ಸರ್ಕಾರಿ ಉದ್ಯೋಗಾಕಾಂಕ್ಷಿಗಳು ಶುದ್ಧಹಸ್ತರು, ಪ್ರಾಮಾಣಿಕರಾಗಿರಬೇಕು: ಹೈಕೋರ್ಟ್
ಭಾರತೀಯ ರೈಲ್ವೆ ಮಂಡಳಿಯ ನೇಮಕ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆಸಿದ ಆರೋಪದ ಮೇಲೆ ಅರ್ಹತಾ ಪಟ್ಟಿಯಿಂದ ತೆಗೆದು ಹಾಕಿರುವ ಕ್ರಮವನ್ನು ಪುರಸ್ಕರಿಸಿದ್ದ ಕೇಂದ್ರೀಯ ಆಡಳಿತಾತ್ಮಕ ನ್ಯಾಯಾಧಿಕರಣದ (ಸಿಎಟಿ) ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ಎತ್ತಿಹಿಡಿದಿದೆ.
ಬೆಂಗಳೂರು (ಜೂ.24): ಭಾರತೀಯ ರೈಲ್ವೆ ಮಂಡಳಿಯ ನೇಮಕ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆಸಿದ ಆರೋಪದ ಮೇಲೆ ಅರ್ಹತಾ ಪಟ್ಟಿಯಿಂದ ತೆಗೆದು ಹಾಕಿರುವ ಕ್ರಮವನ್ನು ಪುರಸ್ಕರಿಸಿದ್ದ ಕೇಂದ್ರೀಯ ಆಡಳಿತಾತ್ಮಕ ನ್ಯಾಯಾಧಿಕರಣದ (ಸಿಎಟಿ) ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ಎತ್ತಿಹಿಡಿದಿದೆ. ಹುಬ್ಬಳ್ಳಿಯ ಜಿ.ರಾಜೇಶ್ ಮತ್ತು ವಿ.ಜಿ. ಪ್ರಕಾಶ್ ಹೈಕೋರ್ಟ್‌ಗೆ ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಿರುವ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ, ಸರ್ಕಾರಿ ಉದ್ಯೋಗದ ಆಕಾಂಕ್ಷಿಗಳು ಶುದ್ಧಹಸ್ತರು ಹಾಗೂ ಪ್ರಾಮಾಣಿಕರಾಗಿ ಇರಬೇಕು. ಯಾವುದೇ ರೀತಿಯ ಆಮಿಷಗಳಿಗೆ ಒಳಗಾಗಿ ಕಳಂಕಿತರಾಗಿರಬಾರದು.
ಆಕಾಂಕ್ಷಿಗಳು ನೇಮಕಾತಿ ಅಕ್ರಮ ಅವ್ಯವಹಾರದಲ್ಲಿ ಭಾಗಿಯಾದರೆ, ಅವರಿಗೆ ನ್ಯಾಯಾಲಯಗಳು ಒಲವು ತೋರಲು ಸಾಧ್ಯವಿಲ್ಲ. ನೇಮಕಾತಿ ಪ್ರಕ್ರಿಯೆ ಭಾಗವಾದ ಪರೀಕ್ಷೆಯಲ್ಲಿ ಅಕ್ರಮಗಳು ನಡೆದಿರುವ ಬಗ್ಗೆ ಸಮಂಜಸವಾದ ವಿಚಾರಣೆಯಿಂದ ಸತ್ಯಾಂಶ ತಿಳಿದ ನಂತರ ಉದ್ಯೋಗ ನೀಡುವ ಸಂಸ್ಥೆಗಳು ಎಡವಬಾರದು ಎಂದು ಅಭಿಪ್ರಾಯಪಟ್ಟಿದೆ. ಅಲ್ಲದೆ, 2013ರ ಭಾರತೀಯ ರೈಲ್ವೆ ನೇಮಕ ಪ್ರಕ್ರಿಯೆಯ ಅಕ್ರಮಗಳಲ್ಲಿ ತೊಡಗಿರುವುದು ತನಿಖೆಯಲ್ಲಿ ಕಂಡುಬಂದ ಹಿನ್ನೆಲೆಯಲ್ಲಿ ಅರ್ಜಿದಾರರನ್ನು ಅರ್ಹತೆಯ ಪಟ್ಟಿಯಿಂದ ತೆಗೆದುಹಾಕಿದ್ದ ಕ್ರಮವನ್ನು ಪುರಸ್ಕರಿಸಿದೆ.
