ಶನಿವಾರ ರಾಜ್ಯದಾದ್ಯಂತ ಟಿಪ್ಪು ಜಯಂತಿ ಆಚರಣೆ ಮಾಡುತ್ತಿರುವ ಬೆನ್ನಲ್ಲೇ ಇದೀಗ ಕೊಡಗು ಜಿಲ್ಲೆ  ಸೇರಿದಂತೆ ಹಲವು ಪ್ರದೇಶಗಳಲ್ಲಿ ನಿಷೇಧಜ್ಞೆ ಜಾರಿ ಮಾಡಲಾಗಿದೆ.

ಬೆಂಗಳೂರು :  ರಾಜ್ಯ ಸರ್ಕಾರ ನ.10ರಂದು ಆಚರಿಸಲು ಉದ್ದೇಶಿಸಿರುವ ಟಿಪ್ಪು ಜಯಂತಿಗೆ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳಿಂದ ವ್ಯಾಪಕ ವಿರೋಧ ಮುಂದುವರಿದಿದೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಈ ಹಿಂದೆ ದುರ್ಘಟನೆಗಳಿಗೆ ಸಾಕ್ಷಿಯಾಗಿದ್ದ ಕೊಡಗು ಸೇರಿದಂತೆ ರಾಜ್ಯದ ಕೆಲವೆಡೆ ಶುಕ್ರವಾರದಿಂದಲೇ ಪೊಲೀಸ್‌ ಇಲಾಖೆ ನಿಷೇಧಾಜ್ಞೆ ಹೇರಿದೆ.

ಈಗಾಗಲೇ ರಾಜ್ಯದ ಹಲವೆಡೆ ಪ್ರತಿಭಟನಾ ಸಭೆಗಳು ನಡೆದಿದ್ದು, ಶುಕ್ರವಾರದಂದು ಸಹ ರಾಜ್ಯವಾಪಿ ಪ್ರತಿಭಟನೆ ನಡೆಸುವುದಾಗಿ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳು ತಿಳಿಸಿವೆ. ಹೀಗಾಗಿ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡುವ ಮುನ್ನೆಚ್ಚರಿಕಾ ಕ್ರಮವಾಗಿ ಕೊಡಗು, ಚಿಕ್ಕಮಗಳೂರು, ಚಿತ್ರದುರ್ಗ ಜಿಲ್ಲೆ, ಹುಬ್ಬಳ್ಳಿ-ಧಾರವಾಡ ಮಹಾನಗರ, ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕು, ಶ್ರೀರಂಗಪಟ್ಟಣ ವ್ಯಾಪ್ತಿಗಳಲ್ಲಿ ನಿಷೇಧಾಜ್ಞೆಯನ್ನು ಜಾರಿಗೊಳಿಸಿರುವುದಾಗಿ ಆಯಾ ಜಿಲ್ಲಾಡಳಿತಗಳು ತಿಳಿಸಿವೆ.

ಕೊಡಗಿನಲ್ಲಿ ಟಿಪ್ಪು ಜಯಂತಿಗೆ ಈ ಹಿಂದಿನಿಂದಲೂ ವ್ಯಾಪಕ ವಿರೋಧವಿದ್ದು, 2015ರಲ್ಲಿ ನಡೆದಿದ್ದ ಪ್ರತಿಭಟನೆ ಇಬ್ಬರು ಅಮಾಯಕರನ್ನು ಬಲಿ ಪಡೆದಿತ್ತು. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾ​ಧಿಕಾರಿ ಪಿ.ಐ.ಶ್ರೀವಿದ್ಯಾ ಅವರು, ದಂಡ ಪ್ರಕ್ರಿಯೆ ಸಂಹಿತೆ 1973ರ ಸೆಕ್ಷನ್‌ 144, 144(ಎ) ಮತ್ತು ಕರ್ನಾಟಕ ಪೊಲೀಸ್‌ ಕಾಯ್ದೆ 1963ರ ಕಲಂ 35 ರಡಿ ನ.9ರ ಸಂಜೆ 6 ಗಂಟೆಯಿಂದ ನ.11ರ ಬೆಳಗ್ಗೆ 6 ಗಂಟೆಯವರೆಗೆ ನಿಷೇಧಾಜ್ಞೆಯನ್ನು ಜಾರಿಗೊಳಿಸಿ ಆದೇಶಿಸಿದ್ದಾರೆ.

ಕೋಮುಸೂಕ್ಷ್ಮ ಜಿಲ್ಲೆಯಾದ ಚಿಕ್ಕಮಗಳೂರಿನ ಜಿಲ್ಲಾಕೇಂದ್ರವಾದ ಚಿಕ್ಕಮಗಳೂರು ನಗರ, ಮೂಡಿಗೆರೆ, ಆಲ್ದೂರು, ಕಡೂರು ಹಾಗೂ ಬಾಳೆಹೊನ್ನೂರು ಪಟ್ಟಣಗಳು ಕೋಮು ಸೂಕ್ಷ್ಮ ಪ್ರದೇಶಗಳಾಗಿದ್ದು, 2015, 2016 ಹಾಗೂ 2017ರಲ್ಲಿ ಟಿಪ್ಪು ಜಯಂತಿ ಆಚರಣೆ ಸಂದರ್ಭದಲ್ಲಿ ಪರ ಹಾಗೂ ವಿರೋಧ ವ್ಯಕ್ತವಾಗಿದ್ದರಿಂದ ಕಾನೂನು ಸುವ್ಯವಸ್ಥೆಗೆ ಸಾಕಷ್ಟುತೊಡಕು ಉಂಟಾಗಿತ್ತು. ಆದ್ದರಿಂದ ಈ ಬಾರಿ ಜಿಲ್ಲಾಡಳಿತ ಮೂರು ದಿನಗಳ ಕಾಲ ಮುಂಜಾಗ್ರತೆ ತೆಗೆದುಕೊಂಡಿದ್ದು, ಜಿಲ್ಲಾಧಿಕಾರಿ ಎಂ.ಕೆ. ಶ್ರೀರಂಗಯ್ಯ ನ. 9ರ ಬೆಳಿಗ್ಗೆ 6 ಗಂಟೆಯಿಂದ ನ.11ರ ಸಂಜೆ 6 ರವರೆಗೆ ಜಿಲ್ಲಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ.

ಚಿತ್ರದುರ್ಗದ ಕೋಟೆಯನ್ನು ಟಿಪ್ಪುವಿನ ತಂದೆ ಹೈದರಾಲಿ ಹಾಳುಗೆಡವಿದ ಮತ್ತು ವೀರವನಿತೆ ಓವವ್ವನನ್ನು ಮೋಸದಿಂದ ಕೊಲ್ಲಿಸಿದ ಎಂಬ ಕಾರಣಕ್ಕೆ ಕೋಟೆ ನಾಡಾದ ಚಿತ್ರದುರ್ಗ ಜಿಲ್ಲೆಯಲ್ಲಿ ಈ ಹಿಂದಿನಿಂದಲೂ ಟಿಪ್ಪು ಜಯಂತಿಗೆ ವ್ಯಾಪಕ ವಿರೋಧವಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ನ.9ರ ಬೆಳಗ್ಗೆ 6 ಗಂಟೆಯಿಂದ ನ.10ರ ಮಧ್ಯರಾತ್ರಿ 12ರವರೆಗೆ ನಿಷೇಧಾಜ್ಞೆ ಹೇರಿದೆ.

ಟಿಪ್ಪುವಿನ ರಾಜಧಾನಿಯಾಗಿದ್ದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ವ್ಯಾಪ್ತಿ ಹಾಗೂ ಮದ್ದೂರು ತಾಲೂಕು ವ್ಯಾಪ್ತಿಯಲ್ಲಿ ಮುಂಜಾಗ್ರತಾ ಕ್ರಮವಾಗಿ ನ.9 ರ ಸಂಜೆ 6 ಗಂಟೆಯಿಂದ ನ.11ರ ಬೆಳಿಗ್ಗೆ 6 ಗಂಟೆಯ ವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ನಿಷೇಧಾಜ್ಞೆ ವೇಳೆ ಪಾಲಿಸಬೇಕಾದ ಷರತ್ತುಗಳು

-ಸರ್ಕಾರಿ ಕಾರ್ಯಕ್ರಮ ಮತ್ತು ಪೂರ್ವ ನಿಯೋಜಿತ ನಿಶ್ಚಿತಾರ್ಥ, ಮದುವೆ, ನಾಮಕರಣ, ಗೃಹಪ್ರವೇಶ ಮುಂತಾದ ಸಮಾರಂಭಗಳನ್ನು ಹೊರತುಪಡಿಸಿ ಉಳಿದಂತೆ ಯಾವುದೇ ಸಭೆ, ಸಮಾರಂಭ ಮತ್ತು ಮೆರವಣಿಗೆಯನ್ನು ನಡೆಸಬಾರದು.

-ಎಲ್ಲ ಸಾರ್ವಜನಿಕ/ ರಾಜಕೀಯ ಬಹಿರಂಗ ಸಭೆ- ಸಮಾರಂಭ, ಪ್ರಚೋದನಾಕಾರಿ ಹೇಳಿಕೆ, ಭಾಷಣ, ಮೆರವಣಿಗೆ, ಪ್ರತಿಭಟನೆ, ಜಾಥಾ, ಧರಣಿ, ಮುಷ್ಕರ, ರಸ್ತಾರೋಕೋ ಹಾಗೂ ಮುತ್ತಿಗೆ ಮುಂತಾದುವುಗಳನ್ನು ಸಂಪೂರ್ಣವಾಗಿ ನಿಷೇಧಿಸಿದೆ.

-ಯಾವುದೇ ಫ್ಲೆಕ್ಸ್‌, ಬ್ಯಾನರ್‌, ಬಂಟಿಂಗ್ಸ್‌, ಕರಪತ್ರ, ಭಿತ್ತಿಪತ್ರ ಬಳಸುವುದು, ಅಂಟಿಸುವುದು ಅಥವಾ ಹಂಚುವುದನ್ನು ಸಂಪೂರ್ಣವಾಗಿ ನಿಷೇ​ಧಿಸಲಾಗಿದೆ.

-ನಿಷೇಧಿತ ಅವಧಿ​ಯಲ್ಲಿ 5 ಜನರಿಗಿಂತ ಮೇಲ್ಪಟ್ಟು ಗುಂಪು ಸೇರಬಾರದು. ಸರ್ಕಾರಿ ಕರ್ತವ್ಯದ ನಿಮಿತ್ತ ಮತ್ತು ಬ್ಯಾಂಕ್‌/ಎಟಿಎಂ ಭದ್ರತಾ ಕಾರ್ಯಕ್ಕಾಗಿ ನಿಯೋಜಿಸಲಾಗಿರುವ ಸಿಬ್ಬಂದಿ ಹೊರತುಪಡಿಸಿ, ಖಾಸಗಿ ವ್ಯಕ್ತಿಗಳು ಯಾವುದೇ ರೀತಿಯ ಆಯುಧ ಹತ್ಯಾರುಗಳನ್ನು ಹೊಂದಿರುವುದು, ಪ್ರದರ್ಶಿಸುವುದು ಅಥವಾ ಹಿಡಿದುಕೊಂಡು ತಿರುಗಾಡುವುದನ್ನು ನಿಷೇಧಿ​ಸಿದೆ.