Asianet Suvarna News Asianet Suvarna News

ಶೇ.100 ಫಲಿತಾಂಶ ಬಂದರೆ ಶಿಕ್ಷಕರಿಗೆ ಬಂಪರ್!

ಪಾಲಿಕೆಯ ಶಾಲಾ ಕಾಲೇಜುಗಳ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯು ಬೋಧಕರಿಗೆ ಆಫರ್‌ ನೀಡಲಾಗಿದ್ದು, ಪ್ರತಿ ವಿದ್ಯಾರ್ಥಿಯ ಫಲಿತಾಂಶಕ್ಕೆ 1 ಸಾವಿರ ರೂಪಾಯಿ ಬಹುಮಾನ ಸಿಗಲಿದೆ.

teachers got a biggest offer in order to develop the students
Author
Bangalore, First Published Dec 1, 2018, 8:31 AM IST

ಬೆಂಗಳೂರು[ಡಿ.01]: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಶಾಲಾ, ಕಾಲೇಜುಗಳ ಶಿಕ್ಷಕರು ಈ ಬಾರಿ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಉತ್ತಮ ಫಲಿತಾಂಶ ತಂದುಕೊಟ್ಟರೆ ಅದಕ್ಕೆ ತಕ್ಕ ಪ್ರತಿಫಲವಾಗಿ ಇನ್ನು ಮುಂದೆ ಭರ್ಜರಿ ಪ್ರೋತ್ಸಾಹ ಧನ ದೊರೆ​ಯ​ಲಿದೆ. ಶೇ.100ರಷ್ಟುಫಲಿತಾಂಶ ತಂದುಕೊಟ್ಟರೆ ಶಿಕ್ಷಕ, ಉಪನ್ಯಾಸರಿಗೆ ತರಗತಿಯ ಪ್ರತಿ ವಿದ್ಯಾರ್ಥಿಗೆ 1000 ರೂಪಾಯಿಯಂತೆ ಪ್ರೋತ್ಸಾಹ ಧನ ದೊರೆಯಲಿದೆ.

ಆಶ್ಚರ್ಯವಾದರೂ ಇದು ಸತ್ಯ. ಬಿಬಿಎಂಪಿ ಶಾಲಾ, ಕಾಲೇಜುಗಳನ್ನು ಖಾಸಗಿ ಶಾಲಾ, ಕಾಲೇಜುಗಳ ಮಟ್ಟಕ್ಕೆ ಉನ್ನತೀಕರಿಸಲು ಮೈಕ್ರೋಸಾಫ್ಟ್‌ ಮತ್ತು ಟೆಕ್‌ ಅವಂತ್‌ ಗಾರ್ಡ್‌ ಕಂಪನಿಗಳ ಸಹಯೋಗದಲ್ಲಿ ಬಿಬಿಎಂಪಿ ರೂಪಿಸಿರುವ ‘ಬಿಬಿಎಂಪಿ ರೋಶಿನಿ’ ಯೋಜನೆಯಡಿ, ಉತ್ತಮ ಫಲಿತಾಂಶಕ್ಕೆ ಕಾರಣವಾಗುವ ಶಿಕ್ಷಕರು ಮತ್ತು ಉಪನ್ಯಾಸಕರನ್ನು ಪ್ರೋತ್ಸಾಹಿಸಲು ಎಷ್ಟುಉತ್ತಮ ಫಲಿತಾಂಶ ತಂದುಕೊಡುತ್ತಾರೋ ಅಷ್ಟೂಉತ್ತಮ ಪ್ರೋತ್ಸಾಹಧನ ನೀಡಲು ಸಿದ್ಧತೆ ನಡೆದಿದೆ.

