ಕೊಪ್ಪಳದ ಶಿಲ್ಪಿ ಗುರುತಿಸಿದ್ದ ಬಂಡೆ ಈಗ ಅಯೋಧ್ಯೆಯ ಶ್ರೀರಾಮ ಮೂರ್ತಿ!
ಇಲ್ಲಿನ ಪ್ರಕಾಶ ಶಿಲ್ಪಿ ಎಂಬುವವರು ಗುರುತಿಸಿದ ಶಿಲಾಬಂಡೆ ಅಯೋಧ್ಯೆಯ ರಾಮಮಂದಿರದಲ್ಲಿ ಶ್ರೀರಾಮ ಮೂರ್ತಿಯಾಗಲಿದೆ. ಮೈಸೂರಿನ ಅರುಣ್ ಯೋಗಿರಾಜ್ ಅವರು ಅಯೋಧ್ಯೆಯ ಮಂದಿರಕ್ಕಾಗಿ ರೂಪಿಸಿದ ಬಾಲ ರಾಮನ ಮೂರ್ತಿಯನ್ನು ಕೆತ್ತಲು ಇದೇ ಬಂಡೆಯನ್ನು ಬಳಸಲಾಗಿದೆ ಎಂದು ತಿಳಿದುಬಂದಿದೆ.
ಕೊಪ್ಪಳ (ಜ.12): ಇಲ್ಲಿನ ಪ್ರಕಾಶ ಶಿಲ್ಪಿ ಎಂಬುವವರು ಗುರುತಿಸಿದ ಶಿಲಾಬಂಡೆ ಅಯೋಧ್ಯೆಯ ರಾಮಮಂದಿರದಲ್ಲಿ ಶ್ರೀರಾಮ ಮೂರ್ತಿಯಾಗಲಿದೆ. ಮೈಸೂರಿನ ಅರುಣ್ ಯೋಗಿರಾಜ್ ಅವರು ಅಯೋಧ್ಯೆಯ ಮಂದಿರಕ್ಕಾಗಿ ರೂಪಿಸಿದ ಬಾಲ ರಾಮನ ಮೂರ್ತಿಯನ್ನು ಕೆತ್ತಲು ಇದೇ ಬಂಡೆಯನ್ನು ಬಳಸಲಾಗಿದೆ ಎಂದು ತಿಳಿದುಬಂದಿದೆ.
ಏನಿದು ಕಾಕತಾಳೀಯ?: ಪ್ರಕಾಶ ಶಿಲ್ಪಿ ಅವರು ಮೂರ್ತಿ ಕೆತ್ತನೆಗೆ ಶಿಲೆ ಹುಡುಕುತ್ತ ಮೈಸೂರಿಗೆ ಕೆಲ ತಿಂಗಳ ಹಿಂದೆ ತೆರಳಿದ್ದರು. ಆಗ ಅವರಿಗೆ ಶಿಲಾಬಂಡೆಗಳ ಮಾರಾಟಗಾರ ಶ್ರೀನಿವಾಸ್ ಪರಿಚಯವಾಗಿದೆ. ಅವರ ಜೊತೆ ಮೈಸೂರು ಸಮೀಪದ ಆರೋಹಳ್ಳಿ ಬಳಿ ಶಿಲೆಯೊಂದನ್ನು ಗುರುತಿಸಿದ್ದಾರೆ. ಆದರೆ ಅವರು ತಯಾರು ಮಾಡಲು ಉದ್ದೇಶಿಸಿದ್ದ ವಿಜಯದಾಸರ ಮೂರ್ತಿಗೆ ಆ ಶಿಲೆ ಅಳತೆಯಲ್ಲಿ ಹೊಂದಿಕೆಯಾಗಿಲ್ಲ. ಪ್ರತಿ ದಿನ ಆಂಜನೇಯನ ಮೂರ್ತಿ ಕೆತ್ತುವ ಹವ್ಯಾಸ ರೂಢಿಸಿಕೊಂಡ ಶಿಲ್ಪಿ, ಅಲ್ಲಿಯೇ ದಿನದ ರೂಢಿಯಂತೆ 5741ನೇ ಆಂಜನೇಯನ ಮೂರ್ತಿ ಕೆತ್ತಿ, ಪೂಜಿಸಿ ಕೊಪ್ಪಳಕ್ಕೆ ವಾಪಸಾಗಿದ್ದರು.
