Asianet Suvarna News Asianet Suvarna News

ಆಜಾನ್‌ಗೆ ಪ್ರತಿಯಾಗಿ ರಾಜ್ಯದ 1000 ಕಡೆ ಭಜನೆ, ಶಂಖ, ಜಾಗಟೆಯ ಸದ್ದು!

-10 ಜಿಲ್ಲೆಗಳ ಹಿಂದು ದೇಗುಲಗಳಲ್ಲಿ ಶ್ರೀರಾಮಸೇನೆ ಸಿದ್ಧತೆ

-ಹನುಮಾನ್‌ ಚಾಲೀಸ, ಭಜನೆ, ಶಂಖ, ಜಾಗಟೆಗೆ ಸದ್ದು

-ಮಸೀದಿಗೆ ಭದ್ರತೆ ನೀಡುವಂತೆ ಅಂಜುಮನ್‌ ಸಂಸ್ಥೆ ಮನವಿ

-ಮಸೀದಿಯಲ್ಲಿ ಧ್ವನಿವರ್ಧಕ ತೆರವು ಮಾಡದ್ದಕ್ಕೆ ಈ ಹೋರಾಟ

To counter morning azaan over 1000 temples to play bhajans on loudspeakers across Karnataka Sri Rama Sene pod
Author
Bangalore, First Published May 9, 2022, 5:17 AM IST

ಬೆಂಗಳೂರು(ಮೇ.09): ಮಸೀದಿಗಳಲ್ಲಿನ ಅಜಾನ್‌ಗೆ ವಿರುದ್ಧವಾಗಿ ಈ ಹಿಂದೆ ಘೋಷಿಸಿದಂತೆ ರಾಜ್ಯಾದ್ಯಂತ ಹಿಂದೂ ದೇವಾಲಯಗಳಲ್ಲಿ ಸೋಮವಾರ ಹನುಮಾನ್‌ ಚಾಲೀಸಾ, ಸುಪ್ರಭಾತ, ಭಕ್ತಿಗೀತೆ, ಭಜನೆ, ಭಾಜಾ ಭಜಂತ್ರಿ, ನಾಸಿಕ್‌ ಡೊಳ್ಳು, ಸಮಾಳ, ಶಂಖ, ಜಾಗಟೆಗಳ ಸದ್ದು ಮೊಳಗಲಿದೆ ಎಂದು ಶ್ರೀರಾಮ ಸೇನೆ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಹುಬ್ಬಳ್ಳಿ ಸೇರಿದಂತೆ ಹಲವೆಡೆ ಮಸೀದಿಗಳ ಆಸುಪಾಸು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್‌ ಭದ್ರತೆ ನಿಯೋಜಿಸಲಾಗಿದೆ.

ಶಬ್ದಮಾಲಿನ್ಯ ಉಂಟು ಮಾಡುವಂತಹ ಧ್ವನಿವರ್ಧಕಗಳನ್ನು ತೆರವು ಮಾಡುವಂತೆ ನ್ಯಾಯಾಲಯದ ಆದೇಶವಿರುವುದರಿಂದ ಮಸೀದಿಯಲ್ಲಿ ಆಜಾನ್‌ ಮೈಕ್‌ಗಳನ್ನು ಮೇ 8ರ ಒಳಗೆ ತೆರವುಗೊಳಿಸಬೇಕು ಇಲ್ಲವಾದಲ್ಲಿ ಮೇ 9ರಂದು ರಾಜ್ಯದ ಸಾವಿರಕ್ಕೂ ಅಧಿಕ ದೇವಾಲಯಗಳಲ್ಲಿ ಹನುಮಾನ್‌ ಚಾಲೀಸ, ಸುಪ್ರಭಾತ, ಭಕ್ತಿಗೀತೆಗಳನ್ನು ಹಾಕಲಾಗುವುದು ಎಂದು ಶ್ರೀರಾಮ ಸೇನೆ ಸಂಘಟನೆ ಎಚ್ಚರಿಕೆ ನೀಡಿತ್ತು. ಈ ಗಡುವು ಮುಗಿದ ಹಿನ್ನೆಲೆಯಲ್ಲಿ ಶ್ರೀರಾಮ ಸೇನೆ ಅಭಿಯಾನಕ್ಕೆ ಮುಂದಾಗಿದೆ.

