ಮಲ್ಲಿಕಾರ್ಜುನ ಹೊಸಮನಿ

ಬಾಗಲಕೋಟೆ(ಜ.23): ಅಲ್ಲಿ ಉತ್ತರ ಕರ್ನಾಟಕ ಶೈಲಿಯ ಇಲಕಲ್ ಸೀರೆ ತೊಟ್ಟ ಮಹಿಳೆಯರ ದಂಡೇ ಇತ್ತು, ಎತ್ತ ನೋಡಿದರೂ ಹೆಂಗಳೆಯರ ನಡುವೆ ಗ್ರಾಮೀಣ ಆಟಗಳ ಸೊಗಡಿತ್ತು. ಈ ಮದ್ಯೆ ಗಂಗಾಮಾತೆಗೆ ಬಾಗಿನ ಅಪ೯ಣೆ  ನಡೆದಿತ್ತು. ಇಂತಹ ಗ್ರಾಮೀಣ ಸಂಸ್ಕೃತಿಯ ಸೊಬಗಿನ ಕಲರವ ನಡೆದಿದ್ದು ಬಾಗಲಕೋಟೆಯ ಬೀಳಗಿ ತಾಲೂಕಿನ ಚಿಕ್ಕಸಂಗಮದಲ್ಲಿ.

ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಚಿಕ್ಕಸಂಗಮವು  ಕೃಷ್ಣಾ ಮತ್ತು ಘಟಪ್ರಭ ನದಿಗಳ ಸಂಗಮ ತಾಣವಾಗಿದ್ದು, ಇಲ್ಲಿ ಸಂಗಮನಾಥನ ಬೃಹತ್ ದೇವಾಲಯವಿದೆ. ಈ ಕ್ಷೇತ್ರ ಪವಿತ್ರ ಧಾರ್ಮಿಕ ತಾಣವಾಗಿದೆ.

ಮುಧೋಳದ ಸಪ್ತಸ್ವರ ಸಂಗೀತ, ನೃತ್ಯ ,ಸಾಂಸ್ಕ್ರತಿಕ ಸಂಸ್ಥೆಯು ಸುಗ್ಗಿ-ಹಬ್ಬ ಗ್ರಾಮೀಣ ಸಂಸ್ಕ್ರತಿ-2019 ಎಂಬ ಶಿರ್ಷಿಕೆಯಡಿ  ಕಾರ್ಯಕ್ರಮ ಹಮ್ಮಿಕೊಂಡಿತ್ತು.

ಜಿಲ್ಲೆಯ ನಾನಾ ಭಾಗಗಳಿಂದ ಮಹಿಳೆಯರು ಆಗಮಿಸಿದ್ದರು. ಇಡೀ ಚಿಕ್ಕಸಂಗಮ ಇಲಕಲ್ ಸೀರೆಯುಟ್ಟ ಮಹಿಳೆಯರಿಂದ ಭರ್ತಿಯಾಗಿತ್ತು.

"

ಇಂದಿನ ಆಧುನಿಕತೆ ಯುಗದಲ್ಲಿ ನಶಿಸಿ ಹೋಗುತ್ತಿರುವ ಗ್ರಾಮೀಣ ಕಲೆ , ಸಂಸ್ಕತಿ ಮತ್ತು ಪರಂಪರೆಯನ್ನು ಉಳಿಸಿಕೊಂಡು ಹೋಗುವ ನಿಟ್ಟಿನಲ್ಲಿ ಅತ್ಯಂತ ಸಾಂಪ್ರದಾಯಿಕವಾಗಿ ಕಾರ್ಯಕ್ರಮದೊಂದಿಗೆ ಹೆಂಗಳೆಯರು ಸಂಭ್ರಮಿಸಿದರು.

ಇತ್ತ ನಾನಾ ತರಹದ ಅಡುಗೆ ಸಿದ್ದ ಪಡಿಸಿಕೊಂಡು ಹೊಲಗಳಿಗೆ ಹೋಗಿ ಬೆಳೆದ ಪೈರಿಗೆ ಪೂಜೆ ಸಲ್ಲಿಸುವ ವಾಡಿಕೆಯಂತೆ ಚಕ್ಕಡಿಯಲ್ಲಿ ಕುಳಿತು ಮೆರವಣಿಗೆಯಲ್ಲಿ ಕೃಷ್ಣಾ ಮತ್ತು ಘಟಪ್ರಭೆಯರ ಸಂಗಮ ಸ್ಥಳಕ್ಕೆ ತೆರಳಿ ಗಂಗೆಗೆ ಪೂಜೆ ಸಲ್ಲಿಸಿ, ದೇವಸ್ಥಾನ ಕ್ಕೆ ಆಗಮಿಸಿ ಚಿಕ್ಕಸಂಗಮನಾಥನಿಗೆ ಅಭಿಷೇಕ, ಪೂಜೆ ಸಲ್ಲಿಸಿದರು.

