ಸ್ತ್ರೀಶಕ್ತಿ ಸಂಘಗಳ ಮಾದರಿಯಲ್ಲಿ ಯುವಕರು ಸ್ವ ಉದ್ಯೋಗ ರೂಪಿಸಿಕೊಳ್ಳಲು ‘ಸ್ವಾಮಿ ವಿವೇಕಾನಂದ ಯುವ ಶಕ್ತಿ ಸಂಘ ಯೋಜನೆಗೆ’ ಮಾ.23ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ.
ಬೆಂಗಳೂರು (ಮಾ.20) : ಸ್ತ್ರೀಶಕ್ತಿ ಸಂಘಗಳ ಮಾದರಿಯಲ್ಲಿ ಯುವಕರು ಸ್ವ ಉದ್ಯೋಗ ರೂಪಿಸಿಕೊಳ್ಳಲು ‘ಸ್ವಾಮಿ ವಿವೇಕಾನಂದ ಯುವ ಶಕ್ತಿ ಸಂಘ ಯೋಜನೆಗೆ’ ಮಾ.23ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ.
ಭಾನುವಾರ ಸಚಿವ ನಾರಾಯಣಗೌಡ(Narayanagowda) ಅವರ ಜತೆ ಹಿರಿಯ ಅಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ಸಭೆ ನಡೆಸಿ ಸಂಘಗಳ ರಚನೆಯ ಪ್ರಗತಿ ಕುರಿತು ಅವರು ಮಾಹಿತಿ ಪಡೆದರು.
ಕಾಂಗ್ರೆಸ್‌ನಿಂದ ಆಹ್ವಾನ: ಬಿಜೆಪಿ ತೊರೆಯುವ ಸುಳಿವು ನೀಡಿದ ಸಚಿವ ನಾರಾಯಣಗೌಡ
ರಾಜ್ಯದಲ್ಲಿ ಬಹಳ ವರ್ಷಗಳಿಂದ ಸಕ್ರಿಯವಾಗಿರುವ ಸ್ತ್ರೀಶಕ್ತಿ ಸ್ವಸಹಾಯ ಗುಂಪು(Shreeshakti Self Help Group)ಗಳ ಮಾದರಿಯಲ್ಲಿ ಯುವಕರಿಗಾಗಿ ಮೊದಲ ಬಾರಿಗೆ ಸ್ವ-ಉದ್ಯೋಗ ಕೈಗೊಳ್ಳಲು ಯೋಜನೆಯನ್ನು ರೂಪಿಸಲಾಗಿದ್ದು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹೆಚ್ಚಿನ ಆದ್ಯತೆ ನೀಡಿ ಕೆಲಸ ಮಾಡಬೇಕು. ಜಂಟಿ ಬಾಧ್ಯತಾ ಗುಂಪುಗಳು ರಚನೆಯಾದ ನಂತರ ಸುತ್ತು ನಿಧಿ ಹಂಚಿಕೆ ಮಾಡಿದ ಮೇಲೆ ಈ ಗುಂಪುಗಳು ಯೋಜನೆಯನ್ನು ಗುರುತಿಸಿ, ಬ್ಯಾಂಕ್‌ನಿಂದ ಸಾಲ ಸೌಲಭ್ಯ ಪಡೆದು ಉದ್ದಿಮೆಯನ್ನು ಸ್ಥಾಪಿಸಿ ಉತ್ಪಾದನೆ ಪ್ರಾರಂಭಿಸುವವರೆಗೂ ಮಾರ್ಗದರ್ಶನ ನೀಡಬೇಕು ಎಂದು ಜಿಲ್ಲಾ ಪಂಚಾಯತ್ ಸಿಇಓಗಳಿಗೆ ಸಚಿವರು ಸೂಚಿಸಿದರು.
ಯೋಜನೆಗಳನ್ನು ಗುರುತಿಸಲು ನಿಯೋಜಿಸಿರುವ ಸಮಾಲೋಚಕರು, ಯುವಕರು ಕೈಗೊಳ್ಳುವ ಯೋಜನೆಗೆ ಅನುಗುಣವಾಗಿ ಆಯಾ ಕ್ಷೇತ್ರದ ಪರಿಣತರಿಂದಲೇ ತರಬೇತಿ ಕೊಡಿಸಬೇಕು. ಆಗ ಮಾತ್ರ ಯೋಜನೆ ಯಶಸ್ವಿಯಾಗಲು ಸಾಧ್ಯ ಎಂದು ತಿಳಿಸಿದರು.
ಯುವಶಕ್ತಿ ಸಂಘಗಳಿಗೆ ಸಾಲ ನೀಡುವಾಗ, ಯೋಜನಾ ಮೊತ್ತ ಹೆಚ್ಚಾಗಿದ್ದು ಯೋಜನೆ ಲಾಭದಾಯಕವಾಗಿದ್ದರೆ ಬ್ಯಾಂಕುಗಳು ಸರ್ಕಾರ ನಿಗದಿಪಡಿಸಿದ 5 ಲಕ್ಷ ರು. ಮಿತಿಗಿಂತ ಹೆಚ್ಚಿನ ಮೊತ್ತದ ಸಾಲ ಮಂಜೂರು ಮಾಡಿ ಯುವಕರನ್ನು ಬೆಂಬಲಿಸಬೇಕೆಂದು ಮುಖ್ಯಮಂತ್ರಿಗಳು ಬ್ಯಾಂಕರ್‌ಗಳಿಗೆ ಸಲಹೆ ನೀಡಿದರು.
ಸಭೆಯಲ್ಲಿ ಯುವ ಸಬಲೀಕರಣ, ಕ್ರೀಡೆ ಮತ್ತು ರೇಷ್ಮೆ ಸಚಿವ ನಾರಾಯಣಗೌಡ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್, ಹಣಕಾಸು ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐಎಸ್‌ಎನ್ ಪ್ರಸಾದ್ ಸೇರಿದಂತೆ ಹಲವರು ಹಾಜರಿದ್ದರು.
ಯೋಜನೆಯ ಬ್ಯಾಂಕ್ ಲಿಂಕೇಜ್, ಖಾತೆ ತೆರೆಯುವಿಕೆ ಮತ್ತು ಬ್ಯಾಂಕ್ ಸಾಲಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ಕೈಗೊಳ್ಳಲು ಭಾರತೀಯ ಸ್ಟೇಟ್ ಬ್ಯಾಂಕ್ ಹಾಗೂ ವಿವಿಧ ಬ್ಯಾಂಕರ್‌ಗಳಿಂದ ಒಟ್ಟು 7300 ಬಿ.ಸಿ. (ಬ್ಯಾಂಕ್ ಕರೆಸ್ಪಾಂಡೆಂಟ್) ಸಖಿಗಳ ಸೇವೆ ಪಡೆಯಲಾಗುತ್ತಿದೆ. ಅವರಿಗೆ ರಾಷ್ಟ್ರೀಕೃತ ಬ್ಯಾಂಕ್‌ನಿಂದ 2 ಸಾವಿರ ರು. ಹಾಗೂ ಸಹಕಾರಿ ಬ್ಯಾಂಕ್‌ಗಳಿಂದ 4 ಸಾವಿರ ರು. ಪ್ರೋತ್ಸಾಹಧನ ನೀಡಲಾಗುತ್ತಿದೆ. ಈ ಸಂಬಂಧ ಕೇಂದ್ರ ಹಣಕಾಸು ಸಚಿವರಿಗೂ ಮುಖ್ಯಮಂತ್ರಿಗಳು ಪತ್ರ ಬರೆದಿದ್ದಾರೆ ಎಂದು ತಿಳಿದುಬಂದಿದೆ.
ಏನಿದು ಯೋಜನೆ?
ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳ ಮಾದರಿಯಲ್ಲಿ ಯುವಕರಿಗಾಗಿ ಗ್ರಾಮಗಳಲ್ಲಿ ಬಾಧ್ಯತಾ ಗುಂಪು ರಚಿಸಲಾಗುತ್ತದೆ. ಯುವಕರು ಉದ್ದಿಮೆ ಸ್ಥಾಪಿಸಲು ಮುಂದಾದರೆ ಅವರಿಗೆ ಸರ್ಕಾರದ ಗ್ಯಾರಂಟಿಯೊಂದಿಗೆ ಸಾಲ ನೀಡಲಾಗುತ್ತದೆ. ಸಾಲದ ಮರುಪಾವತಿ ಬಾಧ್ಯತೆಯನ್ನು ಗುಂಪಿನ ಸದಸ್ಯರೆಲ್ಲರೂ ಹೊರಬೇಕು. ಬ್ಯಾಂಕ್‌ನಿಂದ ಸಾಲ ಸೌಲಭ್ಯ ಪಡೆದು ಉದ್ದಿಮೆಯನ್ನು ಸ್ಥಾಪಿಸಿ ಉತ್ಪಾದನೆ ಪ್ರಾರಂಭಿಸುವವರೆಗೂ ಯುವಕರಿಗೆ ಸರ್ಕಾರದಿಂದ ಮಾರ್ಗದರ್ಶನ ನೀಡಲಾಗುತ್ತದೆ. ಯುವಕರಿಗೆ ಸ್ವ ಉದ್ಯೋಗ ಸ್ಥಾಪಿಸಲು ಉತ್ತೇಜನ ನೀಡುವುದಕ್ಕೆ ಇದನ್ನು ರೂಪಿಸಲಾಗಿದೆ.
ಸ್ತ್ರೀಶಕ್ತಿ ಸಾಮರ್ಥ್ಯ, ವಿವೇಕಾನಂದ ಯುವಶಕ್ತಿ ಯೋಜನೆ ನವೆಂಬರಿಂದ: ಸಿಎಂ ಬೊಮ್ಮಾಯಿ
ಪ್ರತಿ ಗ್ರಾ.ಪಂ.ಗೆ 2 ಗುಂಪು ರಚನೆ
ರಾಜ್ಯದಲ್ಲಿ ಒಟ್ಟು 5,951 ಗ್ರಾಮ ಪಂಚಾಯಿತಿಗಳಿವೆ. ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆ(Mr. Vivekananda Yuva Shakti Yojana)ಯಡಿ ಪ್ರತಿ ಗ್ರಾ.ಪಂ.ಗೆ ಎರಡು ಜಂಟಿ ಬಾಧ್ಯತಾ ಗುಂಪುಗಳನ್ನು ರಚಿಸಲು ಆದೇಶಿಸಲಾಗಿದೆ. ಮಾ.18ರ ವೇಳೆಗೆ 6,509 ಗುಂಪುಗಳು ರಚನೆಯಾಗಿವೆ. ಉಳಿದಂತೆ 5,393 ಗುಂಪು ರಚನೆಯಾಗಬೇಕಿದ್ದು, ಈಗಾಗಲೇ 1,754 ಗುಂಪುಗಳಿಗೆ ತಲಾ 10 ಸಾವಿರ ರು.ಗಳಂತೆ 1.75 ಕೋಟಿ ರು. ವೆಚ್ಚದಲ್ಲಿ ನಿಧಿ ಪಾವತಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
