Asianet Suvarna News

ಕನ್ನಡಿಗರಲ್ಲಿ ಕಡಿಮೆಯಾಗುತ್ತಿದೆ ಫಲವಂತಿಕೆ : ಕುಸಿಯುತ್ತಿದೆ ಜನನ ಪ್ರಮಾಣ

ಕನ್ನಡ ರಾಜ್ಯೋತ್ಸವದ ಈ ಸಂದರ್ಭದಲ್ಲೇ ಗಾಬರಿ ಹುಟ್ಟಿಸುವಂತಹ ವಿಚಾರ ಒಂದು ಇಲ್ಲಿದೆ. ಕನ್ನಡಿಗರಲ್ಲಿ ದಿನ ದಿನಕ್ಕೆ ಫಲವಂತಿಕೆ ದರವು ಕಡಿಮೆಯಾಗುತ್ತಿದೆ

TFR Rate Goes Down in Kannadigas Compare to northies
Author
Bengaluru, First Published Nov 1, 2019, 8:23 AM IST
  • Facebook
  • Twitter
  • Whatsapp

ಶ್ರೀಕಾಂತ್‌ ಎನ್‌.ಗೌಡಸಂದ್ರ

ಬೆಂಗಳೂರು (ನ.01]:  ಕನ್ನಡ ರಾಜ್ಯೋತ್ಸವ ಆಚರಣೆಯ ಈ ಸಂಭ್ರಮದ ದಿನದಂದೇ ಗಾಬರಿ ಹುಟ್ಟಿಸುವ ಇಂತಹದ್ದೊಂದು ಪ್ರಶ್ನೆ ಕನ್ನಡ ಕುಲಕೋಟಿಯ ಮುಂದೆ ಎದುರಾಗಿದೆ.

ಮೇಲುನೋಟಕ್ಕೆ ಇಂತಹ ಬೆಳವಣಿಗೆ ಸಾಧ್ಯವೇ ಇಲ್ಲ. ಹುಸಿ ಗಾಬರಿ ಹುಟ್ಟುಹಾಕುವ ಪ್ರಯತ್ನವಿದು ಎಂದೇ ಅನಿಸಬಹುದು. ಆದರೆ, ಭಾರತವೆಂಬ ಒಕ್ಕೂಟ ವ್ಯವಸ್ಥೆಯಲ್ಲಿ ಗುಪ್ತಗಾಮಿನಿಯಾಗಿ ನಡೆದಿರುವ ಉತ್ತರ ಭಾರತದ ತುಷ್ಟೀಕರಣ ಹಾಗೂ ಲಂಗುಲಗಾಮಿಲ್ಲದ ಹಿಂದಿ ಭಾಷಿಕ ಪ್ರದೇಶದ ಆರು ರಾಜ್ಯಗಳ ಜನಸಂಖ್ಯಾ ಸ್ಫೋಟವು ಕನ್ನಡಿಗರ ಅಸ್ತಿತ್ವದ ಕುರಿತು ಗಂಭೀರ ಪ್ರಶ್ನೆ ಹುಟ್ಟುಹಾಕಿದೆ.

ಇಷ್ಟಕ್ಕೂ ಇಂತಹ ಗಾಬರಿ ಹುಟ್ಟಲು ಕಾರಣವಾಗಿರುವುದು ಕೇಂದ್ರ ಸರ್ಕಾರ ಬಹಿರಂಗಪಡಿಸಿರುವ ‘ಟಿಎಫ್‌ಆರ್‌’ (ಟೋಟಲ್‌ ಫರ್ಟಿಲಿಟಿ ರೇಟ್‌- ಸಮುದಾಯವೊಂದರ ಫಲವಂತಿಕೆಯನ್ನು ಗುರುತಿಸಲು ಬಳಸುವ ಪ್ರಮಾಣ) ದರ. ಒಂದು ಕಡೆ ಉತ್ತರ ಭಾರತೀಯರ ಟಿಎಫ್‌ಆರ್‌ ದರ ವಿಪರೀತ ಹೆಚ್ಚಿದ್ದರೆ, ಇದಕ್ಕೆ ಸಂವಾದಿಯಾಗಿ ಕನ್ನಡಿಗರ ಟಿಎಫ್‌ಆರ್‌ ದರ ಅತ್ಯಂತ ಕಡಿಮೆಯಿದೆ ಮತ್ತು ಕ್ರಮೇಣ ಕ್ಷಯಿಸುತ್ತಿದೆ.

ಇದು ಹೀಗೇ ಸಾಗಿದರೆ ಮುಂದಿನ ಒಂದೆರಡು ಪೀಳಿಗೆಗಳಲ್ಲಿ ಕನ್ನಡಿಗರ ಸಂಖ್ಯೆ ಹಾಲಿ ಇರುವ ಸಂಖ್ಯೆಗಿಂತ ಕಡಿಮೆಯಾಗುತ್ತದೆ. ಇದೇ ಸಂದರ್ಭದಲ್ಲಿ ಹಲವು ಪಟ್ಟು ಹೆಚ್ಚುವ ಉತ್ತರ ಭಾರತೀಯರು ಕನ್ನಡ ನೆಲ, ಜಲ ಹಾಗೂ ಅವಕಾಶಗಳನ್ನು ಅತಿಕ್ರಮಿಸಿ, ಕನ್ನಡಿಗ ಸಮುದಾಯ ಕನ್ನಡ ನಾಡಿನಲ್ಲೇ ಮೂಲೆಗುಂಪಾಗುವ ಅಪಾಯವಿದೆ ಎಂದರೆ ಅದು ಖಂಡಿತ ಅತಿಶಯೋಕ್ತಿಯಲ್ಲ.

ಜನಸಂಖ್ಯೆ ನಿಯಂತ್ರಣದಲ್ಲಿ ತಾರತಮ್ಯ:

ಭಾರತದ ಅತಿದೊಡ್ಡ ಸಮಸ್ಯೆ ಜನಸಂಖ್ಯಾ ಸ್ಫೋಟ. ಇದನ್ನು ನಿಯಂತ್ರಣದಲ್ಲಿಡಲು ಕೇಂದ್ರ ಸರ್ಕಾರ ಜನಸಂಖ್ಯೆ ನಿಯಂತ್ರಣದ ಹೆಸರಿನಲ್ಲಿ ನಡೆಸುತ್ತಿರುವ ಪರೋಕ್ಷ ತಂತ್ರಗಾರಿಕೆಯ ಪರಿಣಾಮವಾಗಿ ಉತ್ತರ ಭಾರತೀಯರ ಜನಸಂಖ್ಯೆ ಹೆಚ್ಚುತ್ತಿದೆ ಮತ್ತು ಕನ್ನಡಿಗರ ಸಂಖ್ಯೆ ಕುಸಿಯುತ್ತಿದೆ. ದೇಶದಲ್ಲಿ ಈಗ ಎಷ್ಟುಜನಸಂಖ್ಯೆ ಇದೆಯೋ ಅದು ಅಷ್ಟೇ ಪ್ರಮಾಣದಲ್ಲಿ ಉಳಿಯಬೇಕು ಎಂಬ ರಿಪ್ಲೇಸ್‌ಮೆಂಟ್‌ ರೇಟ್‌ (ಜಾಗತಿಕ ಮಟ್ಟದಲ್ಲಿ ಗುರುತಿಸಲಾದ ದರ) 2.1 ಆಗಿದೆ. ಅಂದರೆ ಯಾವುದೇ ಸಮುದಾಯದ ಜನಸಂಖ್ಯೆ ಈಗಿರುವಷ್ಟೇ ಭವಿಷ್ಯದಲ್ಲೂ ಇರಬೇಕು ಎಂದರೆ ಆ ಸಮುದಾಯದ ರಿಪ್ಲೇಸ್‌ಮೆಂಟ್‌ ದರ ಹಾಗೂ ಟಿಎಫ್‌ಆರ್‌ ದರ 2.1 ಇರಬೇಕು.

ಆದರೆ, ಜನಸಂಖ್ಯೆ ನಿಯಂತ್ರಣ ವಿಚಾರದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳು ಹಾಗೂ ಜಾಗೃತಿಯ ಪರಿಣಾಮವಾಗಿ ಕನ್ನಡಿಗರ ಟಿಎಫ್‌ಆರ್‌ 1.7ರಷ್ಟಿದೆ. ಅದರಲ್ಲೂ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಈ ದರ ಈಗಾಗಲೇ 1.5ರಷ್ಟಿದೆ. ಇನ್ನೂ ಗಾಬರಿ ಹುಟ್ಟಿಸುವ ಸಂಗತಿಯೆಂದರೆ, ಕೊಡವ, ಹವ್ಯಕದಂತಹ ಕೆಲ ಸಮುದಾಯಗಳ ಟಿಎಫ್‌ಆರ್‌ 1.1ರಷ್ಟಿದೆ. ಅಷ್ಟೇ ಅಲ್ಲ 2021ರ ವೇಳೆಗೆ ಕನ್ನಡಿಗರ ಒಟ್ಟಾರೆ ಟಿಎಫ್‌ಆರ್‌ ದರ 1.5ಕ್ಕೆ ಕುಸಿಯಲಿದೆ.

ಹೀಗೆ ಕನ್ನಡಿಗರ ಜನಸಂಖ್ಯೆಯು ರಿಪ್ಲೇಸ್‌ಮೆಂಟ್‌ ದರಕ್ಕಿಂತ ಕಡಿಮೆಯಾಗಿ ಕ್ರಮೇಣ ಕುಗ್ಗುತ್ತಿದ್ದರೂ ಕೇಂದ್ರ ಸರ್ಕಾರ ಮಾತ್ರ ಜನಸಂಖ್ಯಾ ನಿಯಂತ್ರಣದ ಕಾರ್ಯಕ್ರಮಗಳನ್ನು ಕನ್ನಡಿಗರ ಮೇಲೆ ಹೇರಿಕೆ ಮಾಡುತ್ತಲೇ ಇದೆ. ಇದರ ಹಿಂದಿನ ಮರ್ಮವನ್ನು ಕನ್ನಡಿಗರು ಹಾಗೂ ನಮ್ಮ ಜನಪ್ರತಿನಿಧಿಗಳು ಅರ್ಥ ಮಾಡಿಕೊಳ್ಳುತ್ತಲೇ ಇಲ್ಲ.

ಇದು ಅರ್ಥವಾಗಬೇಕಾದರೆ ಉತ್ತರ ಭಾರತೀಯರ ಟಿಎಫ್‌ಆರ್‌ ರೇಟ್‌ ಗಮನಿಸಬೇಕು. ಉತ್ತರ ಭಾರತದ ಬಹುತೇಕ ರಾಜ್ಯಗಳಲ್ಲಿ ಅದರಲ್ಲೂ ವಿಶೇಷವಾಗಿ ಹಿಂದಿ ಬೆಲ್ಟ್‌ ರಾಜ್ಯಗಳಲ್ಲಿ ಜನಸಂಖ್ಯೆ ಭರ್ಜರಿಯಾಗಿ ಹೆಚ್ಚಳ ಕಾಣುತ್ತಿದೆ. ಎಲ್ಲೆಡೆ ಇರಬೇಕಾದ ರಿಪ್ಲೇಸ್‌ಮೆಂಟ್‌ ರೇಟ್‌ 2.1 ಆಗಿದ್ದರೆ, ಬಿಹಾರದ ಟಿಎಫ್‌ಆರ್‌ ದರ 3.2, ಉತ್ತರಪ್ರದೇಶ 3, ಮಧ್ಯಪ್ರದೇಶ 2.7, ರಾಜಸ್ಥಾನ 2.6, ಜಾರ್ಖಂಡ್‌ 2.5, ಛತ್ತೀಸ್‌ಗಢ 2.4 ಟಿಎಫ್‌ಆರ್‌ ದರವಿದೆ. ಈ ಆರು ಹಿಂದಿ ಬೆಲ್ಟ್‌ನ ರಾಜ್ಯಗಳು ದೇಶದ ಶೇ.48ರಷ್ಟುಜನಸಂಖ್ಯೆಯನ್ನು ಹೊಂದಿವೆ.

ಈ ನಿಟ್ಟಿನಲ್ಲಿ ಈ ಆರು ರಾಜ್ಯಗಳ ಜನಸಂಖ್ಯೆ ವೃದ್ಧಿಯನ್ನು ನಿಯಂತ್ರಿಸುವ ಬದಲು ಕೇಂದ್ರ ಸರ್ಕಾರ ಹಾಗೂ ಯೋಜನಾ ಆಯೋಗ (ನೀತಿ ಆಯೋಗ) ಅತಿ ಕಡಿಮೆ ಟಿಎಫ್‌ಆರ್‌ ಹೊಂದಿರುವ ಕರ್ನಾಟಕದಂತಹ ದಕ್ಷಿಣ ರಾಜ್ಯಗಳ ಮೇಲೇ ಜನಸಂಖ್ಯೆ ನಿಯಂತ್ರಣದ ಯೋಜನೆಗಳನ್ನು ಹೇರುತ್ತಿವೆ.

ಜನಸಂಖ್ಯೆಯನ್ನು ಯಥಾಸ್ಥಿತಿಯಲ್ಲಿ ಕಾಯ್ದುಕೊಳ್ಳಲು ಅಗತ್ಯವಿರುವ (ರಿಪ್ಲೇಸ್‌ಮೆಂಟ್‌ ರೇಟ್‌) ದರಕ್ಕಿಂತ ಕಡಿಮೆ ಮಟ್ಟಕ್ಕೆ ರಾಜ್ಯದ ‘ಟಿಎಫ್‌ಆರ್‌’ ದರ (ಟೋಟಲ್‌ ಫರ್ಟಿಲಿಟಿ ರೇಟ್‌) ಬಿದ್ದುಹೋಗಿದೆ. ಹೀಗಿದ್ದರೂ ರಾಜ್ಯದ ಮೇಲೆ ಉದ್ದೇಶಪೂರ್ವಕವಾಗಿ ಜನಸಂಖ್ಯೆ ನಿಯಂತ್ರಣದ ಕಾರ್ಯಕ್ರಮಗಳನ್ನು ಹೇರುತ್ತಿರುವುದರ ಹಿಂದಿನ ಮರ್ಮ ಕನ್ನಡಿಗರಿಗೆ ಅರ್ಥವಾಗುತ್ತಿಲ್ಲ. ಪರಿಣಾಮ ಮತ್ತಷ್ಟುಜನಸಂಖ್ಯೆ ನಿಯಂತ್ರಣಕ್ಕೆ ನಮ್ಮ ರಾಜ್ಯ ಮುಂದಾಗುತ್ತಿದ್ದು, ಅದರಿಂದಾಗಿ ಸದ್ಯದಲ್ಲೇ ಕನ್ನಡಿಗರು ಚೇತರಿಸಿಕೊಳ್ಳಲಾರದಷ್ಟುಪ್ರಮಾಣದಲ್ಲಿ ಜನಸಂಖ್ಯೆ ಕುಸಿಯಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ನಲುಗುತ್ತಿದೆ ಕನ್ನಡ ನಾಡು:

ಉತ್ತರ ಭಾರತೀಯ ರಾಜ್ಯಗಳಲ್ಲಿನ ಜನಸಂಖ್ಯಾ ಸ್ಫೋಟ ಹಾಗೂ ಈ ಸಂಖ್ಯಾಬಾಹುಳ್ಯದ ಪ್ರಭಾವದಿಂದಾಗಿ ಉತ್ತರ ಭಾರತೀಯರು ತಮ್ಮ ರಾಜ್ಯಗಳಲ್ಲಿ ಉದ್ಯೋಗ ಸೃಷ್ಟಿಸಿಕೊಳ್ಳಲಾಗದೆ ದಕ್ಷಿಣದ ರಾಜ್ಯಗಳಿಗೆ ವಲಸೆ ಬರುತ್ತಿದ್ದಾರೆ. ಈ ಮೂಲಕ ಕನ್ನಡ ನಾಡು, ನುಡಿ, ಉದ್ಯೋಗ, ಸವಲತ್ತು, ಹಣಕಾಸು ಸೇರಿದಂತೆ ಪ್ರತಿಯೊಂದು ಕ್ಷೇತ್ರವನ್ನೂ ಆಕ್ರಮಿಸಿಕೊಂಡು ಕನ್ನಡಿಗರನ್ನೇ ಅನಾಥರನ್ನಾಗಿ ಮಾಡುತ್ತಿದ್ದಾರೆ. ಇದಕ್ಕೆ ಕೇಂದ್ರ ಸರ್ಕಾರಗಳೂ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸುತ್ತಾ ಕರ್ನಾಟಕವನ್ನು ಒಕ್ಕೂಟ ವ್ಯವಸ್ಥೆಯ ಭಾಗ ಎಂಬುದನ್ನೇ ಮರೆತು ವರ್ತಿಸುತ್ತಿವೆ.

ಪರಿಣಾಮ ರಾಜ್ಯದಲ್ಲಿರುವ ಕೇಂದ್ರ ಸರ್ಕಾರದ ಉದ್ಯೋಗಗಳು, ರೈಲ್ವೆ, ಬ್ಯಾಂಕಿಂಗ್‌ ಉದ್ಯೋಗಗಳು ಕನ್ನಡಿಗರಿಗೆ ದೊರೆಯದಂತೆ ಕೇಂದ್ರ ಸರ್ಕಾರವೇ ಅಡ್ಡಗಾಲು ಹಾಕುತ್ತಿದೆ. ಇದರ ಜತೆಗೆ ರಾಜಕೀಯ ಪ್ರಾತಿನಿಧ್ಯತೆ, ವ್ಯಾಪಾರ, ವ್ಯವಹಾರ, ಸಂಸ್ಕೃತಿ, ಮನರಂಜನೆ, ನ್ಯಾಯಾಂಗ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಕನ್ನಡಿಗರಿಗೆ ಅನ್ಯಾಯ ಮುಂದುವರೆದಿದೆ.

ಇದೆಲ್ಲವೂ ಅಭಿವೃದ್ಧಿ ಪಥದಲ್ಲಿರುವ ಕನ್ನಡಿಗರನ್ನು ಒಂದು ಹೆಜ್ಜೆ ಹಿಂದಕ್ಕೆ ಎಳೆಯಬಹುದಷ್ಟೆಎಂದು ನಿರಾಳವಾಗುವ ಹೊತ್ತಿನಲ್ಲೇ ಕೇಂದ್ರ ಸರ್ಕಾರಗಳು ಕನ್ನಡದ ಸಂತತಿಯೇ ಕ್ಷೀಣಿಸುವಂತಹ ಕ್ರಮ ಕೈಗೊಳ್ಳುತ್ತಿರುವುದು ಟೋಟಲ್‌ ಫರ್ಟಿಲಿಟಿ ರೇಟ್‌ (ಟಿಎಫ್‌ಆರ್‌) ಅರ್ಥಾತ್‌ ನಾಡಿನ ಒಟ್ಟು ಫಲವಂತಿಕೆಯ ಪ್ರಮಾಣ ಗಮನಿಸಿದರೆ ಸ್ಪಷ್ಟವಾಗಿ ಗೋಚರಿಸುತ್ತಿದೆ.

ಕನ್ನಡ ಕುಲ ಕರಗುತ್ತಿರುವುದು ಹೇಗೆ?

ನಮ್ಮ ದೇಶದ ಸದ್ಯದ (2017) ಟಿಎಫ್‌ಆರ್‌ ದರ 2.2 ರಷ್ಟಿದೆ. ರಿಪ್ಲೇಸ್‌ಮೆಂಟ್‌ ರೇಟ್‌ (2.1)ಗಿಂತ ಇದು ತುಸು ಹೆಚ್ಚಿರುವುದರಿಂದ ಜನಸಂಖ್ಯೆ ನಿಯಂತ್ರಿಸುವುದು ಅಗತ್ಯ. ಹೀಗಾಗಿ ಕುಟುಂಬ ನಿಯಂತ್ರಣ ಕಾರ್ಯಕ್ರಮಗಳಿಂದ ಜನಸಂಖ್ಯೆ ನಿಯಂತ್ರಿಸಲು ಯತ್ನಿಸಲಾಗುತ್ತಿದೆ. 2020ರ ವೇಳೆಗೆ ಭಾರತದ ಟಿಎಫ್‌ಆರ್‌ 2.1 ಆಗಲಿದೆ ಎಂದು ಭಾವಿಸಲಾಗಿದೆ.

ಆದರೆ, ರಿಪ್ಲೇಸ್‌ಮೆಂಟ್‌ ದರಕ್ಕೆ ಅಗತ್ಯವಿರುವ 2.1ರಷ್ಟುಟಿಎಫ್‌ಆರ್‌ ದರವನ್ನು ನಮ್ಮ ರಾಜ್ಯವು 2006ರಲ್ಲೇ ಸಾಧಿಸಿದೆ. 2011ರ ಜನಸಂಖ್ಯಾ ಸಮೀಕ್ಷೆ ವೇಳೆಗೆ ಈ ದರ 1.8ಕ್ಕೆ ಕುಸಿದಿದೆ. ಪ್ರಸ್ತುತ 2015-16ರ ಕೇಂದ್ರ ಸರ್ಕಾರದ ಅಂಕಿ-ಅಂಶಗಳ ಪ್ರಕಾರ 1.7ಕ್ಕೆ ಕುಸಿದಿದ್ದು, 2021ರ ವೇಳೆಗೆ 1.5ಕ್ಕೆ ಕುಸಿಯುವ ನಿರೀಕ್ಷೆ ಇದೆ.

ಈ ಮೂಲಕ ಜನಸಂಖ್ಯೆಯನ್ನು ಯತಾಸ್ಥಿತಿಯಲ್ಲಿ ಕಾಯ್ದುಕೊಳ್ಳಲು ಅಗತ್ಯವಿರುವ 2.1ಕ್ಕಿಂತ 0.6ರಷ್ಟುಕಡಿಮೆ ಪ್ರಮಾಣದಲ್ಲಿ ಕನ್ನಡಿಗರ ಜನಸಂಖ್ಯೆ ವೃದ್ಧಿಸುತ್ತಿದೆ. ಈ ದರ ಮತ್ತಷ್ಟುಕಡಿಮೆಯಾಗುತ್ತಿದ್ದು, ಹಾಸನ ಜಿಲ್ಲೆಯಲ್ಲಿ 1.1, ಮಂಡ್ಯ 1.2, ರಾಮನಗರ 1.2, ತುಮಕೂರು 1.3, ಮೈಸೂರು 1.3ರಷ್ಟಕ್ಕೆ ಇಳಿದಿದೆ. ಮೈಸೂರಿನ ಕೊಡಗು ಭಾಗ ಹಾಗೂ ಮಲೆನಾಡು ಭಾಗದಲ್ಲಿ 1.1ರಷ್ಟಕ್ಕೆ ಇಳಿಕೆಯಾಗಿದೆ. ಹೀಗಾಗಿ ಈ ಭಾಗದಲ್ಲಿ ಕನ್ನಡಿಗರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಕ್ಷೀಣಿಸುತ್ತಿದೆ. ಪ್ರತಿ ದಂಪತಿಗೆ 1 ಮಗು ಮಾತ್ರ ಜನಿಸಿದರೆ ಭವಿಷ್ಯದಲ್ಲಿ ಆ ದಂಪತಿ ಮೃತಪಟ್ಟನಂತರ ಮುಂದಿನ ತಲೆಮಾರಿಗೆ ಒಬ್ಬರು ಮಾತ್ರ ಸೇರ್ಪಡೆಯಾಗುತ್ತಾರೆ. ಈ ಮೂಲಕ ಹಾಲಿ ಇರುವ ಜನಸಂಖ್ಯೆ ಅರ್ಧದಷ್ಟುಕುಸಿಯಲಿದೆ.

ಉತ್ತರ ಕನ್ನಡದಲ್ಲಿ ಈಗಾಗಲೇ ಜನಸಂಖ್ಯೆ ಕುಸಿತ!

ಉದಾ: 2011ರ ಜನಸಂಖ್ಯೆಗೆ ಹೋಲಿಸಿದರೆ 2016ರಲ್ಲಿ ನಡೆದ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್‌) ಪ್ರಕಾರ ಉತ್ತರ ಕನ್ನಡ ಜಿಲ್ಲೆಯ ಜನಸಂಖ್ಯೆಯಲ್ಲಿ ಕುಸಿತ ಉಂಟಾಗಿದೆ. ಈ ಬಗ್ಗೆ ಖುದ್ದು ಅಂದಿನ ಜಿಲ್ಲಾಧಿಕಾರಿ ಉಜ್ವಲ್‌ ಕುಮಾರ್‌ ಘೋಷ್‌ ಘೋಷಿಸಿ ಪುನರ್‌ಪರಿಶೀಲನೆಗೆ ಆದೇಶಿಸಿದ್ದರು. ಆದರೆ, ಬಳಿಕವೂ ಜನಸಂಖ್ಯೆ ಕುಸಿಯುತ್ತಿರುವುದು ಸ್ಪಷ್ಟವಾಗಿತ್ತು.

2011ರ ಸಮೀಕ್ಷೆ ಬಳಿಕ ಜಿಲ್ಲೆಯ ಎಲ್ಲಾ ನಗರಗಳಲ್ಲೂ ಜನಸಂಖ್ಯೆ ಕುಸಿತ ಉಂಟಾಗಿದೆ. ನಗರ ಪ್ರದೇಶದ ಒಟ್ಟು 758 ಜನಗಣತಿ ಬ್ಲಾಕ್‌ಗಳಲ್ಲಿ 3.63,217 ಇದ್ದ ಜನಸಂಖ್ಯೆ ಎನ್‌ಪಿಆರ್‌ನಲ್ಲಿ 3,28,561 ರಷ್ಟಾಗಿತ್ತು. ದಾಂಡೇಲಿ, ಕಾರವಾರ, ಯಲ್ಲಾಪುರ, ಮುಂಡಗೋಡಿ, ಶಿರಸಿ, ಅಂಕೋಲಾ, ಕುಮಟಾ, ಸಿದ್ದಾಪುರ, ಹೊನ್ನಾವರ, ಭಟ್ಕಳ ಎಲ್ಲಾ ಕಡೆ ಕಡಿಮೆಯಾಗಿದೆ. ಗ್ರಾಮೀಣ ಭಾಗದಲ್ಲಿ ಮಾತ್ರ ತುಸು ಏರಿಕೆ ಕಂಡುಬಂದಿತ್ತು.

