ಬೆಂಗಳೂರು, (ಜುಲೈ. 24): ಬೆಂಗಳೂರಿನಲ್ಲಿ ಆಸ್ಪತ್ರೆಗಳ ಮೇಲೆ ಹೆಚ್ಚುತ್ತಿರುವ ಒತ್ತಡವನ್ನ ಕಡಿಮೆ ಮಾಡಲು ಸಿಎಂ ಬಿಎಸ್ ಯಡಿಯೂರಪ್ಪ ಅವರು ಮಾಸ್ಟರ್ ಪ್ಲಾನ್ ಮಾಡಿದ್ದು, ನಾಳೆ (ಶನಿವಾರ) ದಿಂದಲೇ ಎ ಸಿಂಪ್ಟಮಿಕ್ ರೋಗಿಗಳನ್ನು ಬೆಂಗಳೂರಿನ ಕೋವಿಡ್ ಕೇರ್ ಸೆಂಟರ್‌ಗೆ ದಾಖಲು ಮಾಡುವಂತೆ ಸೂಚನೆ ನೀಡಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು (ಶುಕ್ರವಾರ) ಕೋವಿಡ್ -19 ಕ್ಕೆ ಸಂಬಂಧಿಸಿದಂತೆ ದಕ್ಷಿಣ ವಲಯದ ಸಭೆ ನಡೆಸಿದ್ದು, ನಿನ್ನೆಯಂತೆಯೇ (ಶುಕ್ರವಾರ) ಇತರೆ ವಲಯದ ಅಧಿಕಾರಿಗಳಿಗೆ ನೀಡಿದ ಟಾರ್ಗೆಟ್ ನೀಡಿದ ಸಿಎಂ, ನಾಳೆಯಿಂದ (ಶನಿವಾರ) ಎ ಸಿಂಪ್ಟಮ್ಸ್ ‌ಸೋಂಕಿತರನ್ನು ನೂತನವಾಗಿ ಬಿಐಇಎಸ್‌ನಲ್ಲಿ‌ ನಿರ್ಮಾಣವಾಗಿರುವ ಕೋವಿಡ್ ಕೇರ್ ಸೆಂಟರ್ ಗೆ ಅಡ್ಮಿಟ್ ಮಾಡಲು ಸೂಚಿಸಿದರು. 

ಬಿಎಸ್‌ವೈ ಸರ್ಕಾರ ಸನ್ನದ್ಧ: ದೇಶದಲ್ಲೇ ದೊಡ್ಡ ಕೋವಿಡ್ ಕೇರ್ ಸೆಂಟರ್ ಬೆಂಗಳೂರಿನಲ್ಲಿ ಸಿದ್ಧ

ಇದರಿಂದ ನಗರದಲ್ಲಿರುವ ಆಸ್ಪತ್ರೆ ಗಳ‌ ಮೇಲೆ ಒತ್ತಡ ಕಡಿಮೆಯಾಗೋದರ ಜತೆಗೆ ನಾನ್ ಕೋವಿಡ್‌ಗೂ ಬೆಡ್‌ಗಳನ್ನು ಕೆಲ ಆಸ್ಪತ್ರೆ ಗಳಲ್ಲಿ‌ ಮೀಸಲಿಡಲು ಸೂಚನೆ‌ ನೀಡಿದರು. 

ದೇಶದ ಅತೀ ದೊಡ್ಡ ಕೋವಿಡ್ ಕೇರ್ ಸೆಂಟರ್‌ (ಬಿಐಇಸಿ)  ಸೋಮಾವಾರದಿಂದ ಪ್ರಾರಂಭವಾಗುವುದು ಎಂದು ಬಿಬಿಎಂಪಿ ಆಯುಕ್ತರಾದ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ. ಆದ್ರೆ, ಸಿಎಂ ಬಿಎಸ್ ಯಡಿಯೂರಪ್ಪ ಅವರು ನಾಳೆಯಿಂದ (ಶನಿವಾರ) ಬಿಐಇಸಿಗೆ ಸೋಂಕಿತರನ್ನು ದಾಖಲಿಸಲು ಸೂಚಿಸಿದ್ದಾರೆ.

ಕಂದಾಯ ಸಚಿವ ಆರ್.ಅಶೋಕ್, ಶಾಸಕರಾದ  ಉದಯ ಗರುಡಾಚಾರ್, ರವಿ ಸುಬ್ರಮಣ್ಯ ಸಂಸದ ತೇಜಸ್ವಿ ಸೂರ್ಯ,  ಮುಖ್ಯ ಕಾರ್ಯದರ್ಶಿ ಟಿ. ಎಂ.ವಿಜಯಭಾಸ್ಕರ್ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಬೆಂಗಳೂರು ತುಮಕೂರು ರಸ್ತೆಯಲ್ಲಿರುವ ಅಂತರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ನಿರ್ಮಾಣಗೊಂಡಿರುವ 10,100 ಹಾಸಿಗೆ ಸಾಮರ್ಥ್ಯದ ದೇಶದ ಅತೀ ದೊಡ್ಡ ಕೋವಿಡ್ ಆರೈಕೆ ಕೇಂದ್ರವಾಗಿದೆ.

ಯಾವುದೇ ಸೋಂಕು ಲಕ್ಷಣಗಳಿಲ್ಲದ ಹಾಗೂ ಅತೀ ಕಡಿಮೆ ಲಕ್ಷಣಗಳಿರುವ ಸೋಂಕಿತರನ್ನು ಮಾತ್ರ ಈ ಕೇಂದ್ರದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುವುದು. ಇಲ್ಲಿ ಸೋಂಕಿತರ ಚಿಕಿತ್ಸೆಗೆ ವೈದ್ಯಕೀಯ ಸೌಲಭ್ಯ, ಐಸಿಯು ಚಿಕಿತ್ಸಾ ಘಟಕ, ಇಸಿಜಿ, ಆಕ್ಸಿಜನ್ ಸೌಲಭ್ಯವಿರಲಿದೆ.