ರಾಜ್ಯ ಹೆದ್ದಾರಿಗಳಲ್ಲಿನ ಟೋಲ್ ಸಂಗ್ರಹದ ನಿರ್ಧಾರವು ಬಿಜೆಪಿ ಸರ್ಕಾರದಿಂದ ಆಗಿರುವಂತದ್ದು. ಇದು ನಮ್ಮ ಸರ್ಕಾರದಿಂದ ಆಗಿರುವ ತೀರ್ಮಾನವಲ್ಲ ಎಂದು ಸಚಿವ ಎಚ್.ಡಿ ರೇವಣ್ಣ ಹೇಳಿದ್ದಾರೆ.  ಈ ನಿಟ್ಟಿನಲ್ಲಿ 17 ಟೆಂಡರ್‌ ಕರೆಯಲಾಗಿದ್ದು, ಈ ಪೈಕಿ 5 ಟೆಂಡರ್‌ ನೀಡಲಾಗಿದೆ. ಕೆ-ಶಿಪ್‌ ಮತ್ತು ಕೆಆರ್‌ಡಿಸಿಎಲ್‌ ಸಂಸ್ಥೆಗಳು ಟೋಲ್‌ಗೆ ಸಂಬಂಧಿಸಿದಂತೆ ಕಾಮಗಾರಿ ಪ್ರಾರಂಭಿಸಿವೆ ಎಂದು ತಿಳಿಸಿದ್ದಾರೆ. 

ಬೆಂಗಳೂರು :  ರಾಜ್ಯ ಹೆದ್ದಾರಿಗಳಲ್ಲಿ ಟೋಲ್‌ ಸಂಗ್ರಹ ಮಾಡುವ ನಿರ್ಧಾರವು ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರದ ತೀರ್ಮಾನವಲ್ಲ, ಬದಲಿಗೆ 2010ರಲ್ಲಿ ಆಡಳಿತದಲ್ಲಿದ್ದ ಬಿಜೆಪಿ ಸರ್ಕಾರವು ಕೈಗೊಂಡ ನಿರ್ಧಾರವಾಗಿದೆ ಎಂದು ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಸ್ಪಷ್ಟನೆ ನೀಡಿದ್ದಾರೆ.

ವಿಧಾನಸೌಧದಲ್ಲಿ ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯ ಹೆದ್ದಾರಿಗಳಿಗೆ ಟೋಲ್‌ ವಿಧಿಸಲು 2010ರಲ್ಲಿ ಬಿಜೆಪಿ ಸರ್ಕಾರ ಇದ್ದಾಗ ನಿರ್ಧಾರವಾಗಿದೆ. ಈ ನಿಟ್ಟಿನಲ್ಲಿ 17 ಟೆಂಡರ್‌ ಕರೆಯಲಾಗಿದ್ದು, ಈ ಪೈಕಿ 5 ಟೆಂಡರ್‌ ನೀಡಲಾಗಿದೆ. ಕೆ-ಶಿಪ್‌ ಮತ್ತು ಕೆಆರ್‌ಡಿಸಿಎಲ್‌ ಸಂಸ್ಥೆಗಳು ಟೋಲ್‌ಗೆ ಸಂಬಂಧಿಸಿದಂತೆ ಕಾಮಗಾರಿ ಪ್ರಾರಂಭಿಸಿವೆ. ಮೂರು ವರ್ಷಗಳ ಅವಧಿಗೆ ಈ ಸಂಸ್ಥೆಗಳಿಗೆ ಟೆಂಡರ್‌ ನೀಡಲಾಗಿದೆ. ಟೋಲ್‌ ಸಂಗ್ರಹಕ್ಕೆ 2015ರಲ್ಲಿ ನಿಯಮಾವಳಿಗಳನ್ನು ರಚಿಸಲಾಗಿದ್ದು, 2017ರಲ್ಲಿ ಟೆಂಡರ್‌ ಕರೆಯಲಾಗಿದೆ ಎಂದು ಹೇಳಿದರು.

ಬಿಓಟಿ (ಬಿಲ್ಡ್‌- ಆಪರೇಟ್‌-ಟ್ರಾನ್ಸ್‌ಫರ್‌) ಆಧಾರದಲ್ಲಿ ಹೆದ್ದಾರಿ ಅಭಿವೃದ್ಧಿಪಡಿಸಿರುವುದರಿಂದ ಟೋಲ್‌ ಸಂಗ್ರಹ ಅನಿವಾರ್ಯವಾಗಿದೆ. ಮೊದಲ ವರ್ಷ ಶೇ.10ರಷ್ಟು, ಎರಡನೇ ವರ್ಷ ಶೇ.20ರಷ್ಟುಮತ್ತು ಮೂರನೇ ವರ್ಷ ಶೇ.30ರಷ್ಟುದರ ಹೆಚ್ಚಳ ಮಾಡುವ ವಿಚಾರ ಇದೆ. ವಿಶ್ವಬ್ಯಾಂಕ್‌ ಮತ್ತು ಎಡಿಬಿ ಬ್ಯಾಂಕ್‌ ಅನುದಾನ ಅಡಿಯಲ್ಲಿ ರಸ್ತೆ ನಿರ್ಮಿಸಲಾಗುತ್ತಿದ್ದು, ಈಗಾಗಲೇ ಪಡುಬಿದರೆ- ಕಾರ್ಕಳ ರಾಜ್ಯ ಹೆದ್ದಾರಿಯಲ್ಲಿ ಎರಡು ದಿನಗಳಿಂದ ಟೋಲ್‌ ಸಂಗ್ರಹ ಮಾಡಲಾಗುತ್ತಿದೆ. ಹೊಸಕೋಟೆ-ಚಿಂತಾಮಣಿ, ತುಮಕೂರು-ಪಾವಗಡ, ಮುದುಗಲ್‌-ತಾವರೆಗೇರಾ ರಾಜ್ಯ ಹೆದ್ದಾರಿ ಟೋಲ್‌ ಸಂಗ್ರಹಕ್ಕೆ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದೆ. ಇನ್ನೂ ಬಾಕಿ ಇರುವ ಬೇರೆ ಬೇರೆ ಮಾರ್ಗಗಳಲ್ಲಿ ಯೋಜನೆ ಅನುಷ್ಠಾನ ಹಂತದಲ್ಲಿದೆ ಎಂದರು.

