ಹಾಸನ, ಬೆಳಗಾವಿ, ಹಾವೇರಿ, ಧಾರವಾಡ, ಉತ್ತರ ಕನ್ನಡ, ದಕ್ಷಿಣ ಕನ್ನಡ, ವಿಜಯಪುರ, ಗದಗ, ವಿಜಯನಗರದಲ್ಲಿ ಸೋಮವಾರ ರಾತ್ರಿಯಿಂದಲೇ ಮಳೆಯಾಗುತ್ತಿದ್ದು, ಬುಧವಾರ ಮತದಾನಕ್ಕೂ ಅಡ್ಡಿಯಾಗುವ ಆತಂಕ ಸೃಷ್ಟಿಸಿದೆ.

ಬೆಂಗಳೂರು(ಮೇ.10): ಮತದಾನದ ಮುನ್ನಾ ದಿನವಾದ ಮಂಗಳವಾರ ರಾಜ್ಯದ 9 ಜಿಲ್ಲೆಗಳಲ್ಲಿ ಭಾರೀ ಗಾಳಿ ಸಹಿತ ಉತ್ತಮ ಮಳೆಯಾಗಿದ್ದು, ಸಿಡಿಲಿಗೆ ವೃದ್ಧೆ ಸೇರಿ ಮೂವರು ಬಲಿಯಾಗಿದ್ದಾರೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನಲ್ಲಿ ಶೆಡ್‌ ಹಾರಿಬಿದ್ದ ಪರಿಣಾಮ ಗಡಿ ಚೆಕ್‌ಪೋಸ್ಟ್‌ನಲ್ಲಿ ಚುನಾವಣಾ ಕರ್ತವ್ಯನಿರತ ಯೋಧ ಸೇರಿ ಇಬ್ಬರು ಗಾಯಗೊಂಡಿದ್ದಾರೆ.

ಹಾಸನ, ಬೆಳಗಾವಿ, ಹಾವೇರಿ, ಧಾರವಾಡ, ಉತ್ತರ ಕನ್ನಡ, ದಕ್ಷಿಣ ಕನ್ನಡ, ವಿಜಯಪುರ, ಗದಗ, ವಿಜಯನಗರದಲ್ಲಿ ಸೋಮವಾರ ರಾತ್ರಿಯಿಂದಲೇ ಮಳೆಯಾಗುತ್ತಿದ್ದು, ಬುಧವಾರ ಮತದಾನಕ್ಕೂ ಅಡ್ಡಿಯಾಗುವ ಆತಂಕ ಸೃಷ್ಟಿಸಿದೆ.
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ರಾಮದುರ್ಗ ತಾಲೂಕಿನ ಓಬಳಾಪುರ ಡಿಎಲ್‌ಟಿಯಲ್ಲಿ ಪಾರ್ಲೇಶ ಛಾಯಪ್ಪ ಲಮಾಣಿ (23), ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಬೀರಲದಿನ್ನಿ ಗ್ರಾಮದ ರೈತ ಕನಕಪ್ಪ ಹೊನ್ನನಗೌಡ ಮಾಲಿಪಾಟೀಲ (30), ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಗರಾಳ ಗ್ರಾಮದ ನೀಲಗಂಗಮ್ಮ ಬಸನಗೌಡ ಬಿರಾದರ(70) ಹೊಲದಲ್ಲೇ ಸಿಡಿಲು ಬಡಿದು ಮೃತಪಟ್ಟವರು.

ಬೆಂಗಳೂರು ವಿಮಾನ ನಿಲ್ದಾಣದ ಹೊಸ ಟರ್ಮಿನಲ್-2ರಲ್ಲಿ ಮಳೆ ನೀರು ಸೋರಿಕೆ!

ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಮುರಗೋಡ ಚೆಕ್‌ಪೋಸ್ಟ್‌ನಲ್ಲಿ ಭಾರೀ ಮಳೆ, ಗಾಳಿಗೆ ಶೆಡ್‌ ಹೋದ ಪರಿಣಾಮ ಗಡಿ ಚೆಕ್‌ಪೋಸ್ಟ್‌ನಲ್ಲಿ ಚುನಾವಣಾ ಕರ್ತವ್ಯನಿರತ ಯೋಧ ವಾಸವೇ ಕಲುಸಿಂಗ್‌ ಗೋಮಾ ಮತ್ತು ಯಮಗರ್ಣಿ ಗ್ರಾಪಂನ ನೀರುಗಂಟಿ ಮಾರುತಿ ಸುಧಾಕರ ಪಾಟೀಲ ಎಂಬವರು ಗಾಯಗೊಂಡಿದ್ದಾರೆ. ಕರ್ನಾಟಕ-ಮಹಾರಾಷ್ಟ್ರ ಗಡಿ ಚೆಕ್‌ಪೋಸ್ಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿ ಭಾರೀ ಗಾಳಿಯಿಂದಾಗಿ ರಕ್ಷಣೆ ಪಡೆಯಲು ಶೆಡ್‌ ಒಳಗೆ ಆಶ್ರಯಪಡೆದಿದ್ದರು. ಆಗ ಗಾಳಿ ರಭಸಕ್ಕೆ ಶೆಡ್‌ ಕೂಡ ಹಾರಿ ಹೋಗಿದ್ದರಿಂದ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಚುನಾವಣಾ ಸಿಬ್ಬಂದಿ ಹೈರಾಣು: 

ಹುಬ್ಬಳ್ಳಿ, ವಿಜಯನಗರ ಜಿಲ್ಲೆಯ ಹೂವಿನಹಡಗಲಿಗಳಲ್ಲಿ ಚುನಾವಣಾ ಮಸ್ಟರಿಂಗ್‌ ಕೇಂದ್ರದಲ್ಲಿ ಹಾಕಿದ್ದ ಪೆಂಡಾಲ್‌ ಭಾರೀ ಮಳೆ, ಗಾಳಿಗೆ ಉರುಳಿಬಿದ್ದು ನೀರು ಸೋರಲಾರಂಭಿಸಿ ಸಿಬ್ಬಂದಿ ಪರದಾಡಬೇಕಾಯಿತು. ಸುಮಾರು 2 ಗಂಟೆಗೂ ಹೆಚ್ಚು ಕಾಲ ಸುರಿದ ಧಾರಾಕಾರ ಮಳೆಯಿಂದಾಗಿ ಚುನಾವಣೆ ಸಿಬ್ಬಂದಿ ತೊಯ್ದು ಹೋದರು. ಹಾಕಿದ್ದ ಕುರ್ಚಿ, ಕರ್ತವ್ಯಕ್ಕೆ ನೀಡಿದ್ದ ಪ್ಲಾಸ್ಟಿಕ್‌ ರಟ್ಟುಗಳನ್ನೇ ತಲೆ ಮೇಲೆ ಇಟ್ಟಿಕೊಂಡು ಓಡಿದರು. ಕಟ್ಟಡದ ಒಳಗಡೆ ಹೋಗಲು ಯತ್ನಿಸಿದರು. ಇದರಿಂದ ಕೆಲಕಾಲ ಮಸ್ಟರಿಂಗ್‌ ಕಾರ್ಯ ಸ್ಥಗಿತಗೊಂಡಿತು. ಮಳೆ ನಿಂತ ಬಳಿಕ ಮುಂದುವರಿಸಲಾಯಿತು. ಮಳೆಯಲ್ಲಿಯೇ ನಿಂತು ಊಟ ಮಾಡಿದರು. ಹುಬ್ಬಳ್ಳಿ ನಗರದಲ್ಲಂತು ಭಾರೀ ಗಾಳಿ-ಮಳೆಯಿಂದಾಗಿ ತಗ್ಗುಪ್ರದೇಶಗಳಲ್ಲಿ ಕೆಲವೆಡೆ ನೀರು ನಿಂತು ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ಹಲವು ವಾಹನಗಳು ನೀರಿನಲ್ಲಿ ಮುಳುಗಿ ಸಮಸ್ಯೆ ಎದುರಿಸಬೇಕಾಯಿತು.