Asianet Suvarna News Asianet Suvarna News

ಕರ್ನಾಟಕದಲ್ಲೇ ಮೊದಲ ಬಾರಿಗೆ ಮಂಗಳಮುಖಿಯರಿಂದ ಅನಾಥಾಶ್ರಮ

ಎಲ್ಲ ವರ್ಗದ ಅನಾಥರಿಗೂ ಆಶ್ರಯ| ಮಂಗಳಮುಖಿಯರ ಈ ಕಾರ್ಯ ರಾಜ್ಯದಲ್ಲೇ ಮೊದಲು| ಗಂಗೊಂಡನಹಳ್ಳಿ ಸರ್ಕಲ್‌ ಸಮೀಪ ಅನಾಥಾಶ್ರಮ ಸ್ಥಾಪನೆ| ‘ನಮ್ಮನೆ ಸುಮ್ಮನೆ’ ಹೆಸರಿನಲ್ಲಿ ಸಂಸ್ಥೆ ನೋಂದಣಿ| ಸಾರ್ವಜನಿಕರೂ ಕೂಡ ನೆರವು ನೀಡಬಹುದು| 

Transgenders Will Be Start Orphanage in Bengaluru grg
Author
Bengaluru, First Published Dec 18, 2020, 1:24 PM IST

ಬೆಂಗಳೂರು(ಡಿ.18): ಕರ್ನಾಟಕದಲ್ಲೇ ಮೊದಲ ಬಾರಿಗೆ ಮಂಗಳಮುಖಿಯರೇ ಮುಂದಾಗಿ ನೊಂದವರು, ಅನಾಥರು ಹಾಗೂ ನಿರ್ಲಕ್ಷ್ಯಕ್ಕೆ ಒಳಗಾದವರಿಗಾಗಿ ‘ನಮ್ಮನೆ ಸುಮ್ಮನೆ!’ ಎಂಬ ಹೆಸರಿನ ‘ಅನಾಥಾಶ್ರಮ’ ಸ್ಥಾಪಿಸುತ್ತಿದ್ದು, ಡಿ.23ರಂದು ಲೋಕಾರ್ಪಣೆಗೊಳ್ಳಲಿದೆ.

ಏನಾದರೂ ಸಾಧಿಸಬೇಕೆಂಬ ಕನಸು ಹೊತ್ತ ಐವರು ಮಂಗಳಮುಖಿಯರು ಸಮಾಜ ಸೇವೆಯ ಕಾರ್ಯಕ್ಕೆ ಇಳಿದಿದ್ದಾರೆ. ಜೀವನದಲ್ಲಿ ಸಾಕಷ್ಟು ಏಳುಬೀಳುಗಳನ್ನು ಅನುಭವಿಸಿರುವ ಇವರು, ಅನಾಥಾಶ್ರಮ ಕಟ್ಟಿಅಲ್ಲಿ ಎಲ್ಲಾ ವರ್ಗದ ನೊಂದವರ ಬಾಳಿಗೆ ಬೆಳಕಾಗಲು, ಬಡ ಅನಾಥರಿಗೆ ಆಶ್ರಯ ನೀಡಲು ಉದ್ದೇಶಿಸಿದ್ದಾರೆ. ಈಗಾಗಲೇ ಬ್ಯೂಟಿಪಾರ್ಲರ್‌ ತೆರೆದು ಮಾದರಿಯಾಗಿರುವ ಮಂಗಳಮುಖಿಯರು ಇದೀಗ ಹೊಸ ಪ್ರಯತ್ನಕ್ಕೆ ಇಳಿದಿದ್ದಾರೆ.

