ಮಂಡ್ಯ[ಫೆ.26]: ಮುಂಬರುವ ಲೋಕಸಭೆ ಚುನಾವಣೆ ಮೂಲಕ ಸಕ್ರಿಯ ರಾಜಕಾರಣಕ್ಕೆ ಪದಾರ್ಪಣೆ ಮಾಡಲು ನಿರ್ಧರಿಸಿರುವ ದಿವಂಗತ ನಟ ಅಂಬರೀಷ್‌ ಪತ್ನಿ ಸುಮಲತಾ ಅವರು ಮಂಡ್ಯದಲ್ಲೀಗ ಮನೆಗಾಗಿ ಹುಡುಕಾಟ ಆರಂಭಿಸಿದ್ದಾರೆ. ಸುಮಲತಾ ಆದೇಶದಂತೆ ಸೂಕ್ತ ಎನಿಸುವ ಮನೆ ಹುಡುಕಾಟದಲ್ಲಿ ಅಂಬರೀಷ್‌ ಅಭಿಮಾನಿಗಳು ಈಗಾಗಲೇ ಕಾರ್ಯ ಪ್ರವೃತ್ತರಾಗಿದ್ದು, ಮುಂದಿನ ಎರಡ್ಮೂರು ದಿನದೊಳಗೆ ಮನೆ ಅಂತಿಮಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ಖರೀದಿಗಾಗಿಯೇ ಮನೆ ಹುಡುಕಿ:

ಮಂಡ್ಯದಲ್ಲಿ ಮನೆ ಮಾಡಿ ಸ್ಥಳೀಯರ ಸಮಸ್ಯೆಗೆ ಸ್ಪಂದಿಸುವ ಮೂಲಕ ಜನ ಸೇವೆಗೆ ಒಂದು ಅರ್ಥ ತಂದುಕೊಡುವ ನಿರ್ಧಾರ ಮಾಡಿರುವ ಸುಮಲತಾ ಅದಕ್ಕಾಗಿ ಬಾಡಿಗೆ ಮನೆ ಬದಲು ಸ್ವಂತ ಮನೆಯನ್ನೇ ಹುಡುಕಿ ಎಂದು ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ. ಸೋಲೋ-ಗೆಲುವೋ ಮಂಡ್ಯದಿಂದ ಮನೆ ಖಾಲಿ ಮಾಡಿ ಹೋಗುವ ನಿರ್ಧಾರ ನನ್ನದಲ್ಲ, ಜನರ ಮನಸ್ಸಿಗೂ ಇಂತಹ ಭಾವನೆಗಳು ಬರಬಾರದು ಎಂದು ಸುಮಲತಾ ತಮ್ಮ ಬೆಂಬಲಿಗರ ಮುಂದೆ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಡ್ಯದ ಪ್ರತಿಷ್ಠಿತ ಬಡಾವಣೆಯಲ್ಲೇ ಮನೆ ಖರೀದಿಗೆ ಸುಮಲತಾ ಮುಂದಾಗಿದ್ದಾರೆ. ಬಾಡಿಗೆ ಮನೆ ಮಾಡಿದರೆ ಎರಡ್ಮೂರು ವರ್ಷದ ನಂತರ ಮನೆ ಮಾಲಿಕರು ಕಿರಿಕ್‌ ಮಾಡುತ್ತಾರೆ. ಹೀಗಾಗಿ ಸ್ವಂತ ಮನೆಯಾದರೆ ಅಂಥ ಯಾವುದೇ ಕಿರಿಕ್‌ಗಳಿರುವುದಿಲ್ಲ ಎಂಬುದು ಸುಮಲತಾ ಅಭಿಪ್ರಾಯ ಎಂದು ಅಂಬರೀಷ್‌ ಅಭಿಮಾನಿಗಳ ಬಳಗದ ಮುಖಂಡರೊಬ್ಬರು ಹೇಳಿಕೊಂಡಿದ್ದಾರೆ.

ಮಂಡ್ಯದ ಅಶೋಕನಗರ, ಬಂದಿಗೌಡ ಲೇಔಟ್‌, ವಿದ್ಯಾನಗರ ಸೇರಿ ಪ್ರಮುಖ ಬಡಾವಣೆಯಲ್ಲಿ ಮನೆಗಾಗಿ ಹುಡುಕಾಟ ನಡೆಯುತ್ತಿದೆ. ಮನೆ ವಿಶಾಲವಾಗಿರಬೇಕು, ಪಕ್ಕಾ ವಾಸ್ತು ಇರಬೇಕು, ಜನ ಬಂದಾಗ ಕುಳಿತು ಕೊಳ್ಳುವ ವ್ಯವಸ್ಥೆಗೆ ಜಾಗ ಇರಬೇಕು, ಮನೆ ತುಂಬಾ ಗಾಳಿ-ಬೆಳಕು ಸೇರಿ ಎಲ್ಲಾ ರೀತಿಯ ವ್ಯವಸ್ಥೆ ಇರುವಂತಹ ಮನೆಯನ್ನು ಹುಡುಕಿಕೊಂಡು ಬನ್ನಿ ಎಂದು ಬೆಂಬಲಿಗರಿಗೆ ಸುಮಲತಾ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.

ಅಂಬಿ ಮನೆ ಖಾಲಿ ಮಾಡಿದ್ರು:

2013ರ ವಿಧಾನಸಭಾ ಚುನಾವಣೆ ವೇಳೆ ಜನರಿಗೆ ನಂಬಿಕೆ ಬರಲು ಅಂಬರೀಷ್‌ ಚಾಮುಂಡೇಶ್ವರಿ ಬಡಾವಣೆಯ 5ನೇ ಕ್ರಾಸ್‌ನಲ್ಲಿ 25 ಸಾವಿರ ರು. ಕೊಟ್ಟು ಬಾಡಿಗೆ ಮನೆ ಮಾಡಿದ್ದರು. ಆ ಬಳಿಕ ಚುನಾವಣೆಯಲ್ಲಿ ಗೆದ್ದು ಮಂತ್ರಿಯೂ ಆದರು. ಆದರೆ ಅವರು ಆ ಮನೆಯಲ್ಲೇ ಒಂದೇ ಒಂದು ದಿನ ನೆಲೆಸಿರಲಿಲ್ಲ. ಸುಮಾರು 2 ಅಥವಾ 3 ವರ್ಷ ಬಾಡಿಗೆ ಕಟ್ಟಿ ಕೊನೆಗೆ ಖಾಲಿ ಮಾಡಿದ್ದರು.