ಕರಾವಳಿ, ಮಲೆನಾಡಲ್ಲಿ ವರುಣನ ಅಬ್ಬರ: ಇನ್ನು ಮೂರು ದಿನ ಭಾರೀ ಮಳೆ ಸಾಧ್ಯತೆ
ತುಂಬಿ ಹರಿಯುತ್ತಿರುವ ತುಂಗೆ, ಭದ್ರೆ| ಬೆಂಗಳೂರಲ್ಲೂ ವರುಣನ ಅಬ್ಬರ| ಕಳೆದ 24 ಗಂಟೆಗಳಲ್ಲಿ ಚಿಕ್ಕಮಗಳೂರು ಜಿಲ್ಲೆ ಕೊಟ್ಟಿಗೆಹಾರದಲ್ಲಿ 15 ಸೆಂ.ಮೀ., ಕೊಡಗು ಜಿಲ್ಲೆ ಭಾಗಮಂಡಲದಲ್ಲಿ 13 ಸೆಂ.ಮೀ., ಉಡುಪಿ ಜಿಲ್ಲೆಯ ಕೊಲ್ಲೂರು ಮತ್ತು ಶಿವಮೊಗ್ಗ ಜಿಲ್ಲೆಯ ಹುಂಚದಕಟ್ಟೆಯಲ್ಲಿ ತಲಾ 7 ಸೆಂ.ಮೀ. ಮಳೆಯಾಗಿರುವುದು ದಾಖಲು|
ಬೆಂಗಳೂರು(ಜು.09): ರಾಜಧಾನಿ ಬೆಂಗಳೂರು ಸೇರಿದಂತೆ ಪಶ್ಚಿಮ ಘಟ್ಟಪ್ರದೇಶ ಮತ್ತು ಕರಾವಳಿ ಭಾಗ ವಿವಿಧೆಡೆ ಬುಧವಾರ ಉತ್ತಮ ಮಳೆಯಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ತುಂಗೆ, ಭದ್ರೆ, ಶರಾವತಿ ನದಿಗಳು ತುಂಬಿ ಹರಿಯುತ್ತಿವೆ. ತುಂಗಾ ಜಲಾನಯನ ಪ್ರದೇಶದಲ್ಲಿ ನದಿ ನೀರಿನ ಹರಿವು ಹೆಚ್ಚಿದೆ. ಇನ್ನು ಉತ್ತರ ಕನ್ನಡ ಜಿಲ್ಲೆ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಭರ್ಜರಿ ಮಳೆಯಾಗಿದ್ದು, ನದಿಗಳು ತುಂಬಿ ಹರಿಯುತ್ತಿವೆ.
ಮಂಗಳವಾರಕ್ಕೆ ಹೋಲಿಸಿದರೆ ಕೊಡಗು ಜಿಲ್ಲೆಯಲ್ಲಿ ಮಳೆ ಸ್ವಲ್ಪ ಪ್ರಮಾಣದಲ್ಲಿ ಇಳಿಮುಖವಾಗಿದೆ. ಭಾರಿ ಮಳೆಯಿಂದ ಜಲಾವೃತಗೊಂಡಿದ್ದ ಭಾಗಮಂಡಲದ ನಾಪೋಕ್ಲು-ಅಯ್ಯಂಗೇರಿ ರಸ್ತೆಯಲ್ಲಿ ಪ್ರವಾಹ ಇಳಿಮುಖವಾಗಿದ್ದು, ವಾಹನಗಳು ಸಂಚರಿಸುತ್ತಿದೆ. ಭಾಗಮಂಡಲ-ತಲಕಾವೇರಿಯ ಚೇರಂಗಾಲ ಸಮೀಪದಲ್ಲಿ ಭೂಕುಸಿತದಿಂದ ರಸ್ತೆಯಲ್ಲಿ ತುಂಬಿದ್ದ ಮಣ್ಣನ್ನು ತೆರವುಗೊಳಿಸಿ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಜಿಲ್ಲೆಯಲ್ಲಿ ರೆಡ್ ಅಲರ್ಟ್ ಮುಂದುವರೆಸಲಾಗಿದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಸಾಧಾರಣ, ಧಾರವಾಡ, ಗದಗ, ದಾವಣಗೆರೆ, ಚಿಕ್ಕಮಗಳೂರು, ಬಾಗಲಕೋಟೆಯ ಜಿಲ್ಲೆಯಲ್ಲಿ ತುಂತುರು ಮಳೆ ಸುರಿದಿದೆ. ಬೆಂಗಳೂರಿನಲ್ಲಿ ಮಧ್ಯಾಹ್ನದ ವೇಳೆ ಆರಂಭವಾದ ಮಳೆ ರಾತ್ರಿವರೆಗೂ ಧಾರಾಕಾರವಾಗಿ ಸುರಿದಿದೆ.
