ತೋಂಟದ ಶ್ರೀಗಳು 660 ಕನ್ನಡ ಪುಸ್ತಕಗಳನ್ನು ತಮ್ಮ ಮಠದಿಂದ ಪ್ರಕಟಿಸುವ ಮೂಲಕ, ಯಾವುದೇ ವಿಶ್ವವಿದ್ಯಾಲಯವೂ ಮಾಡದಂಥ ಕನ್ನಡ ತಾಯಿಯ ಸೇವೆಯನ್ನು ಮಾಡಿದ್ದು, ಕರ್ನಾಟಕದ ಇತಿಹಾಸದಲ್ಲಿ ದಾಖಲಾರ್ಹ ಸಂಗತಿಯಾಗಿದೆ.

ಶಿವಕುಮಾರ ಕುಷ್ಟಗಿ

ಗದಗ (ನ.13): ಕನ್ನಡದ ಜಗದ್ಗುರುಗಳೆಂದೇ ಖ್ಯಾತರಾಗಿದ್ದ ಗದುಗಿನ ತೋಂಟದಾರ್ಯ ಮಠದ ಲಿಂ.ಡಾ.ತೋಂಟದ ಸಿದ್ಧಲಿಂಗ ಶ್ರೀಗಳು 660 ಕನ್ನಡ ಪುಸ್ತಕಗಳನ್ನು ತಮ್ಮ ಮಠದಿಂದ ಪ್ರಕಟಿಸುವ ಮೂಲಕ, ಯಾವುದೇ ವಿಶ್ವವಿದ್ಯಾಲಯವೂ ಮಾಡದಂಥ ಕನ್ನಡ ತಾಯಿಯ ಸೇವೆಯನ್ನು ಮಾಡಿದ್ದು, ಕರ್ನಾಟಕದ ಇತಿಹಾಸದಲ್ಲಿ ದಾಖಲಾರ್ಹ ಸಂಗತಿಯಾಗಿದೆ. ತಮ್ಮ ಪಟ್ಟಾಧಿಕಾರ ದಿನದಿಂದಲೇ ಕನ್ನಡ ಸೇವೆ ಪ್ರಾರಂಭಿಸಿ ಗೋಕಾಕ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಕನ್ನಡ ಮನಸ್ಸುಗಳನ್ನು ನಿರಂತರವಾಗಿ ಜಾಗೃತಗೊಳಿಸಿದ್ದು ಲಿಂಗೈಕ್ಯ ಶ್ರೀಗಳು. ಅವರು ತಮ್ಮ ಜೀವನದುದ್ದಕ್ಕೂ ಪುಸ್ತಕಗಳನ್ನೇ ಪ್ರೀತಿಸುತ್ತಾ, ಪುಸ್ತಕಗಳನ್ನು ಓದುತ್ತಾ, ನೂರಾರು ಕನ್ನಡ ಪುಸ್ತಕಗಳನ್ನು ಪ್ರಕಟಿಸಿ ಮಾತೃಭಾಷೆಯ ಪ್ರೇಮ ಮೆರೆದರು.

ಸಿದ್ಧಲಿಂಗ ಶ್ರೀಗಳು, ಎದೆ ತುಂಬ ಅಪಾರವಾದ ಪುಸ್ತಕ ಪ್ರೀತಿಯನ್ನು ತುಂಬಿಕೊಂಡೇ 1974ರಲ್ಲಿ ಶ್ರೀ ಮಠಕ್ಕೆ ಪಟ್ಟಾಭಿಷಿಕ್ತರಾದರು. ನಂತರ, ಪುಸ್ತಕಗಳನ್ನು ಪ್ರಕಟಿಸುವ ಯೋಜನೆ ಹಾಕಿಕೊಂಡರು. ಈ ಯೋಜನೆಯನ್ನು ಕಾರ್ಯಗತಗೊಳಿಸಲು ತಮ್ಮ ಪೂರ್ವಾಶ್ರಮದ ವಿದ್ಯಾಗುರುಗಳಾದ ಡಾ.ಎಂ.ಎಂ.ಕಲಬುರ್ಗಿ, ಮತ್ತಿತರರ ಜೊತೆ ಸೇರಿ ಲಿಂಗಾಯತ ಅಧ್ಯಯನ ಸಂಸ್ಥೆ ಹೆಸರಿನಲ್ಲಿ ಸಂಸ್ಥೆ ಸ್ಥಾಪಿಸಿದರು. 1975ರಲ್ಲಿ ಈ ಸಂಸ್ಥೆ ಪ್ರಾರಂಭವಾಯಿತು. ನಾಲ್ಕೂವರೆ ದಶಕಗಳಲ್ಲಿ ಸುಮಾರು 660 ಕೃತಿಗಳನ್ನು ಪ್ರಕಟಿಸಿದ ಕೀರ್ತಿ ತೋಂಟದಾರ್ಯ ಮಠದ ಡಾ.ಎಂ.ಎಂ. ಕಲಬುರ್ಗಿ ಅಧ್ಯಯನ ಸಂಸ್ಥೆಗೆ ಸಲ್ಲುತ್ತದೆ.

