ಬೆಂಗಳೂರು/(ಡಿ.01): ‘ಗ್ರಾಮ ಪಂಚಾಯತ್‌ ಚುನಾವಣೆಗೆ ವೇಳಾಪಟ್ಟಿಪ್ರಕಟಣೆಯಿಂದ ಸಚಿವ ಸಂಪುಟ ವಿಸ್ತರಣೆಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ಈ ವಿಚಾರದಲ್ಲಿ ಇನ್ನೆರಡು ದಿನ ಕಾದು ನೋಡಿ’ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಶೀಘ್ರದಲ್ಲೇ ಸಂಪುಟ ವಿಸ್ತರಣೆಯ ಸುಳಿವು ನೀಡಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡುವಾಗ ‘ಡಿಸೆಂಬರ್‌ನಲ್ಲೇ ಸಂಪುಟ ವಿಸ್ತರಣೆ ನಡೆಯಲಿದೆಯಾ’ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಇನ್ನೆರಡು ದಿನ ಕಾದು ನೋಡಿ’ ಎಂದಷ್ಟೇ ಹೇಳಿದರು.

ಡಿಸೆಂಬರ್ 22, 27ಕ್ಕೆ ಗ್ರಾಮ ಸಮರ: ಸೋಂಕಿತರಿಗೆ ಕೊನೆಯ 1 ತಾಸು ಮತದಾನಕ್ಕೆ ಅವಕಾಶ!

ಅಲ್ಲದೆ, ಗ್ರಾಮ ಪಂಚಾಯ್ತಿ ಚುನಾವಣಾ ವೇಳಾಪಟ್ಟಿಪ್ರಕಟದಿಂದ ಸಂಪುಟ ವಿಸ್ತರಣೆ ಮುಂದೂಡಿಕೆಯಾಗಬಹುದಾದ ಎಂಬ ಪ್ರಶ್ನೆಗೆ ‘ಅದಕ್ಕೂ ಇದಕ್ಕೂ ಸಂಬಂಧವಿಲ್ಲ’ ಎಂದು ತಿಳಿಸಿದರು.

‘ಗ್ರಾಮ ಪಂಚಾಯತಿ ಚುನಾವಣೆಗೆ ಸೋಮವಾರ ದಿನಾಂಕ ಪ್ರಕಟವಾಗಿದ್ದರಿಂದ ನೀತಿ ಸಂಹಿತೆ ಜಾರಿಯಾಗಿದೆ. ಹಾಗಾಗಿ ಇನ್ನು ನೀತಿ ಸಂಹಿತೆ ಮುಗಿಯುವವರೆಗೂ ನಾವು ಬೇರೆ ಯಾವುದೇ ಅಭಿವೃದ್ಧಿ ಚಟುವಟಿಕೆಗಳನ್ನು ಮಾಡುವಂತಿಲ್ಲ. ಚುನಾವಣಾ ಸಿದ್ಧತೆಗೆ ಈಗಾಗಲೇ ನಮ್ಮ ಪಕ್ಷದ ರಾಜ್ಯಾಧ್ಯಕ್ಷರ ನೇತೃತದಲ್ಲಿ ಐದಾರು ತಂಡಗಳು ಪ್ರವಾಸ ಮಾಡುತ್ತಿದೆ. ಗ್ರಾ.ಪಂ. ಚುನಾವಣೆ ಕೂಡ ವಿಧಾನಸಭೆ, ಲೋಕಸಭೆಯಷ್ಟೇ ಮಹತ್ವವಾದದುದು. ನಮ್ಮ ಪಕ್ಷದ ಸಂಘಟನೆ ಭದ್ರ ಮಾಡಿಕೊಳ್ಳಲು ಇದು ಮಹತ್ತರವಾದಂತದ್ದು. ಕಡೆ ಹೆಚ್ಚು ಗಮನ ನೀಡಿ ಯೋಗ್ಯ ಅಭ್ಯರ್ಥಿಗಳನ್ನು ನಿಲ್ಲಿಸಲಾಗುವುದು. ಈ ಚುನಾವಣೆಗೆ ಸ್ಪರ್ಧಿಸುವವರಿಗೆ ಪಕ್ಷದ ಚಿಹ್ನೆ ಇಲ್ಲದಿದ್ದರೂ ಸಹಜವಾಗಿಯೇ ಯಾರು ಯಾವ ಗುಂಪು ಎಂದು ಗೊತ್ತಾಗುತ್ತದೆ’ ಎಂದರು.