ಬೆಂಗಳೂರು(ಏ.27): ಕಳೆದ ಕೆಲ ದಿನಗಳಿಂದ ಭಾರಿ ಸಂಖ್ಯಾ ಸ್ಫೋಟದ ಮೂಲಕ ಆತಂಕ ಹುಟ್ಟಿಸಿದ್ದ ಕೊರೋನಾ ಭಾನುವಾರ ಕೊಂಚ ಬಿಡುವು ನೀಡಿದಂತಿದೆ. ಭಾನುವಾರ ಸಂಜೆವರೆಗಿನ 24 ಗಂಟೆಗಳಲ್ಲಿ ಕೇವಲ ಮೂರು ಮಂದಿಗೆ ಮಾತ್ರ ಸೋಂಕು ದೃಢಪಟ್ಟಿದೆ. ಇದರಿಂದಾಗಿ ಶನಿವಾರ 500 ಇದ್ದ ಸೋಂಕಿತರ ಸಂಖ್ಯೆ ಭಾನುವಾರ 503ಕ್ಕೆ ತಲುಪಿದೆ. ಕಲಬುರಗಿಯಲ್ಲಿ 2 ಮತ್ತು ದಕ್ಷಿಣ ಕನ್ನಡದಲ್ಲಿ 1 ಪ್ರಕರಣಗಳು ಭಾನುವಾರ ಪತ್ತೆಯಾಗಿವೆ. ಇದೇ ವೇಳೆ ಭಾನುವಾರ ರಾಜ್ಯದಲ್ಲಿ ದಾಖಲೆಯ 24 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ.

ಶನಿವಾರ ಸಂಜೆ 5 ಗಂಟೆಯಿಂದ ಭಾನುವಾರ ಸಂಜೆ 5 ಗಂಟೆವರೆಗೆ ಒಟ್ಟು 3,815 ಮಂದಿ ಶಂಕಿತರ ಗಂಟಲು ದ್ರವ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ 3319 ಮಂದಿ ವರದಿ ನೆಗೆಟಿವ್‌ ಬಂದಿದೆ. ಕಲಬುರಗಿಯ ಇಬ್ಬರು ಹಾಗೂ ಮಂಗಳೂರಿನ ಒಬ್ಬರಿಗೆ ಸೋಂಕು ದೃಢಪಟ್ಟಿದೆ. ಉಳಿದ ವರದಿಗಳ ಫಲಿತಾಂಶ ಇನ್ನೂ ಬಂದಿಲ್ಲ.

ಲಾಕ್‌ಡೌನ್ ಮತ್ತೆ ಮುಂದುವರೆಸಿ: ಆರು ರಾಜ್ಯಗಳಿಂದ ಮೋದಿಗೆ ಮನವಿ!

ದಕ್ಷಿಣ ಕನ್ನಡದಲ್ಲಿ 47 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ. ದಕ್ಷಿಣ ಕನ್ನಡದಲ್ಲಿ ಇತ್ತೀಚೆಗೆ ಸೋಂಕಿನಿಂದ ಮೃತಪಟ್ಟಿದ್ದ ಮಹಿಳೆಯಿಂದ ಪ್ರಾಥಮಿಕ ಸಂಪರ್ಕದಲ್ಲಿದ್ದ 78 ವರ್ಷದ ವೃದ್ಧೆಗೆ ಸೋಂಕು ತಗುಲಿತ್ತು. ಈಗ ಆ ವೃದ್ದೆಯಿಂದ 47 ವರ್ಷದ ಮಹಿಳೆಗೆ ಸೋಂಕುಗೆ ಸೋಂಕು ಹರಡಿದೆ.

ಇನ್ನು ಕಲಬುರಗಿಯಲ್ಲಿ 57 ವರ್ಷದ ಸೋಂಕಿತ ವ್ಯಕ್ತಿ ಪ್ರಾಥಮಿಕ ಸಂಪರ್ಕ ಹೊಂದಿದ್ದ 65 ವರ್ಷದ ವೃದ್ಧೆಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಇತ್ತೀಚೆಗೆ ಕಲಬುರಗಿಯಲ್ಲಿ ಸಾವಿಗೀಡಾಗಿದ್ದ ಬಟ್ಟೆವ್ಯಾಪಾರಿ ಸಂಪರ್ಕದಿಂದ 19 ವರ್ಷದ ಯುವಕನಿಗೆ ಸೋಂಕು ಹಬ್ಬಿತ್ತು. ಆ ಯುವಕನಿಂದ 26 ವರ್ಷದ ಮಹಿಳೆಗೆ ಸೋಂಕು ಹರಡಿತ್ತು. ಈಗ ಮಹಿಳೆಯಿಂದ ಏಳು ವರ್ಷದ ಬಾಲಕನಿಗೆ ಮೂರನೇ ಹಂತದ ಸೋಂಕು ಹರಡಿದೆ. ಈ ಎಲ್ಲಾ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇವರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕ ಹೊಂದಿದ್ದ ವ್ಯಕ್ತಿಗಳನ್ನು ಪತ್ತೆ ಮಾಡಿ ಸರ್ಕಾರ ಸಾಮೂಹಿಕ ಕ್ವಾರಂಟೈನ್‌ಗೆ ಒಳಪಡಿಸಲಾಗಿದ್ದು, ಕಡ್ಡಾಯವಾಗಿ ಎಲ್ಲರ ಸೋಂಕು ಪರೀಕ್ಷೆ ಮಾಡಲಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

182 ಮಂದಿ ಗುಣಮುಖ:

182 ಗುಣಮುಖರಾಗಿ ಮನೆಗೆ ವಾಪಸಾಗಿದ್ದಾರೆ. 19 ಮಂದಿ ಮೃತಪಟ್ಟಿದ್ದು 302 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ 5 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಒಂದೇ ದಿನ 24 ಮಂದಿ ಗುಣಮುಖ: ದಾಖಲೆ

ರಾಜ್ಯದಲ್ಲಿ ಒಟ್ಟು ಸೋಂಕಿತರ ಪೈಕಿ ಭಾನುವಾರ 24 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ. ಒಂದೇ ದಿನ ಇಷ್ಟೊಂದು ಜನರು ರಾಜ್ಯದಲ್ಲಿ ಗುಣಮುಖರಾಗಿ ಬಿಡುಗಡೆ ಆಗಿದ್ದು ಇದೇ ಮೊದಲು. ಬೆಂಗಳೂರಿನಲ್ಲಿ 8, ಮೈಸೂರು, ಬಾಗಲಕೋಟೆ, ಮಂಡ್ಯದಲ್ಲಿ ತಲಾ ನಾಲ್ಕು ಮಂದಿ, ಬೆಳಗಾವಿ, ಬಳ್ಳಾರಿಯಲ್ಲಿ ತಲಾ ಇಬ್ಬರು ಚೇತರಿಸಿಕೊಂಡು ಮನೆಗೆ ತೆರಳಿದ್ದಾರೆ. ಇವರೆಲ್ಲರಿಗೂ ಮುಂದಿನ 14 ದಿನ ಮನೆಯಲ್ಲಿಯೇ ಕ್ವಾರೆಂಟೈನ್‌ನಲ್ಲಿರಲು ಸೂಚಿಸಲಾಗಿದೆ.

ಕೋವಿಡ್‌ ವಿರುದ್ಧ ಹೋರಾಟ: 'ಕೊರೋನಾ ಜಾತಿ, ಧರ್ಮ ನೋಡಿ ಬರುವುದಿಲ್ಲ'

ಕೊರೋನಾಗೆ ರಾಜ್ಯದಲ್ಲಿ ಮತ್ತೊಂದು ಸಾವು 

ಬೆಂಗಳೂರಿನ 45 ವರ್ಷದ ಕೊರೋನಾ ಸೋಂಕಿತ ಮಹಿಳೆ ಭಾನುವಾರ ಸಾವನ್ನಪ್ಪಿದ್ದು, ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 19ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಈವರೆಗೂ ಮೃತಪಟ್ಟ18 ಮಂದಿಯೂ 50 ವರ್ಷ ಮೇಲ್ಪಟ್ಟವಯಸ್ಸಿನವರು. ಇದೇ ಮೊದಲ ಬಾರಿಗೆ 50 ವರ್ಷದೊಳಗಿನವರಲ್ಲೂ ಸಾವು ಸಂಭವಿಸಿದಂತಾಗಿದೆ.

ಭಾನುವಾರ ಮೃತಪಟ್ಟಬೆಂಗಳೂರಿನ 45 ವರ್ಷದ ಮಹಿಳೆಯು ತೀವ್ರ ಉಸಿರಾಟ ತೊಂದರೆ (ಸಾರಿ) ಹಿನ್ನೆಲೆಯುಳ್ಳವರಾಗಿದ್ದು, ಈ ಸಮಸ್ಯೆ ಮುಚ್ಚಿಟ್ಟು ರಕ್ತ ಸ್ರಾವ ಕಾರಣ ನೀಡಿ ಮೂಡಲಪಾಳ್ಯ ಬಿಬಿಎಂಪಿ ಹೆರಿಗೆ ಆಸ್ಪತ್ರೆಗೆ ತೆರಳಿ ತಪಾಸಣೆ ಮಾಡಿಸಿಕೊಂಡಿದ್ದರು. ಬಳಿಕ ತೀವ್ರ ಉಸಿರಾಟ ಸಮಸ್ಯೆ ಹಾಗೂ ನ್ಯುಮೋನಿಯಾ ಕಾಣಿಸಿಕೊಂಡ ಹಿನ್ನೆಲೆ ಆಕೆಯನ್ನು ಕೊರೊನಾ ಸೋಂಕು ಪರೀಕ್ಷೆಗೆ ರಾಜೀವ್‌ಗಾಂಧಿ ಆಸ್ಪತ್ರೆಗೆ ಶಿಫಾರಸು ಮಾಡಿಲಾಗಿತ್ತು. ಏ.24 ರಂದು ಸೋಂಕು ತಗುಲಿರುವುದು ಪರೀಕ್ಷೆಯಿಂದ ಖಚಿತಪಟ್ಟಿತ್ತು.

ಕೂಡಲೇ ಅಲ್ಲಿಂದ ಕೊರೊನಾ ವಿಶೇಷ ಆಸ್ಪತ್ರೆಯಾದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಮಹಿಳೆಗೆ ಮಧುಮೇಹ ಹಾಗೂ ಕ್ಷಯರೋಗವು ಇದ್ದು, ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ನಿಧನರಾಗಿದ್ದಾರೆ.