ಪ್ರಕಟಣೆಯ ವೇದಿಕೆಗಳು: ಶ್ರೀಮಠದಿಂದ ಪ್ರಕಟಿತವಾಗಿರುವ ಕನ್ನಡದ ಎಲ್ಲ ಕೃತಿಗಳಿಗೆ ಅದರದ್ದೇ ಆದ ವೇದಿಕೆಯನ್ನು ಶ್ರೀಗಳು ಕಲ್ಪಿಸಿದ್ದರು. ಲಿಂಗಾಯತ ಪುಣ್ಯಪುರುಷರ ಗ್ರಂಥಗಳ ಪ್ರಕಟಣೆ, ಹಸ್ತಪ್ರತಿ ಪ್ರಾಚ್ಯವಸ್ತುಗಳ ಸಂಗ್ರಹ ಸಂರಕ್ಷಣೆ, ಪುರಾತನ ಲಿಂಗಾಯತ ನೂತನ ಕೃತಿಗಳ ಪ್ರಕಟಣೆ, ಪುರಾತನ ನೂತನ ಕೃತಿಗಳ ಗ್ರಂಥ ಭಂಡಾರ ಸ್ಥಾಪನೆ ಮಾಡಿದರು. ಸಮಗ್ರ ಲಿಂಗಾಯತ ಅಪ್ರಕಟಿತ ಪ್ರಾಚೀನ ಸಾಹಿತ್ಯ ಪ್ರಕಟಣಾ ಯೋಜನೆ ಮೂಲಕ ಅಪ್ರಕಟಿತ ಕೃತಿಗಳನ್ನು ಪ್ರಕಟಿಸಿದರು. ಅನುವಾದ ಸಾಹಿತ್ಯ ರತ್ನಮಾಲೆಯ ಮೂಲಕ ಕನ್ನಡ ಮತ್ತು ಅನ್ಯಭಾಷೆಗಳ ಲಿಂಗಾಯತ ಕೃತಿಗಳನ್ನು ಪರಸ್ಪರ ಅನುವಾದ ಮಾಡಿಸಿದರು.

ಕೃತಿಗಳ ಪ್ರಕಟಣೆ

ಗ್ರಾಮೀಣ ಸಾಹಿತ್ಯ ಮಾಲೆ, ಮಕ್ಕಳ ಸಾಹಿತ್ಯ ಮಾಲೆಯಡಿಯಲ್ಲಿ ಬಸವಾದಿ ಪ್ರಮಥರ ಬದುಕನ್ನು ಮಕ್ಕಳಿಗಾಗಿ ಚಿತ್ರಿಸುವ ಕಾರ್ಯ ಕೈಗೊಂಡರು. ನೂತನ ಸಾಹಿತ್ಯ ರತ್ನಮಾಲೆಯಲ್ಲಿ ಧರ್ಮ, ಸಂಸ್ಕೃತಿ, ಸಾಹಿತ್ಯ, ಸಮಾಜಗಳಿಗೆ ಸಂಬಂಧಪಟ್ಟ ಕೃತಿಗಳನ್ನು ಪ್ರಕಟಿಸಿದರು. ಸಂಕೀರ್ಣ ಸಾಹಿತ್ಯ ರತ್ನಮಾಲೆ ಯೋಜನೆಯಡಿ ವೈಚಾರಿಕ ಲಿಂಗಾಯತೇತರರ ಕೃತಿಗಳ ಪ್ರಕಟಣೆ, ಪುಣ್ಯ ಪುರುಷರ ಸಾಹಿತ್ಯ ರತ್ನಮಾಲೆ ಪ್ರಮುಖ ಸಾಹಿತ್ಯ ಪ್ರಕಾರಗಳಾಗಿವೆ. ಇದುವರೆಗೆ 350 ಪುಣ್ಯಪುರುಷರ ಚರಿತ್ರೆಗಳು ಪ್ರಕಟಗೊಂಡಿವೆ.