ಆದರೆ ಇದೀಗ ಮೈಸೂರಿನ ಅರುಣ್ ಯೋಗಿರಾಜ್ ರೂಪಿಸಿದ ಬಾಲ ರಾಮನ ಮೂರ್ತಿಯನ್ನು ಪ್ರಕಾಶ ಶಿಲ್ಪಿ ಗುರುತಿಸಿ ಆಂಜನೇಯನ ಮೂರ್ತಿ ಕೆತ್ತಿದ್ದ ಶಿಲಾಬಂಡೆಯಿಂದಲೇ ಕೆತ್ತಲಾಗಿದೆ. ಅದೇ ಮೂರ್ತಿ ಆಯ್ಕೆಯಾಗಿದೆ ಎನ್ನಲಾಗಿದ್ದು, ನಿಜವಾದರೆ ಜ. 22ರಂದು ಅಯೋಧ್ಯೆಯ ಮಂದಿರದ ಗರ್ಭಗುಡಿಯಲ್ಲಿ ಅದು ಪ್ರತಿಷ್ಠಾಪನೆಗೊಳ್ಳಲಿದೆ. ಶ್ರೀರಾಮನ ಮೂರ್ತಿ ತಯಾರಿಕೆಗೆ ಬಳಸಿದ ಶಿಲಾಬಂಡೆಯ ಉಳಿದ ಭಾಗದಲ್ಲಿ ಆಂಜನೇಯನ ಮೂರ್ತಿ ಕೆತ್ತಲಿದ್ದು, ಈ ಹನುಮನ ಮೂರ್ತಿ ಕೊಪ್ಪಳದ ಸಹಸ್ರಾಂಜನೇಯ ದೇವಾಲಯದಲ್ಲಿ ಪ್ರತಿಷ್ಠಾಪನೆಗೊಳ್ಳಲಿದೆ. ಇದಕ್ಕಾಗಿ ಮೈಸೂರಿನಿಂದ ಶಿಲೆ ಕೊಪ್ಪಳಕ್ಕೆ ಬರುತ್ತಿದೆ.
ಇಬ್ಬರೇ ಬಿಜೆಪಿ ಶಾಸಕರ ನೋಡಿ ಬೇಜಾರಾಗುತ್ತೆ: ಸಚಿವ ಮಂಕಾಳ ವೈದ್ಯ
ವಿಶೇಷವೆಂದರೆ ಆಂಜನೇಯನ ಭಕ್ತ ಕೊಪ್ಪಳದ ನಿವಾಸಿ ಪ್ರಕಾಶ ಶಿಲ್ಪಿ ಪ್ರತಿ ದಿನ ಆಂಜನೇಯನ ಮೂರ್ತಿ ಕೆತ್ತುತ್ತಾರೆ. ಒಂದು ಇಂಚಿನಿಂದ ಹಿಡಿದು 21 ಇಂಚಿನ ಆಂಜನೇಯನ ಮೂರ್ತಿಗಳನ್ನು ಕೆತ್ತಿದ್ದಾರೆ. 2007ರ ಜನೇವರಿ 26ರಿಂದ ಪ್ರಾರಂಭಿಸಿ, ನಿತ್ಯವೂ ಮೂರ್ತಿ ತಯಾರು ಮಾಡುತ್ತಿದ್ದಾರೆ. ಇದುವರೆಗೂ (ಜ.10ವರೆಗೆ) 6141 ಮೂರ್ತಿಗಳನ್ನು ಕೆತ್ತಿದ್ದು, ಇನ್ನೂ ಕೆತ್ತುತ್ತಲೇ ಇದ್ದಾರೆ.