ಮಂಡ್ಯ[ಜ.13]: ಇತ್ತೀಚೆಗೆ ನಿಧನರಾಗಿರುವ ಕನ್ನಡ ಚಿತ್ರರಂಗದ ಮೇರು ನಟ ರೆಬಲ್‌ ಸ್ಟಾರ್‌ ಅಂಬರೀಷ್‌ಗೆ ನುಡಿನಮನ ಕಾರ್ಯಕ್ರಮ ಮಂಡ್ಯದಲ್ಲಿ ಶನಿವಾರ ಅಪಾರ ಅಭಿಮಾನಿಗಳ ಸಮ್ಮುಖದಲ್ಲಿ ಭಾವಪೂರ್ಣವಾಗಿ ಜರುಗಿತು.

ನಗರದ ಸರ್‌ಎಂವಿ ಕ್ರೀಡಾಂಗಣದಲ್ಲಿ ಅಖಿಲ ಭಾರತ ಅಂಬರೀಷ್‌ ಅಭಿಮಾನಿಗಳ ಸಂಘದ ವತಿಯಿಂದ ನಡೆದ ಅಂಬಿ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಬಹುತೇಕ ಗಣ್ಯರು ಅಂಬರೀಷ್‌ ಅವರ ಪ್ರೀತಿ, ಕೋಪ, ಹೃದಯವಂತಿಕೆ, ಕರ್ಣನ ಮನಸ್ಸು ಎಲ್ಲವನ್ನು ಮುಕ್ತಕಂಠದಿಂದ ಪ್ರಸಂಶಿಸಿದರು.

ಅಂಬರೀಷ್‌ ಕೊಡುಗೆ ಅನನ್ಯ:

ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಮಾತನಾಡಿ, ಚಿತ್ರನಟ ದಿ.ಅಂಬರೀಷ್‌ ವ್ಯಕ್ತಿತ್ವ ಯಾರಿಗೂ ಬರುವುದಿಲ್ಲ. ನಮಗೆ ಮತ್ತೊಬ್ಬ ಅಂಬರೀಷ್‌ ಸಿಗಲು ಸಾಧ್ಯವಿಲ್ಲ. ಅಂಬಿ ನೇರ ನುಡಿಯ ವ್ಯಕ್ತಿ ಆಗಿದ್ದರು. ರಾಜ್ಯಕ್ಕೆ ಹಲವರು ಬಂದು ಹೋಗಿದ್ದಾರೆ. ಆದರೆ, ಕರ್ನಾಟಕ, ದೇಶಕ್ಕೆ ಅಂಬರೀಷ್‌ ಅರಂತಹ ವಿಶೇಷವಾದ ವ್ಯಕ್ತಿ ಸಿಗುವುದಿಲ್ಲ. ಅಂಬಿ ವ್ಯಕ್ತಿತ್ವ ಮತ್ತೊಬ್ಬರಿಗೆ ಸಿಗುವುದಿಲ್ಲ. ಅದಕ್ಕೆ ಜನರು ಅಂಬರೀಷ್‌ ಅವರನ್ನು ಇಷ್ಟಪಡುತ್ತಿದ್ದರು ಎಂದರು.

ಹಿರಿಯ ನಟಿ ಬಿ.ಸರೋಜಾದೇವಿ ಮಾತನಾಡಿ, ಚಿತ್ರನಟ ದಿ.ಅಂಬರೀಷ್‌ ಯಾವುದನ್ನೂ ಆಸೆ ಪಟ್ಟಿಲ್ಲ. ಆದರೆ, ಎಲ್ಲವೂ ಅವರನ್ನೇ ಹುಡುಕಿಕೊಂಡು ಬಂತು. ಸುಮಲತಾ ಅಂಬರೀಷ್‌ ಅವರನ್ನು ಮದುವೆಯಾಗಿದ್ದು ದೇವರ ವರ. ಅಂಬರೀಷ್‌ ನನ್ನನ್ನು ಅಕ್ಕ ಎಂದು ಕರೆಯುತ್ತಿದ್ದರು. ನಿನ್ನ ಕುತ್ತಿಗೆಯ ನೆಕ್ಲೆಸ್‌ ಕೊಡಿ ಎಂದು ಯಾವಾಗಲೂ ರೇಗಿಸುತ್ತಿದ್ದರು. ಅವರನ್ನು ಮರೆಯಲು ಎಂದಿಗೂ ಸಾಧ್ಯವಿಲ್ಲ ಎಂದು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ನಟ ಯಶ್‌, ಹಿರಿಯ ನಟರಾದ ಸಾಧುಕೋಕಿಲಾ, ದೊಡ್ಡಣ್ಣ, ಪತ್ರಕರ್ತ ಎಚ್‌.ಆರ್‌.ರಂಗನಾಥ್‌, ಯೋಗರಾಜ್‌ ಭಟ್‌, ರಾಕ್‌ಲೈನ್‌ ವೆಂಕಟೇಶ್‌, ಅಂಬರೀಷ್‌ ಪತ್ನಿ ಸುಮಲತಾ, ಪುತ್ರ ಅಭಿಷೇಕ್‌ ಗೌಡ, ಮಾಜಿ ಸಂಸದ ಜಿ.ಮಾದೇಗೌಡ ಮುಂತಾದವರು ಪಾಲ್ಗೊಂಡಿದ್ದರು.