Asianet Suvarna News Asianet Suvarna News

ಜಿಪಂ, ತಾಪಂ ಚುನಾವಣಾ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ವಿಚಾರವಾಗಿ ರಾಜ್ಯ ಚುನಾವಣಾ ಆಯೋಗವು ಸಲ್ಲಿಕೆ ಮಾಡಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

Supreme Court dismisses ZP TP election petition
Author
First Published Nov 11, 2022, 3:54 PM IST

ಬೆಂಗಳೂರು: ರಾಜ್ಯದ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ವಿಚಾರವಾಗಿ ರಾಜ್ಯ ಚುನಾವಣಾ ಆಯೋಗವು ಸುಪ್ರೀಂ ಕೋರ್ಟ್ ಗೆ ಸಲ್ಲಿಕೆ ಮಾಡಿದ್ದ ಅರ್ಜಿಯನ್ನು ನ್ಯಾ.ವಿಕ್ರಮನಾಥ್ ಹಾಗೂ ನ್ಯಾ.ಅನಿರುದ್ದ್ ಬೋಸ್ ನೇತೃತ್ವದ ಪೀಠವು ವಜಾಗೊಳಿಸಿದೆ. ಹೀಗಾಗಿ, ರಾಜ್ಯ ಸರ್ಕಾರದ ಡಿಲಿಮಿಟೇಷನ್‌ ಕಾರ್ಯ ಪೂರ್ಣಗೊಂಡ ನಂತರ ಚುನಾವಣೆ ಪ್ರಕ್ರಿಯೆ ಆರಂಭವಾಗುವ ಸೂಚನೆಗಳು ಕಂಡುಬರುತ್ತಿವೆ.
ರಾಜ್ಯದಲ್ಲಿ ಸುಮಾರು ಒಂದೂವರೆ ವರ್ಷದಿಂದ ಬಾಕಿ ಇರುವ ಜಿಲ್ಲಾ ಪಂಚಾಯಿತಿ (ZP) ಹಾಗೂ ತಾಲೂಕು ಪಂಚಾಯಿತಿ (TP) ಚುನಾವಣೆ ನಡೆದಿಲ್ಲ.  ಇದಕ್ಕೆ ಕಾರಣ ಎರಡೂ ಪಂಚಾಯಿತಿಗಳಲ್ಲಿ ಕ್ಷೇತ್ರಗಳ ಮರುವಿಗಂಡಣೆ (Delimitation) ಮತ್ತು ಮೀಸಲು (Reservation) ನಿಗದಿಗೊಳಿಸುವ ಪ್ರಕ್ರಿಯೆ ಇನ್ನೂ ಮುಗಿದಿಲ್ಲ. ಹೀಗಾಗಿ, ಕೆಲವೆಡೆ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗುತ್ತಿದೆ ಎಂಬ ದೂರುಗಳು ಕೇಳಿಬರುತ್ತವೆ. ಆದರೆ, ಈ ಕಾರ್ಯವನ್ನು ಪೂರ್ಣಗೊಳಿಸಲು ಹೈಕೋರ್ಟ್‌ನಿಂದ ರಾಜ್ಯ ಸರ್ಕಾರಕ್ಕೆ ಮತ್ತೆ 12 ವಾರ ಕಾಲಾವಕಾಶ ನೀಡಿತ್ತು. ಈ ಕಾಲಾವಕಾಶ ಪೂರ್ಣಗೊಳ್ಳುವ ಮಜುನ್ನವೇ ಹೈಕೋರ್ಟ್ ನ ಆದೇಶ ಪ್ರಶ್ನಿಸಿಕೊಂಡು ರಾಜ್ಯ ಚುನಾವಣಾ ಆಯೋಗವು ಸುಪ್ರೀಂ ಕೋರ್ಟಗೆ ಅರ್ಜಿ ಸಲ್ಲಿಸಿದ್ದು, ಅದನ್ನು ಶುಕ್ರವಾರ ವಜಾಗೊಳಿಸಿದೆ. 

ಜಿಪಂ, ತಾಪಂ ಚುನಾವಣೆಗೆ ಹೈಕೋರ್ಟ್‌ 3 ತಿಂಗಳ ಗಡುವು

ಕಾಯ್ದೆ ವಜಾಗೊಳಿಸದ ನ್ಯಾಯಾಲಯ:
ಚುನಾವಣಾ ಆಯೋಗ ಸಲ್ಲಿಕೆ ಅರ್ಜಿ ವಿಚಾರಣೆ ಮಾಡಿದ ನ್ಯಾ.ವಿಕ್ರಮನಾಥ್ ಹಾಗೂ ನ್ಯಾ.ಅನಿರುದ್ದ್ ಬೋಸ್ ನೇತೃತ್ವದ ಪೀಠದ ಮುಂದೆ ರಾಜ್ಯ ಸರ್ಕಾರವು ಕ್ಷೇತ್ರ ಮರುವಿಂಗಡಣೆ ಬಗ್ಗೆ ಮನವರಿಕೆ ಮಾಡಿಕೊಟ್ಟಿತು. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ಅರ್ಜಿ ವಜಾಗೊಳಿಸಿದ ನ್ಯಾಯಪೀಠವು ಚುನಾವಣೆ ಕುರಿತ ಮೂಲ ಅರ್ಜಿ ಹೈಕೋರ್ಟ್ ನಲ್ಲಿದ್ದು, ಅಗತ್ಯ ಬಿದ್ದರೇ ಅಲ್ಲಿಗೆ ಹೋಗುವಂತೆ ಸೂಚನೆ ನೀಡಿತು. ರಾಜ್ಯ ಸರ್ಕಾರದ ಪರ ಅಡ್ವಕೇಟ್ ಜನರಲ್ ಪ್ರಭುಲಿಂಗ ನಾವದಗಿ ವಾದ ಮಂಡಿಸಿದರು. 

ಕಾಯ್ದೆ ವಜಾಗೊಳಿಸದ ನ್ಯಾಯಾಲಯ:
ಜಿಪಂ ಮತ್ತು ತಾಪಂ ಚುನಾವಣೆ ಕುರಿತಂತೆ ಸರ್ಕಾರ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ಕಾಯ್ದೆ-2021 (Karnataka grama Swaraj and Panchayat Raj (Amendment) Act-2021) ರಚಿಸಿದೆ. ಆದರೆ, ರಾಜ್ಯ ಚುನಾವಣಾ ಆಯೋಗವು ಈ ಕಾಯ್ದೆಯು ಅಸಂವಿಧಾನಾತ್ಮಕ ಆಗಿದ್ದು ರದ್ದುಪಡಿಸಬೇಕು. ಈಗಾಗಲೇ ಆಯೋಗದಿಂದ ಪ್ರಕಟಿಸಿರುವ ಕರಡು ಮೀಸಲು ಮತ್ತು ಕ್ಷೇತ್ರ ಮರುವಿಂಗಡಣೆ ಅಧಿಸೂಚನೆ ಆಧರಿಸಿ ಚುನಾವಣಾ ಪ್ರಕ್ರಿಯೆ ಮುಂದುವರಿಸಬೇಕು. ಜತೆಗೆ, ಅಂತಿಮ ಮೀಸಲು ಮತ್ತು ಕ್ಷೇತ್ರ ಪುನರ್ ವಿಂಗಡಣೆ ಪಟ್ಟಿ ಪ್ರಕಟಿಸಿ, ಶೀಘ್ರ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವ ಬಗ್ಗೆ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಸಲ್ಲಿಸಿದ ಮನವಿಯನ್ನು ಪುರಷ್ಕರಿಸದ  ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ 12 ವಾರಗಳ ಗಡುವು ನೀಡಿತ್ತು. ಈ ಆದೇಶ ಪ್ರಶ್ನಿಸಿಕೊಂಡು ಸುಪ್ರೀಂ ಕೋರ್ಟಗೆ ಬಂದರೂ, ಇಲ್ಲಿ ಕೂಡ ಚುನಾವಣಾ ಆಯೋಗದ ಅರ್ಜಿಗೆ ಪುರಸ್ಕಾರ ಸಿಗಲಿಲ್ಲ.

140 ಸೀಟು ಗೆಲ್ಲುವುದು ನಮ್ಮ ಗುರಿ-ಬಿಎಸ್‌ವೈ


ಅಭಿವೃದ್ಧಿ ಕಾರ್ಯಗಳ ಮರೀಚಿಕೆ:
ರಾಜ್ಯದಲ್ಲಿ ೨೩೦ಕ್ಕೂ ಅಧಿಕ ತಾಲೂಕು ಪಂಚಾಯಿತಿಗಳಿಗೆ ಚುನಾವಣೆ ನಡೆಯದೇ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆ ಉಂಟಾಗಿದೆ. ಮೂಲ ಸೌಕರ್ಯಗಳು ಸಿಗದೇ ಗ್ರಾಮೀಣ ಪ್ರದೇಶಗಳು ಸೊರಗುತ್ತಿವೆ. ಜಿಲ್ಲಾ ಮಟ್ಟದಲ್ಲಿ ಮುಖ್ಯ ಕಾರ್ಯ ನಿರ್ವಹಣಾ ಆಧಿಕಾರಿ (CEO) ಹಾಗೂ ತಾಲೂಕು ಮಟ್ಟದಲ್ಲಿ ಕಾರ್ಯ ನಿರ್ವಹಣಾ ಅಧಿಕಾರಿ (EO) ನೇತೃತ್ವದಲ್ಲಿ ಅಧಿಕಾರ ನಡೆಯುತ್ತಿದ್ದರೂ, ಕೆಲವು ಯೋಜನೆಗಳು ಸಮರ್ಪಕವಾಗಿ ಜಾರಿಗೆ ತರಲು ಆಗುತ್ತಿಲ್ಲ. ಆದರೆ, ಪಂಚಾಯಿತಿಗಳ ಚುನಾವಣಾ ಆಕಾಂಕ್ಷಿಗಳು ಮಾತ್ರ ನ್ಯಾಯಾಲಯ ಮತ್ತು ರಾಜ್ಯ ಸರ್ಕಾರದ ನಡೆಗಳ ಮೇಲೆ ತಮ್ಮ ಚಟುವಟಿಕೆಗಳನ್ನು ನಡೆಸಲು ಮುಂದಾಗಿದ್ದಾರೆ.

Follow Us:
Download App:
  • android
  • ios