ಇತ್ತ  ಮಹಿಳೆಯರೆಲ್ಲ ಸೇರಿ ಮನೆಗಳಿಂದ ಕಟ್ಟಿಕೊಂಡು ಬಂದಿದ್ದ ಸಜ್ಜೆರೊಟ್ಟಿ, ಎಣ್ಣಿಗಾಯಿ ಬದನೆಕಾಯಿ, ಮಿಕ್ಸ್ ಭಾಜಿ, ಅವರೆಕಾಳು ಪಲ್ಲೆ,ಚಟ್ನಿಪುಡಿ,ಉಸುಳಿ ಮೋಸರು, ಕೆಂಪುಹಿಂಡಿ ಸೇರಿದಂತೆ  ಮೃಷ್ಟಾನ್ನ ಭೋಜನ ಸವಿದರು.

ಇನ್ನು ಊಟದ ಬಳಿಕ ಸಾಂಪ್ರದಾಯಿಕ ಉಡುಗೆ ತೊಡುಗೆಗಳಾದ ಇಳಕಲ್ ಸೀರೆ, ಗುಳೇದಗುಡ್ಡ ಖಣ, ಆಕರ್ಷಕ ನತ್ತು ತೊಟ್ಟು ಓಡಾಡುತ್ತಿದ್ದ ಮಹಿಳೆಯರ ಕಲರವ ಕಣ್ಣಿಗೆ ಕಟ್ಟುವಂತಿತ್ತು.

"

ಊಟ ಮುಗಿಸಿದ ಬಳಿಕ ಮಹಿಳೆಯರೆಲ್ಲ ಗ್ರಾಮೀಣ ಜಾನಪದ ಹಾಡುಗಳನ್ನು  , ಶೋಭಾನೆ ಪದಗಳನ್ನು ಹಾಡಿ ಸಖತ್ ಸ್ಟೆಪ್ ಹಾಕಿದರೆ,  ಅತ್ತ 

ಸಾಂಪ್ರದಾಯಿಕ ನೃತ್ಯಕ್ಕೂ ಅನೇಕರು ಹೆಜ್ಜೆ ಹಾಕಿ ಗಮನ ಸೆಳೆದರು. ನದಿ ತೀರದ ತಟದಲ್ಲಿ ನಡೆದ ನಾನಾ ಕಾರ್ಯಕ್ರಮಗಳಲ್ಲಿ ಅಂದಾಜು ಸಾವಿರ ಮಹಿಳೆಯರು ಭಾಗವಹಿಸಿದ್ದರು.

"

ಒಟ್ಟಿನಲ್ಲಿ ಇಂದಿನ ಆಧುನಿಕ ವ್ಯವಸ್ಥೆಯಲ್ಲಿ ನಾವು ನಮ್ಮತನ ಮರೆತು, ವಿದೇಶಿ ಸಂಸ್ಕತಿ ನಮ್ಮನ್ನು ಆವರಿಸಿಕೊಳ್ಳುತ್ತಿರುವ ಇಂಥ ಸನ್ನಿವೇಶದಲ್ಲಿ ನಮ್ಮ ಸಂಪ್ರದಾಯ , ಸಂಸ್ಕೃತಿಯನ್ನು ಉಳಿಸಿಕೊಂಡು ಮುಂದಿನ ಪೀಳಿಗೆಗೆ ಅನುಕರಿಸುವ ದೃಷ್ಟಿಯಿಂದ ಹಮ್ಮಿಕೊಂಡ ಕಾಯ೯ಕ್ರಮ ಎಲ್ಲರಲ್ಲಿ ಸಾಂಪ್ರದಾಯಿಕತೆ ಜಾಗೃತಿ ಬೀರಿದ್ದಂತು ಸುಳ್ಳಲ್ಲ.