ಧರ್ಮವಾರು ಟಿಎಫ್‌ಆರ್‌

ಮುಸ್ಲಿಂ, ಹಿಂದು, ಕ್ರಿಶ್ಚಿಯನ್‌, ಸಿಖ್‌, ಬೌದ್ಧ, ಜೈನರು ಸೇರಿ ಎಲ್ಲಾ ಧರ್ಮಗಳ ಟಿಎಫ್‌ಆರ್‌ ಪ್ರಮಾಣ ಕುಸಿಯುತ್ತಿದೆ. ಆದ್ಯಾಗ್ಯೂ ಮುಸ್ಲಿಮರ ಟಿಎಫ್‌ಆರ್‌ ಅತಿ ಹೆಚ್ಚಿದೆ. 2005-06ರಲ್ಲಿ 3.4ರಷ್ಟಿದ್ದ ಮುಸ್ಲಿಂ ಸಮುದಾಯದ ಟಿಎಫ್‌ಆರ್‌ 2015-16ರ ವೇಳೆಗೆ 2.62ಕ್ಕೆ ಕುಸಿದಿದೆ. ಇದೇ ರೀತಿ 2.59 ರಷ್ಟಿದ್ದ ಹಿಂದೂ ಧರ್ಮದ ಟಿಎಫ್‌ಆರ್‌ 2.13ಕ್ಕೆ, 2.34ರಷ್ಟಿದ್ದ ಕ್ರಿಶ್ಚಿಯನ್‌ ಟಿಎಫ್‌ಆರ್‌ 1.99ಕ್ಕೆ, 1.95ರಷ್ಟಿದ್ದ ಸಿಖ್‌ ಧರ್ಮದ ಟಿಎಫ್‌ಆರ್‌ 1.58ಕ್ಕೆ, 2.25 ರಷ್ಟಿದ್ದ ಬೌದ್ಧ ಧರ್ಮೀಯರ ಟಿಎಫ್‌ಆರ್‌ 1.74ಕ್ಕೆ ಕುಸಿದಿದೆ. ಆತಂಕಕಾರಿ ಪ್ರಮಾಣದಲ್ಲಿ ಅತಿ ಕಡಿಮೆ ಟಿಎಫ್‌ಆರ್‌ ದರ ಇರುವುದು ಜೈನ ಧರ್ಮದ್ದಾಗಿದ್ದು, 1.54ರಷ್ಟಿದ್ದ ಟಿಎಫ್‌ಆರ್‌ 2015-16ರ ವೇಳೆಗೆ 1.2 ರಷ್ಟಕ್ಕೆ ಕುಸಿದಿದೆ.

ಏನಿದು ಟಿಎಫ್‌ಆರ್‌?

ಟಿಎಫ್‌ಆರ್‌ (ಟೋಟಲ್‌ ಫರ್ಟಿಲಿಟಿ ರೇಟ್‌ ಅಥವಾ ಒಟ್ಟು ಫಲವಂತಿಕೆ ಪ್ರಮಾಣ). ಇದು ಒಬ್ಬ ಹೆಣ್ಣಿಗೆ 15 ವರ್ಷದಿಂದ 45 ವರ್ಷದ ನಡುವಿನ 30 ವರ್ಷಗಳಲ್ಲಿ ಎಷ್ಟುಮಕ್ಕಳು ಜನಿಸುತ್ತಾರೆ ಎಂಬುದರ ಪ್ರಮಾಣ. ಜನಸಂಖ್ಯೆಯು ನಿಯಂತ್ರಣದಲ್ಲಿದ್ದು, ಯಥಾಸ್ಥಿತಿಯಲ್ಲಿರಬೇಕು ಎಂದರೆ 2.1ರಷ್ಟು ಟಿಎಫ್‌ಆರ್‌ ಕಡ್ಡಾಯವಾಗಿರಬೇಕು. ಇದನ್ನು ಇಡೀ ವಿಶ್ವ ಒಪ್ಪಿಕೊಂಡಿದೆ.

ಏಕೆಂದರೆ, ಹೆಣ್ಣು ಇಬ್ಬರು ಮಕ್ಕಳಿಗೆ ಜನ್ಮ ನೀಡಿದರೆ ಆಕೆಯ ಗಂಡ ಹಾಗೂ ಆಕೆಯ ಸ್ಥಾನವನ್ನು ಇಬ್ಬರು ಮಕ್ಕಳು ತುಂಬಲಿದ್ದಾರೆ. ಈ ಮೂಲಕ ಜನಸಂಖ್ಯೆ ಯಥಾಸ್ಥಿತಿಯಲ್ಲಿರುತ್ತದೆ. ಆದರೆ, ತಡವಾಗಿ ಮದುವೆಯಾಗುವುದು, ನವಜಾತ ಶಿಶು ಮರಣ, ಮಕ್ಕಳ ಅಕಾಲಿಕ ಮರಣ ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಟಿಎಫ್‌ಆರ್‌ ದರವನ್ನು 2.0 ಬದಲಿಗೆ 0.1ರಷ್ಟನ್ನು ಹೆಚ್ಚುವರಿಯಾಗಿ 2.1ಕ್ಕೆ ನಿಗದಿ ಮಾಡಲಾಗಿದೆ. ಹೀಗಾಗಿ ಕನ್ನಡಿಗರ ಜನಸಂಖ್ಯೆ ಈಗ ಇರುವಷ್ಟೇ ಪ್ರಮಾಣದಲ್ಲಿ ಮುಂದುವರೆಯಬೇಕು ಎಂದರೆ ನಮ್ಮ ಟಿಎಫ್‌ಆರ್‌ ದರವೂ ಸಹ 2.1 ಇರಬೇಕು. ಆದರೆ, ರಾಜ್ಯದ ಟಿಎಫ್‌ಆರ್‌ 2017ರ ವೇಳೆಗೆ 1.7ಕ್ಕೆ ಕುಸಿದಿದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ವರದಿ ಪ್ರಕಾರ 2021ರ ವೇಳೆಗೆ 1.5ಕ್ಕೆ ಕುಸಿಯಲಿದೆ ಎಂಬ ಆಘಾತಕಾರಿ ಅಂಶ ಹೊರಬಿದ್ದಿದೆ.

ವಿವಿಧ ರಾಜ್ಯಗಳ ಟಿಎಫ್‌ಆರ್‌

ಪ್ರದೇಶ - ಒಟ್ಟು ಟಿಎಫ್‌ಆರ್‌ - ಗ್ರಾಮೀಣ - ನಗರ

ಅತಿ ಹೆಚ್ಚು

ರಾಷ್ಟ್ರೀಯ ಸರಾಸರಿ - 2.2 - 2.4 - 1.7

ಉತ್ತರ ಪ್ರದೇಶ - 3.0 - 3.2 - 2.4

ಬಿಹಾರ್‌ - 3.2 - 3.3 - 2.4

ಮಧ್ಯಪ್ರದೇಶ - 2.7 - 3.0 - 2.1

ರಾಜಸ್ಥಾನ - 2.6 - 2.7 - 2.2

ಕಡಿಮೆ ಟಿಎಫ್‌ಆರ್‌

ಕರ್ನಾಟಕ - 1.7 - 1.8 - 1.6

ಕೇರಳ - 1.7 - 1.7 - 1.7

ತೆಲಂಗಾಣ - 1.7 - 1.7 -1.6

ಪಶ್ಚಿಮ ಬಂಗಾಳ - 1.6 - 1.7 1.3

ಜಿಲ್ಲಾವಾರು ಟಿಎಫ್‌ಆರ್‌

ಜಿಲ್ಲೆ ಒಟ್ಟು ಜನಸಂಖ್ಯೆ ಉತ್ಪಾದನೆ ದರ (ಟಿಎಫ್‌ಆರ್‌) 1981ರಿಂದ 2011ಕ್ಕೆ ಉಂಟಾದ ಕುಸಿತ (2011ರ ಜನಗಣತಿ)

1981 2001 2011

ದಕ್ಷಿಣ ಜಿಲ್ಲೆಗಳು 2.4 2.1 1.4 1.0

ಬೆಂಗಳೂರು - 1.9 1.9 1.5 0.4

ಬೆಂಗಳೂರು ಗ್ರಾಮೀಣ - 2.2 1.5 -

ಚಾಮರಾಜನಗರ - 2.0 1.3 -

ಚಿಕ್ಕಬಳ್ಳಾಪುರ - - 1.4 -

ಚಿತ್ರದುರ್ಗ 2.9 2.3 1.6 1.3

ದಾವಣಗೆರೆ - 2.4 1.6 -

ಹಾಸನ 2.3 1.9 1.1 1.2

ಕೋಲಾರ 2.3 2.5 1.6 0.7

ಮಂಡ್ಯ 2.5 1.9 1.2 1.3

ಮೈಸೂರು 2.4 2.1 1.3 1.1

ರಾಮನಗರ - - 1.2 -

ತುಮಕೂರು 2.8 2.2 1.3 1.5

ಉತ್ತರ ಜಿಲ್ಲೆಗಳು 3.2 3.0 2.4 0.8

ಬಾಗಲಕೋಟೆ - 3.1 2.5 -

ಬೆಳಗಾವಿ 3.3 2.7 2.2 0.6

ಬಳ್ಳಾರಿ 2.7 3.1 2.4 0.3

ಬೀದರ್‌ 3.5 3.4 2.3 1.2

ವಿಜಯಪುರ 3.8 3.0 2.5 1.3

ಧಾರವಾಡ 3.3 2.5 1.8 1.5

ಗದಗ - 2.6 2.0 -

ಕಲಬುರಗಿ 3.0 3.5 2.4 0.6

ಹಾವೇರಿ - 2.6 2.0 -

ಕೊಪ್ಪಳ - 3.4 2.5 -

ರಾಯಚೂರು 2.9 3.3 2.6 0.3

ಯಾದಗಿರಿ - - 3.1 -

ಒಟ್ಟಾರೆ ರಾಜ್ಯ 2.8 2.4 1.8 1.0

ಕರ್ನಾಟಕಕ್ಕೆ ಪ್ರಶಸ್ತಿ ಕೊಡುವ ಬದಲು ಶಿಕ್ಷೆ!

ಸಂಶೋಧಕಿ ಪ್ರೇರಣಾ ಸಿಂಗ್‌ ಅವರ ಪ್ರಕಾರ ದಕ್ಷಿಣ ರಾಜ್ಯಗಳಲ್ಲಿ ಜನಸಂಖ್ಯೆ ನಿಯಂತ್ರಣ ಸಾಧಿಸಲು ಪ್ರಮುಖ ಕಾರಣ ಭಾಷಾ ರಾಷ್ಟ್ರೀಯತೆ. ಇಡೀ ದೇಶಕ್ಕೆ ಒಂದೇ ಸರ್ಕಾರ, ಪ್ರಜಾಪ್ರಭುತ್ವ ವ್ಯವಸ್ಥೆ, ಆಡಳಿತವಿದ್ದರೂ ದಕ್ಷಿಣ ಭಾರತದ ಭಾಷಾ ಒಕ್ಕೂಟಗಳು ರಾಷ್ಟ್ರೀಯತೆಯಿಂದಾಗಿ ಸಾಮಾಜಿಕ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅಳವಡಿಸಿಕೊಂಡು ಪಾಲಿಸಿವೆ. ಆದರೆ, ಉತ್ತರ ಭಾರತದಲ್ಲಿ ಇದರ ಕೊರತೆಯಿಂದ ಘೋರ ವೈಫಲ್ಯವಾಗಿದೆ. ಜನಸಂಖ್ಯೆ ನಿಯಂತ್ರಣ ಸಾಧಿಸಿರುವ ನಮಗೆ ಪ್ರಶಸ್ತಿ ಕೊಡುವ ಬದಲು ಕೇಂದ್ರ ಸರ್ಕಾರಗಳು ನಮಗೆ ಶಿಕ್ಷೆ ನೀಡಲು ಮುಂದಾಗಿವೆ. ಇದೇ ಚೋದ್ಯ.

- ಪ್ರೊ. ನಾಗೇಗೌಡ ಕಿಲಾರ, ಪ್ರ್ಯಾಧ್ಯಾಪಕರು, ಪಿಇಎಸ್‌ ವಿಶ್ವವಿದ್ಯಾಲಯ

ಕೇಂದ್ರ ಯೋಜನೆಗಳೇ ಕಂಟಕ: ಇಂದಿನಿಂದ ವಿಶೇಷ ವರದಿ ಸರಣಿ

ಜನಸಂಖ್ಯಾ ಸ್ಫೋಟ ಹಾಗೂ ಅದರ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಹಮ್ಮಿಕೊಳ್ಳುತ್ತಿರುವ ಯೋಜನೆಗಳೇ ಕನ್ನಡಿಗರಿಗೆ ಕಂಟಕವಾಗಿ ಪರಿಣಮಿಸಿವೆ. ಇಡೀ ದೇಶಕ್ಕೆ ಒಂದೇ ರೂಪದಲ್ಲಿ ಇರಬೇಕಿದ್ದ ಈ ನೀತಿಯು ಕೇಂದ್ರ ಸರ್ಕಾರದ ಹಿಂದಿ ಭಾಷಿಕರ ತುಷ್ಟೀಕರಣದ ಪರಿಣಾಮವಾಗಿ ಕನ್ನಡದಂತಹ ಸಮುದಾಯಗಳಿಗೆ ಮಾರಕವಾಗಿ ಪರಿಣಮಿಸಿದೆ. ಒಂದು ಸಮುದಾಯದ ಜನಸಂಖ್ಯೆ ಪ್ರಮಾಣ ಭವಿಷ್ಯದಲ್ಲೂ ಹಾಲಿ ಇದ್ದಷ್ಟೇ ಇರಬೇಕು ಎಂದರೆ ಟೋಟಲ್‌ ಫರ್ಟಿಲಿಟಿ ರೇಟ್‌ (ಒಟ್ಟಾರೆ ಫಲವಂತಿಕೆ ದರ) 2.1 ಇರಬೇಕು. ಕನ್ನಡಿಗರ ಟಿಎಫ್‌ಆರ್‌ ದರ 1.7ರಷ್ಟಿದ್ದು, ಕ್ರಮೇಣ 1.5 ಆಗುವ ದಿಸೆಯಲ್ಲಿ ಸಾಗಿದ್ದರೂ ಕೇಂದ್ರ ಸರ್ಕಾರ ಜನಸಂಖ್ಯಾ ನಿಯಂತ್ರಣದ ಒತ್ತಡವನ್ನು ಕರ್ನಾಟಕದ ಮೇಲೆ ಹೇರಿಕೆ ಮಾಡುತ್ತಲೇ ಇದೆ. ಆದರೆ, ಉತ್ತರ ಭಾರತದ ಆರು ರಾಜ್ಯಗಳಲ್ಲಿ ಈ ದರ 3.5ರ ಆಜುಬಾಜು ಇದ್ದರೂ ಅಲ್ಲಿನ ಜನಸಂಖ್ಯೆ ನಿಯಂತ್ರಣ ದಿಸೆಯಲ್ಲಿ ಕಠಿಣ ಕ್ರಮ ಕೈಗೊಳ್ಳುತ್ತಲೇ ಇಲ್ಲ. ಇದರ ಪರಿಣಾಮವಾಗಿಯೇ ಕರುನಾಡು ಇಂದು ಉತ್ತರ ಭಾರತೀಯರ ತೀವ್ರ ದಾಳಿಗೆ ಸಿಲುಕಿರುವುದು. ಕೇಂದ್ರ ಸರ್ಕಾರಿ ಪ್ರಾಯೋಜಿತ ಈ ಗುಪ್ತಗಾಮಿನಿಯಂತಹ ದಾಳಿಯು ಹೇಗೆ ಹಣಕಾಸು, ಉದ್ಯೋಗ, ನೇಮಕಾತಿ, ಉನ್ನತ ಶಿಕ್ಷಣ, ಮನರಂಜನಾ ಕ್ಷೇತ್ರ ಸೇರಿದಂತೆ ಪ್ರತಿಯೊಂದು ಕ್ಷೇತ್ರದ ಮೇಲೆ ಹೇಗೆ ನಡೆದಿದೆ ಎಂಬುದನ್ನು ನಿರೂಪಿಸುವ ಕನ್ನಡಪ್ರಭದ ವಿಶೇಷ ಸರಣಿಯಿದು.

"

Follow Us:
Download App:
  • android
  • ios