ಬೆಂಗಳೂರು: ಪಾಲಿಕೆ ಆಸ್ಪತ್ರೆಗಳಲ್ಲಿ ಔಷಧಿಗಳೇ ಇಲ್ಲ!
ಪಾಲಿಕೆ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ (ಪಿಎಚ್‌ಸಿ) ಉಂಟಾಗಿರುವ ಔಷಧಿಗಳ ಕೊರತೆ ಸಮಸ್ಯೆಯನ್ನು ಶೀಘ್ರವೇ ಪರಿಹರಿಸಲಾಗುವುದು ಎಂದು ಬಿಬಿಎಂಪಿ ವಿಶೇಷ ಆಯುಕ್ತ ತ್ರಿಲೋಕಚಂದ್ರ ತಿಳಿಸಿದ್ದಾರೆ.
ಬೆಂಗಳೂರು (ಜ.31) : ಪಾಲಿಕೆ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ (ಪಿಎಚ್‌ಸಿ) ಉಂಟಾಗಿರುವ ಔಷಧಿಗಳ ಕೊರತೆ ಸಮಸ್ಯೆಯನ್ನು ಶೀಘ್ರವೇ ಪರಿಹರಿಸಲಾಗುವುದು ಎಂದು ಬಿಬಿಎಂಪಿ ವಿಶೇಷ ಆಯುಕ್ತ ತ್ರಿಲೋಕಚಂದ್ರ ತಿಳಿಸಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೆಲವೊಂದು ಔಷಧಿಗಳ ಕೊರತೆ ಇರುವುದು ನಿಜ. ಆದರೆ ಇಂತಹದ್ದೇ ಔಷಧಿ ಸಿಗುತ್ತಿಲ್ಲ ಎಂದು ಹೇಳಲು ಬರುವುದಿಲ್ಲ. ಬೇರೆ ಬೇರೆ ಪಿಎಚ್‌ಸಿಗಳಲ್ಲಿ ಬೇರೆ ಬೇರೆ ರೀತಿಯ ಔಷಧಿಗಳ ಕೊರತೆ ಇದೆ. ಆರೋಗ್ಯ ಕೇಂದ್ರಗಳಿಗೆ ಬರುವ ರೋಗಿಗಳಿಗೆ ಅಗತ್ಯವಾದ ಔಷಧಿಗಳನ್ನು ಸ್ಥಳೀಯ ಜನೌಷಧಿ ಕೇಂದ್ರಗಳಲ್ಲಿ ಖರೀದಿ ಮಾಡುವಂತೆ ತಿಳಿಸಲಾಗುತ್ತಿದೆ. ಪಿಎಚ್‌ಸಿಗಳಲ್ಲಿ ಯಾವ ಔಷಧಿಗಳಿಲ್ಲ ಎಂಬುದರ ಬಗ್ಗೆಯೂ ವರದಿ ನೀಡುವಂತೆ ವೈದ್ಯರಿಗೆ ಸೂಚನೆ ನೀಡಲಾಗಿದೆ. ಯಾವ ಪಿಎಚ್‌ಸಿಗಳಲ್ಲಿ ಔಷಧಿ ಕೊರತೆ ಇದೆ ಎಂಬುದರ ಮಾಹಿತಿ ಪಡೆದು ಶೀಘ್ರವೇ ಸಮಸ್ಯೆ ಇತ್ಯರ್ಥಪಡಿಸಲಾಗುವುದು ಎಂದು ತಿಳಿಸಿದರು.
Bengaluru: ನಗರದ ಅಭಿವೃದ್ಧಿ ಚರ್ಚೆಗೆ ಸಿಎಂ ಸವಾಲು ಸ್ವೀಕಾರ: ರೆಡ್ಡಿ
ಈ ಬಾರಿಯ ಬಜೆಟ್‌ನಲ್ಲಿ ಔಷಧಿ ಖರೀದಿಗೆ ಹಣ ಮೀಸಲು ಇಡುವಂತೆ ಪ್ರಸ್ತಾವನೆಯನ್ನು ಈಗಾಗಲೇ ಸಲ್ಲಿಸಲಾಗಿದೆ. ಆದಷ್ಟುಬೇಗ ಪಿಎಚ್‌ಸಿಗಳಲ್ಲಿ ಔಷಧಿ ಕೊರತೆಯ ಸಮಸ್ಯೆಯನ್ನು ಬಗೆಹರಿಸುತ್ತೇವೆ ಎಂದು ಹೇಳಿದರು.
ಫೆ.7ಕ್ಕೆ ‘ನಮ್ಮ ಕ್ಲಿನಿಕ್’ ಆರಂಭ
ನಗರದಲ್ಲಿ ‘ನಮ್ಮ ಕ್ಲಿನಿಕ್’ ಆರಂಭಕ್ಕೆ ಅಡ್ಡಿಯಾಗಿದ್ದ ಕೆಲವು ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಲಾಗುತ್ತಿದೆ. ಫೆ.7ಕ್ಕೆ ‘ನಮ್ಮ ಕ್ಲಿನಿಕ್’ ತೆರೆಯಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೇವೆ ಎಂದು ಡಾತ್ರಿಲೋಕಚಂದ್ರ ಮಾಹಿತಿ ನೀಡಿದರು.
