ಬೆಂಗಳೂರು[ಫೆ.03]: ದಶಕಗಳ ಕಾಲ ವಿದೇಶದಲ್ಲಿ ಅವಿತುಕೊಂಡು ಅಪರಾಧ ಕೃತ್ಯಗಳ ಮೂಲಕ ಸದ್ದು ಮಾಡುತ್ತಿದ್ದ ಭೂಗತ ಪಾತಕಿ ರವಿ ಪೂಜಾರಿ ಈಗ ಸಿಕ್ಕಿಬೀಳಲು ‘ಮಿಸ್ಡ್‌ ಕಾಲ್‌ಗಳು’ ಮಹತ್ವದ ಸುಳಿವು ನೀಡಿವೆ ಎಂಬ ಕುತೂಹಲಕಾರಿ ಸಂಗತಿ ಬೆಳಕಿಗೆ ಬಂದಿದೆ.

ಆಫ್ರಿಕಾದ ಬ್ಯುರ್ಕಿನಾ ಫಸೋ ದೇಶದಲ್ಲಿ ಉತ್ತರ ಪ್ರದೇಶ ಮೂಲದ ಇಬ್ಬರು ಅನಿವಾಸಿ ಭಾರತೀಯರ ಪಾಲುದಾರಿಕೆಯಲ್ಲಿ ಪೂಜಾರಿ ಉದ್ಯಮ ನಡೆಸುತ್ತಿದ್ದ. ಈ ಸ್ನೇಹಿತರು ಪೂಜಾರಿಯನ್ನು ಸಂಪರ್ಕಿಸಬೇಕಾದರೆ ಆತನ ಮೊಬೈಲ್‌ಗೆ ಮಿಸ್ಡ್‌ ಕಾಲ್‌ ನೀಡಬೇಕಿತ್ತು. ಬಳಿಕ ಗೆಳೆಯರಿಗೆ ವಾಯ್‌್ಸ ಓವರ್‌ ಇಂಟರ್‌ನೆಟ್‌ ಪ್ರೋಟೋಕಾಲ್‌ (ವಿಓಐಪಿ) ಕರೆ ಮಾಡಿ ಪೂಜಾರಿ ವ್ಯವಹರಿಸುತ್ತಿದ್ದ. ಮೊದಲಿನಿಂದಲೂ ವಿಓಐಪಿ ಮೂಲಕವೇ ಪೂಜಾರಿ ಕಡೆಯಿಂದ ಉದ್ಯಮಿಗಳು, ಚಲನಚಿತ್ರ ನಟರು, ನಿರ್ಮಾಪಕರು ಹಾಗೂ ರಾಜಕಾರಣಿಗಳಿಗೆ ಬೆದರಿಕೆ ಕರೆಗಳು ಬರುತ್ತಿದ್ದವು.

ಪೂಜಾರಿಯ ಬೇಟೆಗಿಳಿದ ಗುಪ್ತದಳ ಅಧಿಕಾರಿಗಳಿಗೆ ಆತನ ಗೆಳೆತನದಲ್ಲಿದ್ದ ಉತ್ತರ ಪ್ರದೇಶ ಮೂಲದ ಉದ್ಯಮಿಗಳ ಮಾಹಿತಿ ಸಿಕ್ಕಿತ್ತು. ಆ ಉದ್ಯಮಿಗಳ ಮೊಬೈಲ್‌ ಸಂಖ್ಯೆ ಕಲೆ ಹಾಕಿದ ಗುಪ್ತದಳವು, ನಿರಂತರವಾಗಿ ಅವರ ಮೇಲೆ ನಿಗಾವಹಿಸಿತ್ತು. ಆ ಇಬ್ಬರು ಉದ್ಯಮಿಗಳಿಂದ ಆಗಾಗ ಮಿಸ್ಡ್‌ ಕಾಲ್‌ ಹೋಗುತ್ತಿದ್ದ ನಿರ್ದಿಷ್ಟಮೊಬೈಲ್‌ ಸಂಖ್ಯೆಗಳು ಪತ್ತೆಯಾದವು. ಈ ಸುಳಿವು ಆಧರಿಸಿ ಕಾರ್ಯಾಚರಣೆ ಚುರುಕುಗೊಳಿಸಿದ ಇಂಟರ್‌ಪೋಲ್‌ ಮತ್ತು ಸೆನೆಗಲ್‌ನ ಸ್ಥಳೀಯ ಪೊಲೀಸರಿಗೆ ಪೂಜಾರಿಯ ಜಾಡು ಸಿಕ್ಕಿದೆ ಎಂದು ತಿಳಿದು ಬಂದಿದೆ.

ಎರಡು ವರ್ಷಗಳ ಹಿಂದೆ ವಿದೇಶದಲ್ಲಿ ಮತ್ತೊಬ್ಬ ಭೂಗತ ಪಾತಕಿ ಬನ್ನಂಜೆ ರಾಜನ ಬಂಧನ ಕಾರ್ಯಾಚರಣೆ ವೇಳೆಯಲ್ಲೇ ವಿಓಐಪಿ ಕರೆಗಳನ್ನು ಭೇದಿಸುವ ತಂತ್ರಗಾರಿಕೆಯು ಗುಪ್ತದಳ ಎಡಿಜಿಪಿ ಅಮರ್‌ ಕುಮಾರ್‌ ಪಾಂಡೆ ಅವರಿಗೆ ಲಭಿಸಿತ್ತು. ಹೀಗಾಗಿ ಪೂಜಾರಿ ಸ್ನೇಹಿತರ ವಿಓಐಪಿ ಕರೆಗಳ ಸಂಭಾಷಣೆಗಳನ್ನು ಪಡೆಯುವಲ್ಲಿ ಅವರು ಯಶಸ್ಸು ಕಂಡಿದ್ದಾರೆ ಎನ್ನಲಾಗಿದೆ.

