ಸೋಂಕು ಭಾರಿ ಹೆಚ್ಚಳ!: ರಾಜ್ಯಕ್ಕೆ ಕಂಟಕವಾಯ್ತಾ ಲಾಕ್‌ಡೌನ್ ಸಡಿಲಿಕೆ?

ಲಾಕ್ಡೌನ್‌ ಸಡಿಲಿಕೆ ನಂತರ ಸೋಂಕು ಭಾರಿ ಹೆಚ್ಚಳ!| ಕೇವಲ 6 ದಿನದಲ್ಲಿ 159 ಹೊಸ ಪ್ರಕರಣ ದಾಖಲು| ರಾಜ್ಯಕ್ಕೆ ಕಂಟಕವಾಯ್ತಾ ಲಾಕ್‌ಡೌನ್‌ ಸಡಿಲಿಕೆ?

The Number Of Coronavirus Cases Increasing Massively In Karnataka After The Lockdown Relaxation

ಬೆಂಗಳೂರು(ಮೇ.10): ರಾಜ್ಯದಲ್ಲಿ ಮೇ 4ರ ಲಾಕ್‌ಡೌನ್‌ ಸಡಿಲಿಸಿದ ಬಳಿಕ ಆರೇ ದಿನದಲ್ಲಿ 159 ಪ್ರಕರಣಗಳು ಹೆಚ್ಚಳವಾಗಿವೆ. ಇದರಿಂದ ಲಾಕ್‌ಡೌನ್‌ ಸಡಿಲಿಕೆ ರಾಜ್ಯಕ್ಕೆ ಕಂಟಕವಾಗುತ್ತಿದೆಯೇನೊ ಎಂಬ ಸಂದೇಹ ಮೂಡತೊಡಗಿದೆ.

ಕಳೆದ ಏ.23ರಂದು ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿ ರಾಜ್ಯದಲ್ಲಿ ಕೊಂಚ ಲಾಕ್‌ಡೌನ್‌ ಸಡಿಲಗೊಳಿಸಲಾಗಿತ್ತು. ಈ ವೇಳೆಗೆ ಸೋಂಕಿತರ ಸಂಖ್ಯೆ 427ರಷ್ಟಿತ್ತು. ನಂತರದ ಒಂದೇ ವಾರದಲ್ಲಿ 100ಕ್ಕೂ ಹೆಚ್ಚು ಪ್ರಕರಣಗಳು ಜಾಸ್ತಿಯಾಗಿ ಒಟ್ಟು ಸೋಂಕಿತರ ಸಂಖ್ಯೆ ಏ.29ರ ವೇಳೆಗೆ 523ಕ್ಕೆ ಏರಿಕೆಯಾಯಿತು. ಬಳಿಕ ಏ.29ರಂದು ಗ್ರೀನ್‌ ವಲಯದ ಜಿಲ್ಲೆಗಳಲ್ಲಿ ಹೆಚ್ಚಿನ ಆರ್ಥಿಕ ಚಟುವಟಿಕೆಗೆ, ಕೈಗಾರಿಕೆಗಳಿಗೆ ಅವಕಾಶ ನೀಡಲಾಯಿತು.

ಕೊರೋನಾ ಚಿಕಿತ್ಸೆಗೆ ಪ್ರತಿ ವ್ಯಕ್ತಿಗೆ 3.5 ಲಕ್ಷ ರೂ. ವೆಚ್ಚ!

