200 ವಿವಿಧ ಗಡ್ಡೆಗಳೊಂದಿಗೆ ಕುಡ್ಲಕ್ಕೆ ಬಂದಿದ್ದಾರೆ 'ಟ್ಯೂಬರ್ ಮ್ಯಾನ್ ಆಫ್ ಕೇರಳ'! ಯಾರಿವರು?

ಮಂಗಳೂರಿನಲ್ಲಿ ರಾಜ್ಯಮಟ್ಟದ ಗಡ್ಡೆಗೆಣಸು ಹಾಗೂ ಸೊಪ್ಪುಗಳ ಮೇಳವನ್ನು ಆಯೋಜಿಸಲಾಗುತ್ತಿದೆ. ಕೇರಳದ 'ಟ್ಯೂಬರ್ ಮ್ಯಾನ್' ಶಾಜಿ, 200ಕ್ಕೂ ಹೆಚ್ಚು ವಿವಿಧ ತಳಿಗಳ ಗಡ್ಡೆಗೆಣಸುಗಳೊಂದಿಗೆ ಈ ಮೇಳದಲ್ಲಿ ಭಾಗವಹಿಸಲಿದ್ದಾರೆ.

tuber man of keral fame came to kudla with 200 tubers at mangaluru rav

ರಾಘವೇಂದ್ರ ಅಗ್ನಿಹೋತ್ರಿ

 ಮಂಗಳೂರು (ಜ.4) : ಅನ್ನದ ಬಟ್ಟಲಿನಿಂದ ಮರೆತು ಹೋಗುತ್ತಿರುವ ನಮ್ಮ ಹಳೆಯ ಆಹಾರವನ್ನು ಮುನ್ನಲೆಗೆ ತರಲು ಮಂಗಳೂರು ಸಜ್ಜುಗೊಳ್ಳುತ್ತಿದೆ. ಒಂದು ಕಾಲದ ಆಹಾರವೇ ಆಗಿದ್ದ ಗಡ್ಡೆ ಗೆಣಸುಗಳು ಆಧುನಿಕತೆಯ ಭರಾಟೆಯಲ್ಲಿ ಜನರಿಂದ ಮರೆಯಾಗುತ್ತಿವೆ. ಅದಕ್ಕೆಂದೇ ಮಂಗಳೂರಿನ ಸಾವಯವ ಗ್ರಾಹಕರ ಬಳಗ ರಾಜ್ಯಮಟ್ಟದ ಗಡ್ಡೆಗೆಣಸು ಹಾಗೂ ಸೊಪ್ಪುಗಳ ಮೇಳ ಆಯೋಜಿಸುತ್ತಿದೆ.

ದೇಶದ ನಾನಾ ಭಾಗಗಳ ರೈತರು ಬೆಳೆದ ವಿಶಿಷ್ಟ ಗಡ್ಡೆ ಗೆಣಸುಗಳ ಸಂಗಮಕ್ಕೆ ಮಂಗಳೂರು ಸಾಕ್ಷಿಯಾಗಲಿದೆ. ಮಂಗಳೂರಿನ ಸಂಘನಿಕೇತನದಲ್ಲಿ ಎರಡು ದಿನಗಳ ರಾಜ್ಯ ಮಟ್ಟದ ಗಡ್ಡೆ ಗೆಣಸು ಮೇಳಕ್ಕೆ ಸಂಪೂರ್ಣ ಸಜ್ಜುಗೊಂಡಿದೆ. ಗಡ್ಡೆಗಳೆಂದರೆ ಮೂಗು ಮುರಿಯುವರೇ ಹೆಚ್ಚು. ಆದರೂ ಅಪರೂಪದಲ್ಲಿ ಅಪರೂಪದ ಗಡ್ಡೆ ಗೆಣಸು ಬೆಳೆಯುತ್ತಿರುವ ''ಟ್ಯೂಬರ್‌ ಮ್ಯಾನ್‌ ಆಫ್‌ ಕೇರಳ'' ಖ್ಯಾತಿಯ ಶಾಜಿ ತಾವು ಬೆಳೆದ ಸುಮಾರು 200 ಕ್ಕೂ ಅಧಿಕ ಗಡ್ಡೆ ಗೆಣಸಿನೊಂದಿಗೆ ಮಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ.