ನಗರದ ಮತ್ತೊಂದು ರಸ್ತೆ ಕುಸಿತ
ನಗರದಲ್ಲಿ ರಸ್ತೆ ಕುಸಿತ ಪ್ರಕರಣಗಳು ಮುಂದುವರೆದಿದ್ದು, ಬಸವೇಶ್ವರ ನಗರದ ಮತ್ತೊಂದು ರಸ್ತೆ ಕುಸಿದು ಅವಾಂತರ ಸೃಷ್ಟಿಸಿದೆ. ಬಸವೇಶ್ವರ ನಗರ, ವಾರ್ಡ್ ನಂಬರ್ 100ರಲ್ಲಿ ರಸ್ತೆ ಕುಸಿದು, ಬೃಹತ್ ಗುಂಡಿ ಬಿದ್ದಿದೆ. ಶನಿವಾರ ಸಂಜೆಯೇ ರಸ್ತೆ ಕುಸಿದು ಗುಂಡಿ ಬಿದ್ದಿದ್ದು, ಸ್ಥಳೀಯರು ಕಲ್ಲುಗಳನ್ನು ಹಾಕಿ ಗುಂಡಿ ಮುಚ್ಚಿದ್ದರು. ಜಲಮಂಡಳಿಯ ಪೈಪ್ ಒಡೆದು ನೀರು ಸೋರಿಕೆಯಿಂದ ಮಣ್ಣು ಒದ್ದೆಯಾಗಿ ಸಡಿಲಗೊಂಡು ಕುಸಿದು ಗುಂಡಿ ಉಂಟಾಗಿದೆ. ಸುಮಾರು 7 ಅಡಿಗಳಷ್ಟುಉದ್ದದ ರಸ್ತೆ ಕುಸಿದಿದ್ದು 4 ಅಡಿಯಷ್ಟುಆಳದ ಗುಂಡಿ ಬಿದ್ದಿತ್ತು.
ರಾಜಕಾರಣಿಗಳ ಗಿಫ್ಟ್ ತಿರಸ್ಕರಿಸಿದರೆ ₹5000 ಬಹುಮಾನ: ರವಿ ಕೃಷ್ಣಾರೆಡ್ಡಿ ಘೋಷಣೆ
ರಸ್ತೆ ಕುಸಿದು ಎರಡು ದಿನ ಕಳೆದರೂ ಬಿಬಿಎಂಪಿ ಮತ್ತು ಜಲಮಂಡಳಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸದೆ ನಿರ್ಲಕ್ಷ್ಯ ವಹಿಸಿದ್ದರು. ಸೋಮವಾರ ಜಲಮಂಡಳಿ ಅಧಿಕಾರಿ, ಸಿಬ್ಬಂದಿ ಗುಂಡಿ ಮುಚ್ಚುವ ಕೆಲಸ ಆರಂಭಿಸಿದ್ದರು. ಈಗಾಗಲೇ ಗುಂಡಿಯಿಂದ ನೀರು ಹೊರಹಾಕುವ ಕೆಲಸ ಪೂರ್ಣಗೊಳಿಸಿದ್ದು, ಒಡೆದ ಪೈಪನ್ನು ದುರಸ್ತಿ ಮಾಡಿದ್ದಾರೆ. ಗುಂಡಿ ಬಿದ್ದ ರಸ್ತೆಯ ಸಮೀಪವೇ ಶಾಲೆಯೊಂದಿದ್ದು, ಮಕ್ಕಳು ಇದೇ ರಸ್ತೆಯಲ್ಲಿ ಓಡಾಡುತ್ತಿದ್ದಾರೆ. ಏನಾದರೂ ಅನಾಹುತ ಸಂಭವಿಸಿದರೆ ಯಾರು ಜವಾಬ್ದಾರರು ಎಂದು ಪೋಷಕರು ಆಕ್ರೋಶ ಹೊರ ಹಾಕಿದ್ದಾರೆ.
ಈಗಾಗಲೇ ಗುಂಡಿ ಮುಚ್ಚಲು ಕ್ರಮಕೈಗೊಳ್ಳಲಾಗಿದೆ. ಪೈಪ್ ಒಡೆದು ನೀರು ಸೋರಿಕೆಯಾಗಿದ್ದರಿಂದ ಗುಂಡಿ ಬಿದ್ದಿದೆ. ಸಾರ್ವಜನಿಕರು, ವಾಹನ ಸವಾರರು ಭಯಪಡುವ ಅಗತ್ಯವಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ.