ಬೆಂಗಳೂರು[ಜ.13]: ರಾಜ್ಯದಲ್ಲಿ ಹೃದಯ, ಯಕೃತ್ ಹಾಗೂ ಮೂತ್ರಪಿಂಡದಂತಹ ಪ್ರಮುಖ ಅಂಗಾಂಗಗಳ ವೈಫಲ್ಯದಿಂದಾಗಿ ಸಾವಿನ ಕದ ತಟ್ಟುತ್ತಿರುವ ಬಡ ರೋಗಿಗಳಿಗೆ ಅಂಗಾಂಗ ಕಸಿ ಮೂಲಕ ಮರುಹುಟ್ಟು ನೀಡಲು ಆರೋಗ್ಯ ಇಲಾಖೆ ಮುಂದಾಗಿದ್ದು, ಅಂಗಾಗ ಕಸಿಗೆ ಒಳಗಾಗುವ ಬಡ ರೋಗಿಗಳಿಗೆ ಚಿಕಿತ್ಸೆಗೆ ಆಗುವ ಸಂಪೂರ್ಣ ವೆಚ್ಚವನ್ನು ಇಲಾಖೆಯೇ ಭರಿಸಲಿದೆ.

ಅಂಗಾಂಗ ದಾನಕ್ಕಾಗಿ ಕಾಯುತ್ತಿರುವವರಿಗೆ ‘ಜೀವನ ಸಾರ್ಥಕತೆ’ ಪ್ರತಿಷ್ಠಾನದ ಮೂಲಕ ಕಳೆದ ವರ್ಷದಿಂದ ಉಚಿತವಾಗಿ ಅಂಗಾಂಗ ದಾನ ಪ್ರಕ್ರಿಯೆ ನಡೆಯುತ್ತಿದೆ. ಆರೋಗ್ಯ ಇಲಾಖೆಯು ಪ್ರಸಕ್ತ ಸಾಲಿನಿಂದ ಬಡ ರೋಗಿಗಳ ಅಂಗಾಂಗ ಕಸಿ ವೆಚ್ಚವನ್ನೂ ಭರಿಸಲು ತೀರ್ಮಾನಿಸಿದೆ. ಯಾವುದೇ ಆಸ್ಪತ್ರೆಯಲ್ಲಿ ಅಂಗಾಂಗ ಕಸಿಗೆ ಒಳಗಾದ ಬಡ ಬಿಪಿಎಲ್ ಕಾರ್ಡ್‌ದಾರರಿಗೆ ಅಂಗಾಂಗ ಕಸಿ ಶಸ್ತ್ರಚಿಕಿತ್ಸೆ ಹಾಗೂ ನಂತರದ ವೈದ್ಯೋಪಚಾರ ವೆಚ್ಚವನ್ನು ಸರ್ಕಾರ ಭರಿಸಲಿದೆ. ಅಂಗಾಂಗ ಕಸಿಗೆ ಅನುಮತಿ ಪಡೆದು ಶಸ್ತ್ರಚಿಕಿತ್ಸೆ ಬಳಿಕ ಸಂಬಂಧಪಟ್ಟ ಬಿಲ್‌ಗಳನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ಗೆ ಸಲ್ಲಿಸಿದರೆ ಟ್ರಸ್ಟ್ ಚಿಕಿತ್ಸಾ ವೆಚ್ಚವನ್ನು ಪಾವತಿ ಮಾಡಲಿದೆ.

ಕಿಡ್ನಿ ಕಸಿಗೆ 2 ಲಕ್ಷ ರು. ಹಾಗೂ ಹೃದಯ ಕಸಿಗೆ 10 ಲಕ್ಷ ರು., ಯಕೃತ್ (ಲಿವರ್) ಕಸಿಗೆ 11 ಲಕ್ಷ ರು.ವರೆಗೆ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸಲಿದೆ. ಅಷ್ಟೇ ಅಲ್ಲದೆ ಶಸ್ತ್ರಚಿಕಿತ್ಸೆ ನಂತರದ ವೈದ್ಯೋಪಚಾರಕ್ಕಾಗಿ ಪ್ರತಿ ವರ್ಷ 1 ಲಕ್ಷ ರು.ವರೆಗೆ ಹಣವನ್ನು ನಿರಂತರವಾಗಿ ನೀಡಲಿದೆ. ಅಂಗಾಂಗ ದಾನ ಮಾಡುವವರು ಲಭ್ಯವಿದ್ದರೂ ಅಂಗಾಂಗ ಕಸಿಗೆ ತಗಲುವ ದುಬಾರಿ ವೆಚ್ಚದಿಂದ ಅಂಗಾಂಗ ಕಸಿ ಚಿಕಿತ್ಸೆಯು ಬಡವರ ಪಾಲಿಗೆ ಮರೀಚಿಕೆಯಾಗಿತ್ತು. ಜೀವನ ಸಾರ್ಥಕತೆ ಫೌಂಡೇಶನ್‌ನಿಂದ ಕೇವಲ ಸ್ಥಿತಿವಂತರು ಮಾತ್ರ ಅಂಗಾಂಗ ಪಡೆದು ಕಸಿ ಮಾಡಿಸಿಕೊಳ್ಳುತ್ತಿದ್ದರು.

ಈ ಸೇವೆ ಬಡವರಿಗೂ ಲಭ್ಯವಾಗಬೇಕು ಎಂಬ ಕಾರಣಕ್ಕೆ ಆರೋಗ್ಯ ಇಲಾಖೆಯು 30 ಕೋಟಿ ರು. ವೆಚ್ಚದಲ್ಲಿ ಯೋಜನೆ ಜಾರಿಗೆ ಮುಂದಾ ಗಿದೆ. ಇದಕ್ಕೆ ನೀತಿ ನಿಯಮ ರೂಪಿಸಿದ್ದು, ಯೋಜನೆಯ ಅನುಷ್ಠಾವನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ಗೆ ವಹಿಸಲಾಗಿ

ಏನಿದು ಅಂಗಾಂಗ ಕಸಿ:

ಅನಾರೋಗ್ಯ ಸಮಸ್ಯೆಯಿಂದ ವಿಫಲವಾಗುವ ಮೂತ್ರ ಪಿಂಡ, ಯಕೃತ್ ಹಾಗೂ ಹೃದಯವನ್ನು ಗಂಭೀರ ಸಮಸ್ಯೆಯಿದ್ದಾಗ ಬೇರೆಯವರಿಂದ ದಾನ ಪಡೆದು ಕಸಿ ಮಾಡಬೇಕಾಗುತ್ತದೆ. ಹೀಗಾಗಿ ಅಪಘಾತ ಮತ್ತಿತರ ಕಾರಣಗಳಿಗೆ ಮಿದುಳು ಸಾವು (ಬ್ರೈನ್ ಡೆತ್) ಆದ ವ್ಯಕ್ತಿಗಳಿಂದ ಅಂಗಾಂಗ ದಾನ ಪಡೆಯಲಾಗುತ್ತದೆ. ಮೂತ್ರಪಿಂಡ ಹಾಗೂ ಯಕೃತ್ ವಿಷಯದಲ್ಲಿ ಜೀವಂತ ಜನರೇ ಹೆಚ್ಚು ಅಂಗಾಂಗ ದಾನ ಮಾಡುತ್ತಾರೆ. ಇಂತಹ ವ್ಯಕ್ತಿಗಳಿಂದ ಪಡೆದ ಅಂಗಾಂಗವನ್ನು ಇಂತಿಷ್ಟೇ ಸಮಯದಲ್ಲಿ ರೋಗಿಗೆ ಕಸಿ ಮಾಡಬೇಕು. ಕಸಿ ಶಸ್ತ್ರಚಿಕಿತ್ಸೆಗೆ ದುಬಾರಿ ವೆಚ್ಚ ತಗುಲುತ್ತದೆ. ಜತೆಗೆ ಪ್ರತಿ ವರ್ಷ ಫಾಲೋ ಅಪ್ ಚಿಕಿತ್ಸೆಗೆ ದುಬಾರಿ ಮೌಲ್ಯದ ಔಷಧ ಉಪಚಾರ ಮಾಡಬೇಕಾಗುತ್ತದೆ. ಹೀಗಾಗಿ ಅಂಗಾಂಗ ಕಸಿ ಬಡವರಿಗೆ ಎಟಕುವುದಿಲ್ಲ. ಇದನ್ನು ಅರಿತು ಸರ್ಕಾರ ಈ ಯೋಜನೆ ತಂದಿದೆ ಎಂದು ಜೀವನ ಸಾರ್ಥಕತೆ ಪ್ರತಿಷ್ಠಾನದ ಮುಖ್ಯ ಅಂಗಾಂಗ ಕಸಿ ಸಮನ್ವಯಕಾರರಾದ ಕೆ.ಯು. ಮಂಜುಳಾ ಹೇಳುತ್ತಾರೆ

ಹೆಚ್ಚಾಗುತ್ತಿದೆ ಯಕೃತ್ ಸಮಸ್ಯೆ:

ಸಾಮಾನ್ಯವಾಗಿ ಮೂತ್ರಪಿಂಡದ ಸಮಸ್ಯೆ ಹೆಚ್ಚಾಗಿ ಜನರನ್ನು ಕಾಡುತ್ತದೆ. ಎರಡೂ ಕಿಡ್ನಿ ವಿಫಲವಾದಾಗ ಕಿಡ್ನಿ ಕಸಿ ಅಗತ್ಯವಾಗುತ್ತದೆ. ಇತ್ತೀಚೆಗೆ ಕಿಡ್ನಿ ನಂತರ ಅತಿ ಹೆಚ್ಚು ಬೇಡಿಕೆ ಇರುವ ಅಂಗ ಯಕೃತ್ (ಲಿವರ್). ಯಕೃತ್ತಿನ ಅವಶ್ಯಕತೆ ಇರುವ 50 ಜನರ ಪೈಕಿ ಕೇವಲ ಒಬ್ಬರಿಗೆ ಇದು ದಾನ ರೂಪದಲ್ಲಿ ದೊರೆಯು ತ್ತಿದೆ. ಬೆಂಗಳೂರಿನಲ್ಲಿ ತಿಂಗಳಿಗೆ 10-12 ಮಂದಿಗೆ ಮಾತ್ರ ಯಕೃತ್ ಕಸಿ ಚಿಕಿತ್ಸೆ ನಡೆಯು ತ್ತಿವೆ. ಮಿದುಳು ಸಾವಿನ ಪ್ರಕರಣಗಳಲ್ಲಿ ಅಂಗಾಂಗ ದಾನ ಮಾಡುವವರ ಸಂಖ್ಯೆ ಕಡಿಮೆ ಇರುವುದರಿಂದ ಮೂತ್ರಪಿಂಡ ಹಾಗೂ ಯಕೃತ್‌ಗೆ ತೀವ್ರ ಬೇಡಿಕೆ ಇದೆ. ಮದ್ಯ ಸೇವನೆ, ವೈರಸ್ ಸೋಂಕು, ಸ್ವ ರಕ್ಷಿತ ರೋಗ (ಆಟೋ ಇಮ್ಯೂನ್ ಡಿಸೀಸ್), ಪಿತ್ತ ಕೋಶ ಸಂಬಂಧಿ ಕಾಯಿಲೆಗಳಿಂದ ಯಕೃತ್ ಹಾನಿಗೀಡಾಗುತ್ತದೆ. ಶೇ.೨೦ ಪ್ರಕರಣಗಳಲ್ಲಿ ಯಕೃತ್ತಿನ ಸಮಸ್ಯೆಗೆ ಕಾರಣಗಳೇ ತಿಳಿಯುವು ದಿಲ್ಲ. ಇನ್ನು ಮೂತ್ರಪಿಂಡವೂ ಹೆಚ್ಚು ಕಡಿಮೆ ಇದೇ ಕಾರಣಗಳಿಗೆ ಹಾನಿಯಾಗುತ್ತದೆ.

ಯಕೃತ್ ಬಗ್ಗೆ ಎಚ್ಚರವಹಿಸಿ:

ಮೂತ್ರಪಿಂಡದ ಬಗ್ಗೆ ಜನರು ಎಚ್ಚರವಹಿಸಿ ಸಮಸ್ಯೆಯಾದ ತಕ್ಷಣ ಡಯಾಲಿಸಿಸ್ ಮತ್ತಿತರ ಚಿಕಿತ್ಸೆ ಪಡೆಯುತ್ತಾರೆ. ಅದೇ ರೀತಿ ಲಿವರ್ ಸಮಸ್ಯೆಯಾಗುವ ಮೊದಲೇ ಎಚ್ಚರ ವಹಿಸಬೇಕಾಗಿದೆ. ಯಕೃತ್ ಸಮಸ್ಯೆ ತಡೆಯಲು ವೈರಸ್ ಸೋಂಕುಗಳಾದ ಹೆಪಟೈಟಿಸ್ ಎ ಮತ್ತು ಬಿಗೆ ಲಸಿಕೆ ಹಾಕಿಸಿಕೊಳ್ಳಬೇಕು. ಶುದ್ಧ ನೀರು ಹಾಗೂ ಆರೋಗ್ಯಪೂರ್ಣ ಆಹಾರ ಸೇವನೆ ಮೂಲಕ ಹೆಪಟೈಟಿಸ್ ಎ ಮತ್ತು ಇ ಸೊಂಕಿನಿಂದ ದೂರವಿರಬೇಕು ಎನ್ನುತ್ತಾರೆ ವೈದ್ಯರು. ಫ್ಯಾಟಿ ಲಿವರ್‌ಗೆ ಚಿಕಿತ್ಸೆ ಪಡೆಯದೇ ಇದ್ದರೆ ಯಕೃತ್ತಿನ ಸಿರೋಸಿಸ್ ಆಗಬಹುದು. ವ್ಯಾಯಾಮ, ಜೀವನ ಶೈಲಿ ಬದಲಾವಣೆ, ನಿರ್ದಿಷ್ಟ ಹಾಗೂ ನಿಯಮಿತ ಆಹಾರ ಪದ್ಧತಿಯಿಂದ ಫ್ಯಾಟಿ ಲಿವರ್ ಸಹಜ ಸ್ಥಿತಿಗೆ ತರಬಹುದು ಎಂದೂ ಸಲಹೆ ನೀಡುತ್ತಾರೆ.