- ಕೇಂದ್ರ ಸರ್ಕಾರದಿಂದ ಡಿಜಿಲಾಕರ್‌ನಲ್ಲಿ ಸಂಗ್ರಹಿಸಲು ಸೂಚನೆ- ರಾಜ್ಯಪಾಲರಿಂದ ಇಡಿಜಿಎಸ್‌ನಲ್ಲಿ ಸಂಗ್ರಹಕ್ಕೆ ನಿರ್ದೇಶನ- ಎರಡರಲ್ಲಿ ಯಾವ ಆದೇಶ ಜಾರಿಗೊಳಿಸಬೇಕೆಂಬ ಗೊಂದಲ

ಬೆಂಗಳೂರು(ಫೆ.09):  ಅಂಕಪಟ್ಟಿಸೇರಿದಂತೆ(Marks Card) ವಿದ್ಯಾರ್ಥಿಗಳ ಇತರೆ ಪ್ರಮಾಣಪತ್ರಗಳನ್ನು(Document) ಡಿಜಿಟಲ್‌(Digital) ರೂಪದಲ್ಲಿ ಸಂಗ್ರಹಿಸಿ ನೀಡುವ ಸಂಬಂಧ ಸರ್ಕಾರ ಮತ್ತು ರಾಜ್ಯಪಾಲರಿಂದ ಬಂದಿರುವ ಭಿನ್ನ ಆದೇಶಗಳಿಂದ ಗೊಂದಲಕ್ಕೆ ಸಿಲುಕಿರುವ ರಾಜ್ಯದ ವಿಶ್ವವಿದ್ಯಾಲಯಗಳು ಎರಡರಲ್ಲಿ ಯಾವ ಆದೇಶ ಜಾರಿಗೊಳಿಸಬೇಕೆಂದು ಸ್ಪಷ್ಟನೆ ಕೋರಿ ಪತ್ರ ಬರೆಯಲು ಮುಂದಾಗಿವೆ.

ಒಂದೆಡೆ ರಾಜ್ಯ ಸರ್ಕಾರ, ಅಂಕಪಟ್ಟಿಸೇರಿದಂತೆ ವಿದ್ಯಾರ್ಥಿಗಳ ಇತರೆ ದಾಖಲೆಗಳನ್ನು ಕೇಂದ್ರ ಸರ್ಕಾರ ಈಗಾಗಲೇ ಜಾರಿಗೊಳಿಸಿರುವ ಸರ್ಕಾರಿ ಸ್ವಾಮ್ಯದ ಡಿಜಿಲಾಕರ್‌-ನಾಡ್‌ (ನ್ಯಾಷನಲ್‌ ಅಕಾಡೆಮಿಕ್‌ ಡಿಪಾಸಿಟರಿ) ನಲ್ಲಿ ಉಚಿತವಾಗಿ ಸಂಗ್ರಹಿಸಿ ವಿದ್ಯಾರ್ಥಿಗಳಿಗೆ ನೀಡುವ ಯೋಜನೆಯನ್ನು ಮುಂದುವರೆಸುವಂತೆ ರಾಜ್ಯದ ಎಲ್ಲಾ ವಿವಿಗಳಿಗೆ ರಾಜ್ಯ ಸರ್ಕಾರ ಜ.14ರಂದು ಪತ್ರ ಬರೆದಿದೆ. ಮತ್ತೊಂದೆಡೆ ರಾಜ್ಯದ ವಿವಿಗಳ ಕುಲಾಧಿಪತಿಯೂ ಆಗಿರುವ ರಾಜ್ಯಪಾಲ ಥಾವರ್‌ ಚಂದ್‌ ಗೆಹಲೋತ್‌ ಅವರು ಈ ಕಾರ್ಯವನ್ನು ಕಿಯೋನಿಕ್ಸ್‌ ಸಂಸ್ಥೆಯ ಎಲೆಕ್ಟ್ರಾನಿಕ್‌ ಡಾಕ್ಯುಮೆಂಟರ್‌ ಜನರೇಷನ್‌ ಸಿಸ್ಟಮ್‌ಗೆ (ಇಡಿಜಿಎಸ್‌) ನೀಡಲು ಎಲ್ಲಾ ವಿವಿಗಳ ಕುಲಪತಿಗಳಿಗೆ ಆದೇಶ ಮಾಡಿದ್ದಾರೆ.

Digital India : ಯುಪಿಐನಡಿ ಹಣ ಕಳುಹಿಸಲು ಇನ್ನು ಇಂಟರ್ನೆಟ್‌ ಬೇಕಾಗಿಲ್ಲ

ಹೀಗೆ ಸರ್ಕಾರ ಮತ್ತು ರಾಜ್ಯಪಾಲರಿಂದ ಭಿನ್ನ ಆದೇಶ ಬಂದಿರುವುದರಿಂದ ಯಾವುದನ್ನು ಪಾಲಿಸಬೇಕು ಯಾವುದನ್ನು ಬಿಡಬೇಕು ಎಂಬುದು ತಿಳಿಯದೆ ವಿವಿಗಳ ಅಧಿಕಾರಿಗಳು ಗೊಂದಲಕ್ಕೆ ಸಿಲುಕಿದ್ದಾರೆ. ಈ ಗೊಂದಲ ಬಗೆಹರಿಸಿಕೊಳ್ಳಲು ಸರ್ಕಾರದಿಂದ ಬಂದಿರುವ ಆದೇಶವನ್ನು ರಾಜ್ಯಪಾಲರಿಗೆ ಮತ್ತು ರಾಜ್ಯಪಾಲರಿಗೆ ಬಂದಿರುವ ಆದೇಶವನ್ನು ಸರ್ಕಾರಕ್ಕೆ ಕಳುಹಿಸಿ ಯಾವ ಆದೇಶ ಪಾಲಿಸಬೇಕೆಂದು ಸ್ಪಷ್ಟನೆ ಕೋರಲು ನಿರ್ಧರಿಸಿರುವುದಾಗಿ ಕೆಲ ವಿವಿಗಳ ಕುಲಪತಿಗಳು ತಿಳಿಸಿದ್ದಾರೆ.

ಡಿಜಿಲಾಕರ್‌-ನಾಡ್‌ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಉಚಿತ ಯೋಜನೆ. ಅಲ್ಲದೆ, ಇದುವರೆಗೆ ಕಿಯೋನಿಕ್ಸ್‌ ಮೂಲಕ ಜಾರಿಗೊಳಿಸಿದ್ದ ಇಡಿಜಿಎಸ್‌ ಯೋಜನೆಯನ್ನು ಮುಂದಿನ ಆದೇಶದ ವರೆಗೆ ತಡೆಹಿಡಿಯಲು ಸರ್ಕಾರ ತನ್ನ ಪತ್ರದಲ್ಲಿ ವಿವಿಗಳಿಗೆ ಸೂಚಿಸಿದೆ. ಇದರಿಂದ ಸರ್ಕಾರಕ್ಕೆ ನೂರಾರು ಕೋಟಿ ರು. ಉಳಿತಾಯ ಕೂಡ ಆಗಲಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ಮತ್ತು ರಾಜ್ಯಪಾಲರಿಂದ ಭಿನ್ನ ಆದೇಶ ಬರಲು ಇಬ್ಬರ ನಡುವಿನ ಸಮನ್ವಯತೆ ಕೊರತೆ ಕಾರಣವೇ ಎಂಬ ಅನುಮಾನಗಳು ಶಿಕ್ಷಣ ವಲಯದಲ್ಲಿ ಉದ್ಭವಿಸಿದೆ.

Digital Mahotsav:ರಾಷ್ಟ್ರೀಯ ಬ್ಲಾಕ್‌ಚೈನ್ ಕಾರ್ಯತಂತ್ರದ ಡಿಜಿಟಲ್ ಪ್ಲಾಟ್‌ಫಾರ್ಮ್ ಬಿಡುಗಡೆ ಮಾಡಿದ ರಾಜೀವ್ ಚಂದ್ರಶೇಖರ್!

ರಾಜ್ಯಪಾಲರ ಆದೇಶ ವಾಪಸ್‌ ಸಾಧ್ಯತೆ
ಈ ಮಧ್ಯೆ, ಪ್ರಸ್ತುತ ಉದ್ಭವಿಸಿರುವ ಗೊಂದಲದ ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಗಳು ರಾಜಭವನದ ಅಧಿಕಾರಿಗಳನ್ನು ಭೇಟಿ ಮಾಡಿ ಮಾಹಿತಿ ನೀಡಿದ್ದಾರೆ. ಅಲ್ಲದೆ, ಕೇಂದ್ರ ಸರ್ಕಾರದ ಆದೇಶದಂತೆ ರಾಜ್ಯ ಸರ್ಕಾರ ಡಿಜಿ ಲಾಕರ್‌ ನಾಡ್‌ನಲ್ಲಿ ಅಂಕಪಟ್ಟಿಮತ್ತು ಇತರೆ ಪ್ರಮಾಣ ಪತ್ರಗಳನ್ನು ಸಂಗ್ರಹಿಸಿ ನೀಡಲು ವಿವಿಗಳಿಗೆ ಬರೆದಿರುವ ಪತ್ರದ ಉದ್ದೇಶವನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ. ಕಿಯೋನಿಕ್ಸ್‌ ಇಡಿಜಿಎಸ್‌ ಜಾರಿಯಿಂದ ಸರ್ಕಾರಕ್ಕೆ ಮುಂದಿನ ಐದು ವರ್ಷಗಳಿಗೆ 465 ಕೋಟಿ ರು. ಹೊರೆಯಾಗಲಿದೆ. ಇದರ ಬದಲು ಡಿಜಿ ಲಾಕರ್‌ ನಾಡ್‌ನಲ್ಲಿ ಅಂಕಪಟ್ಟಿಇತರೆ ದಾಖಲೆಗಳನ್ನು ಸಂಗ್ರಹಿಸುವುದು ಉಚಿತವಾಗಿ ದೊರೆಯಲಿದೆ. ಅಲ್ಲದೆ ಇದು ಕೇಂದ್ರ ಸರ್ಕಾರದ ಯೋಜನೆಯಾಗಿದ್ದು 2017ರಿಂದಲೇ ಜಾರಿಯಲ್ಲಿದೆ. ಸರ್ಕಾರಕ್ಕೂ ಯಾವುದೇ ಹೊರೆ ಬೀಳುವುದಿಲ್ಲ ಎಂದು ಅಧಿಕಾರಿಗಳು ರಾಜಭವನದ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ರಾಜ್ಯಪಾಲರು ಕಿಯೋನಿಕ್ಸ್‌ ಇಡಿಜಿಎಸ್‌ ಯೋಜನೆ ಜಾರಿಗೊಳಿಸಲು ವಿವಿಗಳ ಕುಲಪತಿಗಳಿಗೆ ನೀಡಿರುವ ನಿರ್ದೇಶನಗಳನ್ನು ಹಿಂಪಡೆಯುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ವಿದ್ಯಾರ್ಥಿಗಳ ಅಂಕಪಟ್ಟಿಮತ್ತು ಇತರೆ ದಾಖಲೆಗಳನ್ನು ಸಂಗ್ರಹಿಸಿ ನೀಡುವ ಸಂಬಂಧ ಭಿನ್ನ ಆದೇಶ ಬಂದಿರುವುದು ನಿಜ. ಈ ಬಗ್ಗೆ ಸರ್ಕಾರ ಮತ್ತು ರಾಜ್ಯಪಾಲರಿಗೆ ಪತ್ರ ಬರೆದು ಯಾವುದನ್ನು ಪಾಲಿಸುವುದು ಎಂಬ ಬಗ್ಗೆ ಸ್ಪಷ್ಟನೆ ಕೋರಲಾಗುವುದು. ನಂತರ ಸರ್ಕಾರ ಮತ್ತು ರಾಜ್ಯಪಾಲರು ಕೈಗೊಳ್ಳುವ ನಿರ್ಧಾರದಂತೆ ಕ್ರಮ ವಹಿಸಲಾಗುವುದು.
- ಪ್ರೊ.ಕೆ.ಆರ್‌.ವೇಣುಗೋಪಾಲ್‌, ಬೆಂಗಳೂರು ವಿವಿ ಕುಲಪತಿ

ಬೆಂಗಳೂರು ನಗರ ವಿವಿಯದ ವಿದ್ಯಾರ್ಥಿಗಳ ಒಂದು ವರ್ಷದ ಎಲ್ಲ ಅಂಕಪಟ್ಟಿಗಳನ್ನು ಈಗಾಗಲೇ ಸರ್ಕಾರದ ಆದೇಶದಂತೆ ಕೇಂದ್ರ ಸರ್ಕಾರದ ಡಿಜಿ​-ಲಾಕರ್‌ ನಾಡ್‌ನಲ್ಲಿ ಸಂಗ್ರಹಿಸಲಾಗಿದೆ. ಉಳಿದ ಕೆಲ ವರ್ಷಗಳ ಅಂಕಪಟ್ಟಿಗಳನ್ನು ಸಂಗ್ರಹಿಸುವ ಕಾರ್ಯ ನಡೆಯಬೇಕಿದೆ. ಈ ಸಂಬಂಧ ಸರ್ಕಾರ ಮತ್ತು ರಾಜ್ಯಪಾಲರಿಂದ ಬೇರೆ ಬೇರೆ ಆದೇಶಗಳು ಬಂದಿದ್ದಲ್ಲಿ ಕುಲಸಚಿವರಿಂದ ಮಾಹಿತಿ ಪಡೆದು ಸರ್ಕಾರ ಮತ್ತು ರಾಜ್ಯಪಾಲರಿಂದ ಸ್ಪಷ್ಟನೆ ಪಡೆಯಲಾಗುವುದು
- ಪ್ರೊ.ಲಿಂಗರಾಜ ಗಾಂಧಿ, ಬೆಂಗಳೂರು ನಗರ ವಿವಿ ಕುಲಪತಿ

ವಿಶೇಷ ವರದಿ
ಕನ್ನಡಪ್ರಭ ವಾರ್ತೆ