ್ದಾರೆ. ಭಾರೀ ಮಳೆಯಿಂದಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಮಂಡ್ಯ, ಚಾಮರಾಜನಗರ ಜಿಲ್ಲೆ ಹಾಗೂ ರಾಮನಗರ, ಕನಕಪುರ ಮತ್ತು ಚನ್ನಪಟ್ಟಣ ತಾಲೂಕುಗಳಲ್ಲಿ ಶಾಲಾ-ಕಾಲೇಜುಗಳಿಗೆ ಸೋಮವಾರ ರಜೆ ಘೋಷಿಸಿದ್ದರೆ, ಬೆಂಗಳೂರು ನಗರದಲ್ಲಿ ಮಂಗಳವಾರ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ರಾಮನಗರ, ಚಾಮರಾಜನಗರ, ಕೊಡಗು ಜಿಲ್ಲೆಗಳಲ್ಲಿ ಭರ್ಜರಿ ಮಳೆಯಾದರೆ, ತುಮಕೂರು, ಕೋಲಾರ, ಹಾವೇರಿ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮಂಡ್ಯ, ಮೈಸೂರು, ವಿಜಯನಗರ, ಧಾರವಾಡ, ಬಳ್ಳಾರಿ, ಯಾದಗಿರಿ, ಗದಗದಲ್ಲಿ ಕೆಲಕಾಲ ಸಾಧಾರಣದಿಂದ ಜಿಟಿಜಿಟಿ ಮಳೆಯಾಗಿದೆ. ರಾಮನಗರ ಜಿಲ್ಲೆಯಲ್ಲಿ ಅವೈಜ್ಞಾನಿಕ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಹಾಗೂ ಹಲವು ದಿನಗಳಿಂದ ಸುರಿಯುತ್ತಿದ್ದ ಮಳೆಗೆ ತುಂಬಿದ ಕೆರೆಗಳಿಂದಾಗಿ ಪ್ರವಾಹದ ಸ್ಥಿತಿಯೇ ನಿರ್ಮಾಣವಾಗಿದ್ದು, ಬಿಡದಿಯಲ್ಲಿ ಬೃಹತ್‌ ಆಲದ ಮರವೊಂದು ಕಾರಿನ ಮೇಲೆ ಬಿದ್ದು ಅದರಲ್ಲಿದ್ದ ಬೋರೆಗೌಡ(50) ಎಂಬು​ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ರಾಮನಗರ ಜಿಲ್ಲೆಯಲ್ಲಿ ಪ್ರವಾಹದ ಭೀತಿ: ಕೆರೆಯಂತಾದ ಬೆಂಗಳೂರು-ಮೈಸೂರು ಹೆದ್ದಾರಿ

ರಾಮನಗರ ಅಲ್ಲದೆ, ಚಾಮರಾಜನಗರ ಸೇರಿ ಹಳೆ ಮೈಸೂರು ಭಾಗವಾದ ಮಂಡ್ಯದಲ್ಲೂ ಭರ್ಜರಿ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿತ್ತು. ಚಾಮರಾಜನಗರದಲ್ಲಿ ಯಡಿಯೂರು ಕೆರೆ ಕೋಡಿ ಹರಿದು ಸಂತೇಮರಹಳ್ಳಿ-ಮಹಾಂತಾಳಪುರ ಮಾರ್ಗ ನಡುವೆ ಹೆದ್ದಾರಿಯಲ್ಲಿ ಮಧ್ಯಾಹ್ನದವರೆಗೆ ನೀರು ಹರಿದು ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. ಇನ್ನು ಮಂಡ್ಯದಲ್ಲಿ ಶಿಂಷಾ ನದಿ ಪ್ರವಾಹಕ್ಕೆ ಮದ್ದೂರು ತಾಲೂಕು ತಿಪ್ಪೂರು-ನಿಡಘಟ್ಟಗ್ರಾಮ ಸಂಪರ್ಕಿಸುವ ರಸ್ತೆ ಮುಳುಗಡೆಯಾಗಿ ಸಂಚಾರ ಕೆಲಕಾಲ ಅಸ್ತವ್ಯಸ್ತಗೊಂಡಿತ್ತು.

ಕಿಂಡಿ ಅಣೆಕಟ್ಟು ಪ್ರವಾಹ: ಕೊಡಗಿನಲ್ಲಿ ಹಲವು ದಿನಗಳ ನಂತರ ಭಾರೀ ಮಳೆಯಾಗಿದ್ದು, ಕೊಯನಾಡು ಕಿಂಡಿ ಅಣೆಕಟ್ಟಿನಿಂದಾಗಿ ಮತ್ತೆ ಪ್ರವಾಹ ಸಂಭವಿಸಿ 30ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದೆ. ಅಣೆಕಟ್ಟಿನಲ್ಲಿ ಮರದ ರೆಂಬೆ, ಕೊಂಬೆಗಳು ಸಿಲುಕಿ ಪಯಸ್ವಿನಿ ನದಿ ನೀರು ಅಕ್ಕಪಕ್ಕದ ಗ್ರಾಮಗಳಿಗೆ ನುಗ್ಗಿದೆ. ಇನ್ನು ಭಾಗಮಂಡಲದ ತ್ರಿವೇಣಿ ಸಂಗಮ ಜಲಾವೃತಗೊಂಡಿದ್ದು, ಮತ್ತೆ ನಾಪೋಕ್ಲು-ಭಾಗಮಂಡಲ ರಸ್ತೆ ಜಲಾವೃತಗೊಂಡಿದೆ.

ಉ.ಕರ್ನಾಟಕದಲ್ಲೂ ಮಳೆ: ಉತ್ತರ ಕರ್ನಾಟಕ ಭಾಗದಲ್ಲೂ ಕೆಲಕಾಲ ಉತ್ತಮ ಮಳೆಯಾದ ಕಾರಣ ಹುಬ್ಬಳ್ಳಿ ಬಳಿ ಬೆಣ್ಣಿಹಳ್ಳದಲ್ಲಿ ದಿಢೀರ್‌ ಪ್ರವಾಹ ಕಾಣಿಸಿಕೊಂಡು ಕೆಲಸಕ್ಕೆಂದು ಹೊಲಕ್ಕೆ ಹೋಗಿ ಸಿಕ್ಕಿಹಾಕಿಕೊಂಡಿದ್ದ 28 ಮಂದಿಯನ್ನು ರಕ್ಷಿಸಲಾಗಿದೆ. ಇನ್ನು ಇಂಗಳಹಳ್ಳಿ ಹಾಗೂ ಕುಸಗಲ್‌ ನಡುವಿನ ಸೇತುವೆ ದಾಟುತ್ತಿದ್ದಾಗ ಆನಂದ ಹಿರೇಗೌಡ್ರ (24) ಎಂಬವರು ಕೊಚ್ಚಿಹೋಗಿದ್ದಾರೆ. ಇವರ ಜತೆಗಿದ್ದ ಮೂವರನ್ನು ರಕ್ಷಿಸಿದ್ದಾರೆ. ಹಾವೇರಿಯ ಸವಣೂರು ತಾಲೂಕಿನ ಅಲ್ಲಿಪುರ ಗ್ರಾಮದಲ್ಲಿ ಕೆರೆಯ ನೀರು ಮನೆಯೊಳಗೆ ನುಗ್ಗಿದ್ದು, ನೂರಾರು ಸಂತ್ರಸ್ತರನ್ನು ಗ್ರಾಮದ ಸರ್ಕಾರಿ ಶಾಲೆಗೆ ರವಾನಿಸಲಾಗಿದೆ.

ಮುಳುಗಿದ ದೋಣಿ: ಭಾರೀ ಗಾಳಿಗೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಸಮುದ್ರ ವ್ಯಗ್ರಗೊಂಡಿದ್ದು ಅಲೆಗಳ ಅಬ್ಬರಕ್ಕೆ ದೋಣಿಯೊಂದು ಮುಳುಗಿದ್ದು, ಜಾಲಿಯ ನಾಗರಾಜ ರಾಮಕೃಷ್ಣ ಮೊಗೇರ ಎಂಬವರು ನಾಪತ್ತೆಯಾಗಿದ್ದು, ತಮಿಳ್ನಾಡು ಮೂಲದ ಇನ್ನಿಬ್ಬರನ್ನು ರಕ್ಷಿಸಲಾಗಿದೆ.