ಸಹೋದ್ಯೋಗಿ ಪತ್ನಿ ಮೇಲೆ ಅತ್ಯಾಚಾರ ಆರೋಪ: CISF ಕಾನ್ಸ್‌ಟೇಬಲ್ಸ್ ವಜಾ ಎತ್ತಿ ಹಿಡಿದ ಕರ್ನಾಟಕ ಹೈಕೋರ್ಟ್
ಪ್ರಕರಣದ ವಿವರ: ಭಾರತೀಯ ರೈಲ್ವೆ ಇಲಾಖೆ 2013ರಲ್ಲಿ ನಡೆಸಿದ್ದ ನೇಮಕ ಪ್ರಕ್ರಿಯೆಯಲ್ಲಿ ವ್ಯಾಪಕ ಅವ್ಯವಹಾರ ಕಂಡುಬಂದ ಹಿನ್ನೆಲೆಯಲ್ಲಿ ತನಿಖೆ ನಡೆಸುವಂತೆ ರೈಲ್ವೆ ಇಲಾಖೆ 2015ರಲ್ಲಿ ಕೇಂದ್ರ ತನಿಖಾ ಸಂಸ್ಥೆ (ಸಿಬಿಐ)ಗೆ ಪತ್ರ ಬರೆದಿತ್ತು. ಅದನ್ನು ಆಧರಿಸಿ ತನಿಖೆ ನಡೆಸಿದ್ದ ಸಿಬಿಐ, ಜಿ.ರಾಜೇಶ್ ಮತ್ತು ವಿ.ಜಿ.ಪ್ರಕಾಶ್ ಅಕ್ರಮ ಆರೋಪದಲ್ಲಿ ಭಾಗಿಯಾಗಿರುವುದಾಗಿ ವರದಿ ನೀಡಿತ್ತು. ಈ ಮಧ್ಯೆ ಅವರು ವೈದ್ಯಕೀಯ ಪರೀಕ್ಷೆಯಲ್ಲಿ ಅರ್ಹತೆ ಮತ್ತು ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ನೇಮಕಾತಿ ಅರ್ಹತಾ ಪಟ್ಟಿಯಲ್ಲಿ ಹೆಸರು ಗಿಟ್ಟಿಸಿಕೊಂಡಿದ್ದರು.
ಮಹಿಳೆಯರ ಜೀವನಾಂಶ ಅರ್ಜಿ 6 ತಿಂಗಳಲ್ಲಿ ಇತ್ಯರ್ಥಕ್ಕೆ ಆದೇಶ: ಹೈಕೋರ್ಟ್
ಸಿಬಿಐ ವರದಿ ಆಧರಿಸಿದ ರೈಲ್ವೆ ನೇಮಕಾತಿ ಮಂಡಳಿಯು ಅರ್ಜಿದಾರರ ಹೆಸರನ್ನು ಅರ್ಹತಾ ಪಟ್ಟಿಯಿಂದ ಕೈಬಿಟ್ಟಿತ್ತು. ಈ ಕ್ರಮ ಪ್ರಶ್ನಿಸಿ ಅವರು ಕೇಂದ್ರೀಯ ಆಡಳಿತ ನ್ಯಾಯಮಂಡಳಿಗೆ (ಸಿಎಟಿ) ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗಳನ್ನು ಸಿಎಟಿ ವಜಾಗೊಳಿಸಿದ್ದರಿಂದ ಅವರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಹೈಕೋರ್ಚ್ ಸಹ ಸಿಎಟಿ ಆದೇಶವನ್ನು ಪುರಸ್ಕರಿಸಿ, ಸಿಬಿಐನಂತಹ ಪರಿಣತ ಸಂಸ್ಥೆ ಸೂಕ್ತ ತನಿಖೆ ನಡೆಸಿ ಕೆಲವು ಅಭ್ಯರ್ಥಿಗಳು ಮೇಲ್ನೋಟಕ್ಕೆ ಅಕ್ರಮ ಎಸಗಿರುವುದನ್ನು ಪತ್ತೆ ಹಚ್ಚಿದೆ. ಅಂತಹವರನ್ನು ಸರ್ಕಾರಿ ಸೇವೆಗೆ ಸೇರಿಸುವುದು ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟಿದೆ.