ವಿಧಾಸನಭೆ (ಅ.12) :  ನೆರೆ ಪರಿಹಾರಕ್ಕೆ ಸಂಬಂಧಿಸಿದಂತೆ ಸಚಿವ ಈಶ್ವರಪ್ಪ ನೀಡಿದ ಹೇಳಿಕೆಯನ್ನು ಪ್ರಸ್ತಾಪಿಸಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೀಡಿದ ಟಾಂಗ್‌ನಿಂದಾಗಿ ಉಭಯ ನಾಯಕರ ನಡುವೆ ತೀವ್ರ ವಾಕ್ಸಮರ ನಡೆದ ಪ್ರಸಂಗಕ್ಕೆ ಸದನ ಸಾಕ್ಷಿಯಾಯಿತು. ಮಾತಿನ ಚಕಮಕಿಯ ಆವೇಗದಲ್ಲಿ ಉಭಯ ನಾಯಕರು ಪರಸ್ಪರ ಏಕವಚನ ಪ್ರಯೋಗ ಮಾಡಿದರು. ಅಷ್ಟೇ ಅಲ್ಲ, ಸರ್ಪ, ಕಾಳಸರ್ಪ, ರಾಕ್ಷಸ ಮತ್ತು ನಿನ್ನನ್ನು ಸುಡಬೇಕು ಎಂಬಂತಹ ಪದಗಳು ಯಥೇಚ್ಛವಾಗಿ ಬಳಕೆಯಾದವು.

ಶುಕ್ರವಾರವೂ ನೆರೆ ಸಂಕಷ್ಟಮತ್ತು ಪರಿಹಾರ ವಿಚಾರವಾಗಿ ನಿಲುವಳಿ ಸೂಚನೆ ಮೇಲೆ ಮಾತು ಮುಂದುವರೆಸಿದ ಸಿದ್ದರಾಮಯ್ಯ ಅವರು, ಸಚಿವರೊಬ್ಬರು ಸಂತ್ರಸ್ತರಿಗೆ 10 ಸಾವಿರ ರು. ಕೊಟ್ಟಿರೋದೇ ಹೆಚ್ಚು ಎನ್ನುತಾರೆ ಎನ್ನುತ್ತಾ ಇದಕ್ಕೆ ಸಂಬಂಧಿಸಿದ ಪತ್ರಿಕಾ ವರದಿಯನ್ನು ಪ್ರದರ್ಶಿಸಿದರು. ತಕ್ಷಣ ಕೆಲ ಕಾಂಗ್ರೆಸ್‌ ಸದಸ್ಯರು ಆ ಹೇಳಿಕೆ ಸಚಿವ ಈಶ್ವರಪ್ಪ ಅವರದ್ದು ಎಂದು ಕೂಗಿದರು.

ಈ ಹಂತದಲ್ಲಿ ಈಶ್ವರಪ್ಪ ಸ್ಪಷ್ಟನೆ ನೀಡಲು ಎದ್ದು ನಿಂತಾಗ ಅದಕ್ಕೆ ಸಿದ್ದರಾಮಯ್ಯ ಅವಕಾಶ ನೀಡಲಿಲ್ಲ. ನನ್ನ ಹೆಸರು ಪ್ರಸ್ತಾಪವಾಗಿದೆ. ಹೀಗಾಗಿ ನಾನು ಮಾತನಾಡಬೇಕು ಎಂದು ಈಶ್ವರಪ್ಪ ಆಗ್ರಹಿಸಿದರು. ನಾನು ನಿಮ್ಮ ಹೆಸರು ಪ್ರಸ್ತಾಪಿಸಿಲ್ಲ ಎಂದ ಸಿದ್ದರಾಮಯ್ಯ ಅವಕಾಶ ನೀಡಲು ನಿರಾಕರಿಸಿದರು.

ಇದರಿಂದ ಕೆಂಡಾಮಂಡಲಗೊಂಡ ಈಶ್ವರಪ್ಪ ಅವರು ಸಿದ್ದರಾಮಯ್ಯ ಅವರ ವಿರುದ್ಧ ತೀವ್ರ ವಾಗ್ದಾಳಿಗೆ ಮುಂದಾದರು. ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುತ್ತೀರಲ್ಲಾ ನನ್ನ ಹೆಸರು ಪ್ರಸ್ತಾಪಿಸಿದ ಮೇಲೆ ಮಾತನಾಡಲು ಅವಕಾಶ ನೀಡದಿರುವುದು ಪ್ರಜಾಪ್ರಭುತ್ವಾನಾ? ಅಥವಾ ಇದು ರಾಕ್ಷಸಿ ಪ್ರಭುತ್ವಾನಾ ಎಂದು ಪ್ರಶ್ನಿಸಿದರು.

ಅನಂತರ ವೈಯಕ್ತಿಕ ವಾಗ್ದಾಳಿ ಆರಂಭಿಸಿದ ಈಶ್ವರಪ್ಪ ಅವರು, ತಾನು ವಿರೋಧ ಪಕ್ಷದ ನಾಯಕ ಅಂತ ರಾಜ್ಯಕ್ಕೆ ಗೊತ್ತಾಗುವುದಷ್ಟೇ ಸಿದ್ದರಾಮಯ್ಯಗೆ ಬೇಕು. ಸೋನಿಯಾಗಾಂಧಿ ಬಾಗಿಲಿಗೆ ಬಿಟ್ಟುಕೊಳ್ಳದಿದ್ದರೂ ಹತ್ತಾರು ಬಾರಿ ದೆಹಲಿಗೆ ಅಲೆದವರು ನೀವು. ಯಾರೋ ಕಟ್ಟಿದ ಕಾಂಗ್ರೆಸ್‌ ಹುತ್ತದಲ್ಲಿ ಹಾವಿನಂತೆ ಹೋಗಿ ಸೇರಿಕೊಂಡಿದ್ದೀರಿ. ನಿಮಗೂ ಕಾಂಗ್ರೆಸ್‌ಗೂ ಏನು ಸಂಬಂಧ? ಪಕ್ಷ ಕಟ್ಟಿದವರೆಲ್ಲಾ ಪಾಪ ಸುಮ್ಮನೆ ಕೂತಿದ್ದಾರೆ ಎಂದರು.