26 ಸಾವಿರಕ್ಕೂ ಹೆಚ್ಚು ತೆಂಗಿನಕಾಯಿ ನೀರು ಪಾಲು: ಚಾಮರಾಜನಗರ ಹಾಗೂ ಮಂಡ್ಯದಲ್ಲಿ ಪ್ರವಾಹದ ಅಬ್ಬರಕ್ಕೆ 26 ಸಾವಿರಕ್ಕೂ ಹೆಚ್ಚು ತೆಂಗಿನಕಾಯಿಗಳು ನೀರುಪಾಲಾದ ಘಟನೆ ಸೋಮವಾರ ನಡೆದಿದೆ. ಮಂಡ್ಯ ಜಿಲ್ಲೆ ಭಾರತೀಪುರದ ತಿಪ್ಪೂರು ಗ್ರಾಮದ ಮಲ್ಲಿಕಾರ್ಜುನ್‌ ಅವರಿಗೆ ಸೇರಿದ 35 ಎಕರೆ ಜಮೀನಿನಲ್ಲಿದ್ದ 25 ಸಾವಿರಕ್ಕೂ ಹೆಚ್ಚು ತೆಂಗಿನ ಕಾಯಿಗಳು ನೀರಿನಲ್ಲಿ ಕೊಚ್ಚಿಹೋಗಿವೆ. ಅದೇ ರೀತಿ ಚಾಮರಾಜನಗರದ ಹೆಬ್ಬಸೂರು ಗ್ರಾಮದಲ್ಲಿ ಕೊಯ್ದಿಟ್ಟಿದ್ದ 10 ಸಾವಿರಕ್ಕೂ ಹೆಚ್ಚು ತೆಂಗಿನಕಾಯಿ ಕೊಯ್ದಿಟ್ಟಿದ್ದರು. ದಿಢೀರ್‌ ಮಳೆಯಿಂದಾಗಿ ಸಾವಿರಾರು ತೆಂಗಿನಕಾಯಿಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿವೆ.

ಅಕಾಲಿಕ ಮಳೆಯಿಂದ ಆತಂಕ: ಬೆಳೆ ವಿಮೆ ಮಾಡಿಸಲು ಮುಗಿಬಿದ್ದ ರೈತರು

ನೀರಿನಲ್ಲಿ ಮುಳುಗಿದ ನೆರೆಹಾನಿ ಪರಿಶೀಲನೆಗೆ ಹೋಗಿದ್ದವರ ಕಾರು: ಚಾಮರಾಜನಗರ ತಾಲೂಕಿನ ಕಣ್ಣೇಗಾಲ-ಆಲೂರು ಭಾಗದಲ್ಲಿ ಪ್ರವಾಹದಿಂದುಂಟಾದ ಹಾನಿ ಪರಿಶೀಲನೆಗೆ ಹೋಗಿದ್ದ ಅಧಿಕಾರಿಗಳ ಕಾರು ನೀರಿನಲ್ಲಿ ಮುಳುಗಿದ ಘಟನೆ ಸೋಮವಾರ ನಡೆದಿದೆ. ಈ ವೇಳೆ ಅಧಿಕಾರಿಗಳು ಕಾರಿನ ಮೇಲೆ ಹತ್ತಿ ಕೂತು ಅಪಾಯದಿಂದ ಪಾರಾಗಿದ್ದಾರೆ. ನಂತರ ಸ್ಥಳೀಯರು ಕಾರಿಗೆ ಹಗ್ಗಕಟ್ಟಿ ನೀರಿನಿಂದ ಹೊರತೆಗೆದಿದ್ದಾರೆ.

Follow Us:
Download App:
  • android
  • ios