ತುರುವೇಕೆರೆ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಸಂಗಪ್ಪ ಮೇಟಿ ಅವರನ್ನು ಬಂಧಿತನ ಫೋನ್‌ಪೇ ಹಣ ದುರ್ಬಳಕೆ ಆರೋಪದ ಮೇಲೆ ಅಮಾನತುಗೊಳಿಸಲಾಗಿದೆ. ಬಂಧಿತನ ಮೊಬೈಲ್‌ನಿಂದ ಹಣ ತೆಗೆದು ಬೆಟ್ಟಿಂಗ್‌ನಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ತುಮಕೂರು (ಜೂ.1): ತುರುವೇಕೆರೆ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಸಂಗಪ್ಪ ಮೇಟಿ ಅವರನ್ನು ಕರ್ತವ್ಯ ಲೋಪದ ಆರೋಪದ ಮೇಲೆ ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕ (ಎಸ್‌ಪಿ) ಅಶೋಕ್ ಕೆ.ವಿ. ಅವರು ಅಮಾನತುಗೊಳಿಸಿದ್ದಾರೆ.
ಏನಿದು ಪ್ರಕರಣ?
ಒಂದು ಕೇಸ್‌ನಲ್ಲಿ ಬಂಧಿತನಾಗಿದ್ದ ಆರೋಪಿಯ ಮೊಬೈಲ್ ವಶಕ್ಕೆ ಪಡೆದುಕೊಂಡಿದ್ದ ಸಬ್ ಇನ್ಸ್‌ಪೆಕ್ಟರ್ ಸಂಗಪ್ಪ ಮೇಟಿ. ಅಲ್ಲದೇ ಅದರಲ್ಲಿನ ಪೋನ್‌ಪೇ ಪಾಸ್‌ವರ್ಡ್ ಪಡೆದು, ಅದರ ಮೂಲಕ ಬೆಟ್ಟಿಂಗ್ ಆಡಿ ಆರೋಪಿಯ ಫೋನ್‌ಪೇ ಮೂಲಕ ಬ್ಯಾಂಕ್ ಖಾತೆಯಲ್ಲಿದ್ದ ಸುಮಾರು 95,000 ರೂ. ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆಂದು ಆರೋಪಿಸಲಾಗಿತ್ತು. ಆರೋಪಿಯನ್ನು ಜೈಲಿಗೆ ಕಳುಹಿಸಿದ ಬಳಿಕ ಅವರ ಮೊಬೈಲ್‌ನಿಂದ ಹಣವನ್ನು ತೆಗೆದುಕೊಂಡು ಬೆಟ್ಟಿಂಗ್‌ನಲ್ಲಿ ಭಾಗಿಯಾದ ಘಟನೆ ಬೆಳಕಿಗೆ ಬಂದಿದೆ.
ಈ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ, ಎಸ್‌ಪಿ ಅಶೋಕ್ ಕೆ.ವಿ. ಅವರು ಸಂಗಪ್ಪ ಮೇಟಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಈ ಘಟನೆಯು ತುಮಕೂರು ಜಿಲ್ಲೆಯಲ್ಲಿ ಗಂಭೀರ ಚರ್ಚೆಗೆ ಕಾರಣವಾಗಿದ್ದು, ಪೊಲೀಸ್ ಇಲಾಖೆಯ ಕಾರ್ಯನಿರ್ವಹಣೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
