ಜಿಲ್ಲೆಯ ಚನ್ನಗಿರಿ ತಾಲೂಕಿನ ಚಿಕ್ಕೂಲಿಕೆರೆಯ ಸಿದ್ದೇಶ್ವರ ಪ್ಯಾರಾ ಮೆಡಿಕಲ್ ಕಾಲೇಜಿನ ಮುಖ್ಯಸ್ಥೆ ಮಾಡಿದ ವ್ಯವಹಾರಕ್ಕೆ 120 ವಿದ್ಯಾರ್ಥಿಗಳ ಭವಿಷ್ಯ ಈಗ ಅತಂತ್ರವಾಗಿದೆ.

ವರದಿ: ಮಹಾಂತೇಶ ಕುರಬೇಟ, ಏಷ್ಯಾನೆಟ್ ಸುವರ್ಣನ್ಯೂಸ್, ಬೆಳಗಾವಿ

ದಾವಣಗೆರೆ (ಜೂ.18): ಜಿಲ್ಲೆಯ ಚನ್ನಗಿರಿ ತಾಲೂಕಿನ ಚಿಕ್ಕೂಲಿಕೆರೆಯ ಸಿದ್ದೇಶ್ವರ ಪ್ಯಾರಾ ಮೆಡಿಕಲ್ ಕಾಲೇಜಿನ ಮುಖ್ಯಸ್ಥೆ ಮಾಡಿದ ವ್ಯವಹಾರಕ್ಕೆ 120 ವಿದ್ಯಾರ್ಥಿಗಳ ಭವಿಷ್ಯ ಈಗ ಅತಂತ್ರವಾಗಿದೆ. ಸಿದ್ದೇಶ್ವರ ಪ್ಯಾರಾ ಮೆಡಿಕಲ್ ಕಾಲೇಜಿನ ಮುಖ್ಯಸ್ಥೆ ರೂಪಾ ದಾವಣಗೆರೆಯ ಮಳಗಿ ಬಸವರಾಜ ಎಂಬುವರಿಂದ ಒಂದೂವರೆ ಕೋಟಿ ಹಣ ಸಾಲ ಪಡೆದಿದ್ದೆ, ಸಾಲ ಮರುಪಾವತಿಗೆ ಸಮಯಾವಕಾಶ ಕೇಳಿದರೂ ಬಿಡದೇ ಕಾಲೇಜಿಗೆ ಬೀಗ ಹಾಕಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತು ಮಾತನಾಡಿರುವ ರೂಪಾ, 'ದಾವಣಗೆರೆಯ ಬಸವರಾಜ ಎಂಬುವರಿಂದ ಒಂದೂವರೆ ಕೋಟಿ ಸಾಲ ಪಡೆದಿದ್ದೇನೆ.

ಕಾಲೇಜು ಕಟ್ಟಡ ಇರುವ ಜಾಗ ಕ್ರಯದ ಪತ್ರ ನೀಡಿ ಹಣ ಪಡೆದಿದ್ದೆನೆ‌. ಈ ಹಣಕ್ಕೆ ಯಾವುದೇ ರೀತಿ ಬಡ್ಡಿ ಪಾವತಿಸುತ್ತಿರಲಿಲ್ಲ. ಸಾಲ ಮರು ಪಾವತಿಗೆ ಕಾಲಾವಕಾಶ ಕೇಳಿದ್ದೆ‌. ಕಾಲಾವಕಾಶ ಕೇಳಿದರೂ ಬಿಡದೇ ಬಸವರಾಜ ಎಂಬುವರು ತಮ್ಮ ಬೆಂಬಲಿಗರನ್ನು ಕಳಿಸಿ ಕಾಲೇಜಿಗೆ ಬೀಗ ಹಾಕಿಸಿದ್ದಾರೆ' ಎಂದು ಆರೋಪಿಸಿದ್ದಾರೆ. ಅಲ್ಲದೇ ಕಾಲೇಜು ಬೋರ್ಡ್ ಕಿತ್ತಾಕುವ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಬಿಡುಗಡೆ ಮಾಡಿದ್ದಾರೆ‌. ಕಳೆದ ಭಾನುವಾರದಂದು ಕಾಲೇಜಿಗೆ ಬೀಗ ಹಾಕಿದ್ದು ಕಳೆದ ಹತ್ತು ದಿನಗಳಿಂದ ತರಗತಿ ಇಲ್ಲದೇ ವಿದ್ಯಾರ್ಥಿಗಳು ಪರದಾಡುವ ಸ್ಥಿತಿ ನಿರ್ಮಾಣ ಆಗಿದೆ.