ಖಚಿತ ಮಾಹಿತಿ ಪ್ರಕಾರ, ಬಿಬಿಎಂಪಿಯ ಯಾವುದೇ ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನಲ್ಲಿ ಈ ವರ್ಷದ 10 ಹಾಗೂ 12ನೇ ತರಗತಿ ಅಂತಿಮ ಪರೀಕ್ಷೆಯಲ್ಲಿ ಶೇ.100ರಷ್ಟುಫಲಿತಾಂಶ ಪಡೆದರೆ, ಆ ಶಾಲೆ ಹಾಗೂ ಕಾಲೇಜಿನಲ್ಲಿ 10ನೇ ತರಗತಿ ಮತ್ತು ದ್ವಿತೀಯ ಪಿಯುಸಿಗೆ ಪಾಠ ಮಾಡಿದ ಪ್ರತಿ ಶಿಕ್ಷಕರು ಮತ್ತು ಉಪನ್ಯಾಸಕರಿಗೆ ತರಗತಿಯ ಪ್ರತಿ ವಿದ್ಯಾರ್ಥಿಗೆ 1000 ರೂಪಾಯಿಯಂತೆ ಪ್ರೋತ್ಸಾಹಧನ ನೀಡಲು ಯೋಜನೆಯ ರೂವಾರಿಗಳಾದ ಮೈಕ್ರೋಸಾಫ್ಟ್‌ ಮತ್ತು ಟೆಕ್‌ ಅವಂತ್‌ಗಾರ್ಡ್‌ ಸಂಸ್ಥೆಗಳು ಮುಂದಾಗಿವೆ. ಅಂದರೆ, ಒಂದು ಶಾಲೆಯಲ್ಲಿ 10ನೇ ತರಗತಿಯಲ್ಲಿ 100 ಮಕ್ಕಳಿದ್ದು ಎಲ್ಲರೂ ಉತ್ತೀರ್ಣರಾದರೆ, 1 ಲಕ್ಷ ಪ್ರೋತ್ಸಾಹಧನ ಶಿಕ್ಷಕರಿಗೆ ಸಿಗಲಿದೆ.

ಅಷ್ಟೇ ಅಲ್ಲ, ಪರೀಕ್ಷೆ ಬರೆದ ಎಲ್ಲ ಮಕ್ಕಳೂ ಉತ್ತೀರ್ಣವಾಗಿ ಶೇ.100ರಷ್ಟುಫಲಿತಾಂಶದ ಜೊತೆಗೆ ಅತ್ಯುನ್ನತ ಶ್ರೇಣಿ (ಡಿಸ್ಟಿಂಕ್ಷನ್‌), ಪ್ರಥಮ ದರ್ಜೆ, ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಶೇಕಡವಾರು ಫಲಿತಾಂಶಕ್ಕೆ ಅನುಗುಣವಾಗಿ ಹೆಚ್ಚುವರಿ ಪ್ರೋತ್ಸಾಹಧನ ಕೂಡ ನೀಡಲಾಗುವುದು. ಈ ವಿಷಯಕ್ಕೆ ಸಂಬಂಧಿಸಿದಂತೆ ಎಲ್ಲ ಲೆಕ್ಕಾಚಾರಗಳನ್ನು ಅಂತಿಮಗೊಳಿಸಿ ಪಾಲಿಕೆ ಆಯುಕ್ತರಿಗೆ ಸಲ್ಲಿಸಲಾಗಿದೆ. ವಿದೇಶಿ ಪ್ರವಾಸದಲ್ಲಿರುವ ಅವರು ವಾಪಸ್‌ ಬಂದ ಕೂಡಲೇ ಪರಿಶೀಲಿಸಿ ಅನುಮೋದನೆ ನೀಡಬೇಕಿದೆ ಎಂದು ಬಿಬಿಎಂಪಿ ರೋಶಿನಿ ಯೋಜನೆ ನಿರ್ವಹಿಸುತ್ತಿರುವ ಟೆಕ್‌ ಅವಂತ್‌ ಗಾರ್ಡ್‌ ಸಂಸ್ಥೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ರೋಶಿಣಿ ಯೋಜನೆಯಡಿ ಬಿಬಿಎಂಪಿ ಶಾಲೆ ಕಾಲೇಜಿನ 10 ಮತ್ತು 12ನೇ ತರಗತಿ ಪರೀಕ್ಷೆಗೆ ಸಂಬಂಧಿಸಿದಂತೆ ಸಾಮಾನ್ಯ ಪರೀಕ್ಷಾ ಮಂಡಳಿ ರಚನೆ ಮಾಡಲಾಗಿದೆ. ಈ ಮಂಡಳಿಯಡಿ ಪರೀಕ್ಷೆ ನಡೆಯಲಿದೆ.

154 ಶಾಲೆ ಎಲ್ಲ ತರಗತಿಗೂ ವಿಸ್ತರಣೆ:

ಬಿಬಿಎಂಪಿ ಎಲ್ಲ 156 ಶಾಲೆಗಳಲ್ಲಿ ಪ್ರಸಕ್ತ ಸಾಲಿನಲ್ಲಿ 10ನೇ ತರಗತಿ ಮತ್ತು ದ್ವಿತೀಯ ಪಿಯುಸಿಗೆ ಆರಂಭಿಸಲಾಗಿರುವ ಈ ಪ್ರೋತ್ಸಾಹಧನ ಕಾರ್ಯಕ್ರಮ, ಮುಂದಿನ ವರ್ಷದಿಂದ ಪಾಲಿಕೆ ಶಾಲಾ ಕಾಲೇಜುಗಳಲ್ಲಿನ ಎಲ್ಲ ತರಗತಿಗಳಿಗೂ ವಿಸ್ತರಿಸಲಾಗುವುದು. ಬಿಬಿಎಂಪಿ ಶಾಲೆಗಳಲ್ಲಿ ಪರೀಕ್ಷೆ ನಡೆಸಲು ರಚಿಸಲಾಗಿರುವ ಸಾಮಾನ್ಯ ಪರೀಕ್ಷಾ ಮಂಡಳಿ ಮೂಲಕವೇ ಎಲ್ಲ ತರಗತಿಗಳಲ್ಲೂ ಸಾಮಾನ್ಯ ಪರೀಕ್ಷೆ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.

ಡಿಜಿಟಲ್‌ ಟಿವಿ, ಜೂನ್‌ನಲ್ಲಿ ಶಿಕ್ಷಕರಿಗೆ ಟ್ಯಾಬ್‌

ಈಗಾಗಲೇ ಬಿಬಿಎಂಪಿ ರೋಶಿನಿ ಯೋಜನೆಯಡಿ ಪಾಲಿಕೆಯ ಎಲ್ಲಾ ಶಾಲೆಗಳಲ್ಲಿ ತಂತ್ರಜ್ಞಾನ ಬಳಸಿಕೊಂಡು ತರಗತಿ ನಡೆಸಲು 64 ಇಂಚಿನ ಡಿಜಿಟಲ್‌ ಟಿವಿಗಳನ್ನು ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ. ಇದಕ್ಕೆ ಶಿಕ್ಷಕರಿಗೆ ಹಂತಹಂತವಾಗಿ ಅಗತ್ಯ ತರಬೇತಿಯನ್ನೂ ನೀಡಲಾಗುತ್ತಿದೆ. ಮುಂದಿನ ಜೂನ್‌ನಲ್ಲಿ ಶಿಕ್ಷಕರಿಗೆ ಟ್ಯಾಬ್‌ ನೀಡಲಾಗುತ್ತದೆ. ಬಳಿಕ ಟ್ಯಾಬ್‌ ತರಬೇತಿ ನೀಡಿ ಶಿಕ್ಷಕರು ಅದನ್ನು ಬಳಸುವುದು ಕಲಿತ ಬಳಿಕ ಮಕ್ಕಳಿಗೂ ನೀಡಲಾಗುವುದು. ಪ್ರತಿದಿನದ ಪಠ್ಯ ಬೋಧನೆಯನ್ನು ಡಿಜಿಟಲ್‌ ಟಿವಿ ಮೂಲಕವೇ ನೀಡಲಾಗುತ್ತದೆ. ಪ್ರತೀ ಶಾಲಾ ಮಕ್ಕಳಿಗೂ ನಿತ್ಯ ಒಂದು ಗಂಟೆ ದೂರದರ್ಶನ ಕೇಂದ್ರದ ಸಹಕಾರದೊಂದಿಗೆ ಇಂಗ್ಲಿಷ್‌ ಕಲಿತಾ ತರಗತಿ ಪ್ರಸಾರವಾಗಲಿದೆ. ಒಂದೊಮ್ಮೆ ಯಾವುದೇ ವಿದ್ಯಾರ್ಥಿ ತರಗತಿಗೆ ಗೈರು ಹಾಜರಾದ ದಿನದ ಪಾಠವನ್ನು ತನ್ನ ಟ್ಯಾಬ್‌ ಮೂಲಕ ವೀಕ್ಷಿಸಬಹುದಾಗಿರುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Follow Us:
Download App:
  • android
  • ios