ಸರ್ಕಾರದ ವಿರುದ್ಧ ಇಂದು, ನಾಳೆ ರಾಜ್ಯವ್ಯಾಪಿ ಬಿಜೆಪಿ ಪ್ರತಿಭಟನೆ
42 ಕೋಟಿ ರು. ಪತ್ತೆ, ವಿದ್ಯುತ್ ಕಡಿತ, ಬರ ಪರಿಹಾರ ವೈಫಲ್ಯ, ಕಾನೂನು ಸುವ್ಯವಸ್ಥೆ ಕುಸಿತ ಖಂಡಿಸಿ ಇಂದು ನಾಳೆ ಬಿಜೆಪಿಯಿಂದ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಎಂದು ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಹೇಳಿದ್ದಾರೆ.

ಬೆಂಗಳೂರು (ಅ.16) : ಕಾಂಗ್ರೆಸ್ ಪಕ್ಷಕ್ಕೆ ರಾಜ್ಯ ಸರ್ಕಾರ ಎಟಿಎಂ ಆಗಿ ಪರಿವರ್ತನೆಯಾಗಿದ್ದು, ವಿದ್ಯುತ್ ಲೋಡ್ ಶೆಡ್ಡಿಂಗ್, ಬರ ಪ್ರದೇಶದ ರೈತರಿಗೆ ಪರಿಹಾರ ನೀಡದೇ ಇರುವುದು ಸೇರಿದಂತೆ ಕಾನೂನು ಮತ್ತು ಸುವ್ಯವಸ್ಥೆ ಕುಸಿದಿರುವುದನ್ನು ಖಂಡಿಸಿ, ಮಂತ್ರಿ, ಉಪಮುಖ್ಯಮಂತ್ರಿಗಳ ರಾಜೀನಾಮೆಗೆ ಆಗ್ರಹಿಸಿ ರಾಜ್ಯದ ಎಲ್ಲ ಮಂಡಲ, ಜಿಲ್ಲಾ ಕೇಂದ್ರದಲ್ಲಿ ಸೋಮವಾರದಂದು (ಅ.16) ಪ್ರತಿಭಟನೆ ನಡೆಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಹೇಳಿದ್ದಾರೆ.
ಗುತ್ತಿಗೆದಾರ ಅಂಬಿಕಾಪತಿ ಮನೆಯಲ್ಲಿ 42 ಕೋಟಿ ರು. ನಗದು ಸಿಕ್ಕಿದ್ದು, ಈ ಹಣ ಕಮಿಷನ್ ರೂಪದಲ್ಲಿ ಬಂದಿರುವ ಹಣವಾಗಿದೆ ಎಂಬುದು ಜಗಜ್ಜಾಹೀರಾಗಿದೆ. ಭ್ರಷ್ಟ ಕಾಂಗ್ರೆಸ್ ಸರ್ಕಾರವು ಗುತ್ತಿಗೆದಾರರಿಗೆಂದು ನೀಡಿದ ಬಾಖಿ ಹಣದ ಸುಮಾರು 650 ಕೋಟಿ ರು. ಪ್ರತಿಯಾಗಿ ಗುತ್ತಿಗೆದಾರರು ನೀಡಿದ ಕಮಿಷನ್ ಹಣ ಇದಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎಂಪಿ ರೇಣುಕಾಚಾರ್ಯ ಸೇರಿ ಹಲವರು ಕೈ ನಾಯಕರ ಭೇಟಿ: ಸಚಿವ ಭೋಸರಾಜ್ ಸ್ಫೋಟಕ ಹೇಳಿಕೆ
ರಾಜ್ಯದಲ್ಲಿ ಬರಕ್ಕೆ ತುತ್ತಾಗಿರುವ ರೈತರಿಗೆ ಇನ್ನೂ ಪರಿಹಾರ ನೀಡಿಲ್ಲ. ರಾಜ್ಯದಲ್ಲಿ ವಿದ್ಯುತ್ ಲೋಡ್ ಶೆಡ್ಡಿಂಗ್ ವಿಪರೀತವಾಗಿದೆ. ಸರ್ಕಾರಿ ಅಧಿಕಾರಿಗಳ ವರ್ಗಾವಣೆ ದಂಧೆ ಎಗ್ಗಿಲ್ಲದೇ ನಡೆಯುತ್ತಿದೆ. ರಾಜ್ಯದ ಕಾನೂನು ಮತ್ತು ಸುವ್ಯವಸ್ಥತೆ ಸಂಪೂರ್ಣ ಕುಸಿದಿದೆ. ಈ ಎಲ್ಲ ಕಾರಣದಿಂದಾಗಿ ಸೋಮವಾರದಂದು ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಕೆಲವು ಕಡೆ ಸೋಮವಾರದಂದು ಪ್ರತಿಭಟನೆ ಮಾಡಲು ಸಾಧ್ಯವಾಗಿದ್ದರೆ ಮಂಗಳವಾರದಂದು ಪ್ರತಿಭಟನೆ ನಡೆಸಲಾಗುವುದು ಎಂದಿದ್ದಾರೆ.