ರಾಮನಗರ[ಜ.23]: ಸಿದ್ಧಗಂಗಾ ಮಠದ ಪೀಠಾಧಿಪತಿ ಡಾ.ಶಿವಕುಮಾರ ಸ್ವಾಮೀಜಿ ಹುಟ್ಟೂರನ್ನು ಅಭಿವೃದ್ಧಿ ಪಡಿಸುವಲ್ಲಿ ರಾಮನಗರ ಜಿಲ್ಲಾಡಳಿತ ಸಂಪೂರ್ಣವಾಗಿ ವಿಫಲವಾಗಿದೆ. ಮಾಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವೀರಾಪುರ ಶಿವಕುಮಾರ ಸ್ವಾಮೀಜಿ ಅವರು ಹುಟ್ಟೂರು ವೀರಾಪುರ ಮತ್ತು ಬಾಲಗಂಗಾಧರನಾಥ ಸ್ವಾಮೀಜಿಗಳ ಹುಟ್ಟೂರು ಬಾನಂದೂರು ಅಭಿವೃದ್ಧಿಗೆ ರಾಜ್ಯ ಸರ್ಕಾರ ತಲಾ 10 ಕೋಟಿ ರುಪಾಯಿ ಬಿಡುಗಡೆ ಮಾಡಿತ್ತು. ಈ ಹಣವನ್ನು ಸದ್ಬಳಕೆ ಮಾಡುವಲ್ಲಿ ಜಿಲ್ಲಾಡಳಿತ ನಿರ್ಲಕ್ಷ್ಯ ತೋರಿದ ಹಿನ್ನೆಲೆಯಲ್ಲಿ ಆ ಅನುದಾನ ವಾಪಸ್‌ ಸರ್ಕಾರದ ಖಜಾನೆ ಸೇರಿದೆ.

ಸುವರ್ಣ ಗ್ರಾಮೋದಯ ಯೋಜನೆಯಡಿ ಮೂಲ ಸೌಕರ್ಯ ಒದಗಿಸಿ, ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ರಾಜ್ಯ ಸರ್ಕಾರ 2015-16ನೇ ಸಾಲಿನಲ್ಲಿ ಜಿಪಂ ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ವಿಭಾಗಕ್ಕೆ .20 ಕೋಟಿ ಅನುದಾನ ಬಿಡುಗಡೆ ಮಾಡಿತ್ತು. ಆದರೆ, ಕಾಮಗಾರಿ ಕೈಗೆತ್ತಿಕೊಳ್ಳುವ ಪ್ರಕ್ರಿಯೆಗಳು ಆಮೆ ವೇಗದಲ್ಲಿ ಸಾಗಿದ ಪರಿಣಾಮ ಅನುದಾನವನ್ನು ಸರ್ಕಾರವೇ ಹಿಂಪಡೆದುಕೊಂಡಿದೆ. ಹೀಗಾಗಿ ಸಿದ್ಧಗಂಗಾ ಶ್ರೀ ಹಾಗೂ ಚುಂಚಶ್ರೀಗಳ ತವರೂರು ಅಭಿವೃದ್ಧಿ ಕಾಮಗಾರಿ ನೆನೆಗುದಿಗೆ ಬಿದ್ದಿದೆ.