ವಿಜಯಪುರದಲ್ಲಿ ಭಾರೀ ಮಳೆ: ಪರೀಕ್ಷೆಗೆ ತೆರಳಲು SSLC ವಿದ್ಯಾರ್ಥಿಯ ಪರದಾಟ
ಕರಾವಳಿ, ಮಲೆನಾಡಿನಲ್ಲಿ 3 ದಿನ ಭಾರಿ ಮಳೆ ಮುನ್ಸೂಚನೆ
ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅರಬ್ಬಿ ಸಮುದ್ರದ ಮೇಲ್ಮೈ ಸುಳಿಗಾಳಿಯಿಂದಾಗಿ ಕರಾವಳಿ ಹಾಗೂ ಮಲೆನಾಡಿನಲ್ಲಿ ಭಾರಿ ಮಳೆಯಾಗಲಿದೆ. ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ಐದು ದಿನಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ . ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನುಳಿದಂತೆ ರಾಜ್ಯದ ಉತ್ತರ ಮತ್ತು ದಕ್ಷಿಣ ಒಳನಾಡಿಲ್ಲಿ ಸಾಧಾರಣ ಮಳೆಯಾಗಲಿದೆ. ಬೆಂಗಳೂರು ನಗರ ಸೇರಿದಂತೆ ಸುತ್ತ ಮುತ್ತಲ ಜಿಲ್ಲೆಗಳಲ್ಲಿ ಚದುರಿದಂತೆ ಸಾಧಾರಣ ಮಳೆಯಾಗಲಿದ್ದು, ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಹಗುರವಾದ ಮಳೆಯಾಗಲಿದೆ.
ಕಳೆದ ಮೂರು ದಿನಗಳಿಂದ ಕೊಡಗು, ಮಡಿಕೇರಿ, ಮಂಗಳೂರು, ಶಿವಮೊಗ್ಗ ಸೇರಿದಂತೆ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಹೆಚ್ಚಿನ ಮಳೆ ಸುರಿಯುತ್ತಿದೆ. ಇದು ಇನ್ನು ಮೂರು ದಿನಗಳ ಕಾಲ ಮುಂದುವರೆಯಲಿದೆ. ಜೊತೆಗೆ,
ಅರಬ್ಬೀ ಸಮುದ್ರ ತೀರ ಪ್ರದೇಶಗಳಲ್ಲಿ ಸುಮಾರು 50 ಕಿಮೀ. ವೇಗದಲ್ಲಿ ಗಾಳಿ ಬೀಸಲಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.
ಕೊಟ್ಟಿಗೆಹಾರದಲ್ಲಿ 15 ಸೆಂ.ಮೀ.:
ಕಳೆದ 24 ಗಂಟೆಗಳಲ್ಲಿ ಚಿಕ್ಕಮಗಳೂರು ಜಿಲ್ಲೆ ಕೊಟ್ಟಿಗೆಹಾರದಲ್ಲಿ 15 ಸೆಂ.ಮೀ., ಕೊಡಗು ಜಿಲ್ಲೆ ಭಾಗಮಂಡಲದಲ್ಲಿ 13 ಸೆಂ.ಮೀ., ಉಡುಪಿ ಜಿಲ್ಲೆಯ ಕೊಲ್ಲೂರು ಮತ್ತು ಶಿವಮೊಗ್ಗ ಜಿಲ್ಲೆಯ ಹುಂಚದಕಟ್ಟೆಯಲ್ಲಿ ತಲಾ 7 ಸೆಂ.ಮೀ. ಮಳೆಯಾಗಿರುವುದು ದಾಖಲಾಗಿದೆ.