ವೆಂಕಟೇಶ್‌ ಕಲಿಪಿ

ಬೆಂಗಳೂರು(ಡಿ.29): ಅಪರಾಧ ಕೃತ್ಯ ನಡೆದ ಸ್ಥಳದಲ್ಲಿ ಇರುವ ಎಲ್ಲರೂ ಅಕ್ರಮ ಕೂಟದ ಸದಸ್ಯರು ಎಂದು ಹೇಳಲಾಗದು,ಅಕ್ರಮ ಕೂಟ ಸದಸ್ಯರು ಎಂದು ಪರಿಗಣಿಸಬೇಕಾದರೆ ಸಂಬಂಧಪಟ್ಟಘಟನೆಯಲ್ಲಿ ಅವರು ಯಾವುದಾದರೂ ಅಪರಾಧ ಕೃತ್ಯ ಎಸಗಿರಬೇಕು ಅಥವಾ ಅಪರಾಧ ಕೃತ್ಯ ಎಸಗಲು ಮುಂದಾಗಿರಬೇಕು ಎಂದು ಹೈಕೋರ್ಟ್‌ ತೀರ್ಪು ನೀಡಿದೆ.

ಅಪರಾಧ ಕೃತ್ಯ ನಡೆದ ಸ್ಥಳದಲ್ಲಿರುವವರೆಲ್ಲರೂ ಅಕ್ರಮ ಕೂಟ ಸದಸ್ಯರೆಲ್ಲರೂ ತಪ್ಪಿತ್ಥರು ಎಂಬುದಾಗಿ ಪ್ರತಿಪಾದಿಸುವ ಭಾರತೀಯ ದಂಡ ಸಂಹಿತೆ-1860ರ ಸೆಕ್ಷನ್‌ 149 ಅನ್ನು ಪ್ರಾಸಿಕ್ಯೂಷನ್‌ ಮತ್ತು ತನಿಖಾ ಸಂಸ್ಥೆಗಳು ದುರ್ಬಳಕೆ ಮಾಡುತ್ತಿರುವುದಾಗಿ ಅಭಿಪ್ರಾಯಪಟ್ಟಿರುವ ಹೈಕೋರ್ಟ್‌, ಸೆಕ್ಷನ್‌ 149 ಪ್ರಯೋಗಿಸುವ ವೇಳೆ ತನಿಖಾ ಸಂಸ್ಥೆಗಳು ಸಮರ್ಪಕ ತನಿಖೆ ನಡೆಸಬೇಕು ಎಂದು ತೀರ್ಪಿನಲ್ಲಿ ಹೇಳಿದೆ.

ಕೊಲೆ ಪ್ರಕರಣವೊಂದರಲ್ಲಿ ಕೊಲೆಗಾರನ ಜೊತೆಗಿದ್ದ ನಾಲ್ವರು ಆರೋಪಿಗಳಿಗೆ ಅಧೀನ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿರುವುದಕ್ಕೆ ಸಂಬಂಧಿಸಿದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವೀರಪ್ಪ ಮತ್ತು ನ್ಯಾಯಮೂರ್ತಿ ಕೆ.ನಟರಾಜನ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ಮಾಡಿದೆ.

ಗಲಭೆ ಹಾಗೂ ದೊಂಬಿ ಪ್ರಕರಣಗಳು ನಡೆದಾಗ ಸ್ಥಳದಲ್ಲಿದ್ದ ಅಮಾಯಕರ ಮೇಲೆ ಅಕ್ರಮ ಕೂಟ ಸೇರಿದ ಆರೋಪದಡಿ ಪ್ರಕರಣ ದಾಖಲಿಸಿ ಕಿರುಕುಳ ನೀಡುತ್ತಿರುವ ಬಗ್ಗೆ ಮಾತುಗಳು ಕೇಳಿಬರುತ್ತವೆ. ಕೇವಲ ಘಟನಾ ಸ್ಥಳದಲ್ಲಿದ್ದು, ಏನು ನಡೆಯುತ್ತಿದೆ ಎಂದು ವೀಕ್ಷಿಸುತ್ತಿರುವ ಅಮಾಯಕರನ್ನೂ ಅಕ್ರಮ ಕೂಟದ ಸದಸ್ಯರಾಗಿರುವ ಪ್ರಕರಣದಲ್ಲಿ ಸಿಲುಕಿಸಲಾಗುತ್ತಿದೆ. ಆ ಮೂಲಕ ತನಿಖಾ ಮತ್ತು ಪ್ರಾಸಿಕ್ಯೂಷನ್‌ ಏಜೆನ್ಸಿಗಳು ಐಪಿಸಿ ಸೆಕ್ಷನ್‌ 149 ಅನ್ನು ದುರ್ಬಳಕೆ ಮಾಡುತ್ತಿವೆ. ಸಂವಿಧಾನದ ದತ್ತವಾಗಿ ಜನರಿಗೆ ದೊರೆತ ಸಮಾನತೆ, ವಾಕ್‌ ಸ್ವಾತಂತ್ರ್ಯ ಮತ್ತು ಜೀವಿಸುವ ಹಕ್ಕನ್ನು ಮೊಟಕುಗೊಳಿಸಲಾಗುತ್ತಿದೆ ಎಂದು ಹೈಕೋರ್ಟ್‌ ಆದೇಶದಲ್ಲಿ ತಿಳಿಸಿದೆ.