ಗಡ್ಡೆ ಗೆಣಸುಗಳ ಸಂರಕ್ಷಕ ಶಾಜಿ:

ಕೇರಳದ ವಯನಾಡಿನ ಮಾನಂತವಾಡಿಯ ಶಾಜಿ ಎನ್‌. ಎಂ. 46 ವರ್ಷದ ಗಡ್ಡೆ ಗೆಣಸುಗಳ ತಳಿ ಸಂರಕ್ಷಕ. ಎರಡು ಎಕ್ರೆ ಸ್ವಂತ ಜಮೀನು ಹಾಗೂ ಏಳು ಎಕ್ರೆ ಬಾಡಿಗೆ ಜಮೀನಿನಲ್ಲಿ 50 ಜಾತಿಯ ಭತ್ತ ಹಾಗೂ 200ಕ್ಕೂ ಅಧಿಕ ಗಡ್ಡೆ ಗೆಣಸು ಬೆಳೆದಿದ್ದಾರೆ, ಅಷ್ಟೇ ಅಲ್ಲ ತಾವು ಬೆಳೆದ ಗೆಡ್ಡೆಗಳನ್ನು ಸುಮಾರು 12000 ಕ್ಕೂ ಅಧಿಕ ಆಸಕ್ತ ರೈತರಿಗೆ ನೀಡಿ ಅವರೂ ಬೆಳೆಯುವಂತೆ ಪ್ರೋತ್ಸಾಹ ನೀಡಿದ್ದಾರೆ. ಅಪರೂಪದಲ್ಲಿ ಅಪರೂಪದ ಗಡ್ಡೆ ಗೆಣಸುಗಳೂ ಇವರ ಸಂಗ್ರಹದಲ್ಲಿವೆ. ಕಳೆದ 20 ವರ್ಷಗಳಿಂದ ಶುದ್ಧ ಸಾವಯವ ರೀತಿಯಲ್ಲಿ ಗಡ್ಡೆ ಗೆಣಸುಗಳನ್ನು ಬೆಳೆದು ಸಂರಕ್ಷಿಸಿದ್ದಾರೆ.

ಅಪರೂಪದ ತಳಿಗಳು:

ತುಂಬಾ ಅಪರೂಪದಲ್ಲಿ ಅಪರೂದ ವಿಶಿಷ್ಟ ಗಡ್ಡೆ ಗೆಣಸುಗಳ ಸಂಗ್ರಹ ಶಾಜಿಯವರಲ್ಲಿದೆ. ಗೆದ್ದಲಿನ ಹುತ್ತದಲ್ಲಿ ಬೆಳೆಯುವ ನೆಲಪ್ಪನ್‌ ಕಳೆಂಗ್‌ (ಕಳೆಂಗ್‌ ಅಂದರೆ ಗೆಣಸು), ಮಂಜಟ್ಟಿ ಕಳೆಂಗ್‌ (ಹಳದಿ ಬಣ್ಣದ ಗೆಣಸು) ಬಿರ್ಯಾನಿ ಪರಿಮಳದ ಗೆಣಸು, ಕಾಮನಬಿಲ್ಲಿನಂತೆ ಏಳು ಬಣ್ಣವಿರುವ ಮಳವಿಲ್‌ ಗೆಣಸು, ಕಾಡು ಗೆಣಸು, ಸುವರ್ಣ ಗಡ್ಡೆ, ಕೆಸುವು ಹೀಗೆ ಗಡ್ಡೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಆದಿವಾಸಿಗಳು ಬೆಳೆಯುವ ಗಡ್ಡೆಗಳನ್ನೂ ಇವರು ಸಂಗ್ರಹಿಸಿ ತಮ್ಮ ಕ್ಷೇತ್ರದಲ್ಲಿ ಬೆಳೆಯುತ್ತಿದ್ದಾರೆ.

ಸಂರಕ್ಷಣೆಗೆ ಮಾತ್ರ ಬೆಳೆ:

ಇಷ್ಟೆಲ್ಲ ವಿಧದ ಗಡ್ಡೆ ಗೆಣಸುಗಳು, ಕೆಸವುಗಳನ್ನು ಬೆಳೆಯುವ ಇವರು ದಿನವೂ ಮನೆ ಬಳಕೆಗೆ ಬಳಸಿ ಉಳಿದ ಗಡ್ಡೆಗಳನ್ನು ರೈತರಿಗೆ ಬೆಳೆಯಲು ನೀಡುತ್ತಾರೆ. ರೈತರಿಂದ ಹಣ ಪಡೆಯುವುದಿಲ್ಲ, ಗಡ್ಡೆಗೆ ಬದಲಾಗಿ ಅವರು ಬೆಳೆದ ಗಡ್ಡೆ ಅಥವಾ ಅವರಲ್ಲಿರುವ ಹೊಸ ಗಡ್ಡೆಗಳನ್ನು ಇವರಿಗೆ ನೀಡಿದರಾಯಿತು. ಹೀಗೆ ಗಡ್ಡೆ ಗೆಣಸುಗಳನ್ನು ರೈತರಿಗೆ ಹಂಚಿ ಅವರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಕಳೆದ ಹಲವು ವರ್ಷಗಳಿಂದ ಮಾಡುತ್ತಿದ್ದಾರೆ.

2018ರ ವಯನಾಡು ದುರಂತದಲ್ಲಿ ಮನೆಮಠ ಕಳೆದುಕೊಂಡು ಶಾಜಿಯವರ ಇಡೀ ಕುಟುಂಬವೇ ಬೀದಿಗೆ ಬಂದಿತ್ತು. ಪೇಪರ್‌ಗಳಲ್ಲಿ ಇವರ ಬಗ್ಗೆ ವರದಿಯನ್ನು ಕಂಡ ಸ್ನೇಹಿತರೆಲ್ಲ ಸೇರಿ ಇವರ ನೆರವಿಗೆ ಧಾವಿಸಿ, ಧೈರ್ಯ ನೀಡಿದ್ದರು. ಸ್ನೇಹಿತರ ನೆರವಿನಿಂದ ತನ್ನ ಕ್ಷೇತ್ರವನ್ನು ಮತ್ತೆ ಸಂಪೂರ್ಣವಾಗಿ ಪುನರುತ್ಥಾನಗೊಳಿಸಿದ ಖ್ಯಾತಿ ಇವರದ್ದು.

ತಿಂಗಳಿಗೊಮ್ಮೆ ಫಾರ್ಮ್‌ ಸ್ಕೂಲ್‌:

ತಮ್ಮಲ್ಲಿ ಬೆಳೆದ ವಿಶಿಷ್ಟ ಗೆಡ್ಡೆಗಳನ್ನು ಪರಿಚಯಿಸಲು ಶಾಜಿಯವರು ಪ್ರತಿ ತಿಂಗಳು ಎರಡನೇ ಶನಿವಾರ ಶಾಲಾ ವಿದ್ಯಾರ್ಥಿಗಳಿಗಾಗಿ ಫಾರ್ಮ್‌ ಸ್ಕೂಲ್‌ ನಡೆಸುತ್ತಾರೆ. ಸುತ್ತಲಿನ ಶಾಲೆಯ ಮಕ್ಕಳು ಇವರ ಕ್ಷೇತ್ರಕ್ಕೆ ಬಂದು ಇವರಲ್ಲಿರುವ ಅಪೂರ್ವ ತಳಿಗಳ ಪರಿಚಯ ಮಾಡಿಕೊಳ್ಳುತ್ತಾರೆ. ವರ್ಷಕ್ಕೊಮ್ಮೆ ತಮ್ಮ ಕ್ಷೇತ್ರದಲ್ಲಿ ಕೃಷಿಮೇಳ ನಡೆಸುವ ಮೂಲಕ ರೈತರಿಗೆ ಗೆಡ್ಡೆಗಳನ್ನು ಪರಿಚಯಿಸುವ ಕಾರ್ಯ ಮಾಡುತ್ತಿದ್ದಾರೆ.

ಇವರ ಸಾಧನೆ ಗುರುತಿಸಿ ಕೇಂದ್ರ ಸರ್ಕಾರದ ಪ್ಲಾಂಟ್‌ ಜಿನೋಮ್‌ ಕ್ಸೇವಿಯರ್‌ ಪ್ರಶಸ್ತಿ, ಜೀವ ವೈವಿಧ್ಯತೆ ಸಂರಕ್ಷಕ ಪ್ರಶಸ್ತಿ ಸೇರಿದಂತೆ ಮೂರು ರಾಷ್ಟ್ರೀಯ ಪ್ರಶಸ್ತಿಗಳು ಹಾಗೂ ಹತ್ತು ಹಲವು ಸನ್ಮಾನಗಳು ಸಂದಿವೆ.

ನಮ್ಮಲ್ಲಿನ ಜೀವ ವೈವಿಧ್ಯತೆ ಉಳಿಸದಿದ್ದರೆ ನಮಗೆ ಉಳಿಗಾಲವಿಲ್ಲ. ಶಾಲೆಯ ವಿದ್ಯಾರ್ಥಿಗಳೇ ನಮ್ಮ ಜೀವ ವೈವಿಧ್ಯದ ಕಾವಲುಗಾರರು. ಅದಕ್ಕಾಗಿಯೇ ಮಕ್ಕಳಿಗೆ ಜೀವ ವೈವಿಧ್ಯತೆಯ ತಿಳಿವಳಿಕೆ ನೀಡುವಂತಾಗಬೇಕು

- ಶಾಜಿ ಎನ್‌. ಎಂ., ಕೇರಳದ ಗಡ್ಡೆ ಗೆಣಸುಗಳ ತಳಿ ಸಂರಕ್ಷಕ.

Latest Videos
Follow Us:
Download App:
  • android
  • ios