'ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರೋ ಬ್ಯಾಡಗಿ ಮೆಣಸಿನಕಾಯಿಗೆ ಪರೀಕ್ಷೆ ಲ್ಯಾಬ್'
ಬ್ಯಾಡಗಿ ಮೆಣೆಸಿನಕಾಯಿ ಉತ್ಪನ್ನಕ್ಕೆ ಮತ್ತಷ್ಟು ಮನ್ನಣೆ ಸಿಗುವಂತೆ ಮಾಡುವ ಗುರಿ ಇದೆ ಎಂದು ಬ್ಯಾಡಗಿ ಮೆಣಸಿನ ಮಾರುಕಟ್ಟೆಗೆ ಭೇಟಿ ಬಳಿಕ ಸಚಿವ ಎಸ್‌ಟಿ ಸೋಮಶೇಖರ್ ಘೋಷಣೆ ಮಾಡಿದ್ದಾರೆ.
ಹಾವೇರಿ, (ಜುಲೈ.15): ರಾಜ್ಯವಷ್ಟೇ ಅಲ್ಲದೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಬ್ಯಾಡಗಿ ಮೆಣಸಿನಕಾಯಿಗೆ ಅದರದ್ದೇ ಆದ ವಿಶೇಷತೆ ಇದೆ. ಇದಕ್ಕೆ ಇನ್ನಷ್ಟು ಮನ್ನಣೆ ಸಿಗುವುದರ ಜೊತೆಗೆ ರೈತರಿಗೂ ಅನುಕೂಲವಾಗಬೇಕು ಎಂಬ ನಿಟ್ಟಿನಲ್ಲಿ ಬ್ಯಾಡಗಿಯ ಮೆಣಸಿನ ಕಾಯಿ ಮಾರುಕಟ್ಟೆಗೆ ಒಂದು ಪ್ರಯೋಗಾಲಯ (ಲ್ಯಾಬೋರೇಟರಿ) ವನ್ನು ಮಂಜೂರು ಮಾಡಲಾಗುವುದು ಎಂದು ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ತಿಳಿಸಿದರು.
ಹಾವೇರಿ ಜಿಲ್ಲೆಯ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಮಾತನಾಡಿದ ಸಚಿವರು, ಬ್ಯಾಡಗಿ ಮೆಣಸಿನಕಾಯಿ ಪರೀಕ್ಷೆಗೆಂದು ಲ್ಯಾಬೋರೇಟರಿಯನ್ನು ಮಾಡುವುದರಿಂದ ಮೆಣಸಿನ ಕಾಯಿ ಗುಣಮಟ್ಟವನ್ನು ಇಲ್ಲಿಯೇ ಪರೀಕ್ಷಿಸಲು ಅನುಕೂಲವಾಗಲಿದೆ. ಇದು ರೈತರ ಹಿತದೃಷ್ಟಿಯಿಂದ ಸಹಕಾರಿ. ಇನ್ನು ಬ್ಯಾಡಗಿ ಎಪಿಎಂಸಿ ಮಾರುಕಟ್ಟೆಯ ಮೂಲಸೌಲಭ್ಯಕ್ಕೆ ಈಗಾಗಲೇ 10 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿದ್ದು, ಟೆಂಡರ್ ಪ್ರಕ್ರಿಯೆ ಹಂತದಲ್ಲಿದೆ ಎಂದು ಸಚಿವರು ತಿಳಿಸಿದರು.
ಎಪಿಎಂಸಿಗೆ 800 ಸಿಬ್ಬಂದಿ ನೇಮಕ
ರಾಜ್ಯದಲ್ಲಿ ಎಪಿಎಂಸಿ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ನೇಮಕಾತಿ ಪ್ರಕ್ರಿಯೆಗೆ ಶೀಘ್ರದಲ್ಲೇ ಚಾಲನೆ ನೀಡಲಾಗುವುದು. ಇದಕ್ಕಾಗಿ ರಾಜ್ಯಾದ್ಯಂತ ಸುಮಾರು 800 ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
ರೈತರಿಗೆ ನಮ್ಮ ಬೆಳೆ ನಮ್ಮ ಹಕ್ಕು ಅಧಿಕಾರ
ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ರೈತರಿಗೇ ಅನುಕೂಲವಾಗಿದೆ. ಇದು ಕೇಂದ್ರ ಸರ್ಕಾರ ಉತ್ತಮ ಯೋಜನೆಯಾಗಿದೆ. ರೈತ ತಾನು ಬೆಳೆದ ಬೆಳೆಯನ್ನು ಮುಕ್ತವಾಗಿ ಎಲ್ಲಿ ಬೇಕಾದರೂ ಮಾರಾಟ ಮಾಡುವ ಮುಕ್ತ ಹಕ್ಕನ್ನು ಹೊಂದಿದ್ದು, ಸ್ಪರ್ಧಾತ್ಮಕ ಬೆಲೆಗೆ ಮಾರಾಟ ಮಾಡಬಹುದಾಗಿದೆ. ಈ ಮೂಲಕ ನಮ್ಮ ಬೆಳೆ ನಮ್ಮ ಹಕ್ಕು ಎಂಬುದು ರೈತರ ಮಂತ್ರವಾಗಿದೆ. ಅವರ ಬೆಳೆಗಳಿಗೆ ಅವರೇ ಬೆಲೆಯನ್ನು ನಿರ್ಧರಿಸುವ ಕಾಲ ಈಗ ಬಂದಿದೆ ಎಂದು ಸಚಿವರು ಸುದ್ದಿಗಾರರಿಗೆ ತಿಳಿಸಿದರು.