ಜುಕರ್‌ಬರ್ಗ್‌ ತೀರ್ಮಾನ ತಿರಸ್ಕರಿಸುವ ಅಧಿಕಾರ ಇದಕ್ಕಿದೆ| ಫೇಸ್ಬುಕ್‌ನಲ್ಲಿ ‘ಆಂತರಿಕ ಕೋರ್ಟ್’: ಬೆಂಗಳೂರಿನ ಸುಧೀರ್‌ ಸದಸ್ಯ!

ಸ್ಯಾನ್‌ಫ್ರಾನ್ಸಿಸ್ಕೋ(ಮೇ.09): ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಆಗುವ ಬರಹ, ಚಿತ್ರ, ಜಾಹೀರಾತುಗಳೂ ಸೇರಿದಂತೆ ಆ ಸಾಮಾಜಿಕ ಜಾಲತಾಣದಲ್ಲಿನ ಎಲ್ಲ ವಿಷಯಗಳಿಗೆ ಸಂಬಂಧಿಸಿದ ಅಂತಿಮ ನಿರ್ಧಾರ ಕೈಗೊಳ್ಳಲು ಆಂತರಿಕ ನ್ಯಾಯಾಲಯದ ರೀತಿಯ ಸಮಿತಿಯೊಂದು ಸ್ಥಾಪನೆಯಾಗಿದೆ. ಸ್ವತಃ ಫೇಸ್‌ಬುಕ್‌ ಇದನ್ನು ಸ್ಥಾಪಿಸಿದ್ದು, ಫೇಸ್‌ಬುಕ್‌ನಲ್ಲಿ ಪ್ರಕಟವಾಗುವ ಸಂಗತಿಗಳ ವಿಷಯದಲ್ಲಿ ಸಂಸ್ಥೆಯ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್‌ ಕೈಗೊಳ್ಳುವ ನಿರ್ಧಾರವನ್ನು ಕೂಡ ರದ್ದುಪಡಿಸುವ ಅಧಿಕಾರವನ್ನು ಇದು ಹೊಂದಿದೆ. ಇನ್ನುಮುಂದೆ ಫೇಸ್‌ಬುಕ್‌ನಲ್ಲಿ ಏನಿರಬೇಕು, ಏನಿರಬಾರದು ಎಂಬ ಅಂತಿಮ ನಿರ್ಧಾರ ಈ ಸಮಿತಿಯದ್ದಾಗಿರುತ್ತದೆ.

ವಿವಿಧ ಕ್ಷೇತ್ರಗಳಿಂದ ಆಯ್ದ ಜಗತ್ತಿನ ಅತ್ಯಂತ ಗಣ್ಯ 20 ವ್ಯಕ್ತಿಗಳನ್ನು ಈ ಸಮಿತಿಯ ಸದಸ್ಯರನ್ನಾಗಿ ಫೇಸ್‌ಬುಕ್‌ ಆಯ್ಕೆ ಮಾಡಿದೆ. ಅದರಲ್ಲಿ ಭಾರತದಿಂದ ಇರುವ ಏಕೈಕ ಸದಸ್ಯ ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆಯ ಕುಲಪತಿ ಸುಧೀರ್‌ ಕೃಷ್ಣಸ್ವಾಮಿ ಆಗಿದ್ದಾರೆ. ಫೇಸ್‌ಬುಕ್‌ನಲ್ಲಿ ಹರಿದಾಡುವ ಮಾಹಿತಿಗಳಲ್ಲಿ ಆಕ್ಷೇಪಾರ್ಹ, ಸುಳ್ಳು, ಮಾನಹಾನಿಕಾರಕ ಅಥವಾ ಕಾನೂನು ಉಲ್ಲಂಘಿಸುವ ಸಂಗತಿಗಳ ಬಗ್ಗೆ ಫೇಸ್‌ಬುಕ್‌ ಬಳಕೆದಾರರು ವರದಿ ಮಾಡಿದರೆ ಅವುಗಳನ್ನು ನಿಭಾಯಿಸಲೆಂದೇ ಫೇಸ್‌ಬುಕ್‌ನಲ್ಲಿ ದೊಡ್ಡ ತಂಡವಿದೆ. ಆ ತಂಡಕ್ಕೆ ನಿರ್ಧಾರ ಕೈಗೊಳ್ಳಲಾಗದಂತಹ ಸಂಗತಿಗಳು ಉದ್ಭವಿಸಿದರೆ ಈ ಸಮಿತಿ ಅಂತಿಮ ನಿರ್ಧಾರ ಕೈಗೊಳ್ಳಲಿದೆ.

ಕಳೆದ ವರ್ಷ ಫೇಸ್‌ಬುಕ್‌ ಬಳಕೆದಾರರ ಖಾಸಗಿ ಮಾಹಿತಿ ಸೋರಿಕೆಯಾಗಿ ದೊಡ್ಡ ವಿವಾದ ಸೃಷ್ಟಿಯಾಗಿತ್ತು. ಆಗ ಮಾಹಿತಿಯ ಸುರಕ್ಷತೆ ಮತ್ತೆ ಫೇಸ್‌ಬುಕ್‌ ಬಳಕೆದಾರರ ಹಿತ ರಕ್ಷಣೆಗೆ ನಾನಾ ಕ್ರಮಗಳನ್ನು ಫೇಸ್‌ಬುಕ್‌ ಪ್ರಕಟಿಸಿತ್ತು. ಅದರಲ್ಲಿ ಈ ಸಮಿತಿ ರಚನೆಯೂ ಒಂದಾಗಿತ್ತು.