ಆನೇಕಲ್‌[ಜ.04): ಕರ್ನಾಟಕ ರಾಜ್ಯದಲ್ಲಿ ಕುಡಿಯುವ ನೀರಿಗಾಗಿ ಕೈಗೆತ್ತಿಕೊಂಡಿರುವ ಮೇಕೆದಾಟು ಯೋಜನೆ ಖಂಡಿಸಿ ತಮಿಳುನಾಡು ರೈತರು ಮೇಕೆದಾಟುಗೆ ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ರಾಜ್ಯದ ಗಡಿಭಾಗದಲ್ಲಿ ನಡೆದಿದೆ.

ತಮಿಳುನಾಡಿನ ಹೊಸೂರು ನಗರದ ಹೊರವಲಯ ದರ್ಗಾದಿಂದ ತುಳುನಾಡಿನ ವಿವಿಧ ರೈತ ಸಂಘಟನೆಗಳ ನೂರಾರು ಮುಖಂಡರು ಮತ್ತು ಸದಸ್ಯರು ಸಿಪ್‌ಕಾಟ್‌ ಕೈಗಾರಿಕಾ ಪ್ರದೇಶದ ಅಶೋಕ್‌ ಲೈಲ್ಯಾಂಡ್‌ ಕಂಪನಿ ಬಳಿ ಕರ್ನಾಟಕ ಗಡಿ ದಾಟಲು ಆಗಮಿಸುತ್ತಿದ್ದರು. ಕೃಷ್ಣಗಿರಿ ಜಿಲ್ಲಾ ವರಿಷ್ಠಾಧಿಕಾರಿ ಮಹೇಶ್‌ ಕುಮಾರ್‌ ಮತ್ತು ಸಿಪ್‌ಕಾಟ್‌ ಪ್ರದೇಶದ ವೃತ್ತ ನಿರೀಕ್ಷಕ ಶರವಣನ್‌ ಮತ್ತು ಪೊಲೀಸ್‌ ಸಿಬ್ಬಂದಿ ಪ್ರತಿಭಟನಾಕಾರರನ್ನು ತಡೆದರು. ರೈತ ಮುಖಂಡ ಪಾಂಡಿಯನ್‌ ನೇತೃತ್ವ ವಹಿಸಿದ್ದರು. ಈ ನಡುವೆ ರೈತ ಸಂಘಟನೆಗಳ ಮುಖಂಡರು, ಎಸ್ಪಿ ಮಹೇಶ್‌ಕುಮಾರ್‌ರವರ ನಡುವೆ ಮಾತಿನ ಚಕಮಕಿ ನಡೆಯಿತು.

ಅತ್ತಿಬೆಲೆ ಬಳಿ ಕಟ್ಟೆಚ್ಚರ:

ತಮಿಳುನಾಡಿನ ರೈತ ಸಂಘಟನೆಗಳ ನೂರಾರು ಕಾರ್ಯಕರ್ತರು ರಾಜ್ಯದ ಗಡಿ ಪ್ರವೇಶಿಸುತ್ತಾರೆ ಎಂಬ ಸುಳಿವನ್ನು ಅರಿತ ರಾಜ್ಯ ಪೊಲೀಸರು ಹೆಚ್ಚುವರಿ ಸಿಬ್ಬಂದಿಯನ್ನು ನೇಮಿಸಿಕೊಂಡು ಮುಂಜಾಗ್ರತಾ ಕ್ರಮ ವಹಿಸಿದರು.