ಇದರಲ್ಲಿ ಶಿರಸಂಗಿ ಲಿಂಗರಾಜ, ವಾರದ ಮಲ್ಲಪ್ಪ, ಕೆ.ಪಿ.ಪುಟ್ಟಣಶೆಟ್ಟಿ, ಅರಟಾಳ ರುದ್ರಗೌಡ, ಚಿಕ್ಕೋಡಿ ತಮ್ಮಣ್ಣಪ್ಪ-ಪಂಡಿತಪ್ಪ, ರಾಜಾ ಲಖಮನಗೌಡರಂಥ ಸಮಾಜ ಸೇವಕರು, ನಂಜುಂಡಪ್ಪ, ಡಿ.ಸಿ.ಪಾವಟೆ, ಸಿ.ಸಿ.ಹುಲಕೋಟಿ, ಆರ್.ಸಿ.ಹಿರೇಮಠ, ಡಾ.ಎಂ.ಎಂ.ಕಲಬುರ್ಗಿ, ಎಂ.ಪಂಚಪ್ಪ, ಸಿದ್ದಪ್ಪ ಕಂಬಳಿ, ಎಸ್.ಆರ್. ಕಂಠಿ, ಎಂ.ಪಿ.ಪಾಟೀಲ, ಅಣ್ಣಾರಾವ್ ಗಣಮುಖಿ, ವೀರೇಂದ್ರ ಪಾಟೀಲ, ಎಸ್. ನಿಜಲಿಂಗಪ್ಪ, ಜೆ.ಎಚ್. ಪಟೇಲ್, ಎಸ್.ಆರ್. ಬೊಮ್ಮಾಯಿ, ಬಿ.ಡಿ. ಜತ್ತಿ, ಎಂ.ಪಿ.ಪ್ರಕಾಶ, ಹಳ್ಳಿಕೇರಿ ಗುದ್ಲೆಪ್ಪ, ಸುಗಂಧಿ ಮುರಿಗೆಪ್ಪ, ಬಿ.ಎಂ. ಹೊರಕೇರಿ, ವಿಶ್ವನಾಥರೆಡ್ಡಿ ಮುದ್ನಾಳ ಸೇರಿದಂತೆ ಅನೇಕ ಹಿರಿಯರು ಕೃತಿಗಳು ಪ್ರಕಟಣೆಗೊಂಡಿವೆ. ವಚನಗಳು, ಪುರಾಣ ಹಾಗೂ ಚರಿತ್ರೆಗಳು, ತಾತ್ವಿಕ ಗ್ರಂಥಗಳು, ಶಾಸ್ತ್ರ ಗ್ರಂಥಗಳು, ಟೀಕಾ ಕೃತಿಗಳು, ಜನಪದ ಸಾಹಿತ್ಯ ಕೃತಿಗಳು, ಜತೆಗೆ ಚಂಪೂ, ರಗಳೆ, ಸಾಂಗತ್ಯ, ತ್ರಿಪದಿ, ಶತಕ, ಅಷ್ಟಕ, ದಂಡಕ, ಚೌಪದಿ ಮುಂತಾದ ಪ್ರಕಾರಗಳ ಪ್ರಕಟಿತ ಕೃತಿಗಳು ಇದರಲ್ಲಿ ಒಳಗೊಂಡಿವೆ.

ಶ್ರೀಮಠದ ಅಧ್ಯಯನ ಸಂಸ್ಥೆಯು 600ಕ್ಕೂ ಮೀರಿ ಗ್ರಂಥಗಳನ್ನು ಪ್ರಕಟಿಸಿದೆ. ಲಾಭವಿಲ್ಲ-ನಷ್ಟವಿಲ್ಲ ಎನ್ನುವಂತೆ ಮೂರು ಕೋಟಿಗೂ ಅಧಿಕ ಹಣವನ್ನು ವ್ಯಯಿಸಿ, ಒಂದು ಲಕ್ಷ ನಲ್ವತ್ತೆಂಟು ಸಾವಿರ ಪುಟದಷ್ಟು ಕನ್ನಡ ಸಾಹಿತ್ಯವನ್ನು ಓದುಗರ ಕೈಗೆ ನೀಡಿ, ಕನ್ನಡ ಭಾಷಾ ಪ್ರೇಮವನ್ನು ಜತೆಗೆ, ಕನ್ನಡ ನಾಡು ನುಡಿಯನ್ನು ಶ್ರೀಮಂತಗೊಳಿಸಿದ ಶ್ರೇಯಸ್ಸು ಗದುಗಿನ ಲಿಂ.ತೋಂಟದ ಡಾ. ಸಿದ್ಧಲಿಂಗ ಶ್ರೀಗಳಿಗೆ ಸಲ್ಲುತ್ತದೆ.
- ಶಿವನಗೌಡ ಗೌಡರ, ಶ್ರೀಮಠದ ಭಕ್ತರು.