*  100 ಗಡಿ ದಾಟಿದ್ದ ಟೊಮೆಟೋ ಬೆಲೆ*  ಟೊಮೆಟೋ ಪೂರೈಕೆ ಹೆಚ್ಚಳ *  ನಾಸಿಕ್‌ನಿಂದಲೂ ಪೂರೈಕೆ 

ಬೆಂಗಳೂರು(ಜೂ.26):  ಕಳೆದ ಒಂದು ತಿಂಗಳ ಹಿಂದೆ .100 ರ ಗಡಿ ದಾಟಿದ್ದ ಟೊಮೆಟೋ ಬೆಲೆ ದಿಢೀರ್‌ ಕುಸಿದಿದ್ದು ಸಗಟು ವ್ಯಾಪಾರದಲ್ಲಿ ಶನಿವಾರ ಪ್ರತಿ ಕೆ.ಜಿಗೆ 26ಕ್ಕೆ ಮಾರಾಟವಾಗುತ್ತಿದೆ. ರಾಜ್ಯದಲ್ಲಿ ಇತ್ತೀಚೆಗೆ ಸುರಿದ ಅಕಾಲಿಕ ಮಳೆಯಿಂದಾಗಿ ಟೊಮೆಟೋ ಬೆಳೆ ನೆಲಕಚ್ಚಿದ ಪರಿಣಾಮ ಬೆಲೆಯೂ ಗಗನಕ್ಕೇರಿತ್ತು. ಇದೀಗ ಮಳೆ ಪ್ರಮಾಣ ಕಡಿಮೆಯಾಗಿದೆ. ಅಲ್ಲದೆ, ಬೆಂಗಳೂರು ಸುತ್ತ ಮುತ್ತ ಉತ್ತಮ ಫಸಲು ಬಂದಿರುವುದು ಹಾಗೂ ಮಹಾರಾಷ್ಟ್ರದಿಂದ ಆಗಮಿಸುತ್ತಿರುವ ಟೊಮೆಟೋ ಪ್ರಮಾಣವೂ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಬೆಲೆ ಕಡಿಮೆಯಾಗಿದೆ. ಇದರಿಂದ ಗ್ರಾಹಕರು ಖುಷಿಯಾಗಿದ್ದರೆ, ಬೆಳೆಗಾರರು ನಷ್ಟಕ್ಕೆ ಸಿಲುಕಿದ್ದಾರೆ.

ಬೆಲೆ ಹೆಚ್ಚಳವಾಗಿದ್ದ ಸಂದರ್ಭದಲ್ಲಿ ಮಹಾರಾಷ್ಟ್ರದ ನಾಸಿಕ್‌ನಿಂದ ಟೊಮೆಟೋ ಆಗಮಿಸುತ್ತಿತ್ತು. ಪ್ರಸ್ತುತ ಬೆಲೆ ಕುಸಿದಿದ್ದರೂ ನಾಸಿಕ್‌ನಿಂದ ಬರುವ ಪ್ರಮಾಣ ನಿಂತಿಲ್ಲ. ಚಿಕ್ಕಬಳ್ಳಾಪುರ, ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಟೊಮೆಟೋ ಉತ್ತಮವಾದ ಫಸಲು ಬಂದಿರುವುದು ಬೆಲೆ ಕುಸಿಯಲು ಕಾರಣವಾಗಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.

ಪೆಟ್ರೋಲ್ ದರ ಹಿಂದಿಕ್ಕಿದ Gadag ಮಾರ್ಕೆಟ್ ಟೊಮ್ಯಾಟೋ ರೇಟ್!

ಹಸಿ ಬಟಾಣಿ ಬೆಲೆಯೂ ಇಳಿಕೆ

ಕಳೆದ ಮೂರು ತಿಂಗಳಿನಿಂದ ಬಟಾಣಿ ಬೆಲೆ .250ಕ್ಕೆ ಏರಿಕೆಯಾಗಿತ್ತು. ಇದೀಗ ಕೆ.ಆರ್‌.ಮಾರುಕಟ್ಟೆಯಲ್ಲಿ ಗುಣಮಟ್ಟದ ನಾಟಿ ಬಟಾಣಿ ಪ್ರತಿ ಕೆ.ಜಿ.ಗೆ .165ಕ್ಕೆ ಸಿಗುತ್ತಿದೆ. ಸಗಟು ವ್ಯಾಪಾರದಲ್ಲಿ .150ಕ್ಕೆ ಮಾರಾಟವಾಗುತ್ತಿದೆ. ಮದುವೆ ಇನ್ನಿತರ ಶುಭ ಸಮಾರಂಭಗಳಿಗೆ ಅಧಿಕ ಸಂಖ್ಯೆಯಲ್ಲಿ ನಾಟಿ ಬಟಾಣಿ ಖರೀದಿಸುತ್ತಿರುವುದು ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.

ಆನೇಕಲ್‌, ರಾಮನಗರ ಮತ್ತು ಬೆಂಗಳೂರಿನ ಸುತ್ತಮುತ್ತಲಿನ ಕೆಲವು ಕಡೆಗಳಲ್ಲಿ ರೈತರು ನಾಟಿ ಬಟಾಣಿ ಬೆಳೆಯುತ್ತಾರೆ. ಈ ಹಿಂದೆ ಕೆ.ಆರ್‌.ಮಾರುಕಟ್ಟೆಗೆ 40ರಿಂದ 50 ಕ್ವಿಂಟಲ್‌ ನಾಟಿ ಬಟಾಣಿ ಪೂರೈಕೆ ಆಗುತ್ತಿತ್ತು. ಆದರೆ, ಕಳೆದ ಕೆಲ ತಿಂಗಳಿನಿಂದ 10 ರಿಂದ 15 ಕ್ವಿಂಟಲ್‌ ಮಾತ್ರ ಪೂರೈಕೆಯಾಗುತ್ತಿದ್ದು, ಬೆಲೆ ಏರಿಕೆಯಾಗಿತ್ತು. ಇದೀಗ ಕೊಂಚ ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂದು ಸಗಟು ವ್ಯಾಪಾರಿಗಳ ಸಂಘದ ಅಧ್ಯಕ್ಷ ಗೋಪಿ ಮಾಹಿತಿ ನೀಡಿದ್ದಾರೆ.

ಹಾಪ್‌ ಕಾಮ್ಸ್‌ ಬೆಲೆ: ತರಕಾರಿ ಪ್ರತಿ ಕೆಜಿಗೆ

ಬಟಾಣಿ ಕಾಳು 150
ಬದನೆಕಾಯಿ 44
ದಪ್ಪ ಮೆಣಸಿನಕಾಯಿ 53
ನುಗ್ಗೆಕಾಯಿ 80
ಈರುಳ್ಳಿ 47
ಆಲೂಗೆಡ್ಡೆ 42
ಟಮೊಟೋ 48.