ಕಿತ್ತಳೆ ಮತ್ತು ಕೆಂಪು ವಲಯದ ಜಿಲ್ಲೆಗಳಲ್ಲೂ ಕಂಟೈನ್ಮೆಂಟ್‌ ವಲಯಗಳನ್ನು ಹೊರತುಪಡಿಸಿ ಭಾಗಶಃ ಆರ್ಥಿಕ ಚಟುವಟಿಕೆಗೆ ಅವಕಾಶ ನೀಡಲಾಯಿತು. ಇದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಹಾಗೂ ವಾಹನಗಳು ರಸ್ತೆಗಿಳಿಯಲು ಕಾರಣವಾಯಿತು. ಆ ನಂತರದ ಐದೇ ದಿನದಲ್ಲಿ 112 ಹೊಸ ಪ್ರಕರಣಗಳು ಪತ್ತೆಯಾಗಿ ಮೇ 4ರ ವೇಳೆಗೆ ಒಟ್ಟು ಸೋಂಕಿತರ ಸಂಖ್ಯೆ 635ರಷ್ಟಾಗಿತ್ತು.

ಮೇ 4ರಿಂದ ಕಂಟೈನ್ಮೆಂಟ್‌ ವಲಯ ಬಿಟ್ಟು ಬೇರೆ ಎಲ್ಲೆಡೆ ಸಡಿಲಗೊಳಿಸಿ ಆರ್ಥಿಕ ಚಟುವಟಿಕೆಗೆ ಹೆಚ್ಚಿನ ವಿನಾಯಿತಿ ನೀಡಿದ ಬಳಿಕ ಐದೇ ದಿನದಲ್ಲಿ ಹೊಸದಾಗಿ 159 ಪ್ರಕರಣಗಳು ರಾಜ್ಯದಲ್ಲಿ ಪತ್ತೆಯಾಗಿವೆ. ಇದರಿಂದ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 794ಕ್ಕೆ ಏರಿದೆ.

ವಂದೇ ಭಾರತ್‌ ಕಾರ್ಯಾಚರಣೆ: ದುಬೈನಿಂದ ಬಂದವರಿಗೆ ಸೋಂಕು!

ಇದರ ನಡುವೆ, ಲಾಕ್‌ಡೌನ್‌ ಸಡಿಲಿಕೆ ನಂತರ ಅಂದರೆ ಮೇ 5ರಂದು ರಾಜ್ಯಕ್ಕೆ ಬಂದ ತಬ್ಲೀಘಿಗಳಿಂದ ಹಸಿರುವಲಯ ಚಿತ್ರದುರ್ಗ ಹಾಗೂ ಆರೇಂಜ್‌ ವಲಯ ತುಮಕೂರಿಗೆ ಕೊರೋನಾ ಕಂಟಕ ಹೆಚ್ಚಾಗತೊಡಗಿದೆ. ಜತೆಗೆ, ಕಂಟೈನ್ಮೆಂಟ್‌ ವಲಯಗಳಲ್ಲಿ ಕಟ್ಟುನಿಟ್ಟಿನ ಲಾಕ್‌ಡೌನ್‌ ಕಂಡುಬರುತ್ತಿಲ್ಲ. ವಲಯದ ಒಳ ಹೊರಗೆ ಜನರು ಸಲೀಸಾಗಿ ಓಡಾಡುತ್ತಿದ್ದಾರೆ. ಇದರ ಪರಿಣಾಮವಾಗಿಯೇ ಬೆಂಗಳೂರಿನ ಕೊರೋನಾ ಹಾಟ್‌ಸ್ಪಾಟ್‌ ಪಾದರಾಯನಪುರದ ಹೋಟೆಲ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬ ಮೇ 5ರಂದು ತುಮಕೂರಿನ ಶಿರಾ ತಾಲೂಕಿನ ತವರೂರಿಗೆ ಹೋಗಿದ್ದಾನೆ. ಈಗ ಆ ವ್ಯಕ್ತಿಗೆ ಕೊರೋನಾ ಸೋಂಕು ಪತ್ತೆಯಾಗಿರುವ ಜೊತೆಗೆ ಸ್ಥಳೀಯ ಜನರಿಗೂ ಆತಂಕ ಕಾಡಲಾರಂಭಿಸಿದೆ.

Latest Videos
Follow Us:
Download App:
  • android
  • ios