ನಗರದ ಗಂಗೊಂಡನಹಳ್ಳಿ ಸರ್ಕಲ್‌ ಸಮೀಪ ಅನಾಥಾಶ್ರಮ ಸ್ಥಾಪಿಸಲಾಗುತ್ತಿದೆ. ‘ನಮ್ಮನೆ ಸುಮ್ಮನೆ’ ಹೆಸರಿನಲ್ಲಿ ಸಂಸ್ಥೆ ನೋಂದಣಿ ಮಾಡಿಸಲಾಗಿದೆ. ಸಾರ್ವಜನಿಕರು ನಮ್ಮ ಬೆಂಬಲಕ್ಕೆ ನಿಲ್ಲಬೇಕು. ನಾನು, ಮಿಲನ, ಸೌಂದರ್ಯ, ರೇಷ್ಮಾ, ತನುಶ್ರೀ ಹೀಗೆ ನಮ್ಮ ಸ್ನೇಹಿತರೆಲ್ಲ ಸೇರಿ ಈ ಅನಾಥಾಶ್ರಮ ಮಾಡುತ್ತಿದ್ದೇವೆ. ಒಂದು ಕಟ್ಟಡ ಬಾಡಿಗೆಗೆ ಪಡೆಯಲಾಗಿದೆ. ನೊಂದವರಿಗೆ ಆಶ್ರಯದ ಜತೆಗೆ ವೈದ್ಯಕೀಯ ಸೌಲಭ್ಯ, ಆಪ್ತ ಸಮಾಲೋಚನೆ, ಮಾರ್ಗದರ್ಶನ ಎಲ್ಲಾ ರೀತಿಯ ಸೌಲಭ್ಯ ಕಲ್ಪಿಸಲಾಗುವುದು. ಕೆಲವರು ನಮಗೆ ಸಹಾಯ ಮಾಡುತ್ತಿದ್ದಾರೆ. ಪ್ರಾಥಮಿಕ ಹಂತದಲ್ಲಿ 40 ಮಂದಿಗೆ ಸ್ಥಳಾವಕಾಶವಾಗುವಂತೆ ಸಿದ್ಧತೆ ಕೈಗೊಳ್ಳಲಾಗುತ್ತಿದೆ ಎಂದು ಸಂಸ್ಥೆಯ ಸದಸ್ಯೆ ನಕ್ಷತ್ರ ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ಡಿಕೆ ಶಿವಕುಮಾರ್‌ಗೆ ಮಂಗಳಮುಖಿಯರಿಂದ ಸಿಕ್ತು ಗ್ರ್ಯಾಂಡ್‌ ವೆಲ್​ಕಮ್

ಕೋವಿಡ್‌ ಸಂಕಷ್ಟದ ಸಮಯದಲ್ಲಿ ಹಲವರು ನಮಗೆ ಆಹಾರ ಪದಾರ್ಥಗಳು, ದವಸ ಧಾನ್ಯಗಳನ್ನು ನೀಡಿದ್ದಾರೆ. ನಾವು ಸಹ ಇತರರಿಗೆ ಸಹಾಯ ಮಾಡಲು ಹೊರಟಿದ್ದೇವೆ. ಸದ್ಯ ವಿವಿಧ ದಾನಿಗಳ ಕೊಡುಗೆಯಿಂದ ಎರಡು ಲಕ್ಷ ರು. ವೆಚ್ಚ ಮಾಡಿದ್ದೇವೆ. ಇಲ್ಲಿಯವರೆಗೆ ಯಾರಾದರೂ ಅನಾಥರಾಗಿ ಕಂಡಾಗ ಅವರನ್ನು ರಕ್ಷಿಸಿ ನಗರದ ವಿವಿಧ ಆಶ್ರಮಗಳಿಗೆ ಬಿಡುತ್ತಿದ್ದೆವು. ಆದರೆ ಈಗ ನಮ್ಮದೇ ಆದ ಅನಾಥಾಶ್ರಮ ಸ್ಥಾಪಿಸುತ್ತಿರುವುದು ಖುಷಿ ನೀಡುತ್ತಿದೆ ಎಂದು ಸಂಸ್ಥೆಯ ಸಂಸ್ಥಾಪಕರಲ್ಲಿ ಒಬ್ಬರಾದ ಮಿಲನ ಸಂತಸ ವ್ಯಕ್ತಪಡಿಸುತ್ತಾರೆ.

ನೀವೂ ನೆರವು ನೀಡಬಹುದು

ಸಾರ್ವಜನಿಕರು ಹೆಚ್ಚಿನ ಮಾಹಿತಿ ಮೊ. 9535236199, 8050035748, 8431668589 ಕ್ಕೆ ಕರೆ ಮಾಡಬಹುದು. ಆಸಕ್ತ ದಾನಿಗಳು ಕರ್ನಾಟಕ ಬ್ಯಾಂಕ್‌, ನ್ಯೂ ಆರ್ಕ್ ಮಿಷನ್‌ ಆಫ್‌ ಇಂಡಿಯಾ, ಎಚ್‌.ಎಂ.ಟಿ. ಬ್ರಾಂಚ್‌, ಖಾತೆ ನಂ. 9682500100555001, ಐಎಫ್‌ಎಸ್‌ಸಿ ಕೋಡ್‌-ಕೆಎಆರ್‌ಬಿ0000968 ಈ ಖಾತೆಗೆ ಆರ್ಥಿಕ ಸಹಾಯ ಮಾಡಬಹುದು.
 

Follow Us:
Download App:
  • android
  • ios