ಕಾಲೇಜು ರೀ ಓಪನ್ ಮಾಡಿಸಿ ಪ್ಲೀಸ್... ವಿದ್ಯಾರ್ಥಿಗಳ ಅಳಲು: ಇನ್ನು ಆಗಸ್ಟ್ ತಿಂಗಳಲ್ಲಿ ಎಕ್ಸಾಂ ಇದ್ದು, ಕಳೆದ ಹತ್ತು ದಿನಗಳಿಂದ ಯಾವುದೇ ಕ್ಲಾಸ್ ನಡೆಯುತ್ತಿರುವುದಿರುವುದಕ್ಕೆ ಪ್ಯಾರಾ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ಆತಂಕಗೊಂಡಿದ್ದಾರೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸಿದ್ದೇಶ್ವರ ಪ್ಯಾರಾ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು, 'ನಮ್ಮ ದಾಖಲಾತಿ, ಮಾರ್ಕ್ಸ್ ಕಾರ್ಡ್ ಎಲ್ಲವೂ ಕಾಲೇಜಿನ ಒಳಗೆ ಇದೆ. ಡಿಎಮ್‌ಎಲ್‌ಟಿ ಅಂತಿಮ ವರ್ಷದಲ್ಲಿ ಓದುತ್ತಿದ್ದು, ಹೀಗೆ ಆದ್ರೆ ನಮ್ಮ ಮುಂದಿನ ಭವಿಷ್ಯಕ್ಕೆ ತೊಂದರೆ ಆಗುತ್ತೆ, ಆತಂಕವಾಗುತ್ತಿದೆ. ದಯವಿಟ್ಟು ನಮ್ಮ ಕಾಲೇಜು ರೀ ಓಪನ್ ಮಾಡಿಸಿ' ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.

ನನ್ನ ಶಿಕ್ಷಣ ಸಂಸ್ಥೆ ಮುಚ್ಚಿಸಲು ಷಡ್ಯಂತ್ರ ಎನ್ನುತ್ತಿರುವ ರೂಪಾ: ನನ್ನ ಶಿಕ್ಷಣ ಸಂಸ್ಥೆ ಮುಚ್ಚಿಸಬೇಕೆಂದು ಷಡ್ಯಂತ್ರ ನಡೆಯುತ್ತಿದೆ ಎಂದು ಚಿಕ್ಕೂಲಿಕೆರೆಯ ಸಿದ್ದೇಶ್ವರ ಪ್ಯಾರಾ ಮೆಡಿಕಲ್ ಕಾಲೇಜಿನ ಮುಖ್ಯಸ್ಥೆ ರೂಪಾ ಹೇಳಿಕೆ ನೀಡಿದ್ದಾರೆ. 'ಕಳೆದ 18 ವರ್ಷಗಳಿಂದ ಶಿಕ್ಷಣ ಸಂಸ್ಥೆ ನಡೆಸುತ್ತಿದ್ದೇನೆ. ಹೆಲ್ತ್ ಇನ್ಸ್‌ಪೆಕ್ಟರ್, ಲ್ಯಾಬ್ ಟೆಕ್ನಿಷಿಯನ್ ಕೋರ್ಸ್ ನಡೆಯುತ್ತಿದೆ.‌ ಒಂದು ವ್ಯವಹಾರಕ್ಕಾಗಿ ದಾವಣಗೆರೆಯ ಬಸವರಾಜರವರಿಗೆ ಈ ಜಾಗ ಅವರ ಹೆಸರಿಗೆ ಕ್ರಯ ಮಾಡಿ ಅಡಮಾನ ಕೊಟ್ಟು ಒಂದೂವರೆ ಕೋಟಿ ಹಣ ಪಡೆದಿದ್ದೆ. ದುಡ್ಡು ವಾಪಸ್ ನೀಡಿದ ಬಳಿಕ ನನ್ನ ಹೆಸರಿಗೆ ದಾಖಲಾತಿ ಮಾಡುವ ಮಾತುಕತೆ ಆಗಿತ್ತು.‌ ಹಣ ಮರುಪಾವತಿ ಮಾಡಲು ಸಮಯಾವಕಾಶ ಕೋರಿದ್ದೆ. ಆದ್ರೆ ಕಳೆದ ಭಾನುವಾರ 10 ರಿಂದ 15 ಜನ ಬಂದು ಕಾಲೇಜಿಗೆ ಬೀಗ ಹಾಕಿದ್ದಾರೆ. ಕಾಲೇಜು ಒಳಗಡೆ ಇದ್ದ ಪೀಠೋಪಕರಣ ಎಲ್ಲ ಹೊರಗೆ ಇಟ್ಟು ಬೀಗ ಹಾಕಿದ್ದಾರೆ. ನಾನು ಕಾಲೇಜು ಕಟ್ಟಡದ ಮೇಲಿಯೇ ಮನೆ ಮಾಡಿಕೊಂಡು ವಾಸವಿದ್ದು, ಅದಕ್ಕೂ ಬೀಗ ಹಾಕಿದ್ದಾರೆ. ಒಂದು ತಿಂಗಳ ಕಾಲಾವಕಾಶ ನೀಡಿ ಹಣ ಮರಳಿಸುತ್ತೇನೆ ಎಂದಿದ್ದೆ.‌ಆದ್ರೆ ಏಕಾಏಕಿ ಕಾಲೇಜಿಗೆ ಬೀಗ ಹಾಕಿದ್ದರಿಂದ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದೆ' ಎಂದ ತಿಳಿಸಿದ್ದಾರೆ.

ಸಾಲ ನೀಡಿಲ್ಲ, ಆಸ್ತಿ ಖರೀದಿಸಿದ್ದೇನೆ ಎಂದ ಬಸವರಾಜ: ಇನ್ನು ಸಾಲ ಮರುಪಾವತಿ ಮಾಡದಿದ್ದಕ್ಕೆ ಕಾಲೇಜಿಗೆ ಬೀಗ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಮಾಡುತ್ತಿರುವ ಆರೋಪಗಳೆಲ್ಲವೂ ಸುಳ್ಳು ಎಂದು ಬಸವರಾಜ ತಿಳಿಸಿದ್ದಾರೆ. ರೂಪಾರವರಿಗೆ ಒಂದೂವರೆ ಕೋಟಿ ಹಣ ನೀಡಿರುವ ಬಸವರಾಜ ಏಷ್ಯಾನೆಟ್ ಸುವರ್ಣನ್ಯೂಸ್ ಗೆ ಪ್ರತಿಕ್ರಿಯಿಸಿದ್ದು, 'ನಾನು ಆ ಬಿಲ್ಡಿಂಗ್ ಖರೀದಿ ಮಾಡಿದ್ದೇನೆ, ದುಡ್ಡು ಕೊಟ್ರೆ ವಾಪಸ್ ಕೊಡ್ತೀನಿ. ರೂಪಾರವರು ತಹಶಿಲ್ದಾರ್, ಎಂಪಿ ಮೆಡಮ್, ಎಂಎಲ್‌ಎ ಎಲ್ಲರ ಬಳಿ ಅವರು ಹೋಗಿದ್ದಾರೆ. ಎಲ್ಲರ ಬಳಿ ಹೋಗಿ ಈಗ ಮಾಧ್ಯಮಗಳ ಮುಂದೆ ಬಂದಿದ್ದಾರೆ. ನಾನು ಶಿಕ್ಷಣ ಸಂಸ್ಥೆ ಖರೀದಿಸಿಲ್ಲ, ಆ ಕಟ್ಟಡ ಖರೀದಿಸಿದ್ದೇನೆ.‌ ನನ್ನ ದುಡ್ಡು ವಾಪಸ್ ನೀಡಿದ್ರೆ ನಾಳೆಯೇ ಬಿಟ್ಟುಕೊಡ್ತೀನಿ. ನಾನು ಖರೀದಿ ಮಾಡಿರುವುದಕ್ಕೆ ನನ್ನ ಬಳಿ ದಾಖಲಾತಿ ಇದೆ' ಎಂದು ಸ್ಪಷ್ಟನೆ ನೀಡಿದ್ದಾರೆ‌. ವ್ಯಾಪಾರ ಇರಲಿ, ವ್ಯವಹಾರ ಇರಲಿ ಏಕಾಏಕಿ ಕಾಲೇಜಿಗೆ ಬೀಗ ಹಾಕಿದ್ದರಿಂದ ಪ್ಯಾರಾಮೆಡಿಕಲ್ ಕಾಲೇಜಿನ 120 ವಿದ್ಯಾರ್ಥಿಗಳ ಭವಿಷ್ಯ ಅತಂತ್ರಗೊಂಡಿದ್ದಾರೆ. ಸಂಬಂಧ ಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಲಿ ಎಂಬುದು ವಿದ್ಯಾರ್ಥಿಗಳ ಆಗ್ರಹ.