ದುರ್ಬಳಕೆಗೆ ಅವಕಾಶ ಬೇಡ:

ಅಕ್ರಮ ಕೂಟ ಪ್ರಕರಣ ದಾಖಲಿಸುವಾಗ ತನಿಖಾ ಸಂಸ್ಥೆಗಳು ಸಮರ್ಪಕ ತನಿಖೆ ನಡೆಸಬೇಕು. ಇಲ್ಲವಾದರೆ ಸ್ವಹಿತಾಸಕ್ತಿ ವ್ಯಕ್ತಿಗಳು ದ್ವೇಷ, ಅಸೂಯೆಯಿಂದ ಸ್ಥಳೀಯ ರಾಜಕಾರಣಿಗಳ ಪ್ರಭಾವ ಬಳಸಿ ಅಮಾಯಕ ವ್ಯಕ್ತಿಗಳನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲು ಕಾತುರರಾಗಿರುತ್ತಾರೆ. ಅದೇ ರೀತಿ ನ್ಯಾಯಾಲಯಗಳು ಸಹ ಕೊಲೆ ಯತ್ನ, ಕೊಲೆ ಮತ್ತು ಅಕ್ರಮ ಕೂಟ ಪ್ರಕರಣಗಳ ವಿಚಾರಣೆ ವೇಳೆ ಸೂಕ್ತ ಸಾಕ್ಷ್ಯಗಳೊಂದಿಗೆ ಸಮರ್ಪಕ ವಿಶ್ಲೇಷಣೆ ಮಾಡಬೇಕು. ಅಕ್ರಮ ಕೂಟದಂತಹ ಸಣ್ಣ ಪ್ರಕರಣದಲ್ಲಿ ಪ್ರತ್ಯೇಕವಾಗಿ ಶಿಕ್ಷೆ ವಿಧಿಸಬೇಕು ಎಂದು ಆದೇಶಿಸಿದೆ.

ಪ್ರಕರಣವೇನು?

ಮಂಗಳೂರಿನ ಪ್ರದೀಪ್‌ ಮತ್ತು ಆತನ ಸ್ನೇಹಿತರಾದ ಮಂಜುನಾಥ್‌, ಸಂತೋಷ್‌ ಮತ್ತು ಕುಮಾರ ಅವರನ್ನು 2012ರ ಜೂ.15ರಂದು ರಾತ್ರಿ 11ರ ವೇಳೆ ಸಂತೋಷ್‌ ಪೂಜಾರಿ, ಗೌರೀಶ್‌, ಹರ್ಷರಾಜ್‌, ಗೌತಮ್‌ ಮತ್ತು ಆರೋಪಿ ಅಕ್ಷಯ್‌ ಎಂಬುವರು ಎರಡು ಕಾರು ಮತ್ತು ಬೈಕ್‌ನಲ್ಲಿ ಬಂದು ಅಡ್ಡಗಟ್ಟಿಹಲ್ಲೆ ನಡೆಸಿದ್ದರು. ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಸಂತೋಷ್‌ ಪೂಜಾರಿ ಚಾಕುವಿನಿಂದ ಇರಿದ ಪರಿಣಾಮ ಕುಮಾರ್‌ ಸಾವನ್ನಪ್ಪಿದ್ದರು.

ಇದರಿಂದ ಅಕ್ರಮ ಕೂಟ, ಗಲಭೆ, ಕೊಲೆ, ಹಲ್ಲೆ ಮತ್ತು ಪ್ರಚೋದನೆ ಪ್ರಕರಣದಡಿ ಐವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ದಕ್ಷಿಣ ಕನ್ನಡ ಜಿಲ್ಲೆಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ (ಮಂಗಳೂರು) ನ್ಯಾಯಾಲಯ 2015ರ ಏ.24ರಂದು ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ ಐವರೂ ಮೇಲ್ಮನವಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್‌, ಸಂತೋಷ್‌ ಪೂಜಾರಿ ಚಾಕುವಿನಿಂದ ಇರಿದ ಪರಿಣಾಮ ಕುಮಾರ್‌ ಸಾವನ್ನಪ್ಪಿದ್ದಾನೆ. ಇದು ಪೂರ್ವ ಯೋಜಿತ ಕೃತ್ಯವಲ್ಲ. ದಿಢೀರ್‌ ನಡೆದ ಘಟನೆ ಎಂದು ತೀರ್ಮಾನಿಸಿ ಆತನಿಗೆ ವಿಧಿಸಲಾಗಿದ್ದ ಜೀವಾವಧಿ ಶಿಕ್ಷೆ ರದ್ದುಪಡಿಸಿ 9 ವರ್ಷ ಜೈಲು ಶಿಕ್ಷೆ ನೀಡಿತು. ಘಟನೆ ನಡೆದಾಗ ಪೂಜಾರಿ ಜೊತೆಗೆ ಉಳಿದ ನಾಲ್ವರು ಜೊತೆಗಿದ್ದರೇ ಹೊರತು ಅಪರಾಧ ಕೃತ್ಯದಲ್ಲಿ ಭಾಗಿಯಾಗಿಲ್ಲ. ಸ್ಥಳದಲ್ಲಿ ಹಾಜರಿದ್ದ ಮಾತ್ರಕ್ಕೆ ವ್ಯಕ್ತಿಯು ಅಕ್ರಮ ಕೂಟದ ಸದಸ್ಯರಾಗಿದ್ದಾರೆ ಎಂದು ಹೇಳಲಾಗದು ಎಂದು ನಿರ್ಧರಿಸಿತು.

ನಂತರ ನಾಲ್ವರನ್ನೂ ಖುಲಾಸೆಗೊಳಿಸಿ ಜೀವಾವಧಿ ಶಿಕ್ಷೆ ರದ್ದುಪಡಿಸಿದ ಹೈಕೋರ್ಟ್‌, ಗಲಭೆ, ಪ್ರಚೋದನೆ, ಹಲ್ಲೆ ಪ್ರಕರಣಗಳಡಿ 13,500 ರು. ದಂಡ ವಿಧಿಸಿತು.