Asianet Suvarna News Asianet Suvarna News

ಮಾಲೀಕರ ಜತೆ ಡಿಸಿಎಂ ಸಂವಾದ: ಅಪಾರ್ಟ್‌ಮೆಂಟ್‌ಗಳಲ್ಲಿ ಎಸ್ ಟಿಪಿ ಕಡ್ಡಾಯ

ಅಪಾರ್ಟ್‌ಮೆಂಟ್‌ಗಳ ಮಾಲೀಕರ ಜತೆ ಉಪ ಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥನಾರಾಯಣ ಅವರು ಸಂವಾದ ನಡೆಸಿದ್ದು, ಅಪಾರ್ಟ್‌ಮೆಂಟ್‌ಗಳಲ್ಲಿ ಎಸ್ ಟಿಪಿ ಕಡ್ಡಾಯ ಎಂದು ಸೂಚಿಸಿದರು.

STP compulsory In apartments Says Dycm ashwath narayan rbj
Author
Bengaluru, First Published Sep 21, 2020, 10:08 PM IST

ಬೆಂಗಳೂರು, (ಸೆ.21): ಹಸಿರು ನ್ಯಾಯ ಮಂಡಳಿ ಆದೇಶ ಹಾಗೂ ಪರಿಸರ ಮಾಲಿನ್ಯ ಕುರಿತಾದ ಬಿಕ್ಕಟ್ಟುಗಳನ್ನು ಎದುರಿಸುತ್ತಿರುವ ಬೆಂಗಳೂರು ಅಪಾರ್ಟ್‌ಮೆಂಟ್‌ಗಳ ಮಾಲೀಕರ ಜತೆ ಉಪ ಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥನಾರಾಯಣ ಚರ್ಚೆ ನಡೆಸಿದರು.

ಕೋವಿಡ್‌ ಕಾರಣಕ್ಕೆ ಮನೆಯಲ್ಲೇ ಕ್ವಾರಂಟೈನ್‌ ಆಗಿರುವ ಅವರು, ಬೆಂಗಳೂರಿನಲ್ಲಿ ಸೋಮವಾರ ಅಪಾರ್ಟ್‌ಮೆಂಟ್‌ ಮಾಲೀಕರ ಸಂಘದ (ಬಿಎಎಫ್)‌ ಸದಸ್ಯರ ಜತೆ ಆನ್‌ಲೈನ್‌ ಸಂವಾದ ನಡೆಸಿದರಲ್ಲದೆ, ಹಸಿರು ನ್ಯಾಯಮಂಡಳಿ ಆದೇಶದಂತೆ ಎಲ್ಲ ಅಪಾರ್ಟ್‌ಮೆಂಟುಗಳಲ್ಲಿ ಕಡ್ಡಾಯವಾಗಿ ಒಳಚರಂಡಿ ನೀರು ಸಂಸ್ಕರಣಾ ಘಟಕಗಳ ಸ್ಥಾಪನೆ ಮಾಡಬೇಕಿದೆ ಎಂದರು.

ಬೆಂಗಳೂರಿನ ಜಲಮೂಲಗಳನ್ನು ನಾವೆಲ್ಲರೂ ಸೇರಿ ರಕ್ಷಣೆ ಮಾಡಿಕೊಳ್ಳಬೇಕಿದೆ. ಅದರೊಳಕ್ಕೆ ಯಾವುದೇ ಕಾರಣಕ್ಕೂ ವಿಷಕಾರಿ ಅಂಶಗಳು ಸೇರುವುದು ಆತಂಕಕಾರಿ ಎಂದು ಅವರು ಕಳವಳ ವ್ಯಕ್ತಪಡಿಸಿದರು.

SRH ವಿರುದ್ಧ RCB ಹೋರಾಟ, ವಿಧಾನಸಭೆಯಲ್ಲಿ ನಾಯಕರ ಹೊಡೆದಾಟ; ಸೆ.21ರ ಟಾಪ್ 10 ಸುದ್ದಿ!

ಬೆಂಗಳೂರಿನ ಇಮೇಜ್‌ಗೆ ಧಕ್ಕೆ
ಈಗಾಗಲೇ ಬೆಳ್ಳಂದೂರು ಕೆರೆ ಮಾಲಿನ್ಯದಿಂದ ಬೆಂಗಳೂರಿನ ಇಮೇಜ್‌ ಹಾಳಾಗಿದೆ. ಮತ್ತಷ್ಟು ಹಾಳಾಗುವುದನ್ನು ತಡೆಯಲೇಬೇಕಿದೆ. ಈ ನಿಟ್ಟಿನಲ್ಲಿ ಕೊಳಚೆ ನಿರ್ಮೂಲನ ಮಂಡಳಿ, ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಎಲ್ಲ ಅಪಾರ್ಟ್‌ಮೆಂಟ್‌ಗಳ ಮಾಲೀಕರು ಒಟ್ಟಾಗಿ ಕೆಲಸ ಮಾಡಬೇಕಿದೆ, ಈ ನಿಟ್ಟಿನಲ್ಲಿ ಸರಕಾರವೂ ಸೂಕ್ತ ಸಹಕಾರ ನೀಡಲಿದೆ. ಈ ಬಗ್ಗೆ ಮುಖ್ಯ ಕಾರ್ಯದರ್ಶಿ ಅವರಿಗೆ ಪತ್ರ ಬರೆಯುವೆ ಎಂದು ಡಿಸಿಎಂ ಹೇಳಿದರು.

ಹಸಿರು ನ್ಯಾಯ ಮಂಡಳಿ ನೀಡಿರುವ ಆದೇಶ ಹಾಗೂ ಮತ್ತಿತರೆ ಅಂಶಗಳ ಬಗ್ಗೆ ಆನ್‌ಲೈನ್‌ ಸಭೆಯಲ್ಲಿ ಹಾಜರಿದ್ದ ಮಾಲಿನ್ಯ ನಿಯಂತ್ರಣ ಮಂಡಳಿ ಕಾರ್ಯದರ್ಶಿ ಶ್ರೀನಿವಾಸಲು ಅವರು ಹಾಗೂ ಮಂಡಳಿಯ ಕಾನೂನು ಸಲಹೆಗಾರ ಕೆ.ಎಂ. ದರ್ಪಣ್‌ ಅವರಿಂದ ವಿವರವಾದ ಮಾಹಿತಿ ಪಡೆದುಕೊಂಡ ಅವರು, ಯಾವುದೇ ಬೆಲೆ ತೆತ್ತಾದರೂ ನಾವು ಬೆಳ್ಳಂದೂರು ಕೆರೆಯನ್ನು ಮಾಲಿನ್ಯದಿಂದ ಸಂರಕ್ಷಣೆ ಮಾಡಬೇಕಿದೆ. ಆ ಮೂಲಕ ಬ್ರ್ಯಾಂಡ್‌ ಬೆಂಗಳೂರನ್ನು ಉಳಿಸಬೇಕಿದೆ ಎಂದರು.

ಕೈಗಾರಿಕೆಗಳಿಂದ ವಿಷಯುಕ್ತ ಲವಣಾಂಶಗಳು ಬೆಳ್ಳಂದೂರು ಕೆರೆ ಸೇರುತ್ತಿವೆಯೇ ವಿನಾ ನಮ್ಮ ವಸತಿ ಸಮುಚ್ಛಯಗಳಿಂದ ಯಾವುದೇ ವಿಷಕಾರಿ ಅಂಶಗಳು ಕೆರೆಗೆ ಹೋಗುತ್ತಿಲ್ಲ. ಆ ಭಾಗದಲ್ಲಿ ಸುಮಾರು 493ಕ್ಕೂ ಹೆಚ್ಚು ಕೈಗಾರಿಕೆಗಳಿವೆ ಎಂಬ ಅಂಶವನ್ನು ಇದೇ ವೇಳೆ ಅಪಾರ್ಟ್‌ಮೆಂಟ್‌ ಮಾಲೀಕರು ಡಿಸಿಎಂ ಅವರ ಗಮನಕ್ಕೆ ತಂದರು. ಇದಕ್ಕೆ ಸ್ಪಂದಿಸಿದ ಅವರು,  ನಮ್ಮಲ್ಲಿರುವ ಮಾಹಿತಿಯಂತೆ 90ಕ್ಕೂ ಹೆಚ್ಚು ಅಪಾರ್ಟ್‌ಮೆಂಟುಗಳು ಒಳಚರಂಡಿ ಸಂಸ್ಕರಣಾ ಘಟಕವನ್ನು ಅಳವಡಿಸಿಕೊಂಡಿವೆ. ಇನ್ನು 32 ಅಪಾರ್ಟ್‌ಮೆಂಟುಗಳು ಅಳವಡಿಸಿಕೊಳ್ಳಬೇಕಿದೆ. ಆದಷ್ಟು ಬೇಗ ಅವುಗಳನ್ನು ಅಳವಡಿಸಿಕೊಳ್ಳುವ ಕಾರ್ಯ ಆಗಬೇಕಿದೆ ಎಂದು ಹೇಳಿದರು.

ಈಗ ಹಸಿರು ನ್ಯಾಯಮಂಡಳಿ ನೀಡಿರುವ ಆದೇಶದಂತೆ ಒಳಚರಂಡಿ ಸಂಸ್ಕರಣಾ ಘಟಕವನ್ನು ಅಳವಡಿಸಿಕೊಂಡಿರುವ ಅಪಾರ್ಟ್‌ಮೆಂಟುಗಳಿಗೆ ತೊಂದರೆ ಇಲ್ಲ. ಉಳಿದವರು ಬೇಗ ಅಳವಡಿಸಿಕೊಂಡರೆ ಉತ್ತಮ. ಪೊಟ್ಯಾಷಿಯಂ ಪಾಸ್ಪರಸ್‌ ಅತ್ಯಂತ ವಿಷಕಾರಿ ಅಂಶವಾಗಿದ್ದು, ಈ ಬಗ್ಗೆ ನ್ಯಾಯಮಂಡಳಿ ಹೆಚ್ಚು ಆಕ್ಷೇಪ ವ್ಯಕ್ತಪಡಿಸಿದೆ ಎಂದು ಡಿಸಿಎಂ ತಿಳಿಸಿದರು.

ಸಭೆಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಕಾರ್ಯದರ್ಶಿ ಶ್ರೀನಿವಾಸಲು, ಅಪಾರ್ಟ್‌ಮೆಂಟ್‌ ಮಾಲೀಕರ ಸಂಘದ ಹರೀಶ್‌ ಶಿವರಾಮ್‌, ಲ್ಯೂಕ್‌ ಧನರಾಜ್‌, ಅರುಣ್‌ ಕುಮಾರ್‌ ಮುಂತಾದವರು ಪಾಲ್ಗೊಂಡಿದ್ದರು.

Follow Us:
Download App:
  • android
  • ios