ಹಲವು ಜಿಲ್ಲೆಗಳಲ್ಲಿ ತಯಾರಿ:

ಕಲಬುರಗಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಅಜಾನ್‌ ನಡೆಯುವ 5 ಹೊತ್ತೂ ಅಭಿಯಾನ ನಡೆಸಲು ತೀರ್ಮಾನಿಸಲಾಗಿದೆ. ಹೆಚ್ಚಿನ ಕಡೆಗಳಲ್ಲಿ ಬೆಳಗ್ಗೆ 5 ಗಂಟೆಗೆ, ಮತ್ತೆ ಕೆಲವು ಕಡೆಗಳಲ್ಲಿ ಬೆಳಗ್ಗೆ 6 ಗಂಟೆಗೆ ಚಾಲೀಸ, ಸುಪ್ರಭಾತ, ಭಕ್ತಿಗೀತೆಗಳನ್ನು ಮೊಳಗಿಸಲು ನಿರ್ಧರಿಸಲಾಗಿದೆ ಎಂದು ಶ್ರೀರಾಮ ಸೇನೆ ಮುಖಂಡರು ತಿಳಿಸಿದ್ದಾರೆ. ಇದಕ್ಕಾಗಿ ಸಕಲ ಸಿದ್ಧತೆಯನ್ನು ಮಾಡಿಕೊಂಡಿದ್ದು, ನಮಗೆ ಅಡ್ಡಿಪಡಿಸಲು ಬಂದರೆ ಮಸೀದಿಯಲ್ಲಿ ಹಾಕಿರುವ ಮೈಕ್‌ಗಳನ್ನು ತೆರವು ಮಾಡುವಂತೆ ಒತ್ತಾಯಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಲಭ್ಯ ಮಾಹಿತಿ ಪ್ರಕಾರ ದಾವಣಗೆರೆ, ಧಾರವಾಡ, ಮಂಡ್ಯ, ವಿಜಯನಗರ, ಕೊಪ್ಪಳ, ಗದಗ, ಬಾಗಲಕೋಟೆ, ಕೊಡಗು, ಕಲಬುರಗಿ, ಯಾದಗಿರಿ, ಕೋಲಾರ ಜಿಲ್ಲೆಗಳಲ್ಲಿ ಅಭಿಯಾನಕ್ಕೆ ಸಿದ್ಧತೆ ನಡೆದಿದೆ. ಮಂಡ್ಯದಲ್ಲಿ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಯಾದಗಿರಿಯಲ್ಲಿ 100 ದೇವಸ್ಥಾನಗಳ ಮೇಲೆ ಮೈಕ್‌ ಅಳವಡಿಸಲು ಶ್ರೀರಾಮಸೇನೆ ನಿರ್ಧರಿಸಿದ್ದು ಮೈಕುಗಳನ್ನು ವಿತರಿಸಿದೆ. ಅನೇಕ ಕಡೆಗಳಲ್ಲಿ ದೇವಾಲಯಗಳಲ್ಲೇ ಈಗಾಗಲೇ ಇರುವ ಮೈಕುಗಳನ್ನೇ ಬಳಸಿ ಸುಪ್ರಭಾತ ಮೊಳಗಿಸಲು ನಿರ್ಧರಿಸಿದೆ. ಇನ್ನು ಅಭಿಯಾನಕ್ಕೆ ಪೊಲೀಸರು ತಡೆಯೊಡ್ಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಎಲ್ಲಿ ಅಭಿಯಾನ ನಡೆಯುತ್ತದೆ ಎಂಬ ಬಗ್ಗೆ ಸಂಘಟನೆಯ ಸ್ಥಳೀಯ ಪ್ರಮುಖರು ಮಾಹಿತಿ ಬಹಿರಂಗಪಡಿಸುತ್ತಿಲ್ಲ.

ಹುಬ್ಬಳ್ಳಿಯಲ್ಲಿ ಬಿಗಿ ಭದ್ರತೆ:

ಹುಬ್ಬಳ್ಳಿಯಲ್ಲಿ ಅಂಜುಮಾನ್‌ ಇಸ್ಲಾಂ ಸೇರಿದಂತೆ ಹಲವು ಮುಸ್ಲಿಂ, ಕಾಂಗ್ರೆಸ್‌ ಮುಖಂಡರು ಬೆಳಗ್ಗೆ ಮಹಾನಗರ ಪೊಲೀಸ್‌ ಆಯುಕ್ತರನ್ನು ಭೇಟಿಯಾಗಿ ಮಸೀದಿ, ದರ್ಗಾಕ್ಕೆ ಹೆಚ್ಚಿನ ಭದ್ರತೆ ಒದಗಿಸುವಂತೆ ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಹಳೆಯ ಹುಬ್ಬಳ್ಳಿಯ ಮಸೀದಿ, ಇಂಪಿಪಂಪ್‌ ಬಳಿಯ ದರ್ಗಾ ಸೇರಿ ಹಲವೆಡೆ ಹೆಚ್ಚಿನ ಪೊಲೀಸ್‌ ಭದ್ರತೆ ನಿಯೋಜಿಸಲಾಗಿದೆ. ಈ ಬಗ್ಗೆ ಅಂಜುಮನ್‌ ಮುಖಂಡ ಯುಸೂಫ್‌ ಸವಣೂರು ಮಾತನಾಡಿ, ನಾವು ಕಾನೂನು ಪಾಲನೆ ಮಾಡುತ್ತೇವೆ. ಧ್ವನಿವರ್ಧಕದ ವಾಲ್ಯೂಮ್‌ ಕಡಿಮೆ ಮಾಡುವಂತೆ ಹೇಳಿದ್ದೇವೆ ಎಂದು ತಿಳಿಸಿದರು.

ವಿರೋಧಿಸುವುದಿಲ್ಲ, ಉಪಚರಿಸುತ್ತೇವೆ: ಶ್ರೀರಾಮ ಸೇನೆಯ ಅಭಿಯಾನದ ಬಗ್ಗೆ ಪ್ರತಿಕ್ರಿಯಿಸಿರುವ ರಾಜ್ಯದ ಹಿರಿಯ ಮುಸ್ಲಿಂ ಧಾರ್ಮಿಕ ನಾಯಕ ಮೌಲಾನಾ ಮಕ್ಸೂದ್‌ ಇಮ್ರಾನ್‌, ಇದರ ಹಿಂದೆ ರಾಜಕೀಯ ಇದೆ, ರಾಜಕಾರಣ ಮಾಡುವವರು ಮಾಡಲಿ, ಅದರಿಂದ ನಮಗೆ ಯಾವುದೇ ಸಮಸ್ಯೆ ಇಲ್ಲ. ಹನುಮಾನ್‌ ಚಾಲೀಸಾ ಹೇಳುವುದನ್ನು ನಾವು ವಿರೋಧಿಸುವುದಿಲ್ಲ, ಬದಲಿಗೆ ಅವರನ್ನು ಸ್ವಾಗಸುತ್ತೇವೆ, ನೀರು, ಜ್ಯೂಸ್‌ ನೀಡಿ ಉಪಚರಿಸುತ್ತೇವೆ ಎಂದು ತಿಳಿಸಿದರು. ಜೊತೆಗೆ ಶಬ್ದ ನಿಯಂತ್ರಣದ ಬಗ್ಗೆ ಸುಪ್ರೀಂಕೋರ್ಚ್‌ ಆದೇಶವನ್ನು ವಿರೋಧಿಸುವುದಿಲ್ಲ. ಶಬ್ದ ನಿಯಂತ್ರಣಕ್ಕೆ ನಾವೊಂದು ಉಪಕರಣವನ್ನು ತಯಾರಿಸಿದ್ದೇವೆ, ಅದನ್ನು ಎಲ್ಲ ಮಸೀದಿಗಳಲ್ಲಿ ಅಳವಡಿಸುತ್ತಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದವರು ಹೇಳಿದರು.

ರಾಜ್ಯಾದ್ಯಂತ ಒಂದು ಸಾವಿರ ದೇವಾಲಯಗಳನ್ನು ಸಂಪರ್ಕಿಸಿದ್ದು ಬೆಳಗ್ಗೆ 5ಕ್ಕೆ ದೇವಾಲಯಗಳಲ್ಲಿ ಹನುಮಾನ್‌ ಚಾಲೀಸಾ, ಭಕ್ತಿಗೀತೆಗಳನ್ನು ಹಾಕಲಾಗುತ್ತದೆ. ದೇವಾಲಯದ ಆಡಳಿತ ಮಂಡಳಿ ಹಾಗೂ ಅರ್ಚಕರೇ ಭಕ್ತಿಗೀತೆಗಳನ್ನು ಹಾಕಲು ಸಂತೋಷದಿಂದ ಒಪ್ಪಿದ್ದಾರೆ.

-ಪ್ರಮೋದ್‌ ಮುತಾಲಿಕ್‌, ಶ್ರೀರಾಮ ಸೇನೆ ಮುಖ್ಯಸ್ಥ

Follow Us:
Download App:
  • android
  • ios