ಬೆಂಗಳೂರು, (ಮೇ. 22) : ಲಾಕ್ ಡೌನ್ ಪರಿಣಾಮ ಸಂಕಷ್ಟಕ್ಕೆ ಸಿಲುಕಿರುವ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಕರ್ನಾಟಕ ಸರ್ಕಾರ 5 ಸಾವಿರ ರೂ. ಪರಿಹಾರ ಧನಕ್ಕಾಗಿ ಅರ್ಜಿ ಸಲ್ಲಿಸಲು ಲಿಂಕ್ ಓಪನ್ ಮಾಡಲಾಗಿದೆ.

ಈ ಮೊದಲ ಹೇಳಿದಂತೆ ಸೇವಾ ಸಿಂಧು ಪೋರ್ಟಲ್ ಮೂಲಕವೇ ಆಟೋ ಮತ್ತು ಟ್ಯಾಕ್ಸಿ ಚಾಲಕರು ಪರಿಹಾರ ಧನಕ್ಕಾಗಿ ಇಂದಿನಿಂದ (ಶುಕ್ರವಾರ) ಅರ್ಜಿ ಸಲ್ಲಿಸಬಹುದು.

ಈ ಕುರಿತು ರಾಜ್ಯ ಸಾರಿಗೆ ಇಲಾಖೆ ಮಾಹಿತಿ ನೀಡಿದೆ. ಇನ್ನು ಮುಖ್ಯವಾಗಿ ಈ ಹಿಂದೆ  ಚಾಲಕರು ಫಿಟ್ನೆಸ್ ಸರ್ಟಿಫಿಕೇಟ್ ಕೊಡಬೇಕೆಂಬ ನಿಯಮ ಇತ್ತು.ಆದರೆ ಇದೀಗ ಈ ನಿಯಮವನ್ನು ಸಾರಿಗೆ ಇಲಾಖೆ ಕೈಬಿಟ್ಟಿದೆ. ಇದರಿಂದ ಚಾಲಕರು ನಿಟ್ಟುಸಿರು ಬಿಡುವಂತಾಗಿದೆ.

ಆಟೋ, ಕ್ಯಾಬ್ ಚಾಲಕರು 5000 ರೂ. ಪಡೆಯುವುದು ಹೇಗೆ? ಯಾವೆಲ್ಲಾ ಡ್ರೈವರ್ಸ್‌ಗೆ ಅನ್ವಯ? 

ಲಾಕ್ ಡೌನ್ ಪರಿಣಾಮ ಸಂಕಷ್ಟಕ್ಕೆ ಸಿಲುಕಿರುವ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಕರ್ನಾಟಕ ಸರ್ಕಾರ 5 ಸಾವಿರ ರೂ. ಪರಿಹಾರ ಘೋಷಣೆ ಮಾಡಿತ್ತು. ನಂತರ ಈ ಹಣ ಪಡೆಯಲು ಪೋಸ್ಟ್ ಆಫೀಸ್‌ನಲ್ಲಿ ಅರ್ಜಿ ಸಲ್ಲಿಸಲು ಸೂಚಿಸಲಾಗಿತ್ತು.

ಆದ್ರೆ, ಜನದಟ್ಟಣೆ ಹೆಚ್ಚಾಗಿ ಕಂಡುಬಂದ ಹಿನ್ನೆಲೆಯಲ್ಲಿ ಅಂಚೆ ಕಚೇರಿಯಲ್ಲಿ ಅರ್ಜಿ ಸಲ್ಲಿಸುವುದನ್ನ ಕ್ಯಾನ್ಸಲ್ ಮಾಡಲಾಗಿತ್ತು, ತದನಂತರ ರಾಜ್ಯ ಸರ್ಕಾರದಿಂದ ಕೆಲ ದಿನಗಳವೆಗೆ ಈ ಕುರಿತು ಯಾವುದೇ ಸೂಚನೆಗಳು ಬರಲಿಲ್ಲ. 

ಇದರಿಂದ  ಪರಿಹಾರಕ್ಕಾಗಿ ಅರ್ಜಿ ಹಾಕುವುದು ಹೇಗೆಂಬುದು ತಿಳಿಯದೇ ಚಾಲಕರು ಗೊಂದಲಕ್ಕೀಡಾಗಿದ್ದರು. ಆದ್ರೆ,ಇದೀಗ ಎಲ್ಲಾ ಗೊಂದಲಗಳಿಗೆ ತೆರೆಬಿದ್ದಿದೆ.

ಅರ್ಜಿ ಸಲ್ಲಿಕೆ ವಿಧಾನ
https://sevasindhu.karnataka.gov.in
ವೆಬ್‌ಸೈಟ್‌ನಲ್ಲಿ 'ಆಟೋರಿಕ್ಷಾ ಚಾಲಕರು/ಟಾಕ್ಸಿ ಚಾಲಕರಿಗೆ ಕೋವಿಡ್-19ರ ಅವಧಿಯಲ್ಲಿ ಪರಿಹಾರ ವಿತರಿಸುವುದು' ಎಂಬ ಬರಹದ ಮೇಲೆ ಕ್ಲಿಕ್ ಮಾಡಿದರೆ ಅರ್ಜಿ ಸಲ್ಲಿಸುವ ಪುಟ ತೆರೆಯುತ್ತದೆ. ದಯವಿಟ್ಟು ಅರ್ಜಿಯನ್ನು ಆಂಗ್ಲ ಭಾಷೆ ಯಲ್ಲಿ ನೋಂದಾಯಿಸಿ ಎಂದು ಮನವಿ ಮಾಡಲಾಗಿದೆ. ಒಟ್ಟು 4 ಹಂತದಲ್ಲಿ ಅರ್ಜಿಯನ್ನು ಸಲ್ಲಿಸಬೇಕು.

ಮೊದಲ ಹಂತ
ಮೊದಲ ಹಂತ ಮೊದಲ ಹಂತದಲ್ಲಿ ಅರ್ಜಿದಾರರ ವಿಳಾಸ ನಮೂದಿಸಬೇಕು. ಆಧಾರ್ ಕಾರ್ಡ್‌ನಲ್ಲಿ ಇರುವಂತೆ ಹೆಸರು, ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ, ವಿಳಾಸ, ಜಿಲ್ಲೆ, ತಾಲೂಕು, ವರ್ಗವನ್ನು ಭರ್ತಿ ಮಾಡಬೇಕು.

2ನೇ ಹಂತ
ಚಾಲಕರು 2ನೇ ಹಂತದಲ್ಲಿ ಚಾಲನಾ ಅನುಜ್ಞಾ ಪತ್ರ (ಡಿಎಲ್) ವಿವರಗಳನ್ನು ಭರ್ತಿ ಮಾಡಬೇಕು. ಡಿಎಲ್ ಸಂಖ್ಯೆ, ಡಿಎಲ್ ಸಿಂಧುತ್ವ ದಿನಾಂಕ, ಡಿಎಲ್‌ನಲ್ಲಿ ಇರುವಂತೆ ನಿಮ್ಮ ಹೆಸರು, ಬ್ಯಾಡ್ಜ್‌ ಸಂಖ್ಯೆ, ವಾಹನದ ವರ್ಗದ ವಿವರ ತುಂಬಬೇಕು.

3ನೇ ಹಂತ
 ಚಾಲಕರು ಲಾಕ್‌ಡೌನ್‌ಗಿಂತ ಮುನ್ನ ನೀವು ಚಲಾಯಿಸುತ್ತಿದ್ದ ವಾಹನದ ವಿವರಗಳನ್ನು ತುಂಬಬೇಕು. ವಾಹನದ ಸಂಖ್ಯೆ, ಚಾಸಿಸ್ ಸಂಖ್ಯೆ (ಕೊನೆಯ 5 ಅಂಕಿ), ಆರ್‌ಸಿ ಪುಸ್ತಕದಲ್ಲಿ ಇರುವಂತೆ ಹೆಸರು, ಸಾರಿಗೆ ವಾಹನದ ವರ್ಗ, ಆಸನ ಸಂಖ್ಯೆ, ಅರ್ಹತಾ ಪತ್ರದ ಸಿಂಧುತ್ವ ದಿನಾಂಕ ಭರ್ತಿ ಮಾಡಬೇಕು.

4ನೇ ಹಂತ
4ನೇ ಹಂತದಲ್ಲಿ ಆಟೋರಿಕ್ಷಾ ಕ್ಯಾಬ್ / ಟ್ಯಾಕ್ಸಿ ಚಾಲಕನಾದ ನಾನು ಲಾಕ್‍ಡೌನ್ ಸಮಯದಲ್ಲಿ ದೈನಂದಿನ ಉದ್ಯೋಗವನ್ನು ನಡೆಸಲಾಗದೆ ಆದಾಯ ಕಳೆದುಕೊಂಡಿರುವುದು ಸತ್ಯವಾಗಿದೆ ಮತ್ತು ಈ ಸಮಯದಲ್ಲಿ ನನ್ನ ಆರ್ಥಿಕ ಸ್ಥಿತಿಯು ಉತ್ತಮವಾಗಿರುವುದಿಲ್ಲ ಎಂದು ದೃಢೀಕರಿಸುತ್ತೇನೆ ಎಂದು ಸ್ವಯಂ ಘೋಷಣೆ ಮಾಡಿಕೊಳ್ಳಬೇಕು.