‘ಮುಖ್ಯಮಂತ್ರಿ ಆಗಿದ್ದೆ, ಆ ಸ್ಥಾನ ಹೋಯಿತು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ 36 ಸಾವಿರ ಮತಗಳ ಅಂತರದಿಂದ ಸೋತೆ. ಕಾಂಗ್ರೆಸ್‌ನ 70 ಸ್ಥಾನಕ್ಕೆ ತಂದು ನಿಲ್ಲಿಸಿದ್ದಾಯಿತು. ಮೈತ್ರಿ ಸರ್ಕಾರ ಪತನಕ್ಕೂ ಸಿದ್ದರಾಮಯ್ಯ ಕಾರಣ ಎಂದು ಜೆಡಿಎಸ್‌ನವರೇ ಹೇಳಿದ್ದಾರೆ. ಏನಾದರೂ ಆಗಲಿ, ನಿನಗೆ ಪ್ರತಿಪಕ್ಷ ಸ್ಥಾನ ಮಾತ್ರ ಬೇಕು. ನಿನ್ನ ಹಣೆಬರಹಕ್ಕೆ ಬೆಂಕಿ ಹಾಕ. ಎಲ್ಲಾ ಹೋಗಿದ್ದರೆ ನಿಮ್ಮ ಹಿಂದೆ ಇನ್ನು ನಾಲ್ಕು ಜನ ಮಾತ್ರ ಇದ್ದಾರೆ. ಅವರಿಗೂ ಬೆಂಕಿ ಹಾಕಿ’ ಎಂದು ಈಶ್ವರಪ್ಪ ಶಾಪ ಹಾಕತೊಡಗಿದರು.

ಇದರಿಂದ ಕ್ರುದ್ಧರಾದ ಸಿದ್ದರಾಮಯ್ಯ, ‘ಮಾನ ಮರ್ಯಾದೆ ಇಲ್ಲ ನಿನಗೆ. ರಾಜಕೀಯ ಸಂಸ್ಕೃತಿಯೇ ಇಲ್ಲ. ಸಂಸ್ಕಾರ ಇಲ್ಲದ ನಿನ್ನಂಥವರಿಂದ ನಾನು ಪಾಠ ಕಲಿಯಬೇಕಿಲ್ಲ. ನಾನು ವಿಪಕ್ಷ ನಾಯಕನಾದ ವಿಚಾರವನ್ನು ಕೇಳಲು ನೀನ್ಯಾರು? ನನ್ನನ್ನು ಪ್ರತಿಪಕ್ಷ ನಾಯಕನ ಮಾಡಿರುವುದು ನಮ್ಮ ಶಾಸಕರು, ಪಕ್ಷ. ವಿಧಾನಸಭೆ ಟಿಕೆಟ್‌ಗಾಗಿ ಸ್ವಾಭಿಮಾನ ಬಿಟ್ಟು ಗುಲಾಮರಾದವರು ನೀವು. ಉಪ ಮುಖ್ಯಮಂತ್ರಿಯಾಗಿದ್ದ ನಿನ್ನನ್ನು ಕೇವಲ ಸಚಿವನನ್ನಾಗಿ ನೇಮಕ ಮಾಡಿದ್ದಾರೆ. ಹೀಗೆ ನನ್ನನ್ನು ಡಿ-ಪ್ರಮೋಟ್‌ ಮಾಡಿದ್ದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತಿದ್ದೆ. ನಾವು ನಿಮ್ಮಂತೆ ಯಾರನ್ನೂ ಬೇಡಿ, ಅಂಗಲಾಚಿ ಸರ್ಕಾರ ಮಾಡಲಿಲ್ಲ. ನಮ್ಮ ಶಕ್ತಿ ಮೇಲೆ ಸರ್ಕಾರ ರಚಿಸಿದ್ದೇವೆ. ನಾಚಿಕೆಯಾಗಬೇಕು ನಿಮ್ಮ ಜನ್ಮಕ್ಕೆ. ಸುಡಬೇಕು ನಿಮ್ಮನ್ನು’ ಎಂದರು.

ಇದಕ್ಕೆ ಕಾಂಗ್ರೆಸ್‌ ಸದಸ್ಯರೂ ದನಿಗೂಡಿಸಿ ಈಶ್ವರಪ್ಪ ವಿರುದ್ಧ ಕಿಡಿ ಕಾರಿದರು. ವಿಶೇಷ ಎಂದರೆ, ಇಷ್ಟೆಲ್ಲಾ ಆದ ಮೇಲೆ ಸದನದಲ್ಲಿ ‘ಟಗರುಗಳ ತಂಟೆಗೆ ಏಕೆ ಹೋಗ್ತೀರಾ ಬರ್ರಪ್ಪಾ’ ಎಂದು ಸದಸ್ಯರೊಬ್ಬರು ಹೇಳಿದ್ದು ಕೇಳಿಬಂತು.