ಸೆನೆಗಲ್‌ನಲ್ಲಿ ಪೂಜಾರಿ ಹೀರೋ:

ಆಂಟೋನಿ ಫರ್ನಾಂಡಿಸ್‌ ಹೆಸರಿನಲ್ಲಿ ಸೆನೆಗಲ್‌ನಲ್ಲಿ ಸಾಮಾಜಿಕ ಚಟುವಟಿಕೆಗಳನ್ನು ಪೂಜಾರಿ ನಡೆಸುತ್ತಿದ್ದ. ತನ್ನ ಹೆಸರಿನಲ್ಲಿ ಚಾರಿಟೆಬಲ್‌ ಟ್ರಸ್ಟ್‌ ಪ್ರಾರಂಭಿಸಿದ್ದ ಆತ, ಟ್ರಸ್ಟ್‌ ಮೂಲಕ ಜನರಿಗೆ ಆರ್ಥಿಕ ನೆರವು ನೀಡಿ ದಾನಶೂರ ಕರ್ಣನಂತೆ ಬಿಂಬಿತಗೊಂಡಿದ್ದ. ಈ ಸಾಮಾಜಿಕ ಕಾರ್ಯಗಳ ಸುದ್ದಿಗಳು ಪೂಜಾರಿ ಭಾವಚಿತ್ರ ಸಮೇತ ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದವು. ಇವುಗಳು ಸಹ ಪೂಜಾರಿಯ ಇರುವಿಕೆ ಕುರಿತು ಮಾಹಿತಿಯೊದಗಿಸಿವೆ. ಕೆಲ ದಿನಗಳ ಹಿಂದೆ ಲೋಕಲ್‌ ಕ್ರಿಕೆಟ್‌ ಟೂರ್ನ್‌ಮೆಂಟ್‌ನಲ್ಲಿ ಪೂಜಾರಿ ಕಾಣಿಸಿಕೊಂಡಿದ್ದ ಎಂದು ಮೂಲಗಳು ಹೇಳಿವೆ.

ವಿದೇಶಾಂಗ ಇಲಾಖೆಗೆ ದಾಖಲೆಗಳ ಸಲ್ಲಿಕೆ

ರವಿ ಪೂಜಾರಿ ವಿರುದ್ಧದ ಪ್ರಕರಣಗಳ ಕುರಿತು ದಾಖಲೆಗಳನ್ನು ವಿದೇಶಾಂಗ ಇಲಾಖೆಗೆ ರಾಜ್ಯ ಗುಪ್ತದಳ ಎಡಿಜಿಪಿ ಅಮರ್‌ ಕುಮಾರ್‌ ಪಾಂಡೆ ಶನಿವಾರ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.

ಮಧ್ಯಾಹ್ನ ವಿಮಾನದ ಮೂಲಕ ದೆಹಲಿಗೆ ತೆರಳಿದ ಎಡಿಜಿಪಿ, ರಾತ್ರಿ ವಿದೇಶಾಂಗ ಅಧಿಕಾರಿಗಳನ್ನು ಭೇಟಿಯಾಗಿ ಪೂಜಾರಿ ಗಡೀಪಾರಿನ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಪೂಜಾರಿ ವಿರುದ್ಧದ ದಾಖಲೆಗಳನ್ನು ಕನ್ನಡದಿಂದ ಫ್ರೆಂಚ್‌ ಭಾಷೆಗೆ ತರ್ಜುಮೆ ಮಾಡಿ ಹಸ್ತಾಂತರಿಸಲಾಗಿದೆ ಎಂದು ಮೂಲಗಳು ಹೇಳಿವೆ.

ತಾನು ಶ್ರೀಲಂಕಾ ಪ್ರಜೆ ಎಂದಿರುವ ಪೂಜಾರಿ

ಭೂಗತ ಪಾತಕಿ ರವಿ ಪೂಜಾರಿ ತಾನು ಶ್ರೀಲಂಕಾ ಪ್ರಜೆ ಎಂದು ಹೇಳಿಕೊಂಡಿದ್ದಾನೆ. ಹೀಗಾಗಿ ಆತ ನಿಜವಾಗಿಯೂ ಶ್ರೀಲಂಕಾ ಪ್ರಜೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಇಂಟರ್‌ಪೋಲ್‌ ಮತ್ತು ಗುಪ್ತದಳದ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ ಎಂದು ರಾಜ್ಯ ಗುಪ್ತದಳ ಮೂಲಗಳು ಹೇಳಿವೆ.

ಸೆನೆಗಲ್‌ ಮತ್ತು ಭಾರತದ ನಡುವೆ ಅಪರಾಧಿಗಳ ಹಸ್ತಾಂತರ ಪ್ರಕ್ರಿಯೆಗೆ ಒಪ್ಪಂದವಾಗಿಲ್ಲ. ಹೀಗಾಗಿ ಆತ ಶ್ರೀಲಂಕಾ ಪ್ರಜೆಯಾಗಿದ್ದರೆ ಮೊದಲು ಶ್ರೀಲಂಕಾಕ್ಕೆ ಹಸ್ತಾಂತರಿಸಿ ಬಳಿಕ ನಾವು ವಶಕ್ಕೆ ಪಡೆಯಲು ಅವಕಾಶವಿದೆ. ಈ ನಿಟ್ಟಿನಲ್ಲಿ ದಾಖಲೆಗಳ ಸಂಗ್ರಹ ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.