ಬೆಂಗಳೂರು :  ಜೆಡಿಎಸ್‌ ಭದ್ರಕೋಟೆ ಎನ್ನಿಸಿಕೊಂಡಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ದಿವಂಗತ ನಟ, ರಾಜಕಾರಣಿ ಅಂಬರೀಷ್‌ ಅವರ ಪತ್ನಿ ಸುಮಲತಾ ಅಂಬರೀಷ್‌ ಅವರನ್ನು ಕಣಕ್ಕಿಳಿಸಬೇಕೆಂದು ಮಂಡ್ಯ ಸ್ಥಳೀಯ ಕಾಂಗ್ರೆಸ್‌ ನಾಯಕರು ಒತ್ತಾಯಿಸಿದ್ದಾರೆ. 

ಸ್ಪರ್ಧೆಗೆ ಸುಮಲತಾ ಅವರು ಕೂಡ ಒಲವು ಹೊಂದಿದ್ದಾರೆ ಎಂದು ತಿಳಿದುಬಂದಿದ್ದು, ಜೆಡಿಎಸ್‌ ಈ ಕ್ಷೇತ್ರವನ್ನು ಸುಮಲತಾ ಅವರಿಗೆ ಬಿಟ್ಟುಕೊಡುವುದೇ ಎಂಬ ಕುತೂಹಲ ಸೃಷ್ಟಿಯಾಗಿದೆ.

ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಹಳೆ ಮೈಸೂರು ಭಾಗದ ಕಾಂಗ್ರೆಸ್‌ ನಾಯಕರ ಸಭೆಯಲ್ಲಿ ಮಂಡ್ಯ ಹಾಗೂ ಹಾಸನ ಕಾಂಗ್ರೆಸ್‌ ನಾಯಕರು ಎರಡು ಕ್ಷೇತ್ರದಲ್ಲಿ ಒಂದು ಕ್ಷೇತ್ರವನ್ನು ಕಾಂಗ್ರೆಸ್‌ ಉಳಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು. ಆದರೆ ಇದನ್ನು ಪಕ್ಷದ ಹೈಕಮಾಂಡ್‌ ಹಾಗೂ ಎಚ್‌.ಡಿ. ದೇವೇಗೌಡರೇ ನಿರ್ಣಯಿಸಬೇಕು ಎಂದು ಪಕ್ಷದ ರಾಜ್ಯ ವರಿಷ್ಠರು ಪ್ರತಿಕ್ರಿಯಿಸಿದರು.

ಮಂಡ್ಯ ಹಾಗೂ ಹಾಸನದಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಡುವೆ ಸಮ ಬಲದ ಪೈಪೋಟಿ ಇದೆ. ಎರಡೂ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ಗೆ ಪ್ರಬಲ ನೆಲೆ ಇದ್ದು, ಕಾಂಗ್ರೆಸ್‌ನ ನೇರ ಸ್ಪರ್ಧಿ ಜೆಡಿಎಸ್‌. ಹೀಗಾಗಿ ಪಕ್ಷ ಉಳಿಯಲು ಎರಡು ಕ್ಷೇತ್ರದಲ್ಲಿ ಒಂದು ಕ್ಷೇತ್ರವನ್ನು ಕಾಂಗ್ರೆಸ್‌ ತನ್ನ ಬಳಿಯೇ ಇಟ್ಟುಕೊಳ್ಳಬೇಕು. ಒಂದು ವೇಳೆ ಮಂಡ್ಯ ಕ್ಷೇತ್ರವು ಕಾಂಗ್ರೆಸ್‌ ಪಾಲಿಗೆ ಬಂದರೆ ಸುಮಲತಾ ಅಂಬರೀಷ್‌ ಅವರನ್ನು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿಸಬೇಕು ಎಂಬ ವಾದ ಮುಂದಿಟ್ಟಿದ್ದಾರೆ.

ಅಂಬರೀಷ್‌ ಕುಟುಂಬಕ್ಕೂ ಮಂಡ್ಯ ಜನತೆಗೂ ವಿಶೇಷ ಅನುಬಂಧವಿದೆ. ಅಂಬರೀಷ್‌ ಕುಟುಂಬದ ಬಗ್ಗೆ ಜನರಿಗೆ ಇರುವ ಒಲವಿನಿಂದಾಗಿ ಸುಮಲತಾ ಅವರು ಕಾಂಗ್ರೆಸ್‌ ಪರವಾಗಿ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿದರೆ ಅನಾಯಾಸವಾಗಿ ಗೆಲ್ಲುತ್ತಾರೆ. ಅಲ್ಲದೆ ಸುಮಲತಾ ಅವರೂ ಕಾಂಗ್ರೆಸ್‌ ಟಿಕೆಟ್‌ ದೊರೆತರೆ ಸ್ಪರ್ಧಿಸುವ ಸೂಚನೆ ಇದೆ. ಹೀಗಾಗಿ ಎರಡೂ ಕ್ಷೇತ್ರ ಜೆಡಿಎಸ್‌ಗೆ ಬಿಟ್ಟುಕೊಡದೆ ಮಂಡ್ಯ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸುಮಲತಾ ಅವರನ್ನು ಕಣಕ್ಕಿಳಿಸಬೇಕು ಎಂದು ಮನವಿ ಮಾಡಿದರು.

ಎರಡೂ ಕ್ಷೇತ್ರ ಜೆಡಿಎಸ್‌ಗೆ ಬಿಟ್ಟು ಕೊಡುವುದು ಬೇಡ. ಒಂದು ವೇಳೆ ಹಾಸನವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟರೆ ಮಂಡ್ಯ ಹಾಗೂ ಮೈಸೂರನ್ನು ಕಾಂಗ್ರೆಸ್‌ ತನ್ನ ಬಳಿಯೇ ಉಳಿಸಿಕೊಳ್ಳಬೇಕು ಎಂದು ಮನವಿ ಸಲ್ಲಿಸಿದರು ಎಂದು ಮೂಲಗಳು ತಿಳಿಸಿವೆ.