ಮುಧೋಳದಲ್ಲಿ ರಾಜ್ಯಮಟ್ಟದ ಸೈಕ್ಲಿಂಗ್ ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಸಚಿವ ಸಂತೋಷ ಲಾಡ್ ಅವರಿಗೆ, ವೇದಿಕೆಯಲ್ಲೇ ಸೈಕ್ಲಿಸ್ಟ್ ಒಬ್ಬರು 'ನಿಮ್ಮ ಹೆಸರೇನು?' ಎಂದು ಕೇಳಿದ ಪ್ರಸಂಗ ನಡೆಯಿತು. ಬಳಿಕ ಸಚಿವರು ಯುವಶಕ್ತಿ ಹಾಗೂ ಸಂವಿಧಾನದ ಅರಿವಿನ ಬಗ್ಗೆ ವಿದ್ಯಾರ್ಥಿಗಳಿಗೆ ಪಾಠ ಮಾಡಿದರು.

ಮುಧೋಳ (ನ.23): ಕಾರ್ಮಿಕ ಇಲಾಖೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಬಾಗಲಕೋಟೆ ಜಿಲ್ಲೆ ಮುಧೋಳದಲ್ಲಿ ಶನಿವಾರ 2025-26ನೇ ಸಾಲಿನ ಪದವಿ ಪೂರ್ವ ಮಹಾವಿದ್ಯಾಲಯಗಳ ಬಾಲಕ-ಬಾಲಕಿಯರ ರಾಜ್ಯಮಟ್ಟದ ಸೈಕ್ಲಿಂಗ್ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.

‘ಸರ್‌, ತಮ್ಮ ಹೆಸರು ಏನು?’

ಮುಧೋಳ ಕುಮಕಾಲೆ ಪದವಿ ಪೂರ್ವ ಕಾಲೇಜಿನಲ್ಲಿ ಕಾರ್ಯಕ್ರಮ ನಡೆಯಿತು. ಈ ವೇಳೆ, ವೇದಿಕೆ‌ ಮೇಲೆ ಮಾತನಾಡಲು ಆಗಮಿಸಿದ ಸೈಕ್ಲಿಂಗ್‌ವೊಬ್ಬರು, ಭಾಷಣ ಮಾಡುವಾಗ ಪಕ್ಕವೇ ನಿಂತಿದ್ದ ಸಂತೋಷ‌ ಲಾಡ್ ಅವರತ್ತ ತಿರುಗಿ, ‘ಸರ್‌, ತಮ್ಮ ಹೆಸರು ಏನು?’ ಎಂದು ಕೇಳಿದರು. ಅದಕ್ಕೆ ನಗು‌, ನಗುತ್ತಲೇ ಪ್ರತಿಕ್ರಿಯಿಸಿದ ಸಚಿವರು, ‘ಸಂತೋಷ ಲಾಡ್’ ಎಂದರು. ಇದನ್ನು ಕೇಳಿ, ಕಾರ್ಯಕ್ರಮಕ್ಕೆ ಆಗಮಿಸಿದ್ದ ಜನರಲ್ಲಿ ನಗು ಮೂಡಿತು.

ಈ ವೇಳೆ ಮಾತು ಮುಂದುವರಿಸಿದ ಸೈಕ್ಲಿಸ್ಟ್, ‘ನಾನು, ತಮ್ಮ ಬಗ್ಗೆ ಟಿವಿಯಲ್ಲಿ ನೋಡಿದ್ದೀನಿ, ಪತ್ರಿಕೆಗಳಲ್ಲಿ ‌ಓದಿದ್ದೇನೆ. ತಾವು ಎಲ್ಲ ಕಾರ್ಯಕ್ಕೂ ಪ್ರೋತ್ಸಾಹ ನೀಡ್ತೀರಿ, ನಮಗೂ ನೀಡಿ’ ಎಂದರು. ಈ ವೇಳೆ, ಸಚಿವರು ಸಂತೋಷದಿಂದ ನಗುತ್ತಾ ಸೈಕ್ಲಿಂಗ್ ಪಟು ಹೆಗಲ‌ ಮೇಲೆ‌ ಕೈ ಹಾಕಿ ನಿಂತರು.

ಸೈಕ್ಲಿಂಗ್‌ ಪಟುಗಳಿಗೆ ಸಂವಿಧಾನದ ಪಾಠ

ಬಳಿಕ, ಸಚಿವರು ಸೈಕ್ಲಿಂಗ್‌ ಪಟುಗಳಿಗೆ ಸಂವಿಧಾನದ ಪಾಠ ಮಾಡಿದರು. ಭಾರತದ ಒಟ್ಟು ಮತದಾರರಲ್ಲಿ ಶೇ.54ರಷ್ಟು ಯುವಕರೇ ಇದ್ದಾರೆ. ಯುವಕರು ಮನಸ್ಸು ಮಾಡಿದರೆ ತಮಗೆ ಬೇಕಾದವರನ್ನು ಪ್ರಧಾನಿ, ರಾಜ್ಯದ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡುವ ಶಕ್ತಿ ಮತ್ತು ಸಾಮರ್ಥ್ಯವಿದೆ ಎಂದು ಹೇಳಿದರು.+++ಇಂದಿನ ವಿದ್ಯಾರ್ಥಿಗಳು ಕಡ್ಡಾಯವಾಗಿ ಸಂವಿಧಾನದ ‘ಹಿಂದೂ ಕೋಡ್ ಬಿಲ್ ಓದಬೇಕು, ಕ್ರೀಡಾ ಮನೋಭಾವದಷ್ಟೇ ಸಂವಿಧಾನ ಅರಿವು ಅಗತ್ಯವಾಗಿದೆ’ ಎಂದು ಪ್ರತಿಪಾದಿಸಿದರು.