ರಾಜ್ಯದ 17 ರಾಜ್ಯ ಹೆದ್ದಾರಿಗಳಲ್ಲಿ ಕಾರ್‌, ಜೀಪ್‌, ವ್ಯಾನ್‌, ಮತ್ತಿತರ ಲಘು ಮೋಟಾರು ವಾಹನಗಳಿಗೆ ಪ್ರತಿ ಕಿ.ಮೀ.ಗೆ 58 ಪೈಸೆ, ಕಡಿಮೆ ಭಾರ ಹೊರುವ ವಾಹನಗಳಿಗೆ 86 ಪೈಸೆ, ಬಸ್‌, ಟ್ರಕ್‌ಗೆ 1.73 ರು. ನಿಗದಿಪಡಿಸಲಾಗಿದೆ. ಮಲ್ಟಿಎಕ್ಸೆಲ್‌, ಅಥ್‌ರ್‍ ಮೂವಿಂಗ್‌ ಮಷಿನರಿ ಮತ್ತು 3 ರಿಂದ 6 ಎಕ್ಸೆಲ್‌ ವಾಹನಗಳಿಗೆ 2.57 ರು. ಹಾಗೂ ಭಾರೀ ವಾಹನ ಮತ್ತು ಸೆವೆನ್‌ ಎಕ್ಸೆಲ್‌ಗಿಂತ ಅಧಿಕ ಭಾರದ ವಾಹನಗಳಿಗೆ 3.45 ರು.ನಂತೆ ಶುಲ್ಕ ಸಂಗ್ರಹಿಸಲಾಗುತ್ತದೆ ಎಂದು ತಿಳಿಸಿದರು.

ಟೋಲ್‌ ಕೈಬಿಡಲು ಬಿಜೆಪಿ ಶಾಸಕ ಒತ್ತಾಯ

ರಾಜ್ಯ ಹೆದ್ದಾರಿಗಳಿಂದ ಟೋಲ್‌ ಸಂಗ್ರಹ ಮಾಡುವ ನಿರ್ಧಾರ ಸರಿಯಲ್ಲ, ರಾಜ್ಯ ಸರ್ಕಾರವು ಟೋಲ್‌ ಸಂಗ್ರಹವನ್ನು ಕೈ ಬಿಡಬೇಕು ಎಂದು ಬಿಜೆಪಿ ಶಾಸಕ ವಿ.ಸುನೀಲ್‌ ಕುಮಾರ್‌ ಒತ್ತಾಯಿಸಿದ್ದಾರೆ. ವಿಧಾನಸೌಧದಲ್ಲಿ ಸಚಿವ ಎಚ್‌.ಡಿ.ರೇವಣ್ಣ ಅವರಿಗೆ ಟೋಲ್‌ ಕೈಬಿಡುವಂತೆ ಮನವಿ ಸಲ್ಲಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಕಾರ್ಕಳ-ಪಡುಬಿದ್ರೆ ರಾಜ್ಯ ಹೆದ್ದಾರಿಯಲ್ಲಿ ಟೋಲ್‌ ಸಂಗ್ರಹ ಆರಂಭಿಸಲಾಗಿದೆ. ರಸ್ತೆ ಕಾಮಗಾರಿ ನಡೆಸಿ ನಾಲ್ಕು ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಳಿಸಿಲ್ಲ. ಟೋಲ್‌ ಸಂಗ್ರಹದಿಂದ ಜನಸಾಮಾನ್ಯರಿಗೆ ಹೊರೆಯಾಗಲಿದೆ. ಹೀಗಾಗಿ ಟೋಲ್‌ ಕೈಬಿಡಬೇಕು ಎಂದು ಹೇಳಿದರು.

ಬಿಜೆಪಿ ಸರ್ಕಾರದಲ್ಲಿ ಆಗಿರುವ ತೀರ್ಮಾನ ಇದಾಗಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಾವುದೇ ಸರ್ಕಾರ ತೀರ್ಮಾನ ಮಾಡಿದರೂ ಅದು ತಪ್ಪೇ. ಈ ಹಿಂದಿನ ಸರ್ಕಾರ ಮಾಡಿದರೂ ಅದನ್ನು ಸರ್ಕಾರ ಮಾರ್ಪಾಟು ಮಾಡಬೇಕು. ಇಲ್ಲದಿದ್ದರೆ ಜನರಿಗೆ ಆರ್ಥಿಕ ಹೊರೆಯಾಗಲಿದೆ ಎಂದರು.