ಸ್ವಂತಂತ್ರ ಪೂರ್ವ ಹಾಗೂ ನಂತರದಲ್ಲೂ ಸಮಾಜದ ಎಲ್ಲ ವರ್ಗಗಳ ಅಭಿವೃದ್ಧಿಯಾಗಬೇಕೆಂದು ಕಾಂಗ್ರೆಸ್‌ನ ಉದ್ದೇಶವಾಗಿದೆ ಎಂದು ವಿಧಾನಸಭಾ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಆನೇಕಲ್‌ (ಜೂ.13): ಸ್ವಂತಂತ್ರ ಪೂರ್ವ ಹಾಗೂ ನಂತರದಲ್ಲೂ ಸಮಾಜದ ಎಲ್ಲ ವರ್ಗಗಳ ಅಭಿವೃದ್ಧಿಯಾಗಬೇಕೆಂದು ಕಾಂಗ್ರೆಸ್‌ನ ಉದ್ದೇಶವಾಗಿದೆ ಎಂದು ವಿಧಾನಸಭಾ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು. ಅವರು ಬೆಂಗಳೂರು ದಕ್ಷಿಣ ತಾಲೂಕಿನ ಬನ್ನೇರುಘಟ್ಟದಲ್ಲಿ ಕರ್ನಾಟಕ ಭೋವಿ ಸಂಘರ್ಷ ಸಮಿತಿ ಏರ್ಪಡಿಸಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್‌, ಡಾ. ಅಂಬೇಡ್ಕರ್‌ ಹಾಗೂ ಸಮಾಜದ ಮಂಜರಿ ಹನುಮಂತಪ್ಪ ಅವರ ಜನ್ಮದಿನಾಚರಣೆಯಲ್ಲಿ ಮಾತನಾಡಿದರು. 

ಭಾರತದ ಪವಿತ್ರ ನೆಲದಲ್ಲಿ 9 ಶತಮಾನಗಳಿಂದಲೂ ಸಮಾನತೆಯನ್ನು ಸಾಧಿಸಲು ಸಾಧ್ಯವಾಗಲಿಲ್ಲ. ಜಾತಿ ವ್ಯವಸ್ಥೆ ಬದಲಾಗದೇ ಶೈಕ್ಷಣಿಕ, ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕವಾಗಿ ಬಲ ಹೊಂದಲು ಸಾಧ್ಯವಾಗಲಿಲ್ಲ. ಚಿಂತನಶೀಲತೆ, ಪ್ರಶ್ನಿಸುವ ಮನೋಭಾವವನ್ನು ರೂಢಿಸಿಕೊಳ್ಳದ ಕಾರಣ ಜಡತ್ವ ತುಂಬಿ ಚಲನಶೀಲತೆ ಇಲ್ಲವಾಗಿದೆ. ಆಲೋಚನೆ, ಅವಕಾಶ ನಿಂತ ನೀರಾಗದೇ ಹರಿವ ಝರಿಯಾಗಬೇಕು. ಸಮ ಸಮಾಜದಿಂದ ಮಾತ್ರ ಬಲಿಷ್ಠ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ ಎಂದರು.

ಚಡ್ಡಿ ಸುಡ್ತೀನಿ ಅಂದರೆ ಎಲೆಕ್ಷನ್‌ನಲ್ಲಿ ಜನ ವಾಸನೆ ತೋರಿಸ್ತಾರೆ: ಸಿದ್ದು ವಿರುದ್ಧ ರಿಷಿಕುಮಾರ ಶ್ರೀ ವಾಗ್ದಾಳಿ

ಆತ್ಮಾವಲೋಕನ ಮಾಡಿಕೊಳ್ಳಲಿ: ಪಠ್ಯ ಪರಿಷ್ಕರಣೆ ಬಗ್ಗೆ ಪ್ರತಿಕ್ರಿಯಿಸಿದ ಅವರು ರೋಹಿತ್‌ ಚಕ್ರತೀರ್ಥ ಅಧ್ಯಕ್ಷತೆಯ ಪರಿಷ್ಕರಣಾ ಸಮಿತಿಯಲ್ಲಿ ಬಹಳಷ್ಟುಲೋಪಗಳು ಕಂಡು ಬಂದಿರುವುದಾಗಿ ಅನೇಕ ತಜ್ಞರು ತಿಳಿಸಿದ್ದಾರೆ. ಸಂವಿಧಾನ ಶಿಲ್ಪಿ ಪದವನ್ನು ಕಿತ್ತು ಹಾಕಲಾಗಿದೆ. ನಾರಾಯಣ ಗುರು, ಭಗತ್‌ಸಿಂಗ್‌ ಅವರಿಗೆ ಸಂಬಂಧಿಸಿದ ವಿಷಯಗಳನ್ನು ಕೈ ಬಿಡಲಾಗಿದೆ. ಬದಲಾವಣೆ ಎಂದರೆ ಏನು ಎಂಬುದನ್ನು ಸಮಿತಿಯವರು ಹಾಗೂ ಸರ್ಕಾರ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ತಿಳಿಸಿದರು.

ಹುನ್ನಾರ ನಡೆಯಲ್ಲ: ಚಿತ್ರದುರ್ಗದ ಬೋವಿ ಗುರು ಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಮಾತನಾಡಿ, ಬೋವಿ ಸಮುದಾಯಕ್ಕೆ ಇರುವ ಮೀಸಲಾತಿಯನ್ನು ತೆಗೆದುಹಾಕುವ ಹುನ್ನಾರ ತೆರೆಮರೆಯಲ್ಲಿ ಸಾಗುತ್ತಿದೆ. ರಾಜ್ಯದಲ್ಲಿ ನಮ್ಮ ಜನಸಂಖ್ಯೆ ಅಪಾರವಾಗಿದ್ದು, ಇಂತಹ ಹುನ್ನಾರಗಳಿಗೆ ಬಗ್ಗುವುದಿಲ್ಲ, ಕುಗ್ಗುವುದಿಲ್ಲ. ಸಂವಿಧಾನ ಬದ್ಧವಾಗಿ ನಮ್ಮ ಪಾಲನ್ನು ಕೇಳುವ ಹಕ್ಕು ನಮಗಿದ್ದು, ಕೊಡಬೇಕಾದ ಧರ್ಮ ಸರ್ಕಾರದ ಕರ್ತವ್ಯವಾಗಿದೆ ಎಂದು ಹೇಳಿದರು.

ಆರ್‌ಎಸ್‌ಎಸ್‌ಗೆ ದಲಿತರನ್ನೇಕೆ ಮುಖ್ಯಸ್ಥರನ್ನಾಗಿ ಮಾಡಿಲ್ಲ: ಸಿದ್ದರಾಮಯ್ಯ

ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನದಾಸ್‌, ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ, ಸಂಸದ ಡಿ.ಕೆ.ಸುರೇಶ್‌, ಆನೇಕಲ್‌ ಶಾಸಕ ಬಿ.ಶಿವಣ್ಣ, ಮಾಜಿ ಸಚಿವ ಗೂಳಿಹಟ್ಟಿಶೇಖರ್‌, ಶಿವರಾಜ ತಂಗಡಿಗಿ, ರಾಜ್ಯ ಬೋವಿ ಸಂಘರ್ಷ ಸಮಿತಿ ಆದ್ಯಕ್ಷ ಗೌತಮ್‌ ವೆಂಕಿ, ಮುಖಂಡರಾದ ಸೀತಾರಾಮ್‌, ಆರ್‌.ಕೆ.ರಮೇಶ್‌, ಸುಷ್ಮಾರಾಜ ಗೋಪಾಲರೆಡ್ಡಿ, ಅಚ್ಯುತರಾಜು, ದೀಪಿಕಾ ರೆಡ್ಡಿ, ಮುನಿನಾರಾಯಣ, ಶಂಕರಪ್ಪ ಇನ್ನಿತರರು ವೇದಿಕೆಯಲ್